News18 India World Cup 2019

ಅಜಿತ್ ವಾಡೇಕರ್​ಗೆ ನಮನ; ಭಾರತೀಯ ಕ್ರಿಕೆಟ್​ಗೆ ಹೊಸ ಹುರುಪು ಕೊಟ್ಟ ಧೀಮಂತ ಚೇತನ


Updated:August 16, 2018, 11:32 AM IST
ಅಜಿತ್ ವಾಡೇಕರ್​ಗೆ ನಮನ; ಭಾರತೀಯ ಕ್ರಿಕೆಟ್​ಗೆ ಹೊಸ ಹುರುಪು ಕೊಟ್ಟ ಧೀಮಂತ ಚೇತನ
ಅಜಿತ್ ವಾಡೇಕರ್

Updated: August 16, 2018, 11:32 AM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 16): ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಮಾಜಿ ಮ್ಯಾನೇಜರ್ ಅಜಿತ್ ವಾಡೇಕರ್ ನಿನ್ನೆ ರಾತ್ರಿ ಮುಂಬೈನಲ್ಲಿ ನಿಧನರಾದರು. 77 ವರ್ಷದ ವಾಡೇಕರ್ ಅವರು ತಮ್ಮ ಪತ್ನಿ ರೇಖಾ ಹಾಗೂ ಮೂವರು ಮಕ್ಕಳನ್ನು ಅಗಲಿ ಇಹಲೋಕಕ್ಕೆ ಮರೆಯಾದರು. ಕೆಲವಾರು ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ನಾಳೆ, ಶುಕ್ರವಾರ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

1941, ಏಪ್ರಿಲ್ 1ರಂದು ಮುಂಬೈನಲ್ಲಿ ಜನಿಸಿದ ಅಜಿತ್ ವಾಡೇಕರ್ 1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಅಡಿ ಇಟ್ಟರು. 1966ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವಾಡೇಕರ್ 1971ರಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆದರು. ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು 1974ರ ಜುಲೈ 15ರಂದು.

ಎಡಗೈ ಆಟಗಾರ ಅಜಿತ್ ವಾಡೇಕರ್ ಆಡಿದ್ದು 37 ಟೆಸ್ಟ್ ಮತ್ತು 2 ಏಕದಿನ ಪಂದ್ಯ ಮಾತ್ರವೇ. ಗಳಿಸಿದ ರನ್ ಕೂಡ 2 ಸಾವಿರದಷ್ಟು ಮಾತ್ರ. ಆದರೂ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಜಿತ್ ವಾಡೇಕರ್ ಹೆಸರು ಅಜರಾಮರವಾಗಿದೆ. ಇದಕ್ಕೆ ಕಾರಣ ಅವರು ಎಪತ್ತರ ದಶಕದಲ್ಲಿ ಕ್ಯಾಪ್ಟನ್ ಆಗಿ ತಂಡಕ್ಕೆ ದೊರಕಿಸಿಕೊಟ್ಟ ಐತಿಹಾಸಿಕ ಜಯಗಳು.

1971ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಗೆಲುವುಗಳು ದಕ್ಕಿದ್ದವು. ಆ ದಶಕದ ಆರಂಭ ಕೆಲ ವರ್ಷಗಳಲ್ಲಿ ಕೆರಿಬಿಯನ್ ನಾಡಿನಲ್ಲಿ ಭಾರತೀಯರು 5 ಟೆಸ್ಟ್ ಪಂದ್ಯಗಳನ್ನ ಜಯಿಸಿದ್ದರು. ಆಂಗ್ಲರ ನಾಡಿನಲ್ಲಿ ಮೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ದಿಗ್ವಿಜಯ ಸಾಧಿಸಿದ್ದರು. ಆ ಸಮಯದಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವದ ಅತ್ಯಂತ ಶಕ್ತಿಶಾಲಿ ಎನಿಸಿದ್ದವು. ವಿಂಡೀಸ್​ನ ವೇಗದ ಬೌಲರ್​ಗಳು ಎಸೆಯುತ್ತಿದ್ದ ಚೆಂಡು ಬೆಂಕೆಯುಂಡೆಯಂತಿದ್ದವು. ವಿಶ್ವದ ಅನೇಕ ಬ್ಯಾಟ್ಸ್​ಮನ್​ಗಳು, ಅದರಲ್ಲೂ ಭಾರತೀಯರು ಕ್ರೀಸಿಗೆ ಬರಲು ಹೆದರುತ್ತಿದ್ದರು. ಅಂಥ ಸಂದರ್ಭದಲ್ಲೂ ವಾಡೇಕರ್ ನಾಯಕತ್ವದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್ ಗೆಲುವುಗಳನ್ನ ಪಡೆದದ್ದು ನಿಜಕ್ಕೂ ಗಮನಾರ್ಹವಾದುದು.

ವಾಡೇಕರ್ ನಾಯಕತ್ವದ ಆ ಭಾರತೀಯ ತಂಡದಲ್ಲಿದ್ದವರೆಲ್ಲರೂ ದಿಗ್ಗಜರೇ, ದಂತಕಥೆಗಳೇ. ಸುನೀಲ್ ಗವಾಸ್ಕರ್, ಜಿ.ಆರ್. ವಿಶ್ವನಾಥ್, ಫಾರೂಕ್ ಇಂಜಿನಿಯರ್, ಬಿಶನ್ ಸಿಂಗ್ ಬೇಡಿ, ಇಎಎಸ್ ಪ್ರಸನ್ನ, ಬಿ. ಚಂದ್ರಶೇಖರ್, ಎಸ್. ವೆಂಕಟರಾಘವನ್ ಅವರು ಈ ಐತಿಹಾಸಿಕ ತಂಡದಲ್ಲಿದ್ದರು. ತಂಡದಲ್ಲಿ ಮೂರನೇ ಬ್ಯಾಟುಗಾರನಾಗಿ ಬರುತ್ತಿದ್ದ ಅಜಿತ್ ವಾಡೇಕರ್ ಅವರು ವೇಗದ ಬೌಲಿಂಗ್​ನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದರು.
Loading...

1974ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ನಂತರ ಅಜಿತ್ ವಾಡೇಕರ್ ಅವರು ಕ್ರಿಕೆಟ್ ಆಡಳಿತಕ್ಕೆ ಇಳಿದರು. ತಂಡದ ಮ್ಯಾನೇಜರ್/ಕೋಚ್ ಆಗಿ ಕಾರ್ಯನಿರ್ವಹಿಸಿದರು. ಬಿಸಿಸಿಐನ ಆಯ್ಕೆ ಸಮಿತಿಯಲ್ಲೂ ಜವಾಬ್ದಾರಿ ನಿಭಾಯಿಸಿದರು. ಸರಕಾರದಿಂದ ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳು ಇವರಿಗೆ ಸಿಕ್ಕಿವೆ.

ಸಂತಾಪ:

ವಾಡೇಕರ್ ನಿಧನಕ್ಕೆ ಬಿಸಿಸಿಐ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ನಡುವೆ ಭಿನ್ನಾಭಿಪ್ರಾಯಿದ್ದರೂ ಅವರ ಕ್ರಿಕೆಟ್ ಸಾಧನೆಗೆ ಗೌರವ ಸಂದಾಯವಾಗಲೇಬೇಕು. ಸತತ ಮೂರು ಟೆಸ್ಟ್ ಸರಣಿಗಳನ್ನ ಗೆದ್ದ ಏಕೈಕ ಭಾರತೀಯ ನಾಯಕ ಅವರಾಗಿದ್ದಾರೆ ಎಂದು ಅವರ ಸಮಕಾಲೀನ ಆಟಗಾರ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.ಅಜಿತ್ ವಾಡೇಕರ್ ಅವರು ಭಾರತ ತಂಡಕ್ಕೆ ಕೋಚ್​ಗಿಂತಲೂ ಹೆಚ್ಚೆನಿಸಿದ್ದರು. ತಂಡಕ್ಕೆ ಅವರು ಪಿತೃಸ್ವರೂಪರಾಗಿದ್ದರು. ಅವರ ಕ್ರಿಕೆಟ್ ತಂತ್ರಗಾರಿಕೆ ನಿಜಕ್ಕೂ ಅದ್ಭುತ ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಮೊದಲಾದವರು ವಾಡೇಕರ್ ಅವರಿಗೆ ನಮನ ಸಲ್ಲಿಸಿದ್ದಾರೆ.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...