ಸುಪ್ರೀಂ ತೀರ್ಪಿಗೆ ನ್ಯಾ| ಲೋಧಾ ಬೇಸರ; ಬಿಸಿಸಿಐನಲ್ಲಿ ಸುಧಾರಣೆ ತರುವ ಯತ್ನಕ್ಕೆ ಆಗಿದ್ಯಾ ಸೋಲು?


Updated:August 10, 2018, 2:26 PM IST
ಸುಪ್ರೀಂ ತೀರ್ಪಿಗೆ ನ್ಯಾ| ಲೋಧಾ ಬೇಸರ; ಬಿಸಿಸಿಐನಲ್ಲಿ ಸುಧಾರಣೆ ತರುವ ಯತ್ನಕ್ಕೆ ಆಗಿದ್ಯಾ ಸೋಲು?
ನಿವೃತ್ತ ಮುಖ್ಯನ್ಯಾಯಮೂರ್ತಿ ಆರ್.ಎಂ. ಲೋಧಾ

Updated: August 10, 2018, 2:26 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 10): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಅಮೂಲಾಗ್ರ ಬದಲಾವಣೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ನಿವೃತ್ತ ನ್ಯಾ| ಆರ್.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೆಲ ಪ್ರಮುಖ ಮಾರ್ಪಾಡುಗಳನ್ನು ಮಾಡಿ ಸುಪ್ರೀಂಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಬಿಸಿಸಿಐನ ಪದಾಧಿಕಾರಿಗಳಿಗೆ ಇದರಿಂದ ನಿರಾಳವಾಯಿತಾದರೂ, ನ್ಯಾ| ಲೋಧಾ ಅವರಿಗೆ ಅತೀವ ನಿರಾಸೆ ತಂದಿದೆ. ಬಿಸಿಸಿಐನಲ್ಲಿ ಸುಧಾರಣೆ ತರುವ ಪ್ರಮುಖ ಅಂಶಗಳನ್ನೇ ಸುಪ್ರೀಂಕೋರ್ಟ್ ಮಾರ್ಪಾಡು ಮಾಡಿದೆ. ಇದರಿಂದ ತಾವು ಸಾಕಷ್ಟು ಶ್ರಮ ವಹಿಸಿ ಮಾಡಿದ ವರದಿಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ನ್ಯಾಯಮೂರ್ತಿ ಲೋಧಾ ವಿಷಾದಿಸಿದ್ದಾರೆ.

ಒಂದು ರಾಜ್ಯ ಒಂದು ವೋಟು; ಹಾಗೂ ಮೂರು ವರ್ಷದ ಕೂಲಿಂಗ್ ಆಫ್ ಅವಧಿ ವಿಚಾರದಲ್ಲಿ ತಾನು ನೀಡಿದ ಶಿಫಾರಸುಗಳನ್ನು ನ್ಯಾ| ಲೋಧಾ ಉಲ್ಲೇಖಿಸಿ ಮಾತನಾಡುತ್ತಿದ್ದರು. ಸುಪ್ರೀಂಕೋರ್ಟ್ ನಿನ್ನೆ ನೀಡಿದ ತೀರ್ಪಿನಲ್ಲಿ ಈ ಮೇಲಿನ ಎರಡೂ ಶಿಫಾರಸುಗಳಲ್ಲಿ ಬದಲಾವಣೆ ತಂದಿದೆ. ಒಂದು ರಾಜ್ಯ ಒಂದು ವೋಟು ಬದಲಾಗಿ ಹಾಲಿ ಇರುವ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಅಂದರೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿರುವ ತಲಾ ಮೂರು ಕ್ರಿಕೆಟ್ ಸಂಸ್ಥೆಗಳಿಗೂ ಬಿಸಿಸಿಐನಲ್ಲಿ ವೋಟ್ ಹಾಕುವ ಅಧಿಕಾರ ಮುಂದುವರಿಯಲಿದೆ. ಹಾಗೆಯೇ ರೈಲ್ವೇಸ್, ಸರ್ವಿಸಸ್ ಮತ್ತು ವಿಶ್ವವಿದ್ಯಾಲಯಗಳ ತಂಡಗಳಿಗೂ ವೋಟ್ ಮಾಡುವ ಅಧಿಕಾರ ಇರಲಿದೆ.

ದೇಶದ ಪ್ರತೀ ರಾಜ್ಯಕ್ಕೂ ಸಮಾನ ಆದ್ಯತೆ ಕೊಡುವುದು ನ್ಯಾ| ಆರ್.ಎಂ. ಲೋಧಾ ಅವರ ಆಶಯವಾಗಿತ್ತು. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ತಲಾ 3 ಕ್ರಿಕೆಟ್ ಸಂಸ್ಥೆಗಳಿವೆ. ಅಂದರೆ ಭಾರತದ ಪಶ್ಚಿಮ ಪ್ರದೇಶಕ್ಕೆ ಒಟ್ಟು 6 ವೋಟುಗಳು ಬಂದಂತಾಗುತ್ತದೆ. ಬಿಸಿಸಿಐನ ಆಡಳಿತದಲ್ಲಿ ಈ 6 ವೋಟುಗಳು ಗಮನಾರ್ಹ ಪಾತ್ರ ವಹಿಸುತ್ತವೆ. ಇದನ್ನು ತಪ್ಪಿಸಲೆಂದೇ ತಾನು ಒಂದು ರಾಜ್ಯ ಒಂದು ವೋಟು ನಿಯಮ ಜಾರಿಗೆ ತರಬೇಕೆಂದು ಸಲಹೆ ಕೊಟ್ಟಿದ್ದು. ಈ ಪ್ರಮುಖ ನಿಯಮವನ್ನೇ ಕೋರ್ಟ್ ಸಡಿಲಗೊಳಿಸಿದೆ.

ಹಾಗೆಯೇ, ಬಿಸಿಸಿಐನ ಆಡಳಿತಯಂತ್ರದಲ್ಲಿ ಸರಕಾರದ ಹಸ್ತಕ್ಷೇಪ ಇರಕೂಡದು. ಅದು ಸ್ವಾಯತ್ತ ಸಂಸ್ಥೆಯಾಗಿ ಉಳಿಯಬೇಕು. ಈ ಉದ್ದೇಶದಿಂದ ರೈಲ್ವೇಸ್, ಸರ್ವಿಸಸ್ ಮತ್ತು ವಿಶ್ವವಿದ್ಯಾಲಯಗಳ ತಂಡಕ್ಕೆ ಪೂರ್ಣ ಸದಸ್ಯತ್ವ ನೀಡಬಾರದೆಂದು ಶಿಫಾರಸು ಮಾಡಿದ್ದೆವು. ಆದರೆ, ಕೋರ್ಟ್ ಈ ಸಲಹೆಯನ್ನೂ ತಿರಸ್ಕರಿಸಿದೆ. ರೈಲ್ವೇಸ್, ಸರ್ವಿಸಸ್ ಮತ್ತು ವಿವಿ ತಂಡಗಳಿಗೆ ವೋಟ್ ಹಾಕುವ ಅಧಿಕಾರ ಸಿಗುವ ಮೂಲಕ ಬಿಸಿಸಿಐನ ವ್ಯವಹಾರದಲ್ಲಿ ಸರಕಾರ ಪರೋಕ್ಷವಾಗಿ ಮೂಗುತೂರಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ನಿ. ನ್ಯಾ| ಲೋಧಾ ಅಭಿಪ್ರಾಯಪಟ್ಟಿದ್ದಾರೆ.

ಮೂರು ವರ್ಷದ ಕೂಲಿಂಗ್ ಆಫ್ ಅವಧಿ:

ಬಿಸಿಸಿಐನ ಆಡಳಿತದಲ್ಲಿ ಪ್ರಭಾವಿಗಳ ಪ್ರಾಬಲ್ಯ ತಡೆಯುವ ನಿಟ್ಟಿನಲ್ಲಿ ಲೋಧಾ ಸಮಿತಿಯು ಮೂರು ವರ್ಷದ ಕೂಲಿಂಗ್ ಆಫ್ ಅವಧಿಯನ್ನು ಶಿಫಾರಸು ಮಾಡಿತ್ತು. ಅಂದರೆ, ಒಬ್ಬ ವ್ಯಕ್ತಿಯು ಸತತ ಎರಡು ಅವಧಿಗೆ ಅಧಿಕಾರ ಅನುಭವಿಸುವಂತಿಲ್ಲ. ಮೂರು ವರ್ಷ ಅಧಿಕಾರ ಅನುಭವಿಸಿದ ಬಳಿಕ ಮುಂದಿನ ಮೂರು ವರ್ಷ ಅವರದ್ದು ಕೂಲಿಂಗ್ ಆಫ್ ಅವಧಿ. ಅಂದರೆ ಅವರು ಈ ಮೂರು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಅಧಿಕಾರ ಪಡೆಯುವಂತಿಲ್ಲ. ಆದರೆ, ಸುಪ್ರೀಂಕೋರ್ಟ್ ಈ ನಿಯವನ್ನು ಸಡಿಲಿಸಿ, ಸತತ ಎರಡು ಅವಧಿಗೆ ಅಧಿಕಾರ ಪಡೆಯುವ ಅವಕಾಶ ಕಲ್ಪಿಸಿದೆ. ಮೂರು ವರ್ಷಗಳ ಸತತ ಎರಡು ಅವಧಿಯ ಅಧಿಕಾರದ ನಂತರ 3 ವರ್ಷಗಳ ಕೂಲಿಂಗ್ ಆಫ್ ಅವಧಿ ಪಾಲಿಸಬಹುದೆಂದು ಸುಪ್ರೀಮ್ ತಿಳಿಸಿದೆ. ಅಂದರೆ ಒಬ್ಬ ವ್ಯಕ್ತಿಗೆ ಸತತ 6 ವರ್ಷಗಳವರೆಗೆ ಅಧಿಕಾರ ಅನುಭವಿಸುವ ಅವಕಾಶ ಸಿಗಲಿದೆ. ಇದು ನ್ಯಾ| ಆರ್.ಎಂ. ಲೋಧಾ ಅವರಿಗೆ ಇರಿಸುಮುರುಸು ತಂದಿದೆ.
Loading...

ಲೋಧಾ ಸಮಿತಿ ರಚನೆಯಾಗಿದ್ದು ಯಾಕೆ?

ಐಪಿಎಲ್ ಮತ್ತು ಬಿಸಿಸಿಐನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪಗಳು ಬಂದಿದ್ದವು. ಈ ಪ್ರಕರಣದ ಅಮೂಲಾಗ್ರ ತನಿಖೆ ನಡೆಸಲು ಹಾಗೂ ಬಿಸಿಸಿಐನ ಆಡಳಿತದಲ್ಲಿ ಸುಧಾರಣೆ ತರಲು ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ನಿವೃತ್ತ ಭಾರತೀಯ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿ ರಚನೆ ಮಾಡಿತು. ಈ ಸಮಿತಿಯಲ್ಲಿ ಲೋಧಾ ಅವರ ಜೊತೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿಗಳಾದ ಅಶೋಕ್ ಭಾನ್ ಮತ್ತು ಆರ್. ರವೀಂದ್ರನ್ ಅವರಿದ್ದರು. 2016ರ ಜನವರಿಯಲ್ಲಿ ಸಮಿತಿ ಹಲವು ಸುಧಾರಣೆಗಳನ್ನ ಶಿಫಾರಸು ಮಾಡಿ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿತು. ಅದೇ ವರ್ಷದ ಜುಲೈ ತಿಂಗಳಲ್ಲಿ ಲೋಧಾ ಸಮಿತಿಯ ಎಲ್ಲಾ ಶಿಫಾರಸುಗಳನ್ನ ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡಿತು. ಇದಕ್ಕೆ ಬಿಸಿಸಿಐನ ಕೆಲ ವರ್ಗಗಳಲ್ಲಿ ಅಸಮಾಧಾನ ಸೃಷ್ಟಿಯಾಗಿಯಿತು. ಕೆಲ ನಿಯಮಗಳಲ್ಲಿ ಬದಲಾವಣೆ ತರುವಂತೆ ಕೋರಿಕೊಂಡು ಸುಪ್ರೀಂ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಹಾಕಲಾಯಿತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತಾನು ಅನುಮೋದಿಸಿದ ನಿಯಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿ ನಿನ್ನೆ ತೀರ್ಪು ಕೊಟ್ಟಿತು. ಇದರೊಂದಿಗೆ ಬಿಸಿಸಿಐನ ಬಹುತೇಕ ಮಂದಿ ಸಂತುಷ್ಟಗೊಂಡಿದ್ದಂತೂ ಹೌದು. ಆದರೆ, ಸಾಕಷ್ಟು ಶ್ರಮ ವಹಿಸಿ ವರದಿ ತಯಾರು ಮಾಡಿದ ನಿ. ನ್ಯಾ| ಲೋಧಾ ಅವರಿಗೆ ಸುಪ್ರೀಂ ತೀರ್ಪಿನಿಂದ ನಿರಾಸೆಯಾಗಿದೆ.

ಲೋಧಾ ಸಮಿತಿ ಮಾಡಿದ ಪ್ರಮುಖ ಶಿಫಾರಸುಗಳೇನು?

1) ಬಿಸಿಸಿಐ ಮತ್ತು ಐಪಿಎಲ್​ಗೆ ಪ್ರತ್ಯೇಕ ಆಡಳಿತ ಮಂಡಳಿ ಇರಬೇಕು. ಬಿಸಿಸಿಐ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಬೇಕು. ಐಪಿಎಲ್​ಗೆ ಸೀಮಿತ ಸ್ವಾಯತ್ತತೆ ಇರಬೇಕು.

2) ಯಾವುದೇ ಸರಕಾರದ ಸಚಿವ ಅಥವಾ ಸರಕಾರೀ ನೌಕರರು ಬಿಸಿಸಿಐನ ಪದಾಧಿಕಾರಿಯಾಗುವಂತಿಲ್ಲ

3) ಯಾವುದೇ ವ್ಯಕ್ತಿ ಸತತ ಎರಡು ಅವಧಿಗೆ ಬಿಸಿಸಿಐನ ಪದಾಧಿಕಾರಿಯಾಗುವಂತಿಲ್ಲ. ಅಥವಾ ಒಂದೇ ಕಾಲದಲ್ಲಿ ಎರಡು ಹುದ್ದೆ ಅನುಭವಿಸುವಂತಿಲ್ಲ. ಒಂದು ಅವಧಿಯ ಅಧಿಕಾರ ಮುಗಿದ ನಂತರ ಮುಂದಿನ ಮೂರು ವರ್ಷ(ಕೂಲಿಂಗ್ ಆಫ್ ಅವಧಿ) ಅಧಿಕಾರಕ್ಕಾಗಿ ಪ್ರಯತ್ನಿಸುವಂತಿಲ್ಲ.

4) ಪ್ರತೀ ರಾಜ್ಯಕ್ಕೆ ಗರಿಷ್ಠ ಒಂದು ವೋಟ್ ಚಲಾಯಿಸುವ ಅಧಿಕಾರ ಇರಬೇಕು.

5) ಕ್ರಿಕೆಟ್ ಟೂರ್ನಮೆಂಟ್​ಗಳನ್ನು ಆಯೋಜಿಸುವುದು ವಲಯಗಳ ಉದ್ದೇಶವಾಗಿರಬೇಕು. ಬಿಸಿಸಿಐ ಹಾಗೂ ಅದರ ಸಮಿತಿಗಳ ಆಡಳಿತದಲ್ಲಿ ಈ ವಲಯಗಳ ಪ್ರಭಾವ ಇರಕೂಡದು.

6) ಬಿಸಿಸಿಐ ಅನ್ನು ಆರ್​ಟಿಐ ಕಾಯ್ದೆ ವ್ಯಾಪ್ತಿಗೆ ತರಬೇಕು

7) ಸಾರ್ವಜನಿಕರ ಬೆಟ್ಟಿಂಗ್​ನ್ನು ಕಾನೂನುಬದ್ಧಗೊಳಿಸಬೇಕು. ಆದರೆ, ಕ್ರಿಕೆಟ್ ಆಟಗಾರರು, ಕ್ರಿಕೆಟ್ ಆಡಳಿತದ ಅಧಿಕಾರಿಗಳು ಬೆಟ್ಟಿಂಗ್​ನಲ್ಲಿ ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ತೊಡಗುವಂತಿಲ್ಲ.

8) ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರು ತಮ್ಮ ಆಸ್ತಿಯನ್ನು ಘೋಷಿಸಬೇಕು. ಇದರಿಂದ ಅವರು ಬೆಟ್ಟಿಂಗ್​ನಲ್ಲಿ ಶಾಮೀಲಾಗದಂತೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.

9) ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್​ನ್ನು ಕಾನೂನು ಪ್ರಕಾರ ಅಪರಾಧವೆಂದು ಪರಿಗಣಿಸಬೇಕು

10) ಬಿಸಿಸಿಣ ಯಾವುದೇ ಪದಾಧಿಕಾರಿಯ ಗರಿಷ್ಠ ವಯೋಮಿತಿ 70 ವರ್ಷ ಎಂದು ನಿಗದಿ.

11) ಕ್ರಿಕೆಟ್ ಆಟಗಾರರ ಧ್ವನಿ ಆಲಿಸಲು ಮತ್ತು ಅವರ ಹಿತಾಸಕ್ತಿ ಕಾಪಾಡಲು ಆಟಗಾರರ ಸಂಸ್ಥೆಯನ್ನು ಸ್ಥಾಪಿಸಬೇಕು.

12) ಮಹಿಳಾ ಕ್ರಿಕೆಟ್ ಮತ್ತು ಆಯ್ಕೆ ಸಮಿತಿಯ ರಚನೆಯಾಗಬೇಕು.

13) ಆಟಗಾರರ ಏಜೆಂಟ್​ಗಳು ಬಿಸಿಸಿಐನಲ್ಲಿ ನೊಂದಾಯಿತರಾಗಿರಬೇಕು ಹಾಗೂ ಆಟಗಾರರ ಸಂಸ್ಥೆಯ ನಿಯಮಗಳಿಗೆ ಬದ್ಧರಾಗಿರಬೇಕು.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...