Flight Crash Moment- ತಾನಿರುವ ಫ್ಲೈಟ್ ಕ್ರ್ಯಾಷ್ ಆಗುತ್ತೆ ಅಂದಾಗ ನೀರಜ್ ಚೋಪ್ರಾ ರಿಯಾಕ್ಷನ್ ಹೇಗಿತ್ತು? ಸಾವಿನ ಮನೆ ಕದ ತಟ್ಟಿ ಬಂದ ಚಿನ್ನದ ಹುಡುಗ

Neeraj Chopra’s near death experience- ಅಬುಧಾಬಿಯಿಂದ ಫ್ರಾಂಕ್​ಫರ್ಟ್ ನಗರಕ್ಕೆ ಹೋಗುವಾಗ ನೀರಜ್ ಚೋಪ್ರಾ ಅವರಿದ್ದ ವಿಮಾನ ಮಾರ್ಗಮಧ್ಯೆ ನಿಯಂತ್ರಣ ತಪ್ಪಿತ್ತು. ಆ ಘಟನೆಯನ್ನ ನೀರಜ್ ಚೋಪ್ರಾ ಮೆಲುಕು ಹಾಕಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾ

ಚಿನ್ನದ ಹುಡುಗ ನೀರಜ್ ಚೋಪ್ರಾ

 • Share this:
  ಈ ಬಾರಿಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಪಟು ನೀರಜ್ ಚೋಪ್ರಾ ತಾನೊಂದು ಬಾರಿ ಸಾವಿನ ಕದ ತಟ್ಟಿ ಬಂದ ಘಟನೆಯನ್ನ ಮೆಲುಕು ಹಾಕಿದ್ಧಾರೆ. ನೀರಜ್ ಚೋಪ್ರಾ ಅಥ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಳ್ಳಲು ಅಬುಧಾಬಿಯಿಂದ ಜರ್ಮನಿಯ ಫ್ರಾಂಕ್​ಫುರ್ಟ್ ನಗರಕ್ಕೆ ವಿಮಾನದಲ್ಲಿ ಹೋಗುವಾಗ ನಡೆದ ಘಟನೆ ಅದು. ನೀರಜ್ ಚೋಪ್ರಾ ಇದ್ದ ವಿಮಾನ ಮಾರ್ಗಮಧ್ಯೆ ಪೈಲಟ್​ಗಳ ನಿಯಂತ್ರಣ ತಪ್ಪಿದೆ. ಇಡೀ ವಿಮಾನದಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣ. ಮಕ್ಕಳು ದೊಡ್ಡವರೆನ್ನದೇ ಪ್ರಾಣಭೀತಿಯಿಂದ ಕಿರುಚುತ್ತಿರುವ ಜನರು. ಆದರೆ, ನೀರಜ್ ಚೋಪ್ರಾ ಕಿವಿಗೆ ಹೆಡ್​ಫೋನ್ ಹಾಕಿಕೊಂಡು ಕಣ್ಮುಚ್ಚಿಕೊಂಡಿದ್ದರಿಂದ ಇದ್ಯಾವುದೂ ಅಷ್ಟಾಗಿ ಗಮನಕ್ಕೆ ಬರಲಿಲ್ಲ. ಜನರ ಒದ್ದಾಟ ಗಮನಕ್ಕೆ ಬಂದು ನೀರಜ್ ಚೋಪ್ರಾ ಹೆಡ್​ಫೋನ್ ತೆಗೆದು ನೋಡುತ್ತಾರೆ, ಜನರು ಆತಂಕದಲ್ಲಿ ಚೀರಾಡುತ್ತಿರುವುದು ಗಮನಕ್ಕೆ ಬರುತ್ತದೆ.

  “ನಾನು ಹೆಡ್ ಫೋನ್ಸ್ ಹಾಕಿಕೊಂಡಿದ್ದೆ. ಹೆಡ್ ಫೋನ್ ತೆಗೆಯುತ್ತಿದ್ದಂತೆಯೇ ಮಕ್ಕಳು ಅಳುತ್ತಿರುವುದು ಹಾಗೂ ದೊಡ್ಡವರು ಆತಂಕದಿಂದ ಉಸಿರುಬಿಡುತ್ತಿರುವ ಸದ್ದು ನನಗೆ ಕೇಳಿಸಿತು. ನನ್ನ ಪಕ್ಕ ಕೂತಿದ್ದ ನನ್ನ ಫಿಸಿಯೋ ಅವರತ್ತ ತಿರುಗಿ, ‘ಈ ರೀತಿ ಅಳುವುದರಿಂದ ಏನು ಪ್ರಯೋಜನ. ವಿಮಾನ ನೆಲಕ್ಕೆ ಅಪ್ಪಳಿಸುವುದಿದ್ದರೆ ಅಪ್ಪಳಿಸುತ್ತದೆ ಬಿಡಿ’ ಎಂದು ಹೇಳಿದೆ” ಎಂದು ನೀರಜ್ ಚೋಪ್ರಾ ಕಾರ್ಯಕ್ರಮವೊಂದರಲ್ಲಿ ಅ ಘಟನೆ ಬಗ್ಗೆ ಮಾತನಾಡಿದಾಗ ಪ್ರೇಕ್ಷಕರು ಕರದಾಡನ ಮಾಡಿದರು.

  ಅಂದ ಹಾಗೆ, ವಿಮಾನದಲ್ಲಿ ಇಷ್ಟೆಲ್ಲಾ ಅವಾಂತರವಾಗಿದ್ದು 15 ಸೆಕೆಂಡುಗಳಷ್ಟು ಕಾಲ. ವಿಮಾನ ನಿಯಂತ್ರಣ ಕಳೆದುಕೊಂಡಿದ್ದು, ಕೆಳಗೆ ಕುಸಿಯುತ್ತಿದ್ದುದು, ಒಳಗೆ ಲೈಟ್​​ಗಳು ಆಫ್ ಆನ್ ಆಗುತ್ತಿದ್ದುದು, ವಿಮಾನದೊಳಗೆ ಜನರ ಹಾಹಾಕಾರ ಎಲ್ಲವೂ ಕೆಲ ಕ್ಷಣಗಳವರೆಗೆ ಭಯಾನಕ ವಾತಾವರಣ ಸೃಷ್ಟಿಸಿತ್ತು. ಆದರೆ, ಅಂತಿಮವಾಗಿ ಪೈಲಟ್​ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಫ್ರಾಂಕ್​ಫರ್ಟ್ ಏರ್​ಪೋರ್ಟ್​ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಘಟನೆ ಸುಖಾಂತ್ಯಗೊಂಡಿತು.

  ಇದನ್ನೂ ಓದಿ: PM Modi birthday- ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನಕ್ಕೆ ಕ್ರೀಡಾಪಟುಗಳ ಶುಭಕೋರಿಕೆ

  ಸಾವು ನಮ್ಮ ಕಣ್ಮುಂದೆ ಇದೆ ಎಂದು ಗೊತ್ತಾದಾಗ ಎಂಥವರಾದರೂ ವಿಚಲಿತಗೊಳ್ಳುವುದು ಸಹಜ. ಆದರೆ, ನೀರಜ್ ಚೋಪ್ರಾ ಆ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳದೇ, ಸಾವಿಗೂ ಹೆದರದೇ ನಿರುಮ್ಮಳರಾಗಿ ಇದ್ದ ಬಗ್ಗೆ ತಿಳಿದು ಯಾರಾದರೂ ಮೂಕವಿಸ್ಮಿತರಾಗುವುದಷ್ಟೇ ಬಾಕಿ. ಒಬ್ಬ ಕ್ರೀಡಾಪಟು ತನ್ನ ಕ್ರೀಡೆಯಲ್ಲಿ ಔನ್ನತ್ಯ ಸಾಧಿಸಿದರೆ ಅದಕ್ಕೆ ಆ ಕ್ರೀಡೆಯಲ್ಲಿ ಆತನಿಗಿರುವ ಕೌಶಲ್ಯ ಪ್ರಮುಖ ಕಾರಣವಾಗಿರುತ್ತದೆ. ಆದರೆ, ಒಬ್ಬ ಕ್ರೀಡಾಪಟುವಿನ ಸುದೃಢ ವ್ಯಕ್ತಿತ್ವ ರೂಪುಗೊಳ್ಳಲು ಜೀವನದ ಇತರ ಹಲವು ಘಟನೆಗಳು ಕಾರಣವಾಗುತ್ತವೆ ಎಂಬುದಕ್ಕೆ ನೀರಜ್ ಚೋಪ್ರಾ ಅವರ ವಿಮಾನ ಸನ್ನಿವೇಶ ಒಂದು ನಿದರ್ಶನವಾಗಿದೆ. ನೀರಜ್ ಚೋಪ್ರಾ ಒಬ್ಬ ಪ್ರತಿಭಾನ್ವಿತ ಅಥ್ಲೀಟ್ ಮಾತ್ರವಲ್ಲ, ಉಚ್ಛ್ರಾಯ ಮಟ್ಟದ ವ್ಯಕ್ತಿತ್ವದವರು ಎಂಬುದು ಸಾಬೀತಾಯಿತು.

  ನೀರಜ್ ಚೋಪ್ರಾ ಅವರ ಮೆಚ್ಯೂರಿಟಿಗೆ ಇನ್ನೂ ಒಂದು ನಿದರ್ಶನ ನಿಮಗೆ ನೆನಪಿರಬಹುದು. ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲಿಸಿಕೊಟ್ಟ ತನ್ನ ಜಾವೆಲಿನ್ ಅನ್ನು ಪಾಕಿಸ್ತಾನದ ಅಥ್ಲೀಟ್ ಕೈಯಿಂದ ತಾನು ಪಡೆದದ್ದನ್ನ ನೀರಜ್ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಪಾಕ್ ಅಥ್ಲೀಟ್ ವಿರುದ್ಧ ಜನರು ವೈಯಕ್ತಿಕ ನಿಂದನೆಗಳನ್ನ ಮಾಡಿದ್ದರು. ಇದಕ್ಕೆಲ್ಲಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ನೀರಜ್ ಚೋಪ್ರಾ, ನಿಮ್ಮ ವೈಯಕ್ತಿಕ ತೆವಲುಗಳ ವಿಚಾರಗಳಿಗೆ ನನ್ನ ಹೆಸರನ್ನ ಬಳಕೆ ಮಾಡಬೇಡಿ. ಪಾಕಿಸ್ತಾನವಾಗಲೀ ಅಥವಾ ಯಾವುದೇ ದೇಶದವರಾಗಲೀ ಕ್ರೀಡಾಪಟುವಿಗೆ ಗೌರವ ಕೊಡುವುದನ್ನ ಕಲಿಯಿರಿ ಎಂದು ಬುದ್ಧಿಹೇಳಿದ್ದರು.
  Published by:Vijayasarthy SN
  First published: