ಐಪಿಎಲ್ 2022ರ (IPL 2022) 15ನೇ ಆವೃತ್ತಿ ಮಾರ್ಚ್ 26ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಮುಖಾಮುಖಿಯಾಗಲಿವೆ. ಈ ನಡುವೆ ಚೆನ್ನೈ ತಂಡದಿಂದ ಬಹುದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ (M.S Dhoni) ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ (Ravindra Jadeja) ಸಿಎಸ್ಕೆ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಚೆನ್ನೈ ಪ್ರಾಂಚೈಸಿ ತಿಳಿಸಿದೆ. ಈ ವಿಚಾರವನ್ನು ಸ್ವತಃ ಸಿಎಸ್ಕೆ ಆಡಳಿತ ಮಂಡಳಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಆದರೆ ಧೋನಿ ಈ ಆವೃತ್ತಿಯಲ್ಲಿ ಮತ್ತು ನಂತರ ಚೆನ್ನೈ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ ಎಂದು ಸಿಎಸ್ಕೆ ತಿಳಿಸಿದೆ.
ನಾಯಕತ್ವ ತೊರೆದ ಧೋನಿ:
2008ರ ಐಪಿಎಲ್ ಆರಂಭದಿಂದಲೂ ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ನಾಯಕರಾಗಿದ್ದರು. ಆದರೆ ಈ ಬಾರಿ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ಕೇವಲ ಆಟಗಾರನಾಗಿ ಇನ್ನು ಮುಂದೆ ತಂಡದಲ್ಲಿ ಕಾಣಿಸಕೊಳ್ಳಲಿದ್ದಾರೆ. ಆದರೆ 2023ರಂದು ಧೋನಿ ಐಪಿಎಲ್ ಆಡುವುದು ಖಚಿತವಾಗಿದ್ದು, ಇದನ್ನು ಚೆನ್ನೈ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇನ್ನು, ಹೊಸ ಕ್ಯಾಪ್ಟನ್ ರವೀಂದ್ರ ಜಡೇಜಾಗೆ ಧೋನಿ ನಾಯಕತ್ವದ ಪಾಠ ಹೇಳಿಕೊಡಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ವರ್ಷದಿಂದ ರವೀಂದ್ರ ಜಡೇಜಾ ನೂತನ ನಾಯಕರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಚೆನ್ನೈ ತಂಡಕ್ಕೆ ನಾಯಕರಾದ ಮೂರನೇ ಆಟಗಾರರಾಗಿದ್ದಾರೆ. ಧೋನಿ ನಂತರದಲ್ಲಿ ಕೆಲ ಪಂದ್ಯಗಳಿಗೆ ಸುರೇಶ್ ರೈನಾ ತಂಡವನ್ನು ಮುನ್ನಡೆಸಿದ್ದರು. ಇದೀಗ ಜಡ್ಡು ಸಿಎಸ್ಕೆ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.
2008ರಿಂದ ಚೆನ್ನೈ ತಂಡದ ನಾಯಕನಾಗಿದ್ದ ಧೋನಿ, ಈವರೆಗೆ ಐಪಿಎಲ್ನಲ್ಲಿ 204 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 121 ಪಂದ್ಯಗಳನ್ನು ಗೆದ್ದರೆ, 82 ಪಂದ್ಯಗಳನ್ನು ಸೋತಿದ್ದಾರೆ. ಉಳಿದ 4 ಪಂದ್ಯಗಳು ಟೈ ಆಗಿದೆ. ಇನ್ನು ಚೆನ್ನೈ ತಂಡವನ್ನು 4 ಬಾರಿ ಚಾಂಪಿಯನ್ ಮಾಡಿದ ಹೆಗ್ಗಳಿಕೆ ಧೋನಿ ಹೆಸರಿನಲ್ಲಿದೆ
ದಿಡೀರ್ ನಿರ್ದಾರ ಕೈಗೊಂಡ ಧೋನಿ:
ಧೋನಿ 2014 ರಲ್ಲಿ ಇದ್ದಕ್ಕಿದ್ದಂತೆ ಟೆಸ್ಟ್ ತಂಡದ ನಾಯಕತ್ವವನ್ನು ತೊರೆದರು. ಅದೇ ವೇಳೆ ಎರಡು ವರ್ಷಗಳ ನಂತರ, 2016 ರಲ್ಲಿ, ಇದ್ದಕ್ಕಿದ್ದಂತೆ ಟಿ 20 ಮತ್ತು ಏಕದಿನ ನಾಯಕತ್ವವನ್ನು ಕೊಹ್ಲಿಗೆ ಹಸ್ತಾಂತರಿಸಿದರು. ಇದೀಗ ಅದೇ ರೀತಿಯಲ್ಲಿ ಹಠಾತ್ ನಿರ್ಧಾರ ಕೈಗೊಂಡಿದ್ದು, ಜಡ್ಡುಗೆ ಚೆನ್ನೈ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ.
ಐಪಿಎಲ್ ನಲ್ಲಿ ಸಿಎಸ್ಕೆ ಪರ ಧೋನಿ ಸಾಧನೆ:
ಐಪಿಎಲ್ನಲ್ಲಿ ಸಿಎಸ್ಕೆ ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ತಂಡವಾಗಿದ್ದು, 12 ಸೀಸನ್ ಗಳಲ್ಲಿ 4 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, 5 ಬಾರಿ ರನ್ನರ್ ಆಫ್ ಆಗಿದೆ. ಒಮ್ಮೆ ಸೇಮಿಸ್ ಮತ್ತು ಪ್ಲೇ ಆಫ್ಸ್ ಹಂತಕ್ಕೆ ತಲುಪಿತ್ತು. ಇನ್ನೊಮ್ಮೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಒಟ್ಟುಇನಲ್ಲಿ ಬರೋಬ್ಬರಿ 9 ಬಾರಿ ಫೈನಲ್ ತಲುಪಿದ ಏಕಮಾತ್ರ ತಂಡವಾಗಿ ಚೆನ್ನೈ ಗುರುತಿಸಿಕೊಂಡಿದೆ. ಈ ತಂಡವನ್ನು ಮೊದಲಿನಿಂದಲೂ ಧೋನಿ ಸಾರಥ್ಯದಲ್ಲಿ ಈ ಸಾಧನೆ ಮಾಡಿದೆ.