ಬೆಳಗಾವಿಯ ಹುಡುಗಿ ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆದ್ದ ಆ ಕುರಷ್ ಆಟ ಯಾವುದು?


Updated:August 31, 2018, 7:25 PM IST
ಬೆಳಗಾವಿಯ ಹುಡುಗಿ ಏಷ್ಯನ್ ಗೇಮ್ಸ್​ನಲ್ಲಿ ಪದಕ ಗೆದ್ದ ಆ ಕುರಷ್ ಆಟ ಯಾವುದು?
ಮಲಪ್ರಭ ಜಾಧವ್

Updated: August 31, 2018, 7:25 PM IST
- ನ್ಯೂಸ್18 ಕನ್ನಡ

ಬೆಂಗಳೂರು: ಮೂರು ದಿನಗಳ ಹಿಂದೆ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿಯ ಹದಿಹರೆಯದ ಹುಡುಗಿ ಮಲಪ್ರಭ ಜಾಧವ್ ಕಂಚಿನ ಪದಕ ಗೆದ್ದದ್ದು ನೆನಪಿರಬಹುದು. ಕುರಷ್ ಎಂಬ ಕ್ರೀಡೆಯಲ್ಲಿ ಮಲಪ್ರಭ ಸೇರಿ ಇಬ್ಬರು ಭಾರತೀಯ ಮಹಿಳೆಯರು ಪದಕ ಗೆದ್ದರು. ಅಲ್ಲಿಯವರೆಗೂ ಕುರಷ್ ಎಂಬ ಕ್ರೀಡೆ ಅಸ್ತಿತ್ವದಲ್ಲಿದೆ ಎಂಬ ವಿಚಾರವೇ ಬಹುತೇಕರಿಗೆ ಗೊತ್ತಿರಲಿಲ್ಲ. ಏಷ್ಯಾಡ್​ಗೆ ಭಾರತೀಯ ತಂಡವನ್ನು ಘೋಷಿಸುವವರೆಗೂ ಭಾರತೀಯ ಕ್ರೀಡಾಪ್ರೇಮಿಗಳಿಗೆ ಕುರಷ್ ಕ್ರೀಡೆಯ ಹೆಸರು ತಿಳಿದಿರಲಿಲ್ಲ.

ಮಲಪ್ರಭ ಅವರು ಬೆಳಗಾವಿಯ ತುರುಮುರಿ ಗ್ರಾಮದ ಯಲ್ಲಪ್ಪ ಜಾಧವ್ ಅವರ ಮಗಳಾಗಿದ್ದಾರೆ. ಬೆಳಗಾವಿಯ ಸ್ಪೋರ್ಟ್ಸ್ ಹಾಸ್ಟೆಲ್​ನಲ್ಲಿ ಎಂಎನ್ ತ್ರಿವೇಣಿ ಮತ್ತು ಜಿತೇಂದ್ರ ಸಿಂಗ್ ಅವರ ಗರಡಿಯಲ್ಲಿ ಅಭ್ಯಾಸ ನಡೆಸುತ್ತಿರುವ ಮಲಪ್ರಭಗೆ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರದಿಂದ ಏಕಲವ್ಯ ಪ್ರಶಸ್ತಿ ಕೂಡ ಲಭಿಸಿತ್ತು.

ಏಷ್ಯನ್ ಗೇಮ್ಸ್​ನಲ್ಲಿ ಕುರಷ್ ಫೈನಲ್​ನಲ್ಲಿ ಉಜ್ಬೆಕಿಸ್ತಾನದ ಆಟಗಾರ್ತಿ ಎದುರು ಭಾರತದ ಪಿಂಕಿ.


ಕುರಷ್ ಕ್ರೀಡೆ ಏನು?
ಈ ಕುರಷ್ ಕ್ರೀಡೆಯು ಜೂಡೋ ಮತ್ತು ಕುಸ್ತಿಗೆ ಹೋಲಿಕೆ ಇದೆ. ಸೊಂಟಕ್ಕೆ ಕಟ್ಟಿರುವ ಟವಲ್​ನಿಂದ ಎದುರಾಳಿಯ ಬೆನ್ನು ಕೆಳಕ್ಕೆ ಮಾಡಿ ಬೀಳಿಸುವುದು ಈ ಆಟದ ಪ್ರಮುಖ ಸ್ಕೋರಿಂಗ್ ಪಾಯಿಂಟ್. ಇದಕ್ಕೆ ಹಲಾಲ್ ಎನ್ನುತ್ತಾರೆ. ಅದೇ ರೀತಿ ಯಂಬೋಷ್ ಮತ್ತು ಚಲ ಎಂಬ ಇನ್ನೆರಡು ಪಟ್ಟುಗಳಿವೆ. ಎದುರಾಳಿಯನ್ನು ಕೆಳಕ್ಕೆ ಕೆಡವುದು ಈ ಆಟದ ಗುರಿ. ಕುಸ್ತಿ, ಜುಡೋದಲ್ಲಿರುವಂತೆ ಬೆನ್ನು ಕೆಳಕ್ಕೆ ಮಾಡಿ ಬೀಳಿಸಿದರೆ ಪಂದ್ಯ ಗೆದ್ದಂತೆಯೇ. ಬೆನ್ನು ನೆಲಕ್ಕೆ ತಾಗದೆ ಕೆಳಗೆ ಬೀಳಿಸಿದರೂ ನಿರ್ದಿಷ್ಟ ಪಾಯಿಂಟ್ ಸಿಗುತ್ತದೆ.

ಮಧ್ಯ ಏಷ್ಯಾದಲ್ಲಿ ಪ್ರಾರಂಭಗೊಂಡಿತೆನ್ನಲಾದ ಕುರಷ್ ಕ್ರೀಡೆಗೆ ಬರೋಬ್ಬರಿ 35 ಶತಮಾನಗಳ ಇತಿಹಾಸ ಇದೆ. ಉಜ್ಬೆಕಿಸ್ತಾನ್, ತುರ್ಕ್​ಮೆನಿಸ್ತಾನ್ ಮೊದಲಾದ ದೇಶಗಳಲ್ಲಿ ಈ ಕ್ರೀಡೆಗೆ ಭಾರೀ ಜನಪ್ರಿಯತೆ ಇದೆ. 1999ರಲ್ಲಿ ಮೊದಲ ಬಾರಿ ಕುರಷ್ ವಿಶ್ವ ಚಾಂಪಿಯನ್​ಶಿಪ್ ನಡೆದಿದೆ. ಏಷ್ಯನ್ ಗೇಮ್ಸ್​ನಲ್ಲಿ ಇದೇ ಮೊದಲ ಬಾರಿ ಈ ಕ್ರೀಡೆ ಸೇರ್ಪಡೆಯಾಗಿದೆ. ಒಲಿಂಪಿಕ್ಸ್​ನಲ್ಲಿ ಕ್ರೀಡೆಯನ್ನು ಸೇರಿಸುವ ಪ್ರಯತ್ನ ನಡೆದಿದೆ. ಭಾರತಕ್ಕೆ ಪರಿಚಯವಾಗಿ ಎರಡು ದಶಕಗಳಾದರೂ ಇನ್ನೂ ಜನಪ್ರಿಯತೆ ಗಳಿಸಿಲ್ಲ. ಇದೀಗ ಏಷ್ಯಾಡ್​ನಲ್ಲಿ ಮೊದಲ ಬಾರಿಗೆ ಪರಿಚಯಗೊಂಡಿರುವ ಕುರಷ್​ನಲ್ಲಿ ಇಬ್ಬರು ಭಾರತೀಯರು ಅದ್ವಿತೀಯ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಮುಂದಿನ ದಿನಗಳಲ್ಲಿ ಈ ಕ್ರೀಡೆಗೆ ಹೆಚ್ಚಿನ ಉತ್ತೇಜನ ಸಿಕ್ಕುವ ಸಾಧ್ಯತೆ ಇದೆ.
Loading...

ಕಳೆದ 9 ವರ್ಷಗಳಿಂದ ಕುರಷ್ ತರಬೇತಿ ಪಡೆಯುತ್ತಿರುವ ಬೆಳಗಾವಿ ಹುಡುಗಿ ಮಲಪ್ರಭ ಅವರು ಕುರಷ್​ನಲ್ಲಿ ಹಲವು ಅಂತಾರಾಷ್ಟ್ರೀಯ ಪದಕಗಳನ್ನ ಗೆದ್ದಿದ್ದಾರೆ. ಕಿರ್ಗಿಸ್ತಾನ್​ನಲ್ಲಿ ನಡೆದ ಇಂಡೋ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಹಾಗೂ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ರಾಷ್ಟ್ರಮಟ್ಟದ ಕುರಷ್ ಚಾಂಪಿಯನ್​ಶಿಪ್​ನಲ್ಲಿ ಎರಡು ಚಿನ್ನದ ಪದಕಗಳನ್ನೂ ಜಯಿಸಿದ್ದಾರೆ.

ಕುರಷ್​​ಗೂ ಜೂಡೋಗೂ ಹೆಚ್ಚಿನ ಸಾಮ್ಯತೆ ಇದೆ. ಹೀಗಾಗಿ, ಭಾರತದ ಕುರಷ್ ಕ್ರೀಡಾಪಟುಗಳಿಗೆ ಜೂಡೋ ಆಡುವುದು ಕಷ್ಟವೇನಲ್ಲ. ಒಲಿಂಪಿಕ್ಸ್​ನಲ್ಲಿ ಕುರಷ್ ಕ್ರೀಡೆ ಸೇರಿಲ್ಲವಾದ್ದರಿಂದ ಭಾರತೀಯ ಕುರಷ್ ಪಟುಗಳು ಜೂಡೋ ಮೂಲಕ ಭಾರತವನ್ನು ಪ್ರತಿನಿಧಿಸಲು ಯತ್ನಿಸಬಹುದಾಗಿದೆ. ಏಷ್ಯನ್ ಗೇಮ್ಸ್​ನ ಕುರಷ್​ನಲ್ಲಿ ಬೆಳ್ಳಿ ಗೆದ್ದಿರುವ ಪಿಂಕಿ ಬಲ್ಹಾರಾ ಅವರು ಈಗಾಗಲೇ ಈ ನಿಟ್ಟಿನಲ್ಲಿ ಚಿತ್ತ ಹರಿಸಿದ್ದಾರೆ. ಒಲಿಂಪಿಕ್ಸ್​ಗಾಗಿ ಜೂಡೋ ಅಭ್ಯಾಸ ನಡೆಸಲು ಅವರು ನಿರ್ಧರಿಸಿದ್ದಾರೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ