ನ್ಯೂಸ್ 18 ಕನ್ನಡ
ನ್ಯಾಟಿಂಗ್ಹ್ಯಾಮ್ (ಜುಲೈ. 12): ಇಂಗ್ಲೆಂಡ್ನ ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಅಜೇಯ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭಾರತ ಜಯ ಸಾಧಿಸಿದ್ದು, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಪ್ರಾರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೈಸ್ಟ್ರೋವ್ ಉತ್ತಮ ಆರಂಭ ಒದಗಿಸಿದರು. ಮೊದಲನೇ ವಿಕೆಟ್ಗೆ ಈ ಜೋಡಿ 73 ರನ್ಗಳ ಜೊತೆಯಾಟ ನೀಡಿತು. 38 ರನ್ಗಳಿಸಿ ರಾಯ್ ಹಾಗೂ ಬೈಸ್ಟ್ರೋವ್ ಅವರು ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೆ ಕ್ರೀಸ್ಗೆ ಬಂದ ಜೋ ರೂಟ್ ಕೇವಲ 3ರನ್ಗೆ ಔಟ್ ಆದರು. ಬಳಿಕ ಬಂದ ನಾಯಕ ಇಯಾನ್ ಮಾರ್ಗನ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಮಾರ್ಗನ್ 19 ರನ್ ಗಳಿಸಿರುವಾಗ ಚಹಾಲ್ ಎಸೆತದಲ್ಲಿ ರೈನಾಗೆ ಕ್ಯಾಚಿತ್ತು ಔಟ್ ಆದರೆ. 100 ರನ್ ಆಗುವ ಹೊತ್ತಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ಜಾಸ್ ಬಟ್ಲರ್ ಆಸರೆಯಾದರು. ಭಾರತೀಯ ಬೌಲರ್ಗಳನ್ನು ಕಾಡಿದ ಈ ಜೋಡಿ 5ನೇ ವಿಕೆಟ್ಗೆ 93 ರನ್ಗಳ ಕಾಣಿಕೆ ನೀಡಿದರು. ಈ ಹೊತ್ತಿಗೆ ಮತ್ತೆ ಬೌಲಿಂಗ್ ದಾಳಿಮಾಡಲು ಇಳಿದ ಕುಲ್ದೀಪ್ ತಮ್ಮ ಸ್ಪಿನ್ ಮೋಡೊಯಿಂದ ಅರ್ಧಶತಕ ಗಳಿಸಿದ್ದ ಜಾಸ್ ಬಟ್ಲರ್(53) ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಇದರ ಬೆನ್ನಲ್ಲೆ 50 ರನ್ ಬಾರಿಸಿದ್ದ ಬೆನ್ ಸ್ಟೋಕ್ಸ್ ಕೂಡ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಯಾವ ಬ್ಯಾಟ್ಸ್ಮನ್ಗಳು ಕ್ರೀಸ್ ಕಚ್ಚಿ ಆಡಲಿಲ್ಲ. ಕೊನೆ ಹಂತದಲ್ಲಿ ಆದಿಲ್ ರಶೀದ್ ಹಾಗು ಮೊಯೀನ್ ಅಲಿ ಬ್ಯಾಟ್ ಬೀಸಿದ ಪರಿಣಾಮ ಇಂಗ್ಲೆಂಡ್ ತಂಡದ ಮೊತ್ತ 250ರ ಗಡಿ ದಾಟಿತು. ಅಂತಿಮವಾಗಿ ಇಂಗ್ಲೆಂಡ್ ಇನ್ನು 1 ಬೌಲ್ ಬಾಕಿ ಇರುವಾಗಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 268 ರನ್ಗೆ ಸರ್ವಪತನ ಕಂಡಿತು. ಭಾರತ ಪರ ಕುಲ್ದೀಪ್ ಯಾದವ್ 10 ಓವರ್ಗೆ ಕೇವಲ 25 ರನ್ ನೀಡಿ 6 ವಿಕೆಟ್ ಕಿತ್ತರೆ, ಉಮೇಶ್ ಯಾದವ್ 2, ಚಹಾಲ್ 1 ವಿಕೆಟ್ ಪಡೆದರು.
269 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ಕ್ರೀಸ್ಗೆ ಇಳಿದಾಗಿನಿಂದ ಧವನ್ ಸ್ಪೋಟಕ ಆಟಕ್ಕೆ ಮುಂದಾದರು. ಮೊದಲನೇ ವಿಕೆಟ್ಗೆ ಈ ಜೋಡಿ 59 ರನ್ಗಳ ಜೊತೆಯಾಟ ನೀಡಿತು. ಧವನ್ 27 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 40 ರನ್ಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ರೋಹಿತ್ ಶರ್ಮಾ ಜೊತೆ ಒಂದಾದ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟಲು ಮುಂದಾದರು. ಇಂಗ್ಲೆಂಡ್ ಬೌಲರ್ಗಳನ್ನು ಬೆಂಡೆತ್ತಿದ ರೋಹಿತ್-ಕೊಹ್ಲಿ ಮೈದಾನದ ಮೂಲೆಮೂಲೆಗೆ ಚೆಂಡನ್ನು ಅಟ್ಟಿದರು. ಕೊಹ್ಲಿ ತಮ್ಮ ಕ್ಲಾಸಿಕ್ ಶಾಟ್ಗಳಿಂದ ಗಮನ ಸೆಳೆದರೆ, ರೋಹಿತ್ ಆರ್ಭಟಿಸಿದರು. 2ನೇ ವಿಕೆಟ್ಗೆ ಇವರು ಬರೋಬ್ಬರಿ 167 ರನ್ಗಳ ಕಾಣಿಕೆ ನೀಡಿದರು. ಕೊಹ್ಲಿ 82 ಎಸೆತಗಳಲ್ಲಿ 7 ಬೌಂಡರಿ ಜೊತೆಗೆ 75 ರನ್ ಬಾರಿಸಿ ತಂಡದ ಗೆಲುವನ್ನು ಖಚಿತ ಪಡಿಸಿ ನಿರ್ಗಮಿಸಿದರು. ಬಳಿಕ ಕೊನೆಯಲ್ಲಿ ಕೆ. ಎಲ್. ರಾಹುಲ್ ಜೊತೆ ಒಂದಾದ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ರೋಹಿತ್ 114 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸ್ನೊಂದಿಗೆ 137 ರನ್ ಸಿಡಿಸಿ ಅಜೇಯರಾಗಿ ಉಳಿದರೆ, ಇತ್ತ ರಾಹುಲ್ ಕೂಡ 9 ಗಳಿಸಿ ಔಟ್ ಆಗದೆ ಉಳಿದರು. ಈ ಮೂಲಕ ಭಾರತ ಇನ್ನು 9.5 ಓವರ್ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರ ಮೊಯೀನ್ ಅಲಿ ಹಾಗೂ ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.
ಈ ಮೂಲಕ ಕುಲ್ದೀಪ್ ಯಾದವ್ ಅವರ ಮಾರಕ ಬೌಲಿಂಗ್ ಹಾಗೂ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 268(49.5 ಓವರ್)
(ಜಾಸ್ ಬಟ್ಲರ್ 53, ಬೆನ್ ಸ್ಟೋಕ್ಸ್ 50, ಕುಲ್ದೀಪ್ ಯಾದವ್ 25/6, ಉಮೇಶ್ ಯಾದವ್ 70/2)
ಭಾರತ: 269/2(4.1 ಓವರ್)
(ರೋಹಿತ್ ಶರ್ಮಾ 137*, ವಿರಾಟ್ ಕೊಹ್ಲಿ 75, ಆದಿಲ್ ರಶೀದ್ 62/1)
ಪಂದ್ಯ ಶ್ರೇಷ್ಠ: ಕುಲ್ದೀಪ್ ಯಾದವ್
LIVE BLOG: ಭಾರತಕ್ಕೆ 8 ವಿಕೆಟ್ಗಳ ಭರ್ಜರಿ ಜಯ
What a spell! @imkuldeep18 is named the Player of the Match after a truly mesmerising 6/25! 👏 #ENGvIND pic.twitter.com/HBxibBnE5p
— ICC (@ICC) July 12, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ