Novak Djokovic - ವಿಂಬಲ್ಡನ್ ಗೆದ್ದ ನೊವಾಕ್ ಜೋಕೊವಿಚ್; ಹೊಸ ಇತಿಹಾಸದ ಹೊಸ್ತಿಲಲ್ಲಿ ಸರ್ಬಿಯನ್ ಆಟಗಾರ

ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಚ್ ಈ ಬಾರಿಯ ವಿಂಬಲ್ಡನ್ ಚಾಂಪಿಯನ್ ಆಗುವ ಮೂಲಕ ತಮ್ಮ ವೃತ್ತಿಜೀವನದಲ್ಲಿ 20ನೇ ಗ್ರಾನ್ ಸ್ಲಾಂ ಗೆದ್ದ ಕೀರ್ತಿಗೆ ಬಾಜನರಾಗಿದ್ದಾರೆ. ಫೆಡರರ್ ಮತ್ತು ನಡಾಲ್ ಸಾಧನೆಯನ್ನ ಸರಿಗಟ್ಟಿದ್ದಾರೆ.

ನೊವಾಕ್ ಜೋಕೋವಿಚ್

ನೊವಾಕ್ ಜೋಕೋವಿಚ್

  • News18
  • Last Updated :
  • Share this:
ಲಂಡನ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೋಕೋವಿಚ್ ಅವರು ವಿಂಬಲ್ಡನ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಯ ಚಾಂಪಿಯನ್ ಆಗಿದ್ದಾರೆ. ನಿನ್ನೆ ನಡೆದ ರೋಚಕ ಫೈನಲ್​ನಲ್ಲಿ ಇಟಲಿಯ ಮ್ಯಾಟಿಯೋ ಬೆರೆಟ್ಟಿನಿ ಅವರನ್ನ 6-7, 6-4, 6-4, 6-3 ಸೆಟ್​ಗಳಿಂದ ಸೋಲಿಸಿದರು. ಸರ್ಬಿಯಾ ದೇಶದ ಆಟಗಾರ ಜೋಕೊವಿಚ್ ಅವರಿಗೆ ಇದು ಆರನೇ ವಿಂಬಲ್ಡನ್ ಪ್ರಶಸ್ತಿಯಾದರೆ, ಒಟ್ಟಾರೆ 20ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ದಕ್ಕಿದಂತಾಗಿದೆ. ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದ ಪುರುಷ ಆಟಗಾರನೆಂಬ ದಾಖಲೆಯನ್ನು ಅವರು ಸರಿಗಟ್ಟಿದ್ಧಾರೆ. ರೋಜರ್ ಫೆಡರರ್ ಮತ್ತು ರಫೇಲ್ ನಡಾಲ್ ಅವರೂ ಕೂಡ 20 ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ.

ನಿನ್ನೆ ಇಟಲಿಯ ಬೆರೆಟ್ಟಿನಿ ವಿರುದ್ಧ ನಡೆದ ಫೈನಲ್ ಪಂದ್ಯ ತುರುಸಿನ ಪೈಪೋಟಿ ಕಂಡಿತ್ತು. ಕ್ವಾರ್ಟರ್ ಫೈನಲ್​ನಲ್ಲಿ ರೋಜರ್ ಫೆಡೆರರ್ ಅವರನ್ನ ಸೋಲಿಸಿ ಅಚ್ಚರಿ ಮೂಡಿಸಿದ್ದ ಹುಬರ್ಟ್ ಹುರ್ಕಾಜ್ ಅವರ ವಿರುದ್ಧ ಸೆಮಿಫೈನಲ್​ನಲ್ಲಿ ಬೆರೆಟ್ಟಿನಿ ಭರ್ಜರಿ ಗೆಲುವು ಪಡೆದು ಫೈನಲ್ ತಲುಪಿದ್ದರು. ತಮ್ಮ ಬಿಗ್ ಸರ್ವಿಸ್ ಮತ್ತು ಏಸ್​ಗಳಿಂದ ಫೈನಲ್​ನಲ್ಲೂ ಜೋಕೊವಿಚ್ ಅವರನ್ನ ಬೆರೆಟ್ಟಿನಿ ತಲ್ಲಣಗೊಳಿಸಿದ್ದರು. ಆದರೆ, ಜೋಕೋವಿಚ್ ತಮ್ಮ ಎದುರಾಳಿಗೆ ಹೆಚ್ಚು ಪ್ರಾಬಲ್ಯ ಹೊಂದಲು ಅವಕಾಶ ಕೊಡದೇ ಪಂದ್ಯ ಗೆದ್ದು ಚಾಂಪಿಯನ್ ಆದರು.

ನೊವಾಕ್ ಜೋಕೋವಿಚ್ ಈ ವರ್ಷ ನಡೆದ ಮೂರು ಗ್ರ್ಯಾನ್ ಸ್ಲಾಂಗಳನ್ನ ಗೆದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆದ್ದಿದ್ದು, ವರ್ಷದ ಕೊನೆಯ ಗ್ರ್ಯಾನ್ ಸ್ಲಾಂ ಆದ ಯುಎಸ್ ಓಪನ್ ಮಾತ್ರ ಬಾಕಿ ಇದೆ. ಅದನ್ನೂ ಗೆದ್ದರೆ ವರ್ಷದ ಎಲ್ಲಾ ನಾಲ್ಕು ಗ್ರ್ಯಾನ್ ಸ್ಲಾಂ ಗೆದ್ದ ಸಾಧನೆ ಅವರದ್ದಾಗುತ್ತದೆ. 1969ರಿಂದೀಚೆ ಯಾವ ಪುರುಷ ಟೆನಿಸ್ ಆಟಗಾರ ಕೂಡ ಒಂದೇ ವರ್ಷದಲ್ಲಿ ನಾಲ್ಕು ಗ್ರ್ಯಾನ್ ಸ್ಲಾಂಗಳನ್ನ ಗೆದ್ದಿದ್ದಿಲ್ಲ. ಯುಎಸ್ ಓಪನ್ ಗೆದ್ದಿದ್ದೇ ಆದಲ್ಲಿ ಜೋಕೋವಿಚ್ ಅವರು ಫೆಡರರ್ ಮತ್ತು ನಡಾಲ್ ಅವರನ್ನ ಹಿಂದಿಕ್ಕಿ ಅತಿ ಹೆಚ್ಚು ಗ್ರಾನ್ ಸ್ಲಾಮ್ ಗೆಲ್ಲುವ ರೇಸ್​ನಲ್ಲಿ ಮುಂದೋಡಲಿದ್ಧಾರೆ.

ಇದನ್ನೂ ಓದಿ: Copa America - ಬ್ರೆಜಿಲ್​ಗೆ ಶಾಕ್; ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಕೋಪಾ ಅಮೆರಿಕ ಚಾಂಪಿಯನ್

ಜೋಕೋವಿಚ್ ಅವರಿಗೆ ಇನ್ನೂ ಒಂದು ಇತಿಹಾಸ ಸೃಷ್ಟಿಸುವ ಅವಕಾಶ ಇದೆ. ಯುಎಸ್ ಓಪನ್ ಗೆದ್ದ ಬಳಿಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಟೆನಿಸ್ ಸ್ವರ್ಣ ಗೆದ್ದರೆ ಗೋಲ್ಡನ್ ಗ್ರಾನ್ ಸ್ಲಾಂ ಗೆದ್ದ ವಿಶ್ವದ ಮೊದಲ ಪುರುಷ ಟೆನಿಸ್ ಆಟಗಾರ ಎನಿಸಲಿದ್ದಾರೆ.

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರ ಪೈಕಿ ಗುರುತಿಸಲ್ಪಟ್ಟಿರುವ ರೋಜರ್ ಫೆಡರರ್, ರಫೇಲ್ ನಡಾಲ್ ಮತ್ತು ನೊವಾಕ್ ಜೋಕೋವಿಚ್ ಅವರು ಒಂದೇ ತಲೆಮಾರಿನವರಾಗಿದ್ಧಾರೆ. ಮೂವರೂ ಕೂಡ ಬಹುತೇಕ ಒಂದೇ ವಯಸ್ಸಿನವರಾಗಿದ್ದಾರೆ. ಇನ್ನು, 2-3 ವರ್ಷ ಮಾತ್ರ ಅವರು ಟೆನಿಸ್ ಆಡಲು ಸಾಧ್ಯವಿದೆ. ಈಗಾಗಲೇ ಹೊಸ ತಲೆಮಾರಿನ ಆಟಗಾರರು ಟೆನಿಸ್ ಅಂಗಳದಲ್ಲಿ ಪ್ರಾಬಲ್ಯ ಮೆರೆಯಲು ಆರಂಭಿಸಿದ್ದಾರೆ. ಆದರೆ, ಈ ಮೂವರು ಆಟಗಾರರು ತೋರಿಸಿದ ಪ್ರಾಬಲ್ಯ ಮುಂದಿನ ವರ್ಷಗಳಲ್ಲಿ ಕಾಣಸಿಗುವುದೇ?

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: