RCB Vs CSK: ಕೊಹ್ಲಿ ವಿಕೆಟ್ ಪತನಕ್ಕೆ ಕಾರಣವಾದ ಧೋನಿ ಚಾಣಾಕ್ಷ ನಡೆ, ವಿಡಿಯೋ ವೈರಲ್
ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರ ವಿಕೆಟ್ ಆಚೆಗಿನ ಕೌಶಲ್ಯವು ಮತ್ತೆ ಕಂಡುಬಂದಿದ್ದು, ಆ ಕುರಿತಾದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈಗ ಮತ್ತೆ ಐಪಿಎಲ್ (IPL) ಪಂದ್ಯಾವಳಿಗಳು ಶುರುವಾಗಿದ್ದು ಭಾರತದಲ್ಲಿ ಕ್ರಿಕೆಟ್ (Cricket) ಪ್ರೀಯರಿಗೆ ಹಬ್ಬದ ಋತುಮಾನ ಆರಂಭವಾಗಿದೆ ಅಂತಲೇ ಹೇಳಬಹುದು. ಮೊನ್ನೆ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ (RCB vs CSK) ಪಂದ್ಯವು ಸಾಕಷ್ಟು ಕುತೂಹಲಭರಿತವಾಗಿತ್ತೆಂದೇ ಹೇಳಬಹುದು. ಈ ಪಂದ್ಯದಲ್ಲಿ ಸಿಎಸ್ಕೆ ತಂಡವು ತನ್ನ ಈ ಆವೃತ್ತಿಯಲ್ಲಿ ಸತತ ಸೋಲುಗಳ ನಂತರ ಮೊದಲ ಜಯ ದಾಖಲಿಸಿತು. ಅಷ್ಟಕ್ಕೂ ಸಿಎಸ್ಕೆ ತಂಡದ ಅದೃಷ್ಟ ಆಟಗಾರನೆಂದೇ ಪರಿಗಣಿಸಲಾಗುವ ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರ ವಿಕೆಟ್ ಆಚೆಗಿನ ಕೌಶಲ್ಯವು ಈ ಪಂದ್ಯದಲ್ಲಿ ಮತ್ತೆ ಕಂಡುಬಂದಿದ್ದು, ಆ ಕುರಿತಾದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಎಂಎಸ್ ಧೋನಿ ನಿಸ್ಸಂಶಯವಾಗಿ ಒಬ್ಬ ಸಮರ್ಥ ಆಟಗಾರ ಹಾಗೂ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ ಆವೃತ್ತಿಯಲ್ಲಿ ಹಲವು ಬಾರಿ ತಮ್ಮ ಚಾಣಾಕ್ಷತನದಿಂದ ಕೂಡಿದ ನಾಯಕತ್ವದ ಮೂಲಕ ಸಿಎಸ್ಕೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಅವರು ಕೇವಲ ವಿಕೆಟ್ ಕೀಪರ್ ಆಗಿ ಅಥವಾ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿಲ್ಲ. ಅವರನ್ನು ಕ್ರಿಕೆಟ್ ಅಭಿಮಾನಿಗಳು ಸಂದರ್ಭಕ್ಕನುಗುಣವಾಗಿ ರಣ ತಂತ್ರಗಳನ್ನು ಹೆಣೆಯುವ ಮೂಲಕ ಸೋಲುತ್ತಿರುವ ಪಂದ್ಯವನ್ನೂ ಸಹ ಗೆಲುವಿನ ಹಾದಿಯಲ್ಲಿ ತರುವಂತೆ ಮಾಡಲು ಸಮರ್ಥರಾಗಿದ್ದಾರೆಂದು ಹೇಳುತ್ತಾರೆ. ಅಲ್ಲದೆ, ಹಲವು ಪ್ರಸಂಗಗಳಲ್ಲಿ ಇದನ್ನು ನೋಡಲೂ ಬಹುದಾಗಿದೆ.
ಸಿಎಸ್ಕೆ - ಆರ್ಸಿಬಿ ಪಂದ್ಯ:
ಇತ್ತೀಚೆಗೆ ನಡೆದ ಆರ್ಸಿಬಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸಿಎಸ್ಕೆ ತಂಡವು 20 ಓವರ್ ಗಳಲ್ಲಿ 216 ರನ್ನುಗಳನ್ನು ಮಾಡಿ ಆರ್ಸಿಬಿಗೆ 217 ರನ್ನುಗಳ ಟಾರ್ಗೆಟ್ ನೀಡಿತ್ತು. ಈ ಸಂದರ್ಭದಲ್ಲಿ ಆರ್ಸಿಬಿ ನಾಯಕ ಸ್ಥಾನದಲ್ಲಿರುವ ಫಾಫ್ ಡು ಪ್ಲೆಸಿಸ್ ಅವರು ಬೇಗನೆ ತಮ್ಮ ವಿಕೆಟ್ ಕಳೆದುಕೊಂಡರು. ಆಗ ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿ ಗೆಲುವಿನತ್ತ ಆರ್ಸಿಬಿಯನ್ನು ಕೊಂಡೊಯ್ಯಲು ವಿರಾಟ್ ಕೊಹ್ಲಿ ಅವರ ಮೇಲೆ ಗುರುತರವಾದ ಜವಾಬ್ದಾರಿ ಬಿದ್ದಿತ್ತು.
ಸಿಎಸ್ಕೆ ತಂಡದ ಮುಖ್ಯ ಬೌಲರ್ ಆದ ಮುಕೇಶ್ ಚೌದರಿ ಪಂದ್ಯದ ಐದನೇ ಓವರ್ ಪ್ರಾರಂಭಿಸುವ ಸಂದರ್ಭದಲ್ಲಿ ವಿಕೆಟ್ ಹಿಂದೆ ಇದ್ದ ಧೋನಿ ಒಂದು ಬದಲಾವಣೆ ಮಾಡಿದರು. ಅವರು ತಮ್ಮ ಕೈಗಳನ್ನು ಬೀಸುತ್ತ ಫೈನ್ ಲೆಗ್ ಸ್ಥಳದಲ್ಲಿದ್ದ ಫೀಲ್ಡರ್ ನನ್ನು ಉದ್ದೇಶಿಸಿ ಡೀಪ್ ಲೆಗ್ ಸ್ಥಾನಕ್ಕೆ ಬರುವಂತೆ ಸೂಚಿಸಿದರು. ತದನಂತರ ಮುಕೇಶ್ ಅವರು ಕೊಹ್ಲಿಗೆ ಪ್ಯಾಡ್ ಗಳ ಮಟ್ಟದಲ್ಲಿ ಬರುವಂತೆ ಶಾರ್ಟ್ ಎಸೆತ ಎಸೆದರು. ಆಗ ಕೊಹ್ಲಿ ಅವರಿಗೆ ಫೀಲ್ಡಿಂಗ್ ನಲ್ಲಿ ಆಗತಾನೆ ಆಗಿದ್ದ ಬದಲಾವಣೆಯ ಅರಿವೇ ಇಲ್ಲದಂತೆ ಚೆಂಡನ್ನು ಡೀಪ್ ಸ್ಕ್ವೇರ್ ನತ್ತ ಜೋರಾಗಿ ಬಾರಿಸಿದರು. ಆಗ ನೇರವಾಗಿ ಕ್ಯಾಚ್ ರೂಪದಲ್ಲಿ ಬಂದ ಚೆಂಡನ್ನು ಶಿವಂ ದುಬೆ ಅವರು ನಿರಾಯಾಸವಾಗಿ ತಮ್ಮ ಕೈಗಳಿಂದ ಹಿಡಿಯುವ ಮೂಲಕ ಕೊಹ್ಲಿ ಅವರು ಪೆವಿಲಿಯನ್ ಗೆ ಮರಳುವಂತೆ ಮಾಡಿದರು.
ಸದ್ಯ, ಧೋನಿ ಅವರ ಈ ಮುಂದಾಲೋಚನೆಯ ನಡೆ ಹೇಗೆ ವಿರಾಟ್ ಅವರ ವಿಕೆಟ್ ಉರುಳಿಸಲು ಕಾರಣವಾಯಿತೆಂಬುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ಸಾಕಷ್ಟು ಧೋನಿ ಅಭಿಮಾನಿಗಳು ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ. ಹಲವರು ತಮ್ಮದೆ ಆದ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟ್ವಿಟ್ ಮಾಡಿರುವ ಕ್ರಿಕೆಟ್ ಅಭಿಮಾನಿಯೊಬ್ಬರು ಧೋನಿ ಅವರ ನಡೆಯನ್ನು ಕುರಿತು "ಕೊಹ್ಲಿ ಅವರ ವಿಕೆಟ್ ಪಡೆಯಲು ಧೋನಿ ರಚಿಸಿದ ಬಲೆಯಂತಹ ಫೀಲ್ಡ್" ಎಂದು ಬರೆದುಕೊಂಡಿದ್ದಾರೆ.
ಮಂಗಳವಾರದಂದು ಧೋನಿ ಅವರ ಈ ನಡೆ ಸಾಕಷ್ಟು ಟ್ರೆಂಡ್ ಆಗುತ್ತಿತ್ತು. ಕೇವಲ ಇದು ಮಾತ್ರವಲ್ಲದೆ ಅಂದು ಮುಕೇಶ್ ಚೌದರಿ ಮೂರು ಕ್ಯಾಚ್ ಗಳನ್ನು ಬಿಟ್ಟ ಹೊರತಾಗಿಯೂ ಧೋನಿ ಅವರನ್ನು ಪ್ರೋತ್ಸಾಹಿಸಿದ ಬಗೆ ಎಲ್ಲ ನೆಟಿಜನ್ನರ ಹೃದಯ ಗೆದ್ದಿದೆ ಅಂತಾನೇ ಹೇಳಬಹುದು. ಆ ದಿನ ನಿಜಕ್ಕೂ ಸಿಎಸ್ಕೆಗೆ ಅದೃಷ್ಟದ ದಿನವಾಗಿತ್ತೆಂದು ಹೇಳಬಹುದು. ಏಕೆಂದರೆ, ಈ ಆವೃತ್ತಿಯಲ್ಲಿ ಅವರು ಇಲ್ಲಿಯವರೆಗೂ ಯಾವ ಪಂದ್ಯಗಳನ್ನು ಗೆದ್ದಿರಲಿಲ್ಲ. ಆದರೆ ಆರ್ಸಿಬಿ ಜೊತೆಗಿನ ಗೆಲುವಿನ ಮೂಲಕ ಸಿಎಸ್ಕೆ ತನ್ನ ಪ್ರಥಮ ಗೆಲುವನ್ನು ದಾಖಲಿಸಿದ್ದು ಮುಂದಿನ ಪಂದ್ಯಾವಳಿಗಳಿಗೆ ಆತ್ಮವಿಶ್ವಾಸದಿಂದ ಸಜ್ಜಾಗುತ್ತಿದೆ ಎಂದು ಹೇಳಬಹುದು.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ