ಇವರು ನವೀನ್ ‘ಎಕ್ಸ್​ಪ್ರೆಸ್’- ಕಾಲಿಟ್ಟರೆ ಮಿಂಚಿನ ಸಂಚಾರ; 76 ರೇಡ್​ಗಳಲ್ಲಿ ಸಿಕ್ಕಿಬಿದ್ದಿರುವುದು 4 ಬಾರಿ

Pro Kabaddi League 2021: ದಬಂಗ್ ಡೆಲ್ಲಿ ತಂಡದ ಯುವ ಸ್ಟಾರ್ ಆಟಗಾರ ನವೀನ್ ಕುಮಾರ್ ಈ ಸೀಸನ್​ನ ಪ್ರೋಕಬಡ್ಡಿಯಲ್ಲಿ ಎಲ್ಲರ ಗಮನವನ್ನ ಸೆಳೆದಿದ್ಧಾರೆ. ಅತಿ ಹೆಚ್ಚು ಸೂಪರ್-10, ಅತಿ ವೇಗದಲ್ಲಿ 500 ಅಂಕ ಇತ್ಯಾದಿ ಅನೇಕ ದಾಖಲೆಗಳು ಅವರದ್ದಾಗಿವೆ.

ಕಬಡ್ಡಿ ಆಟಗಾರ ನವೀನ್ ಕುಮಾರ್ (2019ರ ಸೀಸನ್ ಪಿಕೆಎಲ್​ನಲ್ಲಿನ ಚಿತ್ರ)

ಕಬಡ್ಡಿ ಆಟಗಾರ ನವೀನ್ ಕುಮಾರ್ (2019ರ ಸೀಸನ್ ಪಿಕೆಎಲ್​ನಲ್ಲಿನ ಚಿತ್ರ)

  • News18
  • Last Updated :
  • Share this:
ಬೆಂಗಳೂರು, ಡಿ. 29: ಇಂದು ದಬಂಗ್ ಡಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ (Dabang Delhi) ನಡುವೆ ಪ್ರೋಕಬಡ್ಡಿ ಪಂದ್ಯ (Pro Kabaddi Match) ಬಹಳ ಕುತೂಹಲ ಮೂಡಿಸಿದೆ. ಅದರಲ್ಲೂ ದಬಂಗ್ ಡೆಲ್ಲಿ ತಂಡದಲ್ಲಿರುವ ನವೀನ್ ‘ಎಕ್ಸ್​ಪ್ರೆಸ್’ ಕುಮಾರ್ (Naveen ‘Express’ Kumar) ಮೇಲೆ ಎಲ್ಲರ ಗಮನ ನೆಟ್ಟಿದೆ. ರೇಡರ್ ನವೀನ್ ದೇಶದ ಕಬಡ್ಡಿಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆದಿದ್ದಾರೆ. ಇದು ಅವರ ಮೂರನೇ ಸೀಸನ್​ನ ಪಿಕೆಎಲ್ ಪಂದ್ಯಾವಳಿ. ಆಗಲೇ ಅವರು ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ. ಬೆಟ್ಟದಷ್ಟು ನಿರೀಕ್ಷೆ ಉಳಿಸಿಕೊಂಡಿದ್ದಾರೆ. ಇವರಿಗೆ ಎಕ್ಸ್​ಪ್ರೆಸ್ ಎಂಬ ಅಡ್ಡನಾಮ ಬರಲು ಕಾರಣ ಇದೆ. ಅಂಗಳದಲ್ಲಿ ಎದುರಾಳಿ ಪಾಳಯದತ್ತ ರೇಡ್​ಗೆ ಹೋದರೆ ಮಿಂಚಿನ ಸಂಚಾರ ನಡೆಸಿ ಪಾಯಿಂಟ್ಸ್ ದೋಚುವ ಛಾತಿ ಇವರಿಗೆ ಸಿದ್ಧಿಸಿದೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದಾಖಲೆವೀರ. ಇವರೆಂಥ ರೇಡರ್ ಎಂಬುದಕ್ಕೆ ಇವರ ಹೆಗಲಿಗಂಟಿಕೊಂಡಿರುವ ದಾಖಲೆಗಳೇ ಸಾಕ್ಷಿ.

ನವೀನ್ ಕುಮಾರ್ ಈ ಸೀಸನ್​ನಲ್ಲಿ ಅತಿ ಹೆಚ್ಚು ರೇಡಿಂಗ್ ಪಾಯಿಂಟ್ಸ್ ಗಳಿಸಿದ ಆಟಗಾರ ಎನಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲೂ ಸೂಪರ್ 10 ಪಾಯಿಂಟ್ಸ್ ಗಳಿದ್ಧಾರೆ. ಇಲ್ಲಿ ಸೂಪರ್ 10 ಅಂದರೆ ಒಂದು ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸುವುದು. ಕೇವಲ ಮೂರು ವರ್ಷದಲ್ಲಿ ಅವರು ಅತಿ ಹೆಚ್ಚು ರೇಡಿಂಗ್ ಪಾಯಿಂಟ್ಸ್ ಗಳಿಸಿದ ದಾಖಲೆಯತ್ತ ಮಿಂಚಿನ ಓಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: PKL 8: ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ರೋಚಕ ಗೆಲುವು

ನವೀನ್ ಕುಮಾರ್ ದಾಖಲೆಗಳು:

* ನವೀನ್ ಕುಮಾರ್ ಕಳೆದ 24 ಪಂದ್ಯಗಳಲ್ಲಿ ಸತತವಾಗಿ ಸೂಪರ್ 10 ಅಂಕಗಳನ್ನ ಗಳಿಸಿದ್ದಾರೆ. ಇದು ಪ್ರೋಕಬಡ್ಡಿ ಇತಿಹಾಸದಲ್ಲಿ ದಾಖಲೆ ಆಗಿದೆ.

* ಈ ಸೀಸನ್​ನಲ್ಲಿ ನವೀನ್ ಇದೂವರೆಗೂ ಮಾಡಿರುವ 76 ರೇಡ್​ಗಳಲ್ಲಿ ಡಿಫೆಂಡರ್ಸ್ ಕೈಗೆ ಸಿಕ್ಕಿಬಿದ್ದಿರುವುದು 4 ಬಾರಿ ಮಾತ್ರ. ಅಂದರೆ ಮೂರು ಪಂದ್ಯಗಳಲ್ಲಿ ಅವರು ರೇಡಿಂಗ್ ವೇಳೆ ಔಟ್ ಆಗಿರುವುದು ನಾಲ್ಕರಲ್ಲಿ ಮಾತ್ರ.

* ನವೀನ್ ಇದೂವರೆಗೆ 33 ಬಾರಿ ಸೂಪರ್ 10 ಗಳಿಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸೂಪರ್-10 ಗಳಿಸಿದ ದಾಖಲೆ ಅವರದ್ದಾಗಿದೆ.

ಇದನ್ನೂ ಓದಿ: PKL 8: ಸಚಿನ್ ವಿಟ್ಲ, ವೇಗದ ಬೌಲರ್ ಆಗಿದ್ದವ ತೊಡೆ ತಟ್ಟಿ ಕಬಡ್ಡಿ ಆಟಗಾರನಾದ ಕಥೆ

* ಪ್ರೋಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಸೂಪರ್-10 ಗಳಿಸಿದ ಆಟಗಾರರ ಪಟ್ಟಿಯಲ್ಲಿ ನವೀನ್ ಸದ್ಯ 4ನೇ ಸ್ಥಾನದಲ್ಲಿದ್ದಾರೆ. ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ ಮತ್ತು ಮಣೀಂದರ್ ಸಿಂಗ್ ಅವರು ಮೊದಲ ಮೂರು ಸ್ಥಾನದಲ್ಲಿದ್ಧಾರೆ. ನವೀನ್ ಹೋಗುತ್ತಿರುವ ವೇಗ ಗಮನಿಸಿದರೆ ಈ ದಾಖಲೆಯೂ ಅವರ ಹೆಸರಿಗೆ ಸಂದಾಯ ಆಗುವುದರಲ್ಲಿ ಸಂಶಯ ಇಲ್ಲ.

* ದಬಂಗ್ ಡೆಲ್ಲಿಯ ನವೀನ್ ಈಗ ನಡೆಯುತ್ತಿರುವ ಎಂಟನೇ ಸೀಸನ್ ಪಿಕೆಎಲ್​ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

* ಕಳೆದ ಬಾರಿಯ 7ನೇ ಸೀಸನ್​ನಲ್ಲಿ ನವೀನ್ 23 ಪಂದ್ಯಗಳಿಂದ 301 ಪಾಯಿಂಟ್ ಪಡೆದಿದ್ದರು. ಬೆಂಗಳೂರು ಬುಲ್ಸ್ ತಂಡದ ಪವನ್ ಕುಮಾರ್ 346 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರೆ ನವೀನ್ ಮೂರನೇ ಸ್ಥಾನ ಪಡೆದರು. ಆದರೆ, ಎಂಎಸ್​ಪಿ (MSP- Most Valued Player) ಲೆಕ್ಕಾಚಾರದಲ್ಲಿ ನವೀನ್ ಕುಮಾರ್ ಅವರದ್ದು ಮೊದಲ ಸ್ಥಾನ.

* ತಾವು ಪದಾರ್ಪಣೆ ಮಾಡಿದ ಆರನೇ ಸೀಸನ್​ನಲ್ಲೂ ನವೀನ್ 22 ಪಂದ್ಯಗಳಿಂದ 172 ರೇಡಿಂಗ್ ಪಾಯಿಂಟ್ಸ್ ಗಳಿಸಿ ಗಮನ ಸೆಳೆದಿದ್ದರು. ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಅವರು 8ನೇ ಸ್ಥಾನ ಪಡೆದಿದ್ದರು.

* ಪ್ರೋಕಬಡ್ಡಿ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 500 ಅಂಕ ಗಳಿಸಿದ ದಾಖಲೆ ಅವರದ್ದಾಗಿದೆ. ಇದೂವರೆಗೆ ಅವರು ಗಳಿಸಿದ ಅಂಕಗಳ ಸಂಖ್ಯೆ 515 ಇದೆ.

* ಇದೂವರೆಗೆ 48 ಪಂದ್ಯಗಳಲ್ಲಿ ಅವರು 855 ಬಾರಿ ರೇಡ್ ಮಾಡಿದ್ದಾರೆ. ಅದರಲ್ಲಿ ಶೇ. 51ರಷ್ಟು ರೇಡ್​ಗಳಲ್ಲಿ ಅವರು ಕನಿಷ್ಠ ಒಂದಾದರೂ ಅಂಕ ಗಳಿಸಿದ್ದಾರೆ. 4 ಸೂಪರ್ ರೇಡ್ ಮಾಡಿದ್ದಾರೆ.

ಇದನ್ನೂ ಓದಿ: PKL 8: ಹರ್ಯಾಣಕ್ಕೆ ಚೊಚ್ಚಲ ಜಯ; ಪಟ್ನಾಗೆ ರೋಚಕ ಜಯ; ಇಲ್ಲಿದೆ ಪಾಯಿಂಟ್ ಟೇಬಲ್

ತಾತ ಕುಸ್ತಿಪಟು:

ಇನ್ನೂ 21 ವರ್ಷದ ನವೀನ್ ಕುಮಾರ್ ಪ್ರೋಕಬಡ್ಡಿಯಲ್ಲಿ ಆಡಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಹರಿಯಾಣ ರಾಜ್ಯದವರಾದ ನವೀನ್ ಅವರ ಅಜ್ಜ ಹರಿಯಾಣ ರಾಜ್ಯಮಟ್ಟದ ಕುಸ್ತಿಪಟು ಆಗಿದ್ದವರು. ನವೀನ್ ಕಬಡ್ಡಿ ಅಂಗಳಕ್ಕೆ ಕಾಲಿಟ್ಟು ತೊಡೆತಟ್ಟಲು ಅವರ ತಾತನೇ ಕಾರಣ ಎನ್ನಲಾಗಿದೆ. 5 ಅಡಿ 10 ಅಂಗುಲ ಎತ್ತರವಿರುವ ಸಂಪೂರ್ಣ ಫಿಟ್ ಇರುವ ನವೀನ್ ಕುಮಾರ್ ಭಾರತ ಕಬಡ್ಡಿ ತಂಡದ ಭವಿಷ್ಯದ ಸ್ಟಾರ್ ಆಗುವುದರಲ್ಲಿ ಸಂಶಯ ಇಲ್ಲ.

ಮಾಹಿತಿ ಕೃಪೆ:
Harshith Rathi, Indiafantasy
Mohit Shah, ESPN
Prokabaddi Website
Published by:Vijayasarthy SN
First published: