2ನೇ ಟೆಸ್ಟ್​: ಕೊಹ್ಲಿ-ರಹಾನೆ ಅರ್ಧಶತಕ: ದಿನದಾಟಕ್ಕೆ ಭಾರತ 172/3

ನಾಯಕನ ಜೊತೆಯಾಗಿರುವ ಉಪ-ನಾಯಕ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾಗಿ ನಿಂತಿದ್ದು, ಅರ್ಧಶತಕ ಗಳಿಸಿ ಎಚ್ಚರಿಕೆಯ ಆಟ ಪ್ರದರ್ಶಿಸುತ್ತಿದ್ದಾರೆ. ಪರಿಣಾಮ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ.

Vinay Bhat | news18
Updated:December 15, 2018, 3:49 PM IST
2ನೇ ಟೆಸ್ಟ್​: ಕೊಹ್ಲಿ-ರಹಾನೆ ಅರ್ಧಶತಕ: ದಿನದಾಟಕ್ಕೆ ಭಾರತ 172/3
Pic: Twitter (BCCI)
  • News18
  • Last Updated: December 15, 2018, 3:49 PM IST
  • Share this:
ಪರ್ತ್​​ (ಡಿ. 15): ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 326 ರನ್​​ಗೆ ಆಲೌಟ್ ಮಾಡಿ ಇನ್ನಿಂಗ್ಸ್​ ಆರಂಭಿಸಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ತನ್ನ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದ್ದು, 154 ರನ್​ಗಳ ಹಿನ್ನಡೆಯಲ್ಲಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ ಬಾರಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 277 ರನ್ ಬಾರಿಸಿದ್ದ ಆಸ್ಟ್ರೇಲಿಯಾ ಇಂದು 49 ರನ್ ಗಳಿಸಲಷ್ಟೆ ಶಕ್ತವಾಯಿತು. ಟಿಮ್​​​ ಪೈನ್ 38 ರನ್​ ಗಳಿಸಿ ನಿರ್ಗಮಿಸಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು.

ಇದನ್ನೂ ಓದಿ: ದೇವದತ್-ಗೋಪಾಲ್ ಭರ್ಜರಿ ಆಟ: ಉತ್ತಮ ಮೊತ್ತದತ್ತ ಕರ್ನಾಟಕ

ಇಶಾಂತ್ ಶರ್ಮಾ ಅವರು ಮಿಚೆಲ್ ಸ್ಟಾರ್ಕ್(6) ಹಾಗೂ ಜೋಶ್ ಹಾಜ್ಲೆವುಡ್(0) ಅವರನ್ನು ಪೆವಿಲಿಯನ್​ಗೆ ಅಟ್ಟಿದರೆ, ಪೈನ್​(38)​ ಬುಮ್ರಾ ಎಸೆತದಲ್ಲಿ, ಪ್ಯಾಟ್ ಕಮಿನ್ಸ್​(19) ಉಮೇಶ್ ಯಾದವ್ ಬೌಲಿಂಗ್​​​ನಲ್ಲಿ ಔಟ್ ಆದರು. ಭಾರತ ಪರ ಇಶಾಂತ್ ಶರ್ಮಾ 4 ವಿಕೆಟ್ ಕಿತ್ತು ಮಿಂಚಿದರೆ, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ತಲಾ 2 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ 10 ರನ್​ಗೂ ಮುನ್ನವೆ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಓಪನರ್​ಗಳು ಮತ್ತಮ್ಮೆ ವಿಫಲರಾದರು. ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಮುರಳಿ ವಿಜಯ್ ಸೊನ್ನೆ ಸುತ್ತಿದರೆ, ಕೆ. ಎಲ್ ರಾಹುಲ್ ಕೇವಲ 2 ರನ್​ಗೆ ಔಟ್ ಆದರು.

ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಇನ್ನಿಂಗ್ಸ್​ ಕಟ್ಟಲು ಮುಂದಾದರಾದರು ಪೂಜಾರ 24 ರನ್​ಗೆ ನಿರ್ಗಮಿಸಿದ್ದು ತಂಡಕ್ಕೆ ಮತ್ತಷ್ಟು ಆಘಾತವಾಯಿತು. ಇದರೊಂದಿಗೆ ಪೂಜಾರ-ಕೊಹ್ಲಿ 80 ರನ್​ಗಳ ಜೊತೆಯಾಟ ಅಂತ್ಯವಾಯಿತು.

ಬಳಿಕ ನಾಯಕನ ಜೊತೆಯಾದ ಉಪ-ನಾಯಕ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ. ಭಾರತ ಇನ್ನು 154 ರನ್​ಗಳ ಹಿನ್ನಡೆಯಲ್ಲಿದ್ದು, ವಿರಾಟ್ ಕೊಹ್ಲಿ 82 ಹಾಗೂ ರಹಾನೆ 51 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸೀಸ್ ಪರ  ಮಿಚೆಲ್ ಸ್ಟಾರ್ಕ್​​ 2 ಹಾಗೂ ಹ್ಯಾಜ್ಲುವುಡ್ 1 ವಿಕೆಟ್ ಪಡೆದಿದ್ದಾರೆ.
First published:December 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ