ಮೊದಲ ಟೂರ್ನಿಯಿಂದಲೂ ಆಡುತ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದುವರೆಗೂ ಐಪಿಎಲ್ (Indian Premier League) ಟೈಟಲ್ ಗೆಲುವುದರಲ್ಲಿ ಯಶಸ್ವಿಯಾಗಿಲ್ಲ. ಪ್ರತಿ ವರ್ಷ ಟೂರ್ನಿ ಆರಂಭವಾಗುತ್ತಿದ್ದಂತೆ ಭಾರೀ ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯೋ ತಂಡ ಅಂತಿಮವಾಗಿ ಅಭಿಮಾನಿಗಳನ್ನು ನಿರಾಸೆಗೊಳಿಸೋದು ಸಾಮಾನ್ಯ ಸಂಗತಿಯಾಗಿದೆ. ತಂಡದ ಕ್ಯಾಪ್ಟನ್ಗಳು ಬದಲಾದರೂ ಆರ್ಸಿಬಿ ಹಣೆ ಬರಹ ಮಾತ್ರ ಬದಲಾಗಿಲ್ಲ ಎಂಬ ಮಾತುಗಳು ಅಭಿಮಾನಿಗಳಿಂದ ಕೇಳು ಬರುತ್ತಲೇ ಇರುತ್ತದೆ. ಮುಂದಿನ ಟೂರ್ನಿಯಲ್ಲಿಯಾದರು ಟೈಟಲ್ ಗೆಲುವಿನ ದಾಹ ನೀಗಿಸಿಕೊಳ್ಳುವ ತವಕದಲ್ಲಿ ಫ್ರಾಂಚೈಸಿಗಳಿದ್ದಾರೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಡಿಸೆಂಬರ್ 23ರಂದು ಕೊಚ್ಚಿಯಲ್ಲಿರುವ ನಡೆಯಲಿರುವ ಮಿನಿ ಹರಾಜು ಪ್ರತಿಕ್ರಿಯೆಲ್ಲಿ (IPL 2023 Mini Auction) ತಂಡದ ಬಲವನ್ನು ಹೆಚ್ಚಿಸಬಲ್ಲ ಆಟಗಾರರನ್ನು ಖರೀಸಲು ಫ್ರಾಂಚೈಸಿ ಯೋಜನೆಗಳನ್ನು ರೂಪಿಸುತ್ತಿದೆ.
2023ರ ಐಪಿಎಲ್ ಟೂರ್ನಿಗಾಗಿ ಆರ್ಸಿಬಿ ತಂಡ ತನ್ನ ಬಳಗದಲ್ಲಿದ್ದ ಐವರು ಆಟಗಾರರನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಜೇಸನ್ ಬೆಹ್ರನ್ಡ್ರಾಪ್, ಕರ್ನಾಟಕದ ಅನೀಶ್ವರ್ ಗೌತಮ್, ಲವನೀತ್ ಸಿಸೋಡಿಯಾ ಸೇರಿದಂತೆ ಚಾಮ ಮಿಲಿಂದ್, ಶೆರ್ಫೇನ್ ರುದರ್ಫೋರ್ಡ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಮಿನಿ ಹರಾಜಿನಲ್ಲಿ ಭಾಗಿಯಾಗಲು ಆರ್ಸಿಬಿ ಫ್ರಾಂಚೈಸಿ ತನ್ನ ಬಳಿ 8.75 ಕೋಟಿ ರೂಪಾಯಿಗಳನ್ನು ಹೊಂದಿದ್ದು, ಇದೇ ಮೊತ್ತದಲ್ಲಿ ಆಟಗಾರರನ್ನು ಖರೀದಿ ಮಾಡಬೇಕಿದೆ. ಮಿನಿ ಹರಾಜು ಪ್ರತಿಕ್ರಿಯೆಯಲ್ಲಿ ಭಾಗಿಯಾಗುವ ಆರ್ಸಿಬಿ ಪ್ರಮುಖವಾಗಿ ಕೆಲವು ಅಂಶಗಳನ್ನು ಗಮನಿಸಲೇಬೇಕಿದೆ. ವಿಶೇಷವಾಗಿ ಆರ್ಸಿಬಿ ಮೂರು ಅಂಶಗಳ ಬಗ್ಗೆ ಗಮನಹರಿಸಲೇ ಬೇಕಿದೆ. ಮೊದಲು ಸ್ಥಳೀಯ ಆಟಗಾರರನ್ನು ಖರೀದಿಸುವುದು, ತಂಡದ ಬೌಲಿಂಗ್ ಬೆಂಚ್ ಬಲಗೊಳಿಸುವುದು ಹಾಗೂ ಯುವ ಆಟಗಾರರನ್ನು ಗುರುತಿಸಿ ಖರೀದಿ ಮಾಡುವತ್ತಾ ಗಮನಹರಿಸಬೇಕಿದೆ.
ಸ್ಥಳೀಯ ಆಟಗಾರರ ಖರೀದಿ
ಐಪಿಎಲ್ ಆರಂಭಿಕ ಟೂರ್ನಿಗಳನ್ನ ಹೊರತುಪಡಿಸಿದರೆ ಮುಂದಿನ ಟೂರ್ನಿಯಲ್ಲಿ ಆರ್ಸಿಬಿ, ಸ್ಥಳೀಯ ಆಟಗಾರರಿಗೆ ಹೆಚ್ಚಿನ ಮಹತ್ವ ನೀಡೋದಿಲ್ಲ ಎಂಬ ಮಾತು ಪ್ರತಿ ಬಾರಿ ಕೇಳಿ ಬರುತ್ತದೆ. ಅದರಲ್ಲೂ ಈ ಬಾರಿಯ ಐಪಿಎಲ್ ಟೂರ್ನಿ ಸಂಪ್ರಾದಾಯದಂತೆ ಭಾರತದಲ್ಲೇ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಸ್ಥಳೀಯ ಪ್ರತಿಭೆಗಳನ್ನು ಖರೀದಿಸಲು ಯೋಜನೆ ರೂಪಿಸಿದ್ದಾರೆ. ಆರ್ಸಿಬಿ ತಂಡದಲ್ಲಿದ್ದ ಇಬ್ಬರು ಯುವ ಸ್ಥಳೀಯ ಆಟಗಾರನ್ನು ಬಿಡುಗಡೆಗೊಳಿಸುವ ಹಿನ್ನೆಲೆಯಲ್ಲಿ ಸ್ಥಳೀಯ ಪಿಚ್ ಲಾಭ ಪಡೆದುಕೊಳ್ಳಲು ಸ್ಥಳೀಯ ಆಟಗಾರರನ್ನು ಖರೀದಿ ಮಾಡಬೇಕಿದೆ.
ವಿಶೇಷವಾಗಿ ಪಂಜಾಬ್ ತಂಡ ತನ್ನ ಕ್ಯಾಪ್ಟನ್, ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನೇ ಹರಾಜಿಗೆ ಬಿಡುಗಡೆ ಮಾಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಹೆಚ್ಚಿನ ಪಂದ್ಯಗಳನ್ನು ಆಡಿದ್ದು, ಅವರನ್ನು ಖರೀದಿಸಿದರೆ ಆರ್ಸಿಬಿಗೆ ಲಾಭವಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಕಳೆದ ಆವೃತ್ತಿಯಲ್ಲಿ ತಂಡದಲ್ಲಿದ್ದ ಸಿಸೋಡಿಯಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದಿದ್ದರು. ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ರಜತ್ ಪಟಿದಾರ್ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಆರ್ಸಿಬಿ ಅವಕಾಶ ನೀಡಬೇಕಿದೆ.
ಯುವ ಆಟಗಾರ ಖರೀದಿಯತ್ತ ಆರ್ಸಿಬಿ ಫ್ರಾಂಚೈಸಿ ಗಮನ
ಕಳೆದ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್ಸಿಬಿ ತಂಡ ಉತ್ತಮ ಪ್ರದರ್ಶನ ತೋರಿದ್ದರೂ ಕೂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ವಿಶೇಷ ಎಂದರೇ, ಅನೂಹ್ಯವಾಗಿ ತಂಡಕ್ಕೆ ಸೇರ್ಪಡೆಯಾಗಿದ್ದ ಯುವ ಆಟಗಾರ ರಜತ್ ಪಟಿದಾರ್ ಸ್ಫೋಟಕ ಪ್ರದರ್ಶನಗಳನ್ನು ನೀಡಿದ್ದರು. ಐಪಿಎಲ್ನಲ್ಲಿ ಯುವ ಆಟಗಾರರು ಇಂತಹ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲರು. ಆದ್ದರಿಂದ ಆರ್ಸಿಬಿ ತಂಡ ಯುವ ಆಟಗಾರರ ಖರೀದಿಗೆ ಮುಂದಾಗಬೇಕಿದೆ.
ಇದಕ್ಕೆ ಮತ್ತೊಂದು ಕಾರಣವೂ ಇದ್ದು, ಸದ್ಯ ತಂಡದಲ್ಲಿ ಹಿರಿಯ ಆಟಗಾರರು ಹೆಚ್ಚಿದ್ದು, ಕ್ಯಾಪ್ಟನ್ ಫಾಫ್ಗೆ 38 ವರ್ಷ, ಮ್ಯಾಕ್ಸ್ವೆಲ್ಗೆ 34 ವರ್ಷ, ಫಿನಿಶರ್ ದಿನೇಶ್ ಕಾರ್ತಿಕ್ಗೆ 37 ವರ್ಷ ವಯಸ್ಸಾಗಿದೆ. ಉಳಿದಂತೆ ಹರ್ಷಲ್, ಸಿದ್ದಾರ್ಥ್ಕೌರ್, ಏಕೈಕ ಬ್ಯಾಕ್ಅಪ್ ಸ್ಪಿನ್ನರ್ ಕರ್ಣ್ ಶರ್ಮಾ ಕೂಡ ಹಿರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ಫ್ರಾಂಚೈಸಿಗಳು ಯುವ ಆಟಗಾರರಿಗೆ ಒತ್ತು ನೀಡುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: Tragic Death of Cricketers: ಕ್ರಿಕೆಟ್ ಮೈದಾನದಲ್ಲಿಯೇ ಉಸಿರು ಚೆಲ್ಲಿದ ಆಟಗಾರರಿವರು, ಭಾರತೀಯರೂ ಇದ್ದಾರೆ
ಹಸರಂಗ, ಹೇಜಲ್ವುಡ್ಗೆ ಬ್ಯಾಕಪ್ ಯಾರು..?
2022ರ ಆವೃತ್ತಿಯನ್ನು ಗಮನಿಸುವುದಾದರೇ ವನಿಂದು ಹರಸಂಗ, ಜೋಶ್ ಹೇಜಲ್ವುಡ್ ಆರ್ಸಿಬಿ ತಂಡದ ಪ್ರಮುಖ ಅಸ್ತ್ರಗಳಾಗಿದ್ದರು. ಇಬ್ಬರು ಆವೃತ್ತಿಯಲ್ಲಿ ಬರೋಬ್ಬರಿ 46 ವಿಕೆಟ್ ಉರುಳಿಸಿದ್ದರು. ಆದರೆ ಟೂರ್ನಿಯ ನಡುವೆ ಇಬ್ಬರಲ್ಲಿ ಯಾವುದೇ ಬೌಲರ್ ಗಾಯಗೊಂಡರೆ ತಂಡದಲ್ಲಿ ಸಾಮರ್ಥವಾಗಿ ಬ್ಯಾಕಪ್ ಮಾಡಲು ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈಗಾಗಲೇ ಬೆಹ್ರನ್ಡ್ರಾಫ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಡೇವಿಡ್ ವಿಲ್ಲಿ ಏಕೈಕ ಆಯ್ಕೆಯಾಗಿ ಕಾಣುತ್ತಿದ್ದಾರೆ. ಆದ್ದರಿಂದ ಇಬ್ಬರಿಗೂ ಬ್ಯಾಕಪ್ ಆಗಬಲ್ಲ ಆಟಗಾರನನ್ನು ಆರ್ಸಿಬಿ ಫ್ರಾಂಚೈಸಿ ಹುಡುಕಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ