ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ: ಟೀಂ ಇಂಡಿಯಾ ಆರಂಭಿಕ ಸಮಸ್ಯೆಗೆ ಸಿಕ್ಕಿದೆ ಪರಿಹಾರ

ಅವಕಾಶ ನೀಡಿದರು ಮತ್ತದೆ ತಪ್ಪು ಮಾಡುತ್ತಿರುವ ರಾಹುಲ್ ಸ್ಥಾನಕ್ಕೆ ಕುತ್ತುಬಂದಿದ್ದು, ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಭದ್ರವಾಗಿ ನೆಲೆಯೂರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Vinay Bhat | news18
Updated:January 6, 2019, 7:51 PM IST
ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ: ಟೀಂ ಇಂಡಿಯಾ ಆರಂಭಿಕ ಸಮಸ್ಯೆಗೆ ಸಿಕ್ಕಿದೆ ಪರಿಹಾರ
ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್
Vinay Bhat | news18
Updated: January 6, 2019, 7:51 PM IST
ವಿನಯ್ ಭಟ್ ಇಳಂತಿಲ

ಬೆಂಗಳೂರು (ಜ. 06): 'ಮಯಾಂಕ್ ಅಗರ್ವಾಲ್'. ಸದ್ಯ ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಟೆಸ್ಟ್​​ ಸರಣಿಯಲ್ಲಿ ಮಿಂಚುತ್ತಿರುವ ಯುವ ಆಟಗಾರ. ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೆ ದಾಖಲೆ ಬರೆದ ಕೆಲವೇ ಆಟಗಾರರ ಸಾಲಿಗೆ ಸೇರಿದ ಈತ ಕನ್ನಡಿಗ ಎಂಬುದು ಹೆಮ್ಮೆಯ ವಿಚಾರ. ಆದರೆ, ಈ ಕನ್ನಡಿಗನಿಂದಲೆ ಮತ್ತೊಬ್ಬ ಕನ್ನಡಿಗನಿಗೆ ಸದ್ಯ ಕಂಟಕ ಎದುರಾಗಿದೆ.

ಕಳೆದ ವೆಸ್ಟ್​ ಇಂಡೀಸ್ ಹಾಗೂ ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸುತ್ತಿರುವ ಕೆ ಎಲ್ ರಾಹುಲ್ ಕ್ರಿಕೆಟ್ ಭವಿಷ್ಯ ಈಗ  ತೂಗುಯ್ಯಾಲೆಯಲ್ಲಿದೆ. ಎಷ್ಟೇ ಅವಕಾಶ ನೀಡಿದರು ಮತ್ತದೆ ತಪ್ಪು ಮಾಡುತ್ತಿರುವ ರಾಹುಲ್ ಸ್ಥಾನಕ್ಕೆ ಕುತ್ತುಬಂದಿದ್ದು, ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಭದ್ರವಾಗಿ ನೆಲೆಯೂರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ರಾಹುಲ್ ಮತ್ತೆ ವೈಫಲ್ಯ ಅನುಭವಿಸಿದರು. ಇದೇ ಮೊದಲ ಬಾರಿಗೆ ಕನ್ನಡಿಗರಿಬ್ಬರು ಓಪನರ್​ಗಳಾಗಿ ಕಣಕ್ಕಿಳಿದಿದ್ದು ಹೆಚ್ಚು ಕುತೂಹಲ ಕೆರಳಿಸಿತ್ತು. ಆದರೆ, ಪಂದ್ಯ ಆರಂಭವಾದ ಎರಡನೇ ಓವರ್​ನಲ್ಲೆ ರಾಹುಲ್ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ಮಧ್ಯೆ ಉದಯೋನ್ಮುಖ ಆಟಗಾರ ಮಯಾಂಕ್ ಆಸೀಸ್ ನೆಲದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಟೀಂ ಇಂಡಿಯಾಕ್ಕೆ ವಿರೇಂದ್ರ ಸೆಹ್ವಾಗ್​​​ನಂತಹ ಮತ್ತೊಬ್ಬ ಆಟಗಾರ ಸಿಕ್ಕಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಅಂತಿಮ ದಿನದಾಟದ ಮೇಲೆ ಎಲ್ಲರ ಕಣ್ಣು: ಹೊಸ ಇತಿಹಾಸ ಬರೆಯಲು ಕೊಹ್ಲಿ ಪಡೆ ರೆಡಿ

ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮತ್ತೊಬ್ಬ ಟೆಸ್ಟ್​ ಓಪನರ್ ಪೃಥ್ವಿ ಶಾ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಇನ್ನಿಂಗ್ಸ್​ ಆರಂಭಿಸಲಿರುವ ಆಟಗಾರರು ಎಂದೇ ಹೇಳಲಾಗುತ್ತಿದೆ. ಅಷ್ಟೆ ಅಲ್ಲದೆ, ಇದಕ್ಕೆ ಪುಷ್ಠಿ ಎಂಬಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು 'ಮಯಾಂಕ್- ಪೃಥ್ವಿ ಶಾ ಕ್ಲಿಕ್ ಆದರೆ ಟೀಂ ಇಂಡಿಯಾದಲ್ಲಿ ಬಹುಕಾಲದ ಜೋಡಿಯಾಗಿ ಉಳಿಯಬಹುದು. ಇವರಿಂದ ಆರಂಭಿಕ ಸಮಸ್ಯೆಗೆ ಪರಿಹಾರ ಸಿಗಲಿದೆ' ಎಂದಿದ್ದಾರೆ.

ಈ ಹಿಂದೆ ಟೆಸ್ಟ್​​ನಲ್ಲಿ ಭಾರತ ಕೆ ಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಹನುಮ ವಿಹಾರಿ ಹೀಗೆ ಅನೇಕರನ್ನು ಆರಂಭಿಕರಾಗಿ ಕಣಕ್ಕಿಳಿಸಿದೆ. ಆದರೆ, ಇವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಹೀಗಾಗಿ ಮಯಾಂಕ್ -ಪೃಥ್ವಿ ಈ ಸ್ಥಾನಕ್ಕೆ ಹೇಳಿಮಾಡಿಸಿದ ಜೋಡಿ ಎನ್ನಲಾಗುತ್ತಿದೆ.
Loading...

ಕಳೆದ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ 19 ವರ್ಷ ಪ್ರಾಯದ ಪೃಥ್ವಿ ಶಾ ಮೊದಲ ಪಂದ್ಯದಲ್ಲೆ ಮಿಂಚಿ ತನ್ನ ಸಾಮರ್ಥ್ಯ ತೋರಿಸಿದ್ದರು. ಅಲ್ಲದೆ ಭಾರತ ಎ ತಂಡದ ಪರ ವಿದೇಶದಲ್ಲು ಅನೇಕ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು. ಅಂತೆಯೆ ಇತ್ತ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಮಯಾಂಕ್​​​ಗೆ ಕೊನೆಗೂ ಸ್ಥಾನ ನೀಡಿ ಮೊದಲ ಪಂದ್ಯದಲ್ಲೆ, ಅದರಲ್ಲು ವಿದೇಶದಲ್ಲಿ ಆರ್ಭಟಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

27 ವರ್ಷದ ಮಯಾಂಕ್ 46 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನಾಡಿದ್ದು, 3599 ರನ್ ದಾಖಲಿಸಿ ಶೇ. 49.98 ರಷ್ಟು ಸರಾಸರಿ ಹೊಂದಿದ್ದಾರೆ. 75 ಲಿಸ್ಟ್​ ಎ ಪಂದ್ಯಗಳಲ್ಲಿ 3605 ರನ್ ದಾಖಲಸಿದ್ದರು. 2018ರ ಆರಂಭದಲ್ಲಿ ದಕ್ಷಿಣಾ ಆಫ್ರಿಕಾ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಗರ್ವಾಲ್ ಅವರು ದ್ವಿಶತಕ ಸಿಡಿಸಿ ಮಿಂಚಿದ್ದರು. ಅಂತೆಯೆ ಆಂಗ್ಲರ ನೆಲದಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧವು ಮಯಾಂಕ್ ಎಲ್ಲರ ಮನಗೆದ್ದಿದ್ದರು. ಅಷ್ಟೆ ಅಲ್ಲದೆ 2017-18ರ ರಣಜಿಯಲ್ಲಿ 1 ಸಾವಿರ ರನ್ ಗಳಿಸಿದ ಏಕೈಕ ಆಟಗಾರ ಎಂಬ ಕೀರ್ತಿಗೂ ಅಗರ್ವಾಲ್ ಪಾತ್ರರಾಗಿದ್ದರು.

ಇದನ್ನೂ ಓದಿ: ಪ್ರೋ ಕಬಡ್ಡಿ: ಗೆದ್ದು ಬೀಗಿದ ಬೆಂಗಳೂರು: ವೈರಲ್ ಆಯ್ತು 'ಈ ಸಲ ಕಮ್ ನಮ್ದೆ' ಹ್ಯಾಷ್​ ಟ್ಯಾಗ್

ಇಷ್ಟೆಲ್ಲ ಪ್ರತಿಭೆಯಿದ್ದರು, ಸಾಧನೆ ಮಾಡಿದ್ದರು ಮಯಾಂಕ್​ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಆಸೀಸ್ ಟೆಸ್ಟ್​​ ಸರಣಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಗಾಯಕ್ಕೀಡಾದ್ದರು. ಈ ಹಿನ್ನಲೆಯಲ್ಲಿ ಆಯ್ಕೆ ಸಮಿತಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ನಾಲ್ಕನೆ ಟೆಸ್ಟ್​ನಲ್ಲಿ ಮಯಾಂಕ್​​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಪದಾರ್ಪಣೆ ಮಾಡಿದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 76 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 42 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಇನ್ನು ಮಯಾಂಕ್ ಎರಡನೇ ಪಂದ್ಯವನ್ನಾಡುತ್ತಿದ್ದು, ಇದರಲ್ಲು ಮೊದಲ ಇನ್ನಿಂಗ್ಸ್​ನಲ್ಲಿ 77 ರನ್ ಚಚ್ಚಿದ್ದಾರೆ. ಇದನ್ನೆಲ್ಲಾ ನೋಡಿದಾಗ ಟೀಂ ಇಂಡಿಯಾಕ್ಕೀರುವ ದೀರ್ಘಾಕಾಲದ ಆರಂಭಿಕ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಭಾರತ ಟೆಸ್ಟ್​ ತಂಡದ ಸ್ಟಾರ್ ಓಪನರ್​ಗಳಾಗಿ ಕಣಕ್ಕಿಳಿಯುವ ದಿನವೂ ದೂರವಿಲ್ಲ ಎನ್ನಬಹುದು.

First published:January 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ