ಐಪಿಎಲ್ ಫೈನಲ್​ನಲ್ಲಿ ಚೆನ್ನೈ-ಹೈದರಾಬಾದ್ ಕಾದಾಟ: ಯಾರ ಮಡಿಲಿಗೆ ಚಾಂಪಿಯನ್ ಪಟ್ಟ..?

news18
Updated:May 27, 2018, 5:43 PM IST
ಐಪಿಎಲ್ ಫೈನಲ್​ನಲ್ಲಿ ಚೆನ್ನೈ-ಹೈದರಾಬಾದ್ ಕಾದಾಟ: ಯಾರ ಮಡಿಲಿಗೆ ಚಾಂಪಿಯನ್ ಪಟ್ಟ..?
news18
Updated: May 27, 2018, 5:43 PM IST
ನ್ಯೂಸ್ 18 ಕನ್ನಡ

ಮುಂಬೈ (ಮೇ. 27): ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​​ರೈಸರ್ಸ್​ ಹೈದರಾಬಾದ್ ತಂಡಗಳ ನಡುವೆ ಅಂತಿಮ ಹಣಾಹಣಿ ನಡೆಯಲಿದ್ದು ಫೈನಲ್ ಪಂದ್ಯಕ್ಕೆ ಐಪಿಎಲ್ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಮೂರು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಧೋನಿ ನೇತೃತ್ವದ ಚೆನ್ನೈ ತಂಡ ಏಳನೇ ಭಾರಿ ಫೈನಲ್​ಗೆ ಲಗ್ಗೆ ಇಟ್ಟಿದ್ದು ಕಿರೀಟ ಧರಿಸುವ ಫೆವರೇಟ್ ತಂಡವಾಗಿದೆ. 2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದ  ಸನ್​​ರೈಸರ್ಸ್​ ಹೈದ್ರಾಬಾದ್ ತಂಡ 2ನೇ ಬಾರಿ ಚಾಂಪಿಯನ್ ಆಗುವ ತವಕದಲ್ಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಚೆನ್ನೈ ದೈತ್ಯ ಬ್ಯಾಟಿಂಗ್ ಬಲ ಹೊಂದಿದ್ದರೆ ಹೈದ್ರಾಬಾದ್ ತಂಡ ತನ್ನ ಬೌಲಿಂಗ್ ಶಕ್ತಿಯಿಂದಲೇ ಎದುರಾಳಿಗರಿಗೆ ಮಣ್ಣು ಮುಕ್ಕಿಸುತ್ತಿದೆ.

ಕಳೆದ ಕೋಲ್ಕತ್ತಾ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೌಲರ್​ಗಳ ಅಮೋಘ ಪ್ರದರ್ಶನದಿಂದ ಹೈದರಾಬಾದ್ ಗೆಲುವು ಕಂಡಿತ್ತು. ಅದರಲ್ಲೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ರಶೀದ್ ಖಾನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್​ನಲ್ಲಿ ಕೇವಲ 10 ಎಸೆತಗಳಲ್ಲಿ ಅಜೇಯ 34 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಬೌಲಿಂಗ್​ನಲ್ಲೂ ರಶೀದ್ 4 ಓವರ್​​ಗೆ ಕೇವಲ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತಿದ್ದರು. ಹಾಗಾಗಿ ರಶೀದ್ ಭಯ ಚೆನ್ನೈಗೆ ಈಗಾಗಲೇ ಶುರುವಾಗಿದೆ. ಇನ್ನು ಸಿದ್ಧಾರ್ಥ್​​ ಕೌಲ್ ಸಹ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದು 16 ಪಂದ್ಯದಲ್ಲಿ 21 ವಿಕೆಟ್ ಕಿತ್ತು ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇವರ ಜೊತೆ ಶಕಿಬ್ ಅಲ್ ಹಸನ್ ಹಾಗೂ ಬ್ರಾಥ್​​ವೈಟ್ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಬ್ಯಾಟಿಂಗ್​ ವಿಭಾಗದಲ್ಲಿ ಕೊಂಚ ಮಂಕಾಗಿರುವ ಸನ್​ರೈಸರ್ಸ್​​ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಶಿಖರ್ ಧವನ್ ಕಳೆದ ಎರಡೂ ಪಂದ್ಯದಲ್ಲಿ ಬೇಗನೆ ಔಟ್ ಆಗಿದ್ದು ತಂಡದಲ್ಲಿ ಆತಂಕ ಮೂಡಿಸಿದೆ. ಇನ್ನು ಮನೀಶ್ ಪಾಂಡೆ, ವೃದ್ಧಿಮಾನ್ ಸಾಹ, ದೀಪಕ್ ಹೂಡ ಅವರ ಬ್ಯಾಟ್​ ನಿಂದಲು ರನ್​ ಬರುತ್ತಿಲ್ಲ. ಹಾಗಾಗಿ ಬ್ಯಾಟಿಂಗ್ ವೈಫಲ್ಯದಿಂದ ಹೈದರಾಬಾದ್ ಹೊರಬರಬೇಕಿದ್ದು ಇಂದಿನ ಮಹತ್ವದ ಪಂದ್ಯದಲ್ಲಿ ತಮ್ಮ ಖದರ್ ತೋರಿಸಬೇಕಿದೆ.

ಇತ್ತ ಎರಡು ವರ್ಷದ ನಿಷೇಧದ ಬಳಿಕ ಭರ್ಜರಿ ಕಮ್​ಬ್ಯಾಕ್ ಮಾಡಿರುವ ಚೆನ್ನೈ ತಂಡ ಹೈದರಾಬಾದ್ ಜೊತೆಗಿನ ಎರಡೂ ಲೀಗ್ ಪಂದ್ಯ ಹಾಗೂ ಕಳೆದ ಕ್ವಾಲಿಫೈಯರ್ ಪಂದ್ಯದಲ್ಲೂ ಗೆದ್ದಿದ್ದು ಇಂದು ಕೂಡ ಅದೇ ಜಯದ ವಿಶ್ವಾಸದಲ್ಲಿದೆ. ಶೇನ್ ವಾಟ್ಸನ್ ಹಾಗೂ ಅಂಬಾಟಿ ರಾಯುಡು ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ರಾಯುಡು ಟೂರ್ನಿಯುದ್ದಕ್ಕು ಅದ್ಭುತ ಪ್ರದರ್ಶನ ತೋರಿದ್ದು 15 ಪಂದ್ಯಗಳಲ್ಲಿ 586 ರನ್ ಕಲೆಹಾಕಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಶೂನ್ಯಕ್ಕೆ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಫಾಫ್ ಡುಪ್ಲೆಸಿಸ್ ಅವರ ಅಜೇಯ 67 ರನ್​ಗಳ ಎಚ್ಚರಿಕೆಯ ಆಟದ ಫಲವಾಗಿ ಚೆನ್ನೈ ತಂಡ ಫೈನಲ್​ಗೆ ಕಾಲಿಡಲು ಕಾರಣವಾಯಿತು. ಹಾಗಾಗಿ ಕಳೆದ ಪಂದ್ಯದ ಕಳಪೆ ಬ್ಯಾಟಿಂಗ್​ನಿಂದ ತಂಡ ಪಾಠ ಕಲಿಯಬೇಕಿದ್ದು ಎಂ. ಎಸ್. ಧೋನಿ, ಸುರೇಶ್ ರೈನಾ, ಡ್ವೇನ್ ಬ್ರಾವೋ ರನ್ ಮಳೆ ಸುರಿಸಬೇಕಿದೆ. ಬೌಲಿಂಗ್​ನಲ್ಲಿ ಬ್ರಾವೋ, ಲುಂಗಿ ಎನ್​ಗಿಡಿ, ಶಾರ್ದೂಲ್ ಥಾಕೂರ್ ಉತ್ತಮ ಲಯದಲ್ಲಿ ಬೌಲಿಂಗ್ ಮಾಡುತ್ತಿದ್ದು, ಇವರಿಗೆ ಜೊತೆ ದೀಪಕ್ ಚಾಹರ್, ಜಡೇಜಾ, ಹರ್ಭಜನ್ ಸಿಂಗ್ ಸಾತ್ ನೀಡಬೇಕಿದೆ.

ಒಟ್ಟಾರೆ ಇಂದಿನ ಹೈ ವೋಲ್ಟೇಜ್ ಪಂದ್ಯಕ್ಕೆ ಎರಡೂ ತಂಡಗಳು ಕಠಿಣ ತಾಲೀಮಿನಲ್ಲಿ ತೊಡಗಿದ್ದು, 7 ಗಂಟೆಗೆ ರೋಚಕ ಫೈನಲ್ ಪಂದ್ಯ ಆರಂಭವಾಗಲಿದೆ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ