ವಿಶ್ವದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ದಿ ಫ್ಲೈಯಿಂಗ್ ಸಿಖ್, ಭಾರತದ ಲೆಜೆಂಡರಿ ಅಥ್ಲೀಟ್ ಮಿಲ್ಖಾ ಸಿಂಗ್ ಶುಕ್ರವಾರ ತಡರಾತ್ರಿ ಕೊನೆಯುಸಿರೆಳಿದ್ದಾರೆ. ಭಾರತದ ಮೊದಲ ಟ್ಯ್ರಾಕ್ ಮತ್ತು ಫೀಲ್ಡ್ ಸೂಪರ್ಸ್ಟಾರ್ ಮಿಲ್ಖಾ ಸಿಂಗ್ ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರು. ಗುರುವಾರ ಅವರ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಆದರೆ ದುರಾದೃಷ್ಟವಶಾತ್ ಶುಕ್ರವಾರ ತಡರಾತ್ರಿ ಮಿಲ್ಖಾ ಕೊನೆಯುಸಿರೆಳಿದಿದ್ದಾರೆ.
ಮಿಲ್ಖಾ ಸಿಂಗ್ ಸುಮಾರು 91 ವರ್ಷಗಳ ಕಾಲ ಬದುಕಿದ್ದರು. ಫ್ಲೈಯಿಂಗ್ ಸಿಖ್ನ ದಂತಕಥೆ ಮತ್ತು ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ಮಿಲ್ಖಾ ಸಿಂಗ್ ಅವರ ಜೀವನ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡುತ್ತದೆ. 1929ರ ನವೆಂಬರ್ 20ರಂದು ಗೋವಿಂದಪುರದಲ್ಲಿ ಸಿಖ್ ಕುಟುಂಬವೊಂದರಲ್ಲಿ ಜನಿಸಿದ ಮಿಲ್ಖಾ ಅವರು, ಬಾಲ್ಯದಿಂದಲೇ ಅಥ್ಲೆಟಿಕ್ಸ್ ಬಗ್ಗೆ ಆಸಕ್ತಿ ಹೊಂದಿದ್ದರು. ತಮ್ಮ ಯುವ ವಯಸ್ಸಿನಲ್ಲೇ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಲು ಶುರು ಮಾಡಿದರು. ಅದಕ್ಕೂ ಮುನ್ನ ಭಾರತೀಯ ಸೇನೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಭಾರತ-ಪಾಕಿಸ್ತಾನ ವಿಭಜನೆ ಸಮಯದಲ್ಲಿ ಮಿಲ್ಖಾ ಅನಾಥರಾದರು. ಮಿಲ್ಖಾ ಕ್ರಾಸ್ ಕಂಟ್ರಿ ಓಟದಲ್ಲಿ 6ನೇ ಸ್ಥಾನ ಗಳಿಸಿದ ನಂತರ ಹೆಚ್ಚಿನ ತರಬೇತಿಗಾಗಿ ಅವರನ್ನು ಆಯ್ಕೆ ಮಾಡಲಾಯಿತು. ಇದಾದ ಬಳಿಕ 400ಕ್ಕೂ ಹೆಚ್ಚು ಸೈನಿಕರು ಈ ಕ್ರಾಸ್ ಕಂಟ್ರಿ ಓಟದಲ್ಲಿ ಭಾಗವಹಿಸಿದ್ದರು. ಇದೇ ಮಿಲ್ಖಾ ಅವರ ಜೀವನಕ್ಕೆ ರೋಚಕ ತಿರುವು ಕೊಟ್ಟಿತು.
ಇದನ್ನೂ ಓದಿ:Astrology: ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ದೇಶೀ ಪ್ರತಿಭೆಯಾಗಿ ಹೊರಹೊಮ್ಮಿದ ಮಿಲ್ಖಾ, ಮೊದಲ ಬಾರಿಗೆ 1956ರಲ್ಲಿ ಮೆಲ್ಬೋರ್ನ್ನಲ್ಲಿ 200 ಮೀ. ಮತ್ತು 400 ಮೀ. ಓಟದ ವಿಭಾಗದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು. ಆದರೆ ಕಠಿಣ ಸೆಣಸಾಟ ನಡೆಸಿದರೂ ಗೆಲುವು ಸಾಧಿಸುವಲ್ಲಿ ವಿಫಲರಾದರು. ಮಾನಸಿಕ ಸ್ಥೈರ್ಯ ಕಳೆದುಕೊಳ್ಳದ ಸಿಂಗ್ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಪರಿವರ್ತಿಸಿಕೊಂಡರು. ಚಿನ್ನದ ಪದಕ ವಿಜೇತ ಚಾರ್ಲ್ಸ್ ಜೆಂಕಿನ್ಸ್ರಿಂದ ಪ್ರಭಾವಿತರಾದ ಸಿಂಗ್, ಅವರ ಬಳಿಯೇ ತರಬೇತಿ ಪಡೆಯಲು ಹೋದರು. ಆದರೆ ಜೆಂಕಿನ್ಸ್ ತರಬೇತಿ ಕೊಡಲು ನಿರಾಕರಿಸಿದರು. ಎರಡು ವರ್ಷಗಳ ಬಳಿಕ ಅಂದರೆ 1958ರಲ್ಲಿ ಸಿಂಗ್ ಅವರು ನ್ಯಾಷನಲ್ ರೆಕಾರ್ಡ್ ಬರೆದರು.ಆ ಮೂಲಕ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತು.
1958ರ ಏಷ್ಯನ್ ಕ್ರೀಡಾಕೂಟದಲ್ಲಿ ಮಿಲ್ಖಾ ಭಾರತಕ್ಕೆ ತನ್ನ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಪದಕವನ್ನು ಗೆದ್ದುಕೊಟ್ಟರು. ವಿಶ್ವದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಿಲ್ಖಾ, 200 ಮೀಟರ್ ಓಟದಲ್ಲಿ ಪಾಕಿಸ್ತಾನ ಓಟಗಾರ ಅಬ್ದುಲ್ ಖಲೀಕ್ ಅವರನ್ನು ಸೋಲಿಸಿ ಟೋಕಿಯೋ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು. ಮಿಲ್ಖಾ 200 ಮೀ. ಓಟವನ್ನು ಕೇವಲ 21.6 ಸೆಕೆಂಡ್ಗಳಲ್ಲಿ ಓಡಿ ದಾಖಲೆ ನಿರ್ಮಿಸಿದರು. 1958ರಲ್ಲಿ ಖಲೀಕ್ ಏಷ್ಯಾದ ಅತಿ ವೇಗದ ವ್ಯಕ್ತಿ ಎಂದು ಖ್ಯಾತಿ ಪಡೆದಿದ್ದರು. ಮಿಲ್ಖಾ ಸಿಂಗ್ ಅವರು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದ ಬಳಿಕ, ಭಾರತೀಯ ಓಟಗಾರನಿಗೆ "ಫ್ಲೈಯಿಂಗ್ ಸಿಖ್" ಎಂಬ ಬಿರುದನ್ನು ನೀಡಲಾಯಿತು.
ಏಷ್ಯನ್ ರೆಕಾರ್ಡ್ನೊಂದಿಗೆ ಮಿಲ್ಖಾ 400 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಖಲೀಕ್ 100 ಮೀಟರ್ ವಿಭಾಗದ ಚಾಂಪಿಯನ್ ಆಗಿದ್ದರಿಂದ, 200 ಮೀಟರ್ ವಿಭಾಗದ ಫೈನಲ್ನಲ್ಲಿ ಏಷ್ಯಾದ ಅತೀ ವೇಗದ ವ್ಯಕ್ತಿ ಯಾರೆಂದು ನಿರ್ಧರಿಸುವುದು ಕಷ್ಟ ಆಗಿತ್ತು. ಎಲ್ಲಾ ದೃಷ್ಟಿಕೋನಗಳನ್ನು ಪರಿಶೀಲಿಸಿದ ಬಳಿಕ, ತೀರ್ಪುಗಾರರು ಮಿಲ್ಖಾ ಅವರನ್ನು ಏಷ್ಯಾದ ಬೆಸ್ಟ್ ಎಂದು ಘೋಷಿಸಿದರು.
ಇದನ್ನೂ ಓದಿ:Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ; ಬೆಳಗಾವಿಯಲ್ಲಿ ಪ್ರವಾಹ ಭೀತಿ
ಅದೇ ವರ್ಷ ಬ್ರಿಟಿಷ್ ಎಂಪೈರ್ ಮತ್ತು ಕಾಮನ್ವೆಲ್ಸ್ ಕ್ರೀಡಾಕೂಟದಲ್ಲಿ, ಮಿಲ್ಖಾ ಅವರು 400 ಮೀ.ಓಟವನ್ನು 46.6 ಸೆಕೆಂಡ್ಗಳಲ್ಲಿ ಓಡಿ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಗೆ ಪಾತ್ರರಾದರು. ಇದು ಫ್ಲೈಯಿಂಗ್ ಸಿಂಗ್ ಅವರಿಗೆ ಸಿಕ್ಕಿದ ಮತ್ತೊಂದು ಗರಿ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕೃಷ್ಣ ಪೂನಿಯಾ ಮೊದಲ ಸ್ಥಾನ ಗಳಿಸುವವರೆಗೂ ಮಿಲ್ಖಾ ಭಾರತದ ಏಕೈಕ ಕಾಮನ್ವೆಲ್ತ್ ಗೇಮ್ಸ್ನ ಚಿನ್ನದ ಪದಕ ವಿಜೇತರಾಗಿದ್ದರು. 1960ರ ರೋಮ್ ಒಲಿಂಪಿಕ್ಸ್ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. 1964ರಲ್ಲಿ ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದರು.
ಸಿಂಗ್ ಅವರು 1956-1964ರವರೆಗೆ ಮೂರು ಒಲಿಂಪಿಕ್ಸ್ನಲ್ಲಿ(ಮೆಲ್ಬೋರ್ನ್,ರೋಮ್, ಟೋಕಿಯೋ) ಭಾರತವನ್ನು ಪ್ರತಿನಿಧಿಸಿದರು. ಮಿಲ್ಖಾ ಅವರ ಕ್ರೀಡಾ ಸಾಧನೆಯನ್ನು ಗುರುತಿಸಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2013ರಲ್ಲಿ ಫರ್ಹಾನ್ ಅಖ್ತರ್ ಅಭಿನಯದ ‘ಭಾಫ್ ಮಿಲ್ಖಾ ಭಾಗ್‘ ಚಿತ್ರದೊಂದಿಗೆ ದಂತಕಥೆಯ ಜೀವನ ಬೆಳ್ಳಿ ಪರದೆ ಮೇಲೆ ಅಮರವಾಯಿತು.
ಸಿಂಗ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ಇವರಿಗೆ ಮೇ 19ರಂದು ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಕೂಡಲೇ ಅವರು ಚಂಡೀಗರ್ನ ತಮ್ಮ ನಿವಾಸದಲ್ಲಿ ಹೋಂ ಐಸೋಲೇಷನ್ಆಗಿದ್ದರು. ಆದರೆ ಮೇ 24ರಂದು ಅವರ ಆರೋಗ್ಯ ಸ್ಥಿತಿ ಇನ್ನೂ ಬಿಗಡಾಯಿಸಿತ್ತು. ಕೋವಿಡ್ ನ್ಯೂಮೋನಿಯಾ ಆಗಿದ್ದರಿಂದ ಸಿಂಗ್ ಅವರನ್ನು ಮೊಹಾಲಿಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಜೂನ್ 3ರಂದು ಚಂಡೀಗರ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಗುರುವಾರ ಕೊರೋನಾ ನೆಗೆಟಿವ್ ಕೂಡ ಬಂದಿತ್ತು. ಆದರೆ ನಿನ್ನೆ ತಡರಾತ್ರಿ ಮಿಲ್ಖಾ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ. ಮಿಲ್ಖಾ ಸಿಂಗ್ ತಮ್ಮ ಮಡದಿ ನಿರ್ಮಲಾ ಕೌರ್ ಸಾವನ್ನಪ್ಪಿದ 5 ದಿನಗಳ ಬಳಿಕ ಮೃತಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ