ಫುಟ್ಬಾಲ್ ಅಂಗಳದ ಧ್ರುವತಾರೆ ಲಿಯೋನೆಲ್ ಮೆಸ್ಸಿ ಮತ್ತೊಂದು ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ತಮ್ಮ ವೃತ್ತಿಜೀವನ 700ನೇ ಗೋಲು ದಾಖಲಿಸುವ ಮೂಲಕ ಈ ಸಾಧನೆಗೈದ ಶ್ರೇಷ್ಠ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ನಿನ್ನೆ ನಡೆದ ಲಾ ಲೀಗಾ ಟೂರ್ನಿಯಲ್ಲಿ ಅಥ್ಲೆಟಿಕೋ ಮಾಡ್ರೀಡ್ ತಂಡದ ವಿರುದ್ಧ ಗೋಲ್ ಬಾರಿಸುವ ಮೂಲಕ ಮೆಸ್ಸಿ ಈ ಸಾಧನೆ ಮಾಡಿದರು. ಈ ಮೂಲಕ ಫುಟ್ಬಾಲ್ ಅಂಗಳದ ಆಕ್ರಮಣಕಾರಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗಿಂತ ವೇಗವಾಗಿ ಈ ಸಾಧನೆ ಮಾಡಿದ ಪ್ರಸ್ತುತ ಆಟಗಾರ ಎನಿಸಿಕೊಂಡರು.
![]()
ಮೆಸ್ಸಿ-ರೊನಾಲ್ಡೊ
ರಾಷ್ಟ್ರೀಯ ಮತ್ತು ಕ್ಲಬ್ ಪರ ಪೋರ್ಚುಗಲ್ ಆಟಗಾರ ರೊನಾಲ್ಡೊ 700 ಗೋಲು ದಾಖಲಿಸಲು ತೆಗೆದುಕೊಂಡಿದ್ದು 974 ಪಂದ್ಯಗಳನ್ನು. ಆದರೆ ಅರ್ಜೆಂಟೀನಾ ತಾರೆ ಮೆಸ್ಸಿ 862 ಪಂದ್ಯಗಳಿಂದ ಈ ಸಾಧನೆ ಮಾಡಿರುವುದು ವಿಶೇಷ. ಇನ್ನು ಇದರಲ್ಲಿ ಬಾರ್ಸಿಲೋನಾ ಪರ 723 ಪಂದ್ಯಗಳಲ್ಲಿ 630 ಗೋಲುಗಳಿಸಿದರೆ, ಅರ್ಜೇಂಟೀನಾ ಪರ 138 ಪಂದ್ಯಗಳಲ್ಲಿ 70 ಗೋಲುಗಳನ್ನು ಗಳಿಸಿದ್ದಾರೆ.
ಈ ಸಾಧನೆಯ ಮೂಲಕ ವೃತ್ತಿಜೀವನದಲ್ಲಿ 700ಕ್ಕೂ ಅಧಿಕ ಗೋಲ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ 7ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮೊದಲು ಕೇವಲ 6 ಆಟಗಾರರು ಮಾತ್ರ ಈ ಮೈಲುಗಲ್ಲನ್ನು ದಾಟಿದ್ದರು. ಅವರೆಂದರೆ...
1. ಜೋಸೆಫ್ ಬಿಕಾನ್ (ಆಸ್ಟ್ರೀಯಾ - 1931-1956)
530 ಪಂದ್ಯಗಳಿಂದ 805 ಗೋಲು ಬಾರಿಸಿದ್ದರು
2. ರೊಮಾರಿಯೊ (ಬ್ರೆಜಿಲ್-1985-2007)
994 ಪಂದ್ಯಗಳಿಂದ 772 ಗೋಲು ಗಳಿಸಿದ್ದಾರೆ.
3. ಪಿಲೆ ( ಬ್ರೆಜಿಲ್ -1957-1977)
831 ಪಂದ್ಯಗಳಿಂದ 767 ಗೋಲು ದಾಖಲಿಸಿದ್ದಾರೆ.
4. ಫೆರೆಂಕ್ ಪುಸ್ಕಸ್ (ಹಂಗೇರಿ -1943-1966)
754 ಪಂದ್ಯಗಳಿಂದ 746 ಗೋಲುಗಳನ್ನು ಬಾರಿಸಿದ್ದಾರೆ.
5.ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್- 2001ರಿಂದ..)
1041 ಪಂದ್ಯಗಳಿಂದ 744 ಗೋಲು ಬಾರಿಸಿದ್ದಾರೆ.
6. ಗ್ರೆಡ್ ಮುಲ್ಲರ್ (ಜರ್ಮನಿ - 1962-1981)
793 ಪಂದ್ಯಗಳಿಂದ 735 ಗೋಲು ದಾಖಲಿಸಿದ್ದಾರೆ.
7. ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ- 2003 ರಿಂದ..)
862 ಪಂದ್ಯಗಳಿಂದ 700 ಗೋಲು ಬಾರಿಸಿದ್ದಾರೆ.