ಐಪಿಎಲ್ ಕ್ವಾಲಿಫೈಯರ್-2: ರೋಚಕ ಪಂದ್ಯದಲ್ಲಿ ಕೆಕೆಆರ್​ಗೆ ಸೋಲು: ಫೈನಲ್​ಗೆ ಲಗ್ಗೆ ಇಟ್ಟ ವಿಲಿಯಮ್ಸನ್ ಪಡೆ

news18
Updated:May 25, 2018, 11:35 PM IST
ಐಪಿಎಲ್ ಕ್ವಾಲಿಫೈಯರ್-2: ರೋಚಕ ಪಂದ್ಯದಲ್ಲಿ ಕೆಕೆಆರ್​ಗೆ ಸೋಲು: ಫೈನಲ್​ಗೆ ಲಗ್ಗೆ ಇಟ್ಟ ವಿಲಿಯಮ್ಸನ್ ಪಡೆ
news18
Updated: May 25, 2018, 11:35 PM IST
ನ್ಯೂಸ್ 18 ಕನ್ನಡ

ಕೋಲ್ಕತ್ತಾ (ಮೇ. 25): ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ನಡುವಣ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ತಂಡ 13 ರನ್​ಗಳ ಭರ್ಜರಿ ಸಾಧಿಸಿದೆ. ಈ ಮೂಲಕ ವಿಲಿಯಮ್ಸನ್ ನಡೆ ಫೈನಲ್​ಗೆ ಲಗ್ಗೆ ಇಟ್ಟಿದ್ದು, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಶಿಖರ್ ಧವನ್ ಹಾಗೂ ವೃದ್ಧಿಮಾನ್ ಸಾಹ ಮೊದಲನೇ ವಿಕೆಟ್​ಗೆ 56 ರನ್​ಗಳ ಕಾಣಿಕೆ ನೀಡಿದರು. 34 ರನ್ ಗಳಿಸಿ ಧವನ್ ಅವರು ಕುಲ್ದೀಪ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿ ಔಟ್ ಆದರೆ, ಬಂದ ಬೆನ್ನಲ್ಲೆ ನಾಯಕ ಕೇನ್ ವಿಲಿಯಮ್ಸನ್ ಸಹ ಕೇವಲ 3 ರನ್​ಗೆ ನಿರ್ಗಮಿಸಿದರು. ಬಳಿಕ ಶಕಿಬ್ ಅಲ್ ಹಸನ್ ಜೊತೆ ಸಾಹ ಅವರು ಇನ್ನಿಂಗ್ಸ್ ಕಟ್ಟಲು ಮುಂದಾದರಾದರು ಚಾವ್ಲಾ ಎಸೆತದಲ್ಲಿ ಸಾಹ 35 ರನ್​ಗೆ ಔಟ್ ಆಗಿ ಮತ್ತೊಂದು ಆಘಾತ ನೀಡಿದರು. ನಂತರ ಶಕಿಬ್ ಹಾಗು ದೀಪಕ್ ಹೂಡ ಒಂದಿಷ್ಟು ಸಮಯ ಕ್ರೀಸ್​ನಲ್ಲಿ ಇದ್ದರಾದರು ರನ್ ಕಲೆಹಾಕಲು ಪರದಾಡಿದರು. ಶಕಿಬ್ 28 ರನ್ ಗಳಿಸಿ ರನೌಟ್​ಗೆ ಬಲಿಯಾದರೆ, ಹೂಡ 19 ರನ್​ಗೆ ಸುಸ್ತಾದರು. ಕೊನೆ ಹಂತದಲ್ಲಿ ರಶೀದ್ ಖಾನ್ ಅವರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಪರಿಣಾಮ ತಂಡದ ಮೊತ್ತ 174ಕ್ಕೆ ತಲುಪಿತು. ರಶೀದ್ ಕೇವಲ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ ಅಜೇಯ 34 ರನ್ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಹೈದರಾಬಾದ್ 20 ಓವರ್​​ಗೆ 7 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿತು. ಕೋಲ್ಕತ್ತಾ ಪರ ಕುಲ್ದೀಪ್ ಯಾದವ್ 2 ವಿಕೆಟ್ ಕಿತ್ತರೆ ಶಿವಂ ಮಾವಿ, ಸುನೀಲ್ ನರೈನ್ ಹಾಗೂ ಪಿಯುಷ್ ಚಾವ್ಲಾ ತಲಾ 1 ವಿಕೆಟ್ ಪಡೆದರು.

ಇತ್ತ 175 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಕ್ರಿಸ್ ಲಿನ್ ಹಾಗೂ ಸುನೀಲ್ ನರೈನ್ ಸ್ಪೋಟಕ ಆರಂಭ ನೀಡಿದರು. ಮೊದಲನೇ ವಿಕೆಟ್​ಗೆ ಈ ಜೋಡಿ ಕೇವಲ 3 ಓವರ್​ನಲ್ಲಿ 40 ರನ್​ಗಳ ಜೊತೆಯಾಟ ನೀಡಿತು. ಸುನೀಲ್ ನರೈನ್ 26 ರನ್ ಗಳಿಸಿ ಸಿದ್ಧಾರ್ಥ್​​ ಕೌಲ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಲಿನ್ ಜೊತೆ ಒಂದಾದ ನಿತೀಶ್ ರಾಣ ಕೂಡ ಸ್ಪೋಟಕ ಆಟಕ್ಕೆ ಮುಂದಾದರು. ರಾಣ ಹಾಗೂ ಲಿನ್ 2ನೇ ವಿಕೆಟ್​ಗೆ 47 ರನ್​ಗಳ ಜೊತೆಯಾಟ ನೀಡಿದರು. ನಿತೀಶ್ ರಾಣ 22 ರನ್ ಗಳಿಸಿರುವಾಗ ರನೌಟ್​​ಗೆ ಬಲಿಯಾಗಿ ನಿರ್ಗಮಿಸಿದರು. ಬಳಿಕ ಬೌಲಿಂಗ್ ಮಾಡಲು ಬಂದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೆಕೆಆರ್ ಬ್ಯಾಟ್ಸ್​ಮನ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ಗೆ ಅಟ್ಟಿದರು. ನಾಯಕ ದಿನೇಶ್ ಕಾರ್ತಿಕ್(8) ಅವರು ಶಕಿಬ್ ಅವರ ಎಸೆತದಲ್ಲಿ ಬೌಲ್ಡ್ ಆದರೆ, 48 ರನ್ ಗಳಿಸಿದ್ದ ಕ್ರಿಸ್  ಲಿನ್, ರಾಬಿನ್ ಉತ್ತಪ್ಪ(2) ಹಾಗೂ ಆಂಡ್ರೋ ರಸೆಲ್(3) ರಶೀದ್​ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಕ್ಷಣದಲ್ಲಿ ಶುಭ್ಮನ್ ಗಿಲ್ ಗೆಲುವಿಗಾಗಿ ಹೋರಾಟ ನಡೆಸಿದರಾದರು ಕೊನೆಯ ಓವರ್​ನಲ್ಲಿ ಔಟ್ ಆಗಿ ಹೈದರಾಬಾದ್ ಗೆಲುವನ್ನು ಖಚಿತ ಪಡಿಸಿದರು. ಅಂತಿಮವಾಗಿ ಕೋಲ್ಕತ್ತಾ 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 161 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ರಶೀದ್ ಖಾನ್ 3, ಸಿದ್ಧಾರ್ಥ್​​ ಕೌಲ್ 2, ಬ್ರಾಥ್​ವೈಟ್ 2 ಹಾಗೂ ಶಕಿಬ್ 1 ವಿಕೆಟ್ ಪಡೆದು ಮಿಮಚಿದರು. ಈ ಮೂಲಕ ಹೈದರಾಬಾದ್ ತನ್ನ ಬೌಲಿಂಗ್ ಶಕ್ತಿಯನ್ನು ಮತ್ತೆ ತೋರ್ಪಡಿಸಿದ್ದು, ಭಾನುವಾರ ಧೋನಿ ಪಡೆಗೆ ಸವಾಲೆಸೆಯಲಿದೆ.

ಸಂಕ್ಷಿಪ್ತ ಸ್ಕೋರ್:

ಸನ್​ರೈಸರ್ಸ್​ ಹೈದರಾಬಾದ್: 174/7

(ವೃದ್ಧಿಮಾನ್ ಸಾಹ 35, ರಶೀದ್ ಖಾನ್ 34*, ಕುಲ್ದೀಪ್ ಯಾದವ್ 29/2)
Loading...

ಕೋಲ್ಕತ್ತಾ ನೈಟ್ ರೈಡರ್ಸ್​: 161/9

(ಕ್ರಿಸ್ ಲಿನ್ 48, ಶುಭ್ಮನ್ ಗಿಲ್ 30, ರಶೀದ್ ಖಾನ್ 19/3, ಸಿದ್ಧಾರ್ಥ್​​ ಕೌಲ್ 32/2)

ಪಂದ್ಯ ಶ್ರೇಷ್ಠ: ರಶೀದ್ ಖಾನ್

LIVE BLOG: ಹೈದರಾಬಾದ್​ಗೆ 13 ರನ್​ಗಳ ಭರ್ಜರಿ ಜಯ
First published:May 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...