ಬರೋಡಾ ವಿರುದ್ಧ ಕರ್ನಾಟಕಕ್ಕೆ ಆಘಾತ; ಎರಡೇ ದಿನಕ್ಕೆ ಪಂದ್ಯ ಅಂತ್ಯ; ಕ್ವಾರ್ಟರ್​ಫೈನಲ್ ಅವಕಾಶ ಎಷ್ಟು?

ಕರ್ನಾಟಕದ ಕ್ವಾರ್ಟರ್​​ಫೈನಲ್ ಪ್ರವೇಶದ ಸಾಧ್ಯತೆಯು ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

Vijayasarthy SN | cricketnext
Updated:January 8, 2019, 8:01 PM IST
ಬರೋಡಾ ವಿರುದ್ಧ ಕರ್ನಾಟಕಕ್ಕೆ ಆಘಾತ; ಎರಡೇ ದಿನಕ್ಕೆ ಪಂದ್ಯ ಅಂತ್ಯ; ಕ್ವಾರ್ಟರ್​ಫೈನಲ್ ಅವಕಾಶ ಎಷ್ಟು?
(ಪ್ರಾತಿನಿಧಿಕ ಚಿತ್ರ)
Vijayasarthy SN | cricketnext
Updated: January 8, 2019, 8:01 PM IST
ವಡೋದರಾ(ಜ. 08): ರಣಜಿ ಟ್ರೋಫಿ ಟೂರ್ನಿಯ ಎ ಗುಂಪಿನ ಕೊನೆಯ ಸುತ್ತಿನಲ್ಲಿ ಕರ್ನಾಟಕ ವೀರೋಚಿತ ಸೋಲನುಭವಿಸಿದೆ. ತರಗೆಲೆಗಳಂತೆ ವಿಕೆಟ್​ಗಳು ಉದುರಿದ ಈ ಪಂದ್ಯದಲ್ಲಿ ಕರ್ನಾಟಕವನ್ನು ಬರೋಡಾ 2 ವಿಕೆಟ್​ಗಳಿಂದ ಮಣಿಸಿದೆ. ಮೊದಲ ದಿನ 22 ವಿಕೆಟ್ ಬಿದ್ದರೆ ಎರಡನೇ ದಿನ 16 ವಿಕೆಟ್ ಪತನಗೊಂಡು ಎರಡೇ ದಿನಕ್ಕೆ ಪಂದ್ಯ ಅಂತ್ಯವಾಗಿದೆ. ಈ ಸೋಲಿನೊಂದಿಗೆ ಕರ್ನಾಟಕದ ಕ್ವಾರ್ಟರ್​ಫೈನಲ್ ಆಸೆಗೆ ತುಸು ತಣ್ಣೀರು ತಾಕಿದೆ. ಕರ್ನಾಟಕವು ನಾಕೌಟ್ ದಡ ಮುಟ್ಟಬೇಕಾದರೆ ಇತರ ಕೆಲ ಪಂದ್ಯಗಳ ಫಲಿತಾಂಶ ಬರುವವರೆಗೂ ಕಾಯಬೇಕಾಗುತ್ತದೆ.

ಕೇವಲ 174 ಓವರ್​ನ ಆಟ ಕಂಡ ಕರ್ನಾಟಕ ವರ್ಸಸ್ ಬರೋಡಾ ಪಂದ್ಯ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿತ್ತು. ಗೆಲ್ಲಲು ಕೇವಲ 110 ರನ್ ಗುರಿ ಪಡೆದ ಬರೋಡಾ ತಂಡ ಗೆಲುವಿನ ಗಡಿ ಮುಟ್ಟುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಬರೋಡಾದ ಹಿರಿಯ ಆಟಗಾರ ಯೂಸುಫ್ ಪಠಾಣ್ 41 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಒಂದು ಹಂತದಲ್ಲಿ 90 ರನ್​ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಬರೋಡಾ ತಂಡವನ್ನು ರಿಷಿ ಅರೋಥೆ ಮತ್ತು ಭಾರ್ಗವ್ ಭಟ್ ಅವರು ಬಚಾವ್ ಮಾಡಿ ಗೆಲುವಿನ ದಡ ಮುಟ್ಟಿಸಿದರು.

ನಿನ್ನೆ ಎರಡನೇ ಇನ್ನಿಂಗ್ಸಲ್ಲಿ 2 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದ್ದ ಕರ್ನಾಟಕ ಇಂದು ಆಟ ಮುಂದುವರಿಸಿ 220 ರನ್ ಗಳಿಸಿ ಒಟ್ಟು 109 ರನ್ ಮುನ್ನಡೆ ಪಡೆಯಿತು. ಕೃಷ್ಣಮೂರ್ತಿ ಸಿದ್ಧಾರ್ಥ್ ಮತ್ತು ಮನೀಶ್ ಪಾಂಡೆ ಇಬ್ಬರೂ ಅರ್ಧಶತಕ ಗಳಿಸಿ ಕರ್ನಾಟಕದ ಇನ್ನಿಂಗ್ಸ್​ಗೆ ಜೀವ ತುಂಬಿದರು. ಶ್ರೇಯಸ್ ಗೋಪಾಲ್, ಬಿ. ಶರತ್, ಜೆ. ಸುಚಿತ್ ಅವರೂ ಉತ್ತಮವಾಗಿ ಆಡಿ ತಂಡಕ್ಕೆ ಗೌರವಾರ್ಹ ಮೊತ್ತ ಸಿಗುವಂತೆ ಮಾಡಿದರು. ಬರೋಡಾದ ಭಾರ್ಗವ್ ಭಟ್ ಮತ್ತು ದೀಪಕ್ ಹೂಡಾ ತಲಾ 5 ವಿಕೆಟ್ ಕಬಳಿಸಿ ಕರ್ನಾಟಕದ ಬ್ಯಾಟಿಂಗ್ ಮುನ್ನಡೆಯನ್ನು ತಣ್ಣಗಾಗಿಸಿದರು. ಎದುರಾಳಿಗಳಿಗೆ ಪ್ರಬಲ ಸವಾಲು ಹಾಕಲು ಕರ್ನಾಟಕ ಒಡ್ಡಿದ 110 ರನ್ ಗುರಿ ಯಾತಕ್ಕೂ ಸಾಲಲಿಲ್ಲ. ಆದರೂ ಕರ್ನಾಟಕದ ಬೌಲರ್​ಗಳು ಕೆಚ್ಚೆದೆಯ ಬೌಲಿಂಗ್ ಪ್ರದರ್ಶನ ನೀಡಿ ಬರೋಡಾವನ್ನು ಆಲೌಟ್ ಮಾಡುವಷ್ಟು ಸನಿಹಕ್ಕೆ ಬಂದಿದ್ದರು.

ಕ್ವಾರ್ಟರ್​ಫೈನಲ್ ಚಾನ್ಸ್ ಎಷ್ಟು?

ಕರ್ನಾಟಕ ಈ ಪಂದ್ಯ ಸೋತರೂ ಎ ಗುಂಪಿನ ಅಂಕಪಟ್ಟಿಯಲ್ಲಿ 27 ಪಾಯಿಂಟ್​ಗಳೊಂದಿಗೆ 2ನೇ ಸ್ಥಾನದಲ್ಲೇ ಮುಂದುವರಿದಿದೆ. ವಿದರ್ಭ ತಂಡವು 28 ಅಂಕಗಳೊಂದಿಗೆ ಈ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ ತಂಡಗಳು ತಲಾ 26 ಅಂಕಗಳನ್ನ ಹೊಂದಿ 3-5 ಸ್ಥಾನಗಳನ್ನ ಹಂಚಿಕೊಂಡಿವೆ.

ಈ ಟೂರ್ನಿಯಲ್ಲಿ ಇಲೈಟ್ ವಿಭಾಗದಲ್ಲಿ 3 ಗುಂಪುಗಳನ್ನ ರಚಿಸಲಾಗಿದೆ. ಪ್ಲೇಟ್ ವಿಭಾಗದಲ್ಲಿ ಒಂದು ಗುಂಪಿದೆ. ಇಲೈಟ್ ವಿಭಾಗದ ಎ ಮತ್ತು ಬಿ ಈ ಎರಡೂ ಗುಂಪಿನಿಂದ ಸೇರಿ ಟಾಪ್-5 ತಂಡಗಳು ನಾಕೌಟ್ ಹಂತಕ್ಕೇರಲಿವೆ. ಸಿ ಗುಂಪಿನಿಂದ ಟಾಪ್-2 ತಂಡಗಳು ಹಾಗೂ ಪ್ಲೇಟ್ ಗುಂಪಿನಿಂದ ಅಗ್ರಸ್ಥಾನದ ತಂಡವು ಕ್ವಾರ್ಟರ್​ಫೈನಲ್ ತಲುಪಲಿವೆ.

ಎ ಗುಂಪಿನಿಂದ ವಿದರ್ಭ ತಂಡ ಕ್ವಾರ್ಟರ್​ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಸಿ ಗುಂಪಿನಿಂದ ರಾಜಸ್ಥಾನ ಕೂಡ ನಾಕೌಟ್ ಪ್ರವೇಶಿಸಿದೆ. ಕರ್ನಾಟಕದ ಕ್ವಾರ್ಟರ್​ಫೈನಲ್ ಆಸೆಯು ಜೀವಂತವಾಗಿದೆಯಾದರೂ ಸೌರಾಷ್ಟ್ರ, ಮಧ್ಯಪ್ರದೇಶ ಮತ್ತು ಬಂಗಾಳ ತಂಡಗಳ ಪಂದ್ಯಗಳ ಫಲಿತಾಂಶದ ಮೇಲೆ ಕರ್ನಾಟಕದ ಭವಿಷ್ಯ ಅಡಗಿದೆ.
Loading...

ಸ್ಕೋರು ವಿವರ:

ಕರ್ನಾಟಕ ಮೊದಲ ಇನ್ನಿಂಗ್ಸ್ 31.2 ಓವರ್ 112/10
(ಮನೀಶ್ ಪಾಂಡೆ 43, ಬಿಆರ್ ಶರತ್, ಕರುಣ್ ನಾಯರ್ 12, ಶುಭಾಂಗ್ ಹೆಗಡೆ 11 ರನ್ – ಲುಕ್ಮನ್ ಮೇರಿವಾಲಾ 22/3, ಭಾರ್ಗವ್ ಭಟ್ 27/3, ಸೊಯೇಬ್ ಟಾಯ್ 7/2, ರಿಷಿ ಅರೋಥೆ 34/2)

ಬರೋಡಾ ಮೊದಲ ಇನ್ನಿಂಗ್ಸ್ 51 ಓವರ್ 223/10
(ವಿಷ್ಣು ಸೋಲಂಕಿ 69, ದೀಪಕ್ ಹೂಡಾ 51, ಯೂಸುಫ್ ಪಠಾಣ್ 36, ಸೊಯೇಬ್ ಟಯ್ 23 ರನ್ – ಶ್ರೇಯಸ್ ಗೋಪಾಲ್ 47/4, ಶುಭಾಂಗ್ ಹೆಗಡೆ 74/4)

ಕರ್ನಾಟಕ ಎರಡನೇ ಇನ್ನಿಂಗ್ಸ್ 63.4 ಓವರ್ 220/10
(ಕೆ. ಸಿದ್ಧಾರ್ಥ್ 64, ಮನೀಶ್ ಪಾಂಡೆ 50, ಶ್ರೇಯಸ್ ಗೋಪಾಲ್ 29, ಬಿ.ಆರ್. ಶರತ್ 22, ಜೆ. ಸುಚಿತ್ ಅಜೇಯ 18, ಡೇಗಾ ನಿಶ್ಚಲ್ 16 ರನ್ – ದೀಪಕ್ ಹೂಡಾ 31/5, ಭಾರ್ಗವ್ ಭಟ್ 116/5)

ಬರೋಡಾ ಎರಡನೇ ಇನ್ನಿಂಗ್ಸ್ 28.1 ಓವರ್ 110/8
(ಯೂಸುಫ್ ಪಠಾಣ್ 41, ವಿಷ್ಣು ಸೋಲಂಕಿ 20 ರನ್ – ಪ್ರಸಿದ್ಧ್ ಕೃಷ್ಣ 14/3, ಶ್ರೇಯಸ್ ಗೋಪಾಲ್ 12/2, ರೋಣಿತ್ ಮೋರೆ 57/2)
First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ