ಇತ್ತೀಚಿಗಷ್ಟೇ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ದಂಪತಿ ಮಗಳು ವಮಿಕಾ ಜೊತೆಗೆ ಬಾಬಾ ನೀಮ್ ಕರೋಲಿ (Baba Nim Karoli) ಆಶ್ರಮಕ್ಕೆ ಭೇಟಿ ನೀಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಮಥುರಾದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮದಲ್ಲಿ (Ashram) ಒಂದು ಗಂಟೆ ತಂಗಿದ್ದ ದಂಪತಿ (Couples) ಆಶ್ರಮದಲ್ಲಿ ಧ್ಯಾನ ಮಾಡಿ ಅವರ ಸಮಾಧಿಗೆ ಭೇಟಿ ನೀಡಿದ್ದರು. ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಕುಟುಂಬಗಳು ಬಾಬಾ ನೀಮ್ ಕರೋಲಿಯ ಕಟ್ಟಾ ಅನುಯಾಯಿಗಳು. ಆದರೆ ಬಹಳಷ್ಟು ಜನರಿಗೆ ಬಾಬಾ ನೀಮ್ ಕರೋಲಿ ಬಗ್ಗೆ ಗೊತ್ತಿಲ್ಲ.
ಹಾಗಿದ್ರೆ ಯಾರವರು ನೀಮ್ ಕರೋಲಿ ಬಾಬಾ? ಎಲ್ಲಿಯವರು? ಅವರ ಆಶ್ರಮಗಳು ಎಲ್ಲೆಲ್ಲಿವೆ ಎಂಬುದಾಗಿ ತಿಳಿದುಕೊಳ್ಳೋಣ.
ಯಾರು ಈ ನೀಮ್ ಕರೋಲಿ ಬಾಬಾ ?
ಮಹಾರಾಜ್ ಜಿ ಎಂದೂ ಕರೆಯಿಸಿಕೊಳ್ಳುವ ನೀಮ್ ಕರೋಲಿ ಬಾಬಾ ಅವರು ಓರ್ವ ಹಿಂದೂ ಗುರು. ಇವರು ಹನುಮಂತನ ಭಕ್ತರಾಗಿದ್ದರು. ಭಕ್ತಿ ಯೋಗದ ಪ್ರವೀಣರಾಗಿದ್ದರು.
ಅವರು ಯಾವಾಗಲೂ ಇತರರಿಗೆ ಸೇವೆ ಮಾಡುವುದನ್ನು ಪ್ರೋತ್ಸಾಹಿಸುತ್ತಿದ್ದರು. ನೀಮ್ ಕರೋಲಿ ಬಾಬಾರ ಮೂಲ ಹೆಸರು ಲಕ್ಷ್ಮಣ್ ನಾರಾಯಣ ಶರ್ಮಾ ಎಂದು. ನಂತರ ತಮ್ಮ 14 ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ನಂತರ, ಸಾಧು ಜೀವನವನ್ನು ನಡೆಸಲು ತಮ್ಮ ಬ್ರಾಹ್ಮಣ ಕುಟುಂಬವನ್ನೇ ತೊರೆದರು.
ಆದಾಗ್ಯೂ, ತಮ್ಮ ತಂದೆಯ ಮನವೊಲಿಕೆಯ ಮೇಲೆ ತಮ್ಮ ಕುಟುಂಬಕ್ಕೆ ಹಿಂದಿರುಗಿದರು. ಇಬ್ಬರು ಗಂಡು ಮತ್ತು ಮಗಳೊಂದಿಗೆ ಕೌಟುಂಬಿಕ ಜೀವನ ನಡೆಸಿದರು.
ನಂತರ 1958 ರಲ್ಲಿ ಅವರು ಮನೆ ಬಿಟ್ಟು ರೈಲು ಹತ್ತಿದರು. ಟಿಕೆಟ್ ಇಲ್ಲದ ಹಿನ್ನೆಲೆಯಲ್ಲಿ ‘ನೀಮ್ ಕರೋಲಿ’ ಗ್ರಾಮದಲ್ಲಿ ರೈಲಿನಿಂದ ಕೆಳಗಿಳಿಯುವಂತೆ ಅವರನ್ನು ಒತ್ತಾಯಿಸಲಾಯಿತು.
ಹೀಗೆ ಅಲೆದಾಡುವ ಸಂತನಾಗಿ ಅವರ ಪ್ರಯಾಣ ಪ್ರಾರಂಭವಾಯಿತು. ಹೀಗೆ ಕ್ರಮೇಣ ಅವರು ಗುರುಗಳಾಗಿ ಅಪಾರ ಜನಪ್ರೀಯತೆ ಗಳಿಸಿದರು. ನಂತರ ಅವರು ತಮ್ಮ ಆಶ್ರಮದಲ್ಲಿ ನೆಲೆಸಿದರು, ಹನುಮಾನ್ ದೇವಾಲಯವನ್ನು ನಿರ್ಮಿಸಿದರು.
ನಂತರದಲ್ಲಿ ಬಾಬಾ ನೀಮ್ ಕರೋಲಿ ಅವರು ಮಧುಮೇಹ ಕೋಮಾಕ್ಕೆ ಜಾರಿದ್ದು, ಸೆಪ್ಟೆಂಬರ್ 11, 1973 ರಂದು ವೃಂದಾವನದ ಆಸ್ಪತ್ರೆಯಲ್ಲಿ ನಿಧನರಾದರು.
ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡ್ತಾರೆ ಅನೇಕ ಸೆಲೆಬ್ರಿಟಿಗಳು
ಬಾಬಾ ನೀಮ್ ಕರೋಲಿ ಅವರು 1960 ಮತ್ತು 70 ರ ದಶಕಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದರು. ಈ ಸಮಯದಲ್ಲಿ ಭಾರತಕ್ಕೆ ಪ್ರಯಾಣಿಸಿದ ಹಲವಾರು ಅಮೇರಿಕನ್ನರ ಆಧ್ಯಾತ್ಮಿಕ ಗುರುಗಳಾಗಿದ್ದರು.
ಅವರಲ್ಲಿ ಆಧ್ಯಾತ್ಮಿಕ ಗುರುಗಳಾದ ರಾಮ್ ದಾಸ್ ಮತ್ತು ಭಗವಾನ್ ದಾಸ್ ಮತ್ತು ಸಂಗೀತಗಾರರಾದ ಕೃಷ್ಣ ದಾಸ್ ಮತ್ತು ಜೈ ಉತ್ತಲ್ ಪ್ರಮುಖರು.
ಇನ್ನು, ಬಾಬಾ ನೀಮ್ ಕರೋಲಿ ಅವರು ಪ್ರಖ್ಯಾತ ಸೆಲೆಬ್ರಿಟಿಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ. ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಸಹ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಅದು ಫೇಸ್ಬುಕ್ ಕಠಿಣ ಹಂತವನ್ನು ಎದುರಿಸುತ್ತಿದ್ದ ಸಮಯವಾಗಿತ್ತು. ಆ ಸಂದರ್ಭದಲ್ಲಿ, ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಜುಕರ್ಬರ್ಗ್ಗೆ ಆಶ್ರಮಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಇದಾದ ನಂತರ 2015 ರಲ್ಲಿ, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕೈಂಚಿಯಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿದ್ದರು.
ಇದಕ್ಕೂ ಮುನ್ನ ಸ್ಟೀವ್ ಜಾಬ್ಸ್ ಅವರು ತಮ್ಮ ಸ್ನೇಹಿತ ಡಾನ್ ಕೊಟ್ಕೆ ಅವರೊಂದಿಗೆ ನೀಮ್ ಕರೋಲಿ ಬಾಬಾ ಅವರನ್ನು ಭೇಟಿ ಮಾಡಲು ಆಶ್ರಮಕ್ಕೆ ಭೇಟಿ ನೀಡಿದ್ದರು. ಆದಾಗ್ಯೂ, ಅವರು ಆಗಮಿಸುವ ಮೊದಲೇ ನಿಧನರಾದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇದಲ್ಲದೆ, ಅಮೆರಿಕದ ನಟಿ ಜೂಲಿಯಾ ರಾಬರ್ಟ್ಸ್ ಕೂಡ ನೀಮ್ ಕರೋಲಿ ಬಾಬಾನಿಂದ ಪ್ರಭಾವಿತರಾಗಿದ್ದಾರೆ. ಅವರಿಂದಾಗಿಯೇ ಅವರು ಹಿಂದೂ ಧರ್ಮದ ಬಗ್ಗೆ ಆಕರ್ಷಿತರಾಗಿದ್ದಾರೆ ಎನ್ನಲಾಗಿದೆ.
ಅಂದಹಾಗೆ ವೃಂದಾವನದ ಜೊತೆಗೆ, ಋಷಿಕೇಶ, ಶಿಮ್ಲಾ, ದೆಹಲಿ ಮತ್ತು ಟಾವೋಸ್ (ನ್ಯೂ ಮೆಕ್ಸಿಕೋ, USA) ನಲ್ಲಿಯೂ ಬಾಬಾ ನೀಮ್ ಕರೋಲಿ ಆಶ್ರಮಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ