Olympics- ಒಲಿಂಪಿಕ್ಸ್​ನಲ್ಲಿ ಪದಕದ ನಿರೀಕ್ಷೆ ಹುಟ್ಟಿಸಿ ಹುಸಿಗೊಳಿಸಿದ ಭಾರತೀಯ ಆಟಗಾರರು ಇವರು

ಶೂಟಿಂಗ್, ಆರ್ಚರಿ, ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ಭಾರತ ಸಾಕಷ್ಟು ಪದಕಗಳನ್ನ ನಿರೀಕ್ಷಿಸಿತ್ತು. ಆದರೆ, ಈ ನಾಲ್ಕು ಕ್ರೀಡೆಗಳಿಂದ ಭಾರತಕ್ಕೆ ಸಿಕ್ಕ ಪದಕ ಕೇವಲ 3 ಮಾತ್ರ. ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ಒಂದೂ ಪದಕ ಬರಲಿಲ್ಲ.

ಭಾರತೀಯ ಶೂಟರ್ ಮನು ಭಾಕರ್

ಭಾರತೀಯ ಶೂಟರ್ ಮನು ಭಾಕರ್

  • News18
  • Last Updated :
  • Share this:
ಭಾರತ ಈವರೆಗೆ ಭಾಗವಹಿಸಿದ ಒಲಿಂಪಿಕ್ ಕ್ರೀಡಾಕೂಟಗಳ ಪೈಕಿ ಈ ಬಾರಿ ಅತ್ಯುತ್ತಮ ಪ್ರದರ್ಶನ ತೋರಿದೆ. 20ಕ್ಕೂ ಹೆಚ್ಚು ವಿವಿಧ ಕ್ರೀಡೆಗಳಿಂದ 120 ಆಟಗಾರರು ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಈ ಪೈಕಿ ಭಾರತಕ್ಕೆ 1 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ದೊರೆತಿವೆ. ಸಂಖ್ಯೆ ಲೆಕ್ಕದಲ್ಲಿ ಹಾಗೂ ಪದಕಗಳ ಲೆಕ್ಕದಲ್ಲಿ ಭಾರತದ್ದು ಈ ಬಾರಿಯ ಸಾಧನೆ ಗರಿಷ್ಠ. 20012ರಲ್ಲಿ 2 ಬೆಳ್ಳಿ 4 ಕಂಚು ಭಾರತದ ಗರಿಷ್ಠ ಸಾಧನೆ ಎನಿಸಿತ್ತು. 2008ರಲ್ಲಿ 1 ಚಿನ್ನ 1 ಕಂಚು ಪದಕ ಕೂಡ ಭಾರತದ ಅತ್ಯುತ್ತಮ ಸಾಧನೆ ಎನಿಸಿತ್ತು. ಆದರೆ, ಈಗ ಭಾರತ ಸರ್ವೋಚ್ಚ ಪ್ರದರ್ಶನ ನೀಡಿದೆ. ಅಂದಹಾಗೆ ಭಾರತದ ಪ್ರದರ್ಶನ ನಿರೀಕ್ಷೆಮೀರಿದ್ದಾಗಿತ್ತೇ? ಖಂಡಿತ ಅಲ್ಲ. ಭಾರತ ಈ ಬಾರಿ ಕನಿಷ್ಠ 10 ಪದಕಗಳನ್ನಾದರೂ ನಿರೀಕ್ಷಿಸಿತ್ತು. ನಿರೀಕ್ಷೆಮೀರಿ ಫಲಿತಾಂಶ ಕೊಟ್ಟಿದ್ದ ನೀರಜ್ ಚೋಪ್ರಾ ಒಬ್ಬರೇ.

ನೀರಜ್ ಅವರು ಪದಕ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತಾದರೂ ಚಿನ್ನದ ಪದಕ ಗಿಟ್ಟಿಸುತ್ತಾರೆಂದು ಯಾರೂ ಅಂದಾಜು ಮಾಡಿರಲಿಲ್ಲ. ನೀರಜ್ ಅವರಿಗಿಂತ ಹೆಚ್ಚು ದೂರ ಭರ್ಜಿ (ಜಾವೆಲಿನ್) ಎಸೆಯಬಲ್ಲ ಆಟಗಾರರು ಒಲಿಂಪಿಕ್ಸ್ ಕಣದಲ್ಲಿದ್ದರು. ಇನ್ನು, ನಿರೀಕ್ಷೆ ಇಟ್ಟುಕೊಂಡು ಹುಸಿಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಭಾರತ ಈ ಬಾರಿ ಶೂಟಿಂಗ್​ನಲ್ಲಿ ಬಹಳಷ್ಟು ಪದಕಗಳನ್ನ ನಿರೀಕ್ಷಿಸಿತ್ತು. ಆದರೆ ಒಂದೂ ಸಿಗಲಿಲ್ಲ. ಕುಸ್ತಿಯಂತೆ ಶೂಟಿಂಗ್​ನಲ್ಲೂ ಭಾರತೀಯ ಸ್ಪರ್ಧಾಳುಗಳು ವಿಶ್ವವಿಜೇತರಾಗಿದ್ದರು. ಆದರೆ, ಒಬ್ಬರೂ ಕೂಡ ಪದಕ ಗೆಲ್ಲಲಿಲ್ಲ. ಬೇಸರದ ವಿಷಯವೆಂದರೆ ಭಾರತದಿಂದ ಸ್ಪರ್ಧಿಸಿದ್ದ 15 ಶೂಟರ್ಸ್ ಪೈಕಿ ಸೌರಭ್ ಚೌಧರಿ ಹೊರತುಪಡಿಸಿ ಉಳಿದವರಾರೂ ಫೈನಲ್ ಹಂತಕ್ಕೂ ಕ್ವಾಲಿಫೈ ಆಗಲಿಲ್ಲ. 10 ಮೀಟರ್ ಪುರುಷರ್ ಏರ್ ಪಿಸ್ತೂಲ್​ನಲ್ಲಿ ಸೌರಭ್ ಚೌಧರಿ ಫೈನಲ್ ಪ್ರವೇಶಿಸಿ 7 ಸ್ಥಾನಕ್ಕೆ ತೃಪ್ತಿಪಟ್ಟರು.

ಮಹಿಳೆಯರ ಪ್ರತಿಭಾನ್ವಿತ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮತ್ತು 25 ಮೀಟರ್ ಪಿಸ್ತೂಲ್ ಎರಡೂ ಸ್ಪರ್ಧೆಗಳಲ್ಲೂ ನಿರಾಸೆಗೊಳಿಸಿದರು. ಆದರೆ, 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ವೇಳೆ ಮನು ಭಾಕರ್ ಅವರಿಗೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಮುಂದಿನ ಹಂತಕ್ಕೇರುವುದರಿಂದ ವಂಚಿತರಾಗಿದ್ದು ಬಿಟ್ಟರೆ ಉಳಿದಂತೆ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯರದ್ದು ನಿರಾಸೆಯ ಪ್ರದರ್ಶನವಾಗಿತ್ತು.

ಇದನ್ನೂ ಓದಿ: Tokyo Olympics- ಟೋಕಿಯೋ ಒಲಿಂಪಿಕ್ಸ್: ರೋಚಕ ಮೆಡಲ್ ರೇಸ್​ನಲ್ಲಿ ಚೀನಾ ಹಿಂದಿಕ್ಕಿದ ಅಮೆರಿಕ

ಶೂಟಿಂಗ್​ನಂತೆ ಆರ್ಚರಿಯಲ್ಲೂ ಭಾರತದಿಂದ ಒಂದೆರಡು ಪದಕಗಳಾದರೂ ಬರುವ ನಿರೀಕ್ಷೆ ಇತ್ತು. ದೀಪಿಕಾ ಕುಮಾರಿ ಚಿನ್ನದ ಬೇಟೆಯಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಅತಾನು ದಾಸ್, ತರುಣ್​ದೀಪ್ ರಾಯ್ ಅವರಿಂದಲೂ ಪದಕ ಸಿಗಬಹುದು ಎಂಬ ಎಣಿಕೆ ಅಂತಿಮವಾಗಿ ತಲೆಕೆಳಗಾಯಿತು. ಸಮಾಧಾನ ವಿಷಯವೆಂದರೆ ಭಾರತದ ಎಲ್ಲಾ ನಾಲ್ವರು ಬಿಲ್ಲುಪಟುಗಳು ಟೂರ್ನಿಯಿಂದ ನಿರ್ಗಮಿಸುವ ಮುನ್ನ ಒಂದಾದರೂ ಪಂದ್ಯ ಗೆದ್ದವರೇ ಆಗಿದ್ದರು. ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಅತಾನು ದಾಸ್ ಪ್ರೀಕ್ವಾರ್ಟರ್ ಫೈನಲ್​ವರೆಗೂ ಪ್ರವೇಶಿಸಿದರು. ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರಾಯ್ ಮೊದಲ ಸುತ್ತು ದಾಟಿ ಬಳಿಕ ಸೋತರು. ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್​ವರೆಗೂ ಹೋಗಿ ಕೊರಿಯಾದ ಪ್ರಬಲ ಸ್ಪರ್ಧಿ ವಿರುದ್ಧ ಸೋಲೊಪ್ಪಿದರು.

ಇನ್ನು, ಬಾಕ್ಸಿಂಗ್​ನಲ್ಲಿ ಲವ್ಲಿನಾ ಕಂಚು ಗೆದ್ದದ್ದು ಬಿಟ್ಟರೆ ಉಳಿದಂತೆ ಭಾರತಕ್ಕೆ ನಿರಾಸೆಯೇ. ಚಿನ್ನದ ಪದಕ ಸಿಗಬಹುದು ಎಂದು ನಿರೀಕ್ಷಿಸಲಾಗಿದ್ದ ಅಮಿತ್ ಪಂಗಲ್ ಮತ್ತು ವಿಕಾಸ್ ಯಾದವ್ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದು ಹಲವು ಭಾರತೀಯರಿಗೆ ಶಾಕ್ ಕೊಟ್ಟಿತ್ತು. ಸೂಪರ್ ಹೆವಿವೈಟ್ ವಿಭಾಗದಲ್ಲಿ ಸತೀಶ್ ಕುಮಾರ್ ಸಿಂಹದಂತೆ ಹೋರಾಡಿ ಕ್ವಾರ್ಟರ್ ಫೈನಲ್​ನಲ್ಲಿ ಸೋಲಪ್ಪಿದರು. ಮಹಿಳಾ ಬಾಕ್ಸರ್​ಗಳಾದ ಮೇರಿಕೋಮ್ ಮತ್ತು ಪೂಜಾ ರಾಣಿ ಮೊದಲ ಸುತ್ತು ದಾಟಿ ಬಳಿಕ ಸೋತರು.

ಇದನ್ನು ಓದಿ: Neeraj Chopra: ಸಾಧಿಸುವುದು ಬಹಳಷ್ಟಿದೆ, ನನ್ನ ಜೀವನಾಧರಿತ ಚಿತ್ರ ಈಗಲೇ ಬೇಡ ಎಂದ ಚಿನ್ನದ ಹುಡುಗ ನೀರಜ್​ ಚೋಪ್ರಾ

ಕುಸ್ತಿಯಲ್ಲಿ ಮೂವರು ಪುರುಷ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿದರೆ, ಮಹಿಳೆಯರು ನಿರಾಶೆಗೊಳಿಸಿದರು. ಚಿನ್ನದ ಪದಕದ ನಿರೀಕ್ಷೆ ಇಡಲಾಗಿದ್ದ ವಿನೇಶ್ ಫೋಗಾಟ್ ಒಂದು ಪಂದ್ಯ ಗೆದ್ದದ್ದೇ ಹೆಚ್ಚು ಎಂಬಂತಾಯಿತು. ಉಳಿದ ಮೂವರು ಮಹಿಳಾ ಕುಸ್ತಿಪಟುಗಳು ಒಂದೂ ಪಂದ್ಯ ಗೆಲ್ಲದೇ ನಿರ್ಗಮಿಸಿದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: