ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಗೋಲ್ಡ್ ಮೆಡಲ್ ವಿನ್ನರ್ ನೀರಜ್ ಚೋಪ್ರಾ ಅವರ ಜಾವೆಲಿನ್ (ಭರ್ಜಿ javelin) ಅತ್ಯಂತ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಒಲಿಂಪಿಕ್ಸ್ನಲ್ಲಿ ನೀರಜ್ ಬಳಸಿದ್ದ ಜಾವೆಲಿನ್ ಬರೋಬ್ಬರಿ ಒಂದೂವರೆ ಕೋಟಿ ಮತ್ತು ಭವಾನಿ ದೇವಿ ಅವರ ಆಟೋಗ್ರಾಫ್ವುಳ್ಳ ಫೇಸಿಂಗ್ ಖತ್ತಿ ಒಂದು ಕಾಲು ಕೋಟಿಗೆ ಹರಾಜುಗೊಂಡಿದೆ. ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಗಣ್ಯರು ನೀಡಿರುವ ಕಾಣಿಕೆಗಳನ್ನು ಗುರುವಾರ ಹರಾಜು ಮಾಡಲಾಯ್ತು. ಈ ಎಲ್ಲ ವಸ್ತುಗಳನ್ನು ಇ-ಹರಾಜಿ (e-auction) ನಲ್ಲಿ ಇರಿಸಲಾಗಿತ್ತು.
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಹಿಂದಿರುಗಿದ ವೇಳೆ ನೀರಜ್ ಚೋಪ್ರಾ ತಮ್ಮ ಜಾವೆಲಿನ್ ನ್ನು ಪ್ರಧಾನ ಮಂತ್ರಿಗಳಿಗೆ ಕಾಣಿಕೆಯಾಗಿ ನೀಡಿದ್ದರು. ಇದೇ ವೇಳೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಮೊದಲ ಬಾರಿಗೆ ಖತ್ತಿ ವರಸೆಯಲ್ಲಿ ಭಾರತ ಪ್ರತಿನಿಧಿಸಿದ್ದ ಭವಾನಿ ದೇವಿ ಸೇರಿದಂತೆ ಹಲವು ಕ್ರೀಡಾಳುಗಳು ಪ್ರಧಾನಿಗಳನ್ನು ಭೇಟಿಯಾಗಿದ್ದರು. ಎಲ್ಲರೂ ಪ್ರಧಾನಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದರು. ನೀರಜ್ ಚೋಪ್ರಾ ಅವರ ಭರ್ಜಿಗೆ ಆನ್ಲೈನ್ನಲ್ಲಿ ಮೂಲ ಬೆಲೆಯಾಗಿ 80 ಸಾವಿರ ರೂ. ನಿಗದಿ ಮಾಡಲಾಗಿತ್ತು. ಭರ್ಜಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕೊನೆಗೆ 1.5 ಕೋಟಿಗೆ ಬಿಕರಿಯಾಗಿದೆ. ಭವಾನಿಯವರ ಫೇಸಿಂಗ್ ಸಹ 1.25 ಕೋಟಿಗೆ ಬಿಕರಿಗೊಂಡಿದೆ.
ಸುಮಿತ್ ಅಂತಿಲ್ ಜಾವೆಲಿನ್ಗೆ 1 ಕೋಟಿ 2 ಲಕ್ಷ ರೂಪಾಯಿ:
ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು ಅವರ ರಾಕೆಟ್ ಬೆಲೆ 80 ಲಕ್ಷ ರೂ. ಅಂತಿಮಗೊಂಡಿತು. ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗಿಯಾಗಿದ್ದ ಆಟಗಾರರ ಸಹಿವುಳ್ಳ ಡ್ರೆಸ್ 1 ಕೋಟಿ ರೂಪಾಯಿಗೆ ಹರಾಜುಗೊಂಡಿದೆ. ಪ್ಯಾರಾಲಿಂಪಿಕ್ಸ್ ನಲ್ಲಿ ಜಾವೆಲಿನ್ ವಿಭಾಗದಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್ ಅವರ ಭರ್ಜಿ ಸಹ 1.002 ಕೋಟಿ ರೂ. ಮತ್ತು ಬಾಕ್ಸಿಂಗ್ ನಲ್ಲಿ ಕಂಚು ಗೆದ್ದ ಲವ್ಲಿನಾ ಅವರ ಗ್ಲೌಸ್ 91 ಲಕ್ಷ ರೂ.ಗೆ ಮಾರಾಟಗೊಂಡಿದೆ.
ಮಿನಿಸ್ಟರಿ ಆಫ್ ಕಲ್ಚರ್ ಪ್ರಧಾನಿಗಳಿಗೆ ಸಿಕ್ಕಂತಹ ಎಲ್ಲ ಕಾಣಿಕೆಗಳನ್ನು ಆನ್ಲೈನ್ (ಇ-ಆಕ್ಷನ್) ನಲ್ಲಿ ಹರಾಜಿಗೆ ಇಟ್ಟಿತ್ತು. ಸೆಪ್ಟಂಬರ್ 17 ರಿಂದ ಅಕ್ಟೋಬರ್ 7ರವವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ 1,300 ವಸ್ತುಗಳನ್ನು ಇರಿಸಲಾಗಿತ್ತು. ಈ ಆಕ್ಷನ್ನಲ್ಲಿ ಬಂದಂತಹ ಎಲ್ಲ ಧನರಾಶಿಯನ್ನು 'ನಮಾಮಿ ಗಂಗಾ ಮಿಶನ್'ನಲ್ಲಿ ವಿನಿಯೋಗಿಸಲಾಗುತ್ತದೆ. ಇದಕ್ಕೂ ಮೊದಲು 2019ರಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಹ ತನ್ನಲ್ಲಿರುವ ಹಲವು ವಸ್ತುಗಳನ್ನು ಆನ್ಲೈನ್ ಹರಾಜಿನಲ್ಲಿರಿಸಿತ್ತ. ಹರಾಜಿನಲ್ಲಿ ಬಂದ ಹಣವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ 'ನಮಾಮಿ ಗಂಗಾ ಮಿಶನ್' ಗೆ ನೀಡಿತ್ತು.
ಇದನ್ನೂ ಓದಿ: ಸಿಎಸ್ಕೆ ಬೌಲರ್ ದೀಪಕ್ ಚಾಹರ್ ಪ್ರೊಪೋಸ್ ಮಾಡಿದ ಗರ್ಲ್ಫ್ರೆಂಡ್ ಜಯಾ ಯಾರು? ಬಿಗ್ ಬಾಸ್ ಸ್ಪರ್ಧಿಯ ಸೋದರಿಯಾ?
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಸಾಧನೆ:
ಟೋಕಿಯೊ ಒಲಿಂಪಿಕ್ಸ್ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿತ್ತು. ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತ ಏಳು ಪದಕ ಗೆದ್ದು ಬೀಗಿದೆ. 2012ರ ಲಂಡನ್ ಒಲಂಪಿಕ್ಸ್?ನಲ್ಲಿ ಆರು ಪದಕ ಗೆದ್ದ ಭಾರತ ಈ ಬಾರಿ ಏಳು ಪದಕ ಗೆದ್ದಿದೆ. ಜಾವಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ವೇಯ್ಟ್ ಲಿಫ್ಟಿಂಗ್ ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದುಕೊಂಡಿದ್ದರು ಪುರುಷರ ಕುಸ್ತಿಯ 57 ಕೆಜಿ ವಿಭಾಗದಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
65 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಭಜರಂಗ್ ಪೂನಿಯಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ರೆ, ದಶಕಗಳ ಬಳಿಕ ಒಲಿಂಪಿಕ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಅವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ವೆಲ್ಟರ್ ವೇಟ್ ಕಂಚಿನ ಪದಕ ಪಡೆದಿದ್ದರು ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಚೀನಾದ ಹಿ ಬಿಂಗ್ ಜಿಯೋ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಸಿಂಧು ಮುತ್ತಿಟ್ಟಿದ್ದರು.
- ಮಹಮ್ಮದ್ ರಫೀಕ್ ಕೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ