ಕೋವಿಡ್-19ನಿಂದ ಗುಣಮುಖರಾದ ರೋಗಿಗಳಿಂದ, ಅವರು ಬಳಸದೇ ಉಳಿಸಿದ ಔಷಧಿಗಳನ್ನು ಸಂಗ್ರಹಿಸುವ ವಿನೂತನ ಅಭಿಯಾನವೊಂದನ್ನು ಮುಂಬೈನ ಡಾಕ್ಟರ್ ಮಾರ್ಕಸ್ ರಾನಿ ಮತ್ತು ಅವರ ಪತ್ನಿ ಡಾಕ್ಟರ್ ರೈನಾ ಆರಂಭಿಸಿದ್ದಾರೆ.
ಭಾರತದಲ್ಲಿ ಕೋವಿಡ್ -19ನ ಎರಡನೇ ಅಲೆಗೆ ಸಿಲುಕಿ ಜನರು ಮೊದಲಿಗಿಂತಲೂ ಹೆಚ್ಚು ದುಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಕೋವಿಡ್ ಪೀಡಿತರಿಗೆ ಸಹಾಯಹಸ್ತ ಚಾಚಲು ಹಲವಾರು ಮಂದಿ ಮುಂದೆ ಬರುತ್ತಿರುವುದನ್ನು ಕಾಣಬಹುದು. ಪರಸ್ಪರ ಪರಿಚಯ ಇಲ್ಲದೇ ಇದ್ದರೂ ಕೂಡ, ಕೋವಿಡ್ ಪೀಡಿತರಿಗೆ ವೈದ್ಯಕೀಯ ನೆರವು ಮತ್ತು ಇತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ತಮ್ಮ ಕೈಲಾಗುವುದಕ್ಕಿಂತಲೂ ಹೆಚ್ಚಿನ ಸಹಾಯ ಮಾಡಿದವರ ಸಂಖ್ಯೆಯೂ ಕಡಿಮೆ ಇಲ್ಲ. ಅಂತವರಲ್ಲಿ, ಕೋವಿಡ್ ರೋಗಿಗಳಿಗಾಗಿ ಔಷಧಿಗಳನ್ನು ಸಂಗ್ರಹಿಸುತ್ತಿರುವ ಮುಂಬೈನ ವೈದ್ಯ ದಂಪತಿ ಕೂಡ ಒಬ್ಬರು. ಈ ದಂಪತಿ ಈಗಾಗಲೇ ಕೋವಿಡ್ನಿಂದ ಗುಣಮುಖರಾಗಿರುವ ಜನರಿಂದ, ಬಳಕೆಯಾಗದೆ ಉಳಿದಿರುವ ಔಷಧಿಗಳನ್ನು ಸಂಗ್ರಹಿಸಿ, ಅವಶ್ಯಕತೆ ಇರುವ ರೋಗಿಗಳಿಗೆ ಹಂಚುತ್ತಿದ್ದಾರೆ.
ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಕೇವಲ ಹತ್ತು ದಿನಗಳಲ್ಲಿ ಸುಮಾರು 20 ಕೆಜಿಯಷ್ಟು ಬಳಕೆಯಾಗದ ಔಷಧಿಗಳನ್ನು ದಂಪತಿ ಸಂಗ್ರಹಿಸಿದ್ದಾರೆ. ಈ ವೈದ್ಯ ದಂಪತಿ , ಕೆಲವು ಎನ್ಜಿಓಗಳ ಸಹಾಯದಿಂದ, ದೇಶದ ವಿವಿಧ ಗ್ರಾಮಾಂತರ ಜಿಲ್ಲೆಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚುತ್ತಿದ್ದಾರೆ.
Kiran Mazumdar-Shaw: ಲಸಿಕೆಯ ಪರಿಸ್ಥಿತಿಯನ್ನು ಅರೇಂಜ್ಡ್ ಮ್ಯಾರೇಜ್ಗೆ ಹೋಲಿಸಿದ ಕಿರಣ್ ಮಜುಂದಾರ್ ಶಾ..!
ಆ್ಯಂಟಿಬಯಾಟಿಕ್ಸ್, ಫ್ಯಾಬಿಫ್ಲೂ, ನೋವು ನಿವಾರಕ ಮಾತ್ರೆಗಳು, ಸ್ಟಿರಾಯ್ಡ್ಸ್, ಇನ್ಹೇಲರ್ಗಳು, ವಿಟಮಿನ್ ಮಾತ್ರೆಗಳು, ಆ್ಯಂಟಾಸಿಡ್ಸ್ ಮುಂತಾದ ಬಳಕೆಯಾಗದ ಔಷಧಿಗಳು ಮಾತ್ರವಲ್ಲದೆ, ಈ ತಂಡ ಆಕ್ಸಿಮೀಟರ್ಗಳು ಮತ್ತು ಥರ್ಮಾಮೀಟರ್ನಂತಹ ಪ್ರಾಥಮಿಕ ವೈದ್ಯಕೀಯ ಸಾಮಾಗ್ರಿಗಳನ್ನು ಕೂಡ ಸಂಗ್ರಹಿಸುತ್ತಿದೆ.
ಡಾ. ರೈನಾ ಹೇಳುವ ಪ್ರಕಾರ, ಇಂತಹ ಒಂದು ಜನಹಿತ ಕಾರ್ಯವನ್ನು ಮಾಡುವ ಉಪಾಯ ಹೊಳೆದದ್ದು, ತಮ್ಮದೇ ಸಿಬ್ಬಂದಿಯ ಕುಟುಂಬದ ಸದಸ್ಯರೊಬ್ಬರು ಕೋವಿಡ್ ಸೋಂಕಿಗೆ ಒಳಗಾದ ಸಂದರ್ಭದಲ್ಲಿ. ಬಡ ರೋಗಿಗಳು ಕೋವಿಡ್ ಸೋಂಕಿಗೆ ಒಳಗಾದಾಗ ಜೀವ ಉಳಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ, ಏಕೆಂದರೆ ಕೆಲವು ಕೋವಿಡ್ ಔಷಧಿಗಳು ತುಂಬಾ ದುಬಾರಿಯಾಗಿರುತ್ತವೆ ಎಂಬುವುದನ್ನು ಮಾರ್ಕಸ್ ಮತ್ತು ರೈನಾ ಅರ್ಥ ಮಾಡಿಕೊಂಡರು. ಆಗ ಅವರು ತಮ್ಮ ಸಿಬ್ಬಂದಿಗೆ ಸಹಾಯ ಮಾಡಿದ್ದು ಮಾತ್ರವಲ್ಲ, ಬಡ ರೋಗಿಗಳ ಸಹಾಯಕ್ಕಾಗಿ, ಗುಣಮುಖ ಕೋವಿಡ್ ರೋಗಿಗಳಿಂದ, ಬಳಸದೇ ಉಳಿದ ಔಷಧಿಗಳನ್ನು ಸಂಗ್ರಹಿಸುವ ನಿರ್ಧಾರವನ್ನು ಕೂಡ ಕೈಗೊಂಡರು.
ಬಳಿಕ ದಂಪತಿ, ಔಷಧಿ ಸಂಗ್ರಹಿಸುವ ಈ ಅಭಿಯಾನಕ್ಕಾಗಿ ತಮ್ಮ ನೆರೆಹೊರೆಯ ಕಟ್ಟಡಗಳಲ್ಲಿ ವಾಸಿಸುವ ಇತರ 8ಮಂದಿಯನ್ನು ಸೇರಿಸಿಕೊಂಡು ಒಂದು ತಂಡ ಕಟ್ಟಿದರು.
ಈ ತಂಡ ಈಗ ಸುಮಾರು ನೂರಕ್ಕೂ ಹೆಚ್ಚು ವಸತಿ ಸಮುಚ್ಛಯಗಳ ಸಂಪರ್ಕ ಹೊಂದಿದ್ದು, ಹಲವಾರು ಸ್ವಯಂಸೇವಕರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಮಾರಣಾಂತಿಕ ಸಾಂಕ್ರಮಿಕ ರೋಗದಿಂದ ಜನರು ತತ್ತರಿಸುತ್ತಿದ್ದು, ಈ ಸಂದರ್ಭದಲ್ಲಿ, ಇಂತಹ ಸ್ಫೂರ್ತಿದಾಯಕ ಕಥೆಗಳು ಮತ್ತು ಪ್ರಯತ್ನಗಳು, ನಾವು ಆದಷ್ಟು ಬೇಗ ಈ ಸಂಕಷ್ಟದಿಂದ ಹೊರ ಬರುತ್ತೇವೆ ಎಂಬ ನಿರೀಕ್ಷೆಯನ್ನು ಹುಟ್ಟಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ