Novak Djokovic: ಆಸ್ಟ್ರೇಲಿಯಾದಲ್ಲಿ ನೊವಾಕ್ ಜೊಕೊವಿಚ್ ಸೆರೆಯಲ್ಲಿರುವ ಕಾರಣ ಇದು

ಸರ್ಬಿಯಾ ದೇಶದ ವಿಶ್ವ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೋವಿಚ್ ಅವರು ಆಸ್ಟ್ರೇಲಿಯಾದಲ್ಲಿ ಬಂಧಿಯಾಗಿದ್ಧಾರೆ. ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಆಡಲು ಹೋದ ಅವರ ವೀಸಾವನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ. ಇದಕ್ಕೆ ಕಾರಣವೇನು..?

ನೊವಾಕ್ ಜೋಕೊವಿಚ್

ನೊವಾಕ್ ಜೋಕೊವಿಚ್

  • News18
  • Last Updated :
  • Share this:
ಬೆಂಗಳೂರು: ಟೆನಿಸ್​ನ ಹೊಸ ಇತಿಹಾಸದ ಹೊಸ್ತಿಲಲ್ಲಿರುವ ನೊವಾಕ್ ಜೊಕೋವಿಚ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಆಡಲು ಹೋಗಿ ಈಗ ಸೆರೆಯಲ್ಲಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ಈ ಕ್ರಮವನ್ನು ಅನೇಕ ಟೆನಿಸ್ ತಾರೆಯರು ಖಂಡಿಸಿದ್ಧಾರೆ. ಕೆಲವಾರು ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಜನವರಿ 17ರಿಂದ ಜನವರಿ 30ರವರೆಗೆ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲೇಬೇಕೆಂಬ ಕಾತರತೆಯಲ್ಲಿ ಜೋಕೊವಿಚ್ ಇದ್ದರೆ, ಅವರನ್ನ ವಾಪಸ್ ಕಳಿಸುವ ಯೋಜನೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಇದೆ. ಇದೇ ವೇಳೆ ಜೋಕೊವಿಚ್ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

ಜೋಕೊವಿಚ್ ಸೆರೆಯಲ್ಲಿರುವುದು ಯಾಕೆ?

ಕೋವಿಡ್ ಪರಿಸ್ಥಿತಿ ಎಲ್ಲೆಡೆ ಗಂಭೀರವಾಗಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ ಸಂಬಂಧಿತ ಕಾನೂನುಗಳು ಬಹಳ ಕಠಿಣ ಇವೆ. ಐಪಿಎಲ್​ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರು ಈ ಹಿಂದೆ ತರಾತುರಿಯಲ್ಲಿ ಟೂರ್ನಿಯನ್ನ ಮಧ್ಯದಲ್ಲೇ ತೊರೆದು ತಮ್ಮ ದೇಶಕ್ಕೆ ದೌಡಾಯಿಸಿದ್ದ ಉದಾಹರಣೆ ಉಂಟು. ಅಷ್ಟು ಕಠಿಣ ನಿಯಮಗಳು ಆಸ್ಟ್ರೇಲಿಯಾದಲ್ಲಿವೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಮತ್ತು ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿ ಎಲ್ಲರೂ ವ್ಯಾಕ್ಸಿನೇಟೆಡ್ ಆಗಿರಬೇಕು ಎಂಬ ನಿಯಮ ಇದೆ. ಆದರೆ, ಪ್ರಬಲ ವೈದ್ಯಕೀಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಹೋದ ಸಂದರ್ಭಗಳಲ್ಲಿ ಮಾತ್ರ ಕಡ್ಡಾಯ ವ್ಯಾಕ್ಸಿನ್​ನಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ಜೋಕೋವಿಚ್ ಅವರು ಲಸಿಕೆ ಹಾಕಿಸಿಕೊಂಡಿರುವ ಮಾಹಿತಿ ನೀಡಿಲ್ಲ. ಅಥವಾ ಲಸಿಕೆ ಹಾಕಿಸಿಕೊಳ್ಳಲು ಇರುವ ತೊಂದರೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂಬುದು ಆಸ್ಟ್ರೇಲಿಯಾದ ಅಧಿಕಾರಿಗಳ ವಾದ. ಹೀಗಾಗಿ, ಅವರನ್ನ ಏರ್​ಪೋರ್ಟ್ ಬಳಿಯೇ ನಿನ್ನೆ (ಜ. 6) ಬೆಳಗ್ಗೆ ಡಿಟೆನ್ಷನ್​ನಲ್ಲಿ ಇಡಲಾಗಿತ್ತು. ಅವರ ವೀಸಾವನ್ನು ರದ್ದು ಮಾಡಲಾಗಿದೆ.

ಜೋಕೊವಿಚ್ ಯಾಕೆ ಲಸಿಕೆ ಹಾಕಿಸಿಕೊಂಡಿಲ್ಲ?:

ನೊವಾಕ್ ಜೋಕೊವಿಚ್ ಅವರು ಮೊದಲಿಂದಲೂ ಕಡ್ಡಾಯ ಲಸೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಪ್ರಯಾಣದ ಸಲುವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆನ್ನುವುದನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದಾರೆ. ತಾನು ಲಸಿಕೆ ಹಾಕಿಸಿಕೊಂಡಿದ್ದೇನೋ ಇಲ್ಲವೋ ಎಂಬ ಮಾಹಿತಿಯನ್ನ ಅವರು ಎಲ್ಲಿಯೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Slow Over Rate: ಟಿ20 ಪಂದ್ಯದಲ್ಲಿ ಸ್ಲೋ ಓವರ್ ರೇಟ್​ಗೆ ದಂಡದ ಜೊತೆ ಫೀಲ್ಡಿಂಗ್​ನಲ್ಲೂ ಬದಲಾವಣೆ

ಆಸ್ಟ್ರೇಲಿಯಾದಲ್ಲಿ ಲಸಿಕೆಗಳಿಗೆ ಬಹಳ ಒತ್ತು ಕೊಡಲಾಗಿದೆ. ಅಲ್ಲಿನ ಬಹುತೇಕ ರಾಜ್ಯಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂಥ ಆಸ್ಟ್ರೇಲಿಯಾ ದೇಶದಲ್ಲಿ ನಿಂತು ಲಸಿಕೆ ವಿರುದ್ಧ ಜೋಕೊವಿಚ್ ಮಾತನಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರದಲ್ಲಿರುವವರ ಆಕ್ರೋಶ.

ಜೋಕೊವಿಚ್​ಗೆ ವಿನಾಯಿತಿ ಸಿಕ್ಕರೂ ಸೆರೆಯಲ್ಲಿದ್ದಾರೆ…

ಆಸ್ಟ್ರೇಲಿಯಾಗೆ ಪ್ರಯಾಣಿಸಲು ನೀಡಲಾಗುವ ವೀಸಾಗೆ ಇರುವ ಕಡ್ಡಾಯ ದಾಖಲೆಗಳಲ್ಲಿ ಲಸಿಕೆಯೂ ಒಂದು. ಆದರೆ, ಅದಕ್ಕೂ ಕೆಲ ವಿನಾಯಿತಿಗಳಿವೆ. ಲಸಿಕೆ ಹಾಕಿಸಿಕೊಳ್ಳದೇ ಇರಲು ಪ್ರಬಲ ವೈದ್ಯಕೀಯ ಕಾರಣವನ್ನ ಮುಂದಿಡಬೇಕು, ರುಜುವಾತು ಮಾಡಬೇಕು. ಉದಾಹರಣೆಗೆ, ಹಿಂದೆ ಲಸಿಕೆ ಹಾಕಿಸಿಕೊಳ್ಳುವಾಗ ಯಾವುದಾದರೂ ಸೈಡ್ ಎಫೆಕ್ಟ್ ಆಗಿದ್ದರೆ, ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಇರುವಂಥ ಗಂಭೀರ ಆರೋಗ್ಯ ಸಮಸ್ಯೆ ಇತ್ಯಾದಿ ಇದ್ದರೆ ಅದನ್ನ ತೋರಿಸಬೇಕು.

ಜೋಕೊವಿಚ್ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಎರಡು ಸ್ವತಂತ್ರ ವೈದ್ಯಕೀಯ ಸಂಸ್ಥೆಗಳು ಅನುಮೋದಿಸಿವೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅನುಮತಿಸಿವೆ. ಆದರೂ ಕೂಡ ಜೋಕೊವಿಚ್ ಅವರನ್ನ ಆಸ್ಟ್ರೇಲಿಯಾ ಸರ್ಕಾರ ವಲಸಿಗರ ಕ್ಯಾಂಪ್​ನಲ್ಲಿ ಸೆರೆಯಲ್ಲಿಟ್ಟಿದೆ.

ಇದನ್ನೂ ಓದಿ: IPL Auction: ಬೆಂಗಳೂರಿನಲ್ಲಿ ಮುಂದಿನ ತಿಂಗಳು ಐಪಿಎಲ್ ಹರಾಜು? ದಿನಾಂಕ ಮತ್ತಿತರ ಮಾಹಿತಿ

ಜೋಕೋವಿಚ್​ಗೆ ಆಸ್ಟ್ರೇಲಿಯಾ ಓಪನ್ ಬಹಳ ಮುಖ್ಯ:

ನಮ್ಮ ಪೀಳಿಗೆ ನೋಡುತ್ತಿರುವ ಮೂವರು ಸರ್ವಶ್ರೇಷ್ಠ ಟೆನಿಸ್ ಆಟಗಾರರಲ್ಲಿ ನೊವಾಕ್ ಜೋಕೊವಿಚ್ ಕೂಡ ಒಬ್ಬರು. ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜೊಕೋವಿಚ್ ಅವರು ತಲಾ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಸರ್ಬಿಯಾ ದೇಶದ 34 ವರ್ಷದ ಜೋಕೋವಿಚ್ ಅವರು ಆಸ್ಟ್ರೇಲಿಯಾ ಓಪನ್ ಗೆದ್ದರೆ 21 ಗ್ರ್ಯಾನ್ ಸ್ಲಾಮ್ ಗೆದ್ದಂತಾಗುತ್ತದೆ. ಆ ಮೂಲಕ ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ದಾಖಲೆ ಅವರದ್ದಾಗುತ್ತದೆ.

ಲಸಿಕೆ ಹಾಕಿಸಿಕೊಳ್ಳದಿರುವುದು ಜೋಕೊವಿಚ್ ಒಬ್ಬರೇ ಅಲ್ಲ:

ಕೋವಿಡ್​ಗೆ ಲಸಿಕೆ ಹಾಕಿಸಿಕೊಳ್ಳಲು ಕಡ್ಡಾಯಪಡಿಸುವುದನ್ನು ವಿರೋಧಿಸುವ ಜನರ ಸಂಖ್ಯೆ ದೊಡ್ಡದೇ ಇದೆ. ವಿಶ್ವದ ಹಲವು ಕ್ರೀಡಾಪಟುಗಳು ಈಗಲೂ ಲಸಿಕೆ ಹಾಕಿಸಿಕೊಂಡಿಲ್ಲ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಇದೇ ಕಾರಣಕ್ಕೆ ಪಾಲ್ಗೊಳ್ಳದೇ ಹಿಂದೆ ಸರಿದ ಕೆಲ ಆಟಗಾರರಿದ್ದಾರೆ. ಕೆಲ ಪ್ರಮುಖ ಗಾಲ್ಫ್, ಬ್ಯಾಸ್ಕೆಟ್​ಬಾಲ್ ಇತ್ಯಾದಿ ಕ್ರೀಡೆಗಳ ತಾರೆಗಳು ಲಸಿಕೆ ಹಾಕಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.
Published by:Vijayasarthy SN
First published: