ಮಧುಮೇಹ (Diabetes) ಎಂಬುದು ಸ್ಲೊ ಪಾಯಿಸನ್‌ನಂತೆ (Slow Poison), ವಿಶ್ವವ್ಯಾಪಿ ಆವರಿಸಿಕೊಂಡಿದ್ದು, ತಾವೊಬ್ಬ ಡಯಾಬಿಟೀಸ್ ಎಂಬುದನ್ನು ಅರಿತೊಡನೆ ವ್ಯಕ್ತಿ ಇನ್ನು ತನಗೆ ಉಳಿಗಾಲವಿಲ್ಲ ಎಂದೇ ಭಯಪಡುತ್ತಾರೆ. ಬೇಕಾದ್ದು ತಿನ್ನುವ ಹಾಗಿಲ್ಲ (Food), ಜೀವನ ಪರ್ಯಂತ ಔಷಧಿಗಳನ್ನೇ (Medication) ತಿನ್ನಬೇಕಾದ ಪರಿಸ್ಥಿತಿ, ಡಯಾಬಿಟೀಸ್‌ನೊಂದಿಗೆ ಆಗಾಗ್ಗೆ ಹಿಂಡಿ ಹಿಪ್ಪೆಮಾಡುವ ಇನ್ನಿತರ ಕಾಯಿಲೆಗಳು ಸಾಕಪ್ಪಾ ಸಾಕು ಜೀವನ ಎಂದೇ ಅನ್ನಿಸಿಬಿಡುತ್ತದೆ.
ಶಿಸ್ತಿನ ಜೀವನಶೈಲಿಯಿಂದ ಮಧುಮೇಹ ಗೆದ್ದ ಕಪಿಲ್ ದೇವ್
ಮದ್ದಿಲ್ಲದ ಕಾಯಿಲೆ ಎಂದೇ ಖ್ಯಾತಿಪಡೆದುಕೊಂಡಿರುವ ಮಧುಮೇಹವನ್ನು ನಿಯಂತ್ರಿಸಲು ಶಿಸ್ತಿನ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ ಎಂಬುದು ವೈದ್ಯರ ಮಾತಾಗಿದೆ.
ಈ ಕಾಯಿಲೆ ಮಣಿಯುವುದು ತುಸು ಪಥ್ಯ ಹಾಗೂ ಕಟ್ಟುನಿಟ್ಟಾದ ಜೀವನಶೈಲಿಗೆ ಮಾತ್ರ ಎಂಬುದು ವೈದ್ಯರ ಅಭಿಮತವಾಗಿದೆ. ಪಥ್ಯ ಹಾಗೂ ಶಿಸ್ತು ಎಂದರೆ ಭಯವೇನೂ ಪಡುವುದು ಬೇಡ ಕೊಂಚ ಆಹಾರದಲ್ಲಿ ನಿಯಂತ್ರಣ ಹಾಗೂ ಒಂದರ್ಧ ಗಂಟೆ ವ್ಯಾಯಾಮ ಮಾಡಿದರೆ ಮಧುಮೇಹವಿದ್ದೂ ಸಾಮಾನ್ಯರಂತೆ ಬದುಕಬಹುದು. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಖ್ಯಾತ ಕ್ರಿಕೆಟ್ ಪಟು ಕಪಿಲ್ ದೇವ್.
ಮಧುಮೇಹಿಯಾಗಿ ನಾನು ಆರೋಗ್ಯವಂತನಾಗಿರುವೆ
ಮಧುಮೇಹ ತನ್ನೊಳಗೆ ಅಡಗಿದೆ ಎಂಬುದನ್ನು ಅರಿತೊಡನೆ ಕಪಿಲ್ ದೇವ್ ಕುಗ್ಗಲಿಲ್ಲ ಹಾಗೂ ತನ್ನಂತಹ ಆಟಗಾರನಿಗೆ ಇದು ಏಕೆ ಬಂದಿತು ಎಂದು ಎದೆಗುಂದಲಿಲ್ಲ, ಅವರು ತಮ್ಮಲ್ಲಿ ಸ್ವಯಂ ಶಿಸ್ತನ್ನು ರೂಢಿಸಿಕೊಂಡರು.
ನಾನು ಮಧುಮೇಹಿ ಅಲ್ಲದೇ ಇರುತ್ತಿದ್ದರೆ ಒಂದು ರೀತಿಯಲ್ಲಿ ಸಿಕ್ಕಸಿಕ್ಕದ್ದನ್ನೆಲ್ಲಾ ತಿನ್ನುವ ದಢೂತಿ ವ್ಯಕ್ತಿಯಾಗುತ್ತಿದ್ದೆ. ಬಹುಶಃ ಅತಿಯಾಗಿ ಆಹಾರ ಸೇವಿಸುವುದು ಮತ್ತು ಕುಡಿಯುವುದರಿಂದ ದೇಹವನ್ನೇ ವಿಕಾರಗೊಳಿಸುತ್ತಿದ್ದೆ ಎಂದು ಕಪಿಲ್ ದೇವ್ ತಿಳಿಸಿದ್ದಾರೆ. ಆರೋಗ್ಯಕರ ಹಾಗೂ ಸಂತಸಮಯ ಜೀವನಕ್ಕೆ ಶಿಸ್ತು ಎಂಬುದು ಅತಿಮುಖ್ಯ ಎಂದು ಕ್ರಿಕೆಟ್ ಕಲಿ ತಿಳಿಸಿದ್ದಾರೆ.
ಮಧುಮೇಹವು ತನ್ನಲ್ಲಿ ಶಿಸ್ತನ್ನು ಮೂಡಿಸಿದೆ. ಇದು ನನ್ನ ನಿತ್ಯ ಅಭ್ಯಾಸವಾಗಿ ಮಾರ್ಪಟ್ಟಿದೆ ಎಂದು ಕಪಿಲ್ ದೇವ್ ತಿಳಿಸಿದ್ದಾರೆ. ನೋವಾ ನಾರ್ಡಿಕ್ಸ್‌ನ ವೈಸ್ ಪ್ರೆಸಿಡೆಂಟ್ ವಿಕ್ರಾಂತ್ ಶೋತ್ರಿಯಾ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಜಾನ್ ಡಾಬರ್ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಕಪಿಲ್ ಪಾಲ್ಗೊಂಡಿದ್ದು, ತಾನೊಬ್ಬ ಮಧುಮೇಹಿಯಾಗಿದ್ದುಕೊಂಡೇ ಆರೋಗ್ಯಕರ ಜೀವನ ಶೈಲಿಯನ್ನು ನಿತ್ಯವೂ ಹೇಗೆ ಪಾಲಿಸಿಕೊಂಡು ಬರುತ್ತಿದ್ದೇನೆ ಎಂಬುದನ್ನು ತಿಳಿಸಿದ್ದಾರೆ.
ದೇಹದ ಬಗ್ಗೆ ಹೆಚ್ಚು ತಿಳಿದುಕೊಂಡಿರುವೆ
ರಕ್ತದ ಗ್ಲುಕೋಸ್ ನಿರ್ವಹಣೆಗಾಗಿ ಚರ್ಮದಡಿಯಲ್ಲಿ ಸೇರಿಸಲಾದ ಸಣ್ಣ ಸಂವೇದಕವಾದ ಇನ್ಸುಲಿನ್ ಪ್ಯಾಚ್‌ಗಳನ್ನು ಕಪಿಲ್ ದೇವ್ ಬಳಸುತ್ತಿದ್ದು, ವೈದ್ಯಲೋಕದ ಸುಧಾರಿತ ಅನ್ವೇಷಣಗಳಿಗೆ ನಾನು ನಿಜಕ್ಕೂ ಕೃತಜ್ಞ ಎಂದು ತಿಳಿಸಿದ್ದಾರೆ.
ಇದರಿಂದ ನಾನು ಕೂಡ ಇತರರಂತೆಯೇ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ದೇಹದಲ್ಲಿ ಸಕ್ಕರೆ ಪ್ರಮಾಣ ಏರಿದಾಗ ಪ್ಯಾಚಸ್‌ಗಳು ಸ್ವಯಂಚಾಲಿತವಾಗಿ ಇನ್ಸುಲಿನ್ ಅನ್ನು ಉತ್ಪಾದಿಸುತ್ತವೆ ಹಾಗೂ ಇನ್ಸುಲಿನ್ ಇಂಜೆಕ್ಶನ್‌ಗಳ ಬದಲಿಗೆ ಇವುಗಳನ್ನು ಬಳಸಹುದಾಗಿದೆ ಎಂದು ಕಪಿಲ್ ತಿಳಿಸಿದ್ದಾರೆ.
ಜ್ಞಾನ ಎಂಬುದು ಒಂದು ಶಕ್ತಿ ಇದ್ದಂತೆ. ಇದೀಗ ನಾನು ನನ್ನ ದೇಹದ ಬಗ್ಗೆ ಹೆಚ್ಚು ಅರಿತಿರುವೆ ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಂಡಿರುವೆ ಎಂದು ಕಪಿಲ್ ತಿಳಿಸಿದ್ದಾರೆ.
ಭಾರತದಲ್ಲಿ ಮಧುಮೇಹ ಹಾಗೂ ಖಿನ್ನತೆ ಹೆಚ್ಚುತ್ತಿದೆ
ಕ್ರಿಕೆಟ್ ಹಾಗೂ ಆಯುಷ್ಯದ ವಿಷಯದಲ್ಲಿ 100 ಎಂಬುದು ಮ್ಯಾಜಿಕ್ ಸಂಖ್ಯೆಯಾಗಿದೆ. ಮಾನವನ ಜೀವನ ನಿರೀಕ್ಷೆಗಳು ಹೆಚ್ಚಾಗುತ್ತಿವೆ ಅದಾಗ್ಯೂ ಡಯಾಬಿಟೀಸ್ ಸಮಸ್ಯೆಗಳು ಹಾಗೂ ಇದರೊಂದಿಗೆ ಕಾಡುತ್ತಿರುವ ಖಿನ್ನತೆ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ದೇವ್ ತಿಳಿಸಿದ್ದಾರೆ. ಹಾಗಾಗಿ ನಮ್ಮ ಜೀವನ ಹಾಗೂ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಬೇಕು ಎಂಬುದು ಅವರ ಸಲಹೆಯಾಗಿದೆ.
ನಿಮ್ಮ ದೇಹದ ಮಾತನ್ನು ಆಲಿಸಿ ಎಂಬ ಅಂಶಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಸಿರುವ ಕಪಿಲ್ ದೇವ್, ಪ್ರತಿಯೊಬ್ಬರ ಜೀವನ ಭಿನ್ನವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ನಾವು ಇನ್ನೊಬ್ಬರನ್ನೇ ಅನುಕರಿಸಲು ಪ್ರಯತ್ನಿಸುತ್ತೇವೆ. ನಿಮ್ಮ ಸಾಮರ್ಥ್ಯ ಹಾಗೂ ದುರ್ಬಲತೆಯನ್ನು ಅರಿಯಿರಿ. ನಿಮಗೆ ಸೂಕ್ತವಾಗಿರುವುದು ನನಗೆ ಸೂಕ್ತವಾಗಿರುವುದಿಲ್ಲ ಎಂದು ಕಪಿಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ