ಐಪಿಎಲ್ 2023ರ 27ನೇ ಪಂದ್ಯವು ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ (Punjab Cricket Association Stadium) ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ (RCB vs PBKS) ಸೆಣಸಾಡಲಿದೆ. ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಪಂಜಾಬ್ ತನ್ನ ಹಿಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಇತ್ತ ಧೋನಿ (MS DHoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ RCB ತಂಡ ಸೋಲನ್ನಪ್ಪಿತು. ಹೀಗಾಗಿ ಆರ್‌ಸಿಬಿ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇನ್ನು, ಆರ್‌ಸಿಬಿ ತಂಡಕ್ಕೆ ಮತ್ತೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದಿರುವ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ನಾಯಕತ್ವಕ್ಕೆ ಮರಳಿದ ಕೊಹ್ಲಿ- ಫಾಫ್ ಔಟ್:
ಫಾಫ್ ಅವರು ಇಂದು ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಅವರು ವೈಶಾಕ್ ಅವರೊಂದಿಗೆ ಇಂಪ್ಯಾಕ್ಟ್ ಆಟಗಾರನಾಗಿ ಆಡುತ್ತಾರೆ. ನಾವು ಮೊದಲು ಬ್ಯಾಟ್ ಮಾಡುತ್ತಿದ್ದೆವು, ಪಿಚ್ ನಿಧಾನವಾಗಬಹುದು. ಅಲ್ಲದೇ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ನಾಯಕತ್ವ ತೊರೆದ ನಂತರ ಕೊಹ್ಲಿ ಮತ್ತೊಮ್ಮೆ ಇಂದಿನ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ.
BREAKING: Toss with a twist! King Kohli to lead RCB today as @faf1307 is nursing an injury he picked up in the last match.#PlayBold #ನಮ್ಮRCB #IPL2023 #PBKSvRCB @imVkohli pic.twitter.com/vCVhJPhlhk
— Royal Challengers Bangalore (@RCBTweets) April 20, 2023
ಪಂಜಾಬ್ ಪಿಸಿಎ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಆದರೆ ಪಿಚ್ ಹೆಚ್ಚು ವೇಗಿಗಳಿಗೆ ಸಹಾಯಕವಾಗಿದೆ. ಚೇಸಿಂಗ್ ಆದ್ಯತೆಯ ಆಯ್ಕೆಯಾಗಿದ್ದರೂ, ಪಂದ್ಯದ ಅವಧಿಯಲ್ಲಿ ಪಿಚ್ ಹೆಚ್ಚು ಬದಲಾಗುವುದಿಲ್ಲ. ಅಲ್ಲದೇ ಪಂದ್ಯವು ಮಧ್ಯಾಹ್ನ ಇರುವುದರಿಂದ ಯಾವುದೇ ಮಳೆಯ ಅಡ್ಡಿಯಿಲ್ಲ. ಹೀಗಾಗಿ ಇಂದು ಮತ್ತೊಂದು ದೊಡ್ಡ ಸ್ಕೋರ್ ಪಂದ್ಯ ನಡೆಯುವ ಸಾಧ್ಯತೆ ಇದೆ.
ಪಂಜಾಬ್ - ಆರ್‌ಸಿಬಿ ಹೆಡ್ ಟು ಹೆಡ್:
ಮೊಹಾಲಿ ಮೈದಾನವು ಪಂಜಾಬ್ ಕಿಂಗ್ಸ್ ತವರು ಮೈದಾನವಾಗಿದೆ. ಇಲ್ಲಿ ಪಂಜಾಬ್ ಒಟ್ಟು 58 ಪಂದ್ಯಗಳನ್ನಾಡಿದೆ. ಇದರಲ್ಲಿ 31 ಪಂದ್ಯಗಳಲ್ಲಿ ಗೆದ್ದರೆ, 27 ಪಂದ್ಯಗಳಲ್ಲಿ ಸೋಲನ್ನಪ್ಪಿದೆ. ಹೀಗಾಗಿ ತವರಿನಲ್ಲಿ ಪಂಜಾಬ್ ಬಲಿಷ್ಠವಾಗಿ ಕಾಣುತ್ತಿದೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಬೆಂಗಳೂರು ತಂಡ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದಿದೆ. ಇದರಲ್ಲಿಯೂ ಸಹ ಪಂಜಾಬ್ ಕಿಂಗ್ಸ್ ತಂಡ ಹೆಚ್ಚು ಬಲಿಷ್ಠವಾಗಿದೆ.
ಇದನ್ನೂ ಓದಿ: IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?
ಕೊಹ್ಲಿ - ಡುಪ್ಲೆಸಿ ನಂಬರ್ 1 ಓಪನರ್:
ಐಪಿಎಲ್ 2023ರಲ್ಲಿ ಇಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸೆ ಮತ್ತು ವಿರಾಟ್ ಕೊಹ್ಲಿ 336 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಈವರೆಗೆ ಯಾವುದೇ ಜೋಡಿ 300 ರನ್‌ಗಳ ಗಡಿ ದಾಟಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಈ ಇಬ್ಬರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್‌ನಿಂದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಇದುವರೆಗೆ 5 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ವೇಗಿ ಮೊಹಮ್ಮದ್ ಸಿರಾಜ್ ಕೂಡ ಆರ್‌ಸಿಬಿಯಿಂದ 8 ವಿಕೆಟ್ ಪಡೆದಿದ್ದಾರೆ.
ಐಪಿಎಲ್ 2023 ಅಂಕಪಟ್ಟಿ:
ಸದ್ಯ ಪಂಜಾಬ್ ಕಿಂಗ್ಸ್ ಐದು ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2ರಲ್ಲಿ ಸೋಲುವ ಮೂಲಕ 6 ಅಂಕಗಳೊಂದಿಗೆ ಐಪಿಎಲ್ 2023 ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಐದನೇ ಸ್ಥಾನದಲ್ಲಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ಪಂದ್ಯದಲ್ಲಿ 2ರಲ್ಲಿ ಗೆದ್ದು 3ರಲ್ಲಿ ಸೋಲುವ ಮೂಲಕ ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಹೀಗಾಗಿ ಆರ್ಸಿಬಿಗೆ ಈ ಬಾರಿ ಪ್ಲೇಆಫ್ ತಲುಪಲು ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಜೊತೆಗೆ ಆರ್‌ಸಿಬಿ ನೆಟ್ ರನ್ರೇಟ್ -0.318 ಇರುವುದರಿಂದ ಇಂದಿನ ಪಂದ್ಯ ಸೇರಿದಂತೆ ಮುಂಬರಲಿರುವ ಪಂದ್ಯಗಳನ್ನು ಉತ್ತಮವಾಗಿ ಗೆಲ್ಲಬೇಕಿದೆ. ಇಲ್ಲದಿದ್ದಲ್ಲಿ ಆರ್ಸಿಬಿಗೆ ಪ್ಲೇಆಫ್ ಕಷ್ಟಕರವಾಗಲಿದೆ. ಪಂಜಾಬ್ ವಿರುದ್ಧ ಇಂದು ಗೆದ್ದಲ್ಲಿ ಆರ್‌ಸಿಬಿ 8ನೇ ಸ್ಥಾನದಿಂದ 6ನೇ ಸ್ಥಾನಕ್ಕೇರಲಿದೆ.
ಆರ್‌ಸಿಬಿ - ಪಂಜಾಬ್ ಪ್ಲೇಯಿಂಗ್ 11:
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರಾನ್(ಸಿ), ಜಿತೇಶ್ ಶರ್ಮಾ(ಡಬ್ಲ್ಯೂ), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ(ಸಿ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ಡಬ್ಲ್ಯೂ), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ