1982ರಲ್ಲಿ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ ತಂಡ ಇಟಲಿಯ ಸ್ಟಾರ್ ಆಟಗಾರ ಪಾವೊಲೊ ರೊಸ್ಸಿ ನಿಧನರಾಗಿದ್ದಾರೆ. 64 ವರ್ಷದ ರೊಸ್ಸಿ ಇಹಲೋಕ ತ್ಯಜಿಸಿರುವ ಸುದ್ದಿಯನ್ನು ಪತ್ನಿ ಫೆಡಿರಿಕಾ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ಕಳೆದ ಕಲೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೊಸ್ಸಿ ಅವರ ಆರೋಗ್ಯ ಕಳೆದ ಕೆಲ ದಿನಗಳಿಂದ ಬಿಗಡಾಯಿಸಿತ್ತು ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.
ಇಟಲಿ ಫುಟ್ಬಾಲ್ ವಿಶ್ವಕಪ್ ತಂದುಕೊಡುವ ಮೂಲಕ ಹೊಸ ಸ್ಪರ್ಶ ನೀಡಿದ್ದ ಪಾವೊಲೊ ರೊಸ್ಸಿ ನಿಧನ ಈಗ ಇಟಲಿಯನ್ ಫುಟ್ಬಾಲ್ ಪ್ರೇಮಿಗಳನ್ನು ದುಃಖಕ್ಕೆ ದೂಡಿದೆ. 1982 ರ ಸೆಮಿಫೈನಲ್ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ 2 ಗೋಲು ಬಾರಿಸಿ ಇಟಲಿ ಫೈನಲ್ ಪ್ರವೇಶಿಸಲು ಕಾರಣರಾಗಿದ್ದರು. ಅಲ್ಲದೆ ಫೈನಲ್ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಆರಂಭಿಕ ಗೋಲು ದಾಖಲಿಸಿ 3-1 ಅಂತರದಿಂದ ಇಟಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇನ್ನು ಇದೇ ವಿಶ್ವಕಪ್ನಲ್ಲಿ ರೊಸ್ಸಿ 6 ಅದ್ಭುತ ಗೋಲುಗಳನ್ನು ದಾಖಲಿಸಿರುವುದು ವಿಶೇಷ.
ಇನ್ನು ಯುವೆಂಟಸ್ ಕ್ಲಬ್ನ್ನು ಪ್ರತಿನಿಧಿಸಿದ್ದ ರೊಸ್ಸಿ, ಎರಡು ಬಾರಿ ಸಿರೀ ಎ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ಹಾಗೆಯೇ ಯುರೋಪಿಯನ್ ಲೀಗ್ ಕಪ್ ಹಾಗೂ ಕೋಪಾ ಕಪ್ಗಳನ್ನು ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಇಟಲಿ ಪರ 48 ಪಂದ್ಯಗಳಲ್ಲಿ 20 ಗೋಲುಗಳನ್ನು ದಾಖಲಿಸಿರುವ ಅವರು 1982 ರಲ್ಲಿ ವರ್ಷದ ಯುರೋಪಿಯನ್ ಫುಟ್ಬಾಲ್ ಆಟಗಾರರಾಗಿ ಆಯ್ಕೆಯಾಗಿದ್ದರು.
1986 ರ ವಿಶ್ವಕಪ್ ವಿಜೇತ ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಮರಣ ಅರ್ಜೆಂಟೀನಾ ಫುಟ್ಬಾಲ್ ಪ್ರೇಮಿಗಳನ್ನು ನೋವಿನ ಕಡಲಿಗೆ ತಳ್ಳಿದರೆ, ಎರಡು ವಾರಗಳ ಬಳಿಕ ಪಾವೊಲೊ ರೊಸ್ಸಿ ಅವರ ನಿಧನ ಇಟಲಿಯನ್ ಫುಟ್ಬಾಲ್ ಪ್ರೇಮಿಗಳ ದುಃಖಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ