ಐಪಿಎಲ್ ಫೈನಲ್: ಶೇನ್ ವಾಟ್ಸನ್ ಸಿಡಿಲಬ್ಬರಕ್ಕೆ ಹೈದರಾಬಾದ್ ತಲ್ಲಣ: 3ನೇ ಬಾರಿ ಐಪಿಎಲ್ ಕಿರೀಟ ತೊಟ್ಟ ಧೋನಿ ಪಡೆ

news18
Updated:May 27, 2018, 11:22 PM IST
ಐಪಿಎಲ್ ಫೈನಲ್: ಶೇನ್ ವಾಟ್ಸನ್ ಸಿಡಿಲಬ್ಬರಕ್ಕೆ ಹೈದರಾಬಾದ್ ತಲ್ಲಣ: 3ನೇ ಬಾರಿ ಐಪಿಎಲ್ ಕಿರೀಟ ತೊಟ್ಟ ಧೋನಿ ಪಡೆ
news18
Updated: May 27, 2018, 11:22 PM IST
ನ್ಯೂಸ್ 18 ಕನ್ನಡ

ಮುಂಬೈ (ಮೇ. 27): ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳ ನಡುವಣ ಐಪಿಎಲ್ 11ನೇ ಆವೃತ್ತಿಯ ಫೈನಲ್ ಕದನದಲ್ಲಿ ಚೆನ್ನೈ ತಂಡ 8 ವಿಕೆಟ್ಸ್​ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಧೋನಿ ಪಡೆ 3ನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶ್ರೀವತ್ಸ್​ ಗೋಸ್ವಾಮಿ ಕೇವಲ 5 ರನ್​ಗೆ ಔಟ್ ಆಗುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ಶಿಖರ್ ಧವನ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಎಚ್ಚರಿಕೆಯ ಆಟಕ್ಕೆ ಮುಂದಾದರು. 2ನೇ ವಿಕೆಟ್​ಗೆ ಈ ಜೋಡಿ 51 ರನ್​​ಗಳ ಕಾಣಿಕೆ ನೀಡಿತು. ಈ ಸಂದರ್ಭ ಬೌಲಿಂಗ್ ಮಾಡಲು ಬಂದ ರವೀಂದ್ರ ಜಡೇಜಾ 26 ರನ್ ಗಳಿಸಿದ್ದ ಶಿಖರ್ ಧವನ್ ಅವರನ್ನು ಪೆವಿಲಿಯನ್​ಗೆ ಅಟ್ಟಿ ಇವರಿಬ್ಬರ ಜೊತೆಯಾಟಕ್ಕೆ ಅಂತ್ಯ ಹಾಡಿದರು. ನಂತರ ಶಕಿಬ್ ಅಲ್ ಹಸನ್ ಜೊತೆ ಒಂದಾದ ವಿಲಿಯಮ್ಸನ್ ಬಿರುಸಿನ ಆಟಕ್ಕೆ ಮುಂದಾದರು. ಆದರೆ 47 ರನ್ ಗಳಿಸಿದ್ದಾಗ ವಿಲಿಯಮ್ಸನ್ ಅವರು ಕರ್ಣ್ ಶರ್ಮಾ ಅವರ ಎಸೆತದಲ್ಲಿ ಸ್ಟಂಪ್ ಔಟ್​ಗೆ ಬಲಿಯಾಗಿ ನಿರ್ಗಮಿಸಿದರು. ಇತ್ತ 23 ರನ್ ಗಳಿಸಿದ್ದ ಶಕಿಬ್ ಅಲ್ ಹಸನ್ ಕೂಡ ವಿಲಿಯಮ್ಸನ್ ಬೆನ್ನಲ್ಲೆ ನಿರ್ಗಸಿದರು. ಬಳಿಕ ಕೊನೆ ಹಂತದಲ್ಲಿ ಒಂದಾದ ಯುಸುಫ್ ಪಠಾಣ್ ಹಾಗೂ ಬ್ರಾಥ್​​ವೈಟ್ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಏರಿಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್​​​ಗೆ 6 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಯುಸುಫ್ ಪಠಾಣ್ ಅಜೇಯ 45 ರನ್ ಸಿಡಿಸಿದರೆ, ಬ್ರಾಥ್​ವೈಟ್ 21 ರನ್ ಬಾರಿಸಿ 20ನೇ ಓವರ್​ನ ಕೊನೆಯ ಎಸೆತದಲ್ಲಿ ಔಟ್ ಆದರು. ಚೆನ್ನೈ ಪರ ಲುಂಗಿ ಎನ್​ಗಿಡಿ, ಶಾರ್ದೂಲ್ ಥಾಕೂರ್, ಕರ್ಣ್ ಶರ್ಮಾ, ಡ್ವೇನ್ ಬ್ರಾವೋ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

ಇತ್ತ 179 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಫಾಫ್ ಡುಪ್ಲೆಸಿಸ್ ಕೇವಲ 10 ರನ್​ಗೆ ಔಟ್ ಆಗಿ ಆರಂಭದಲ್ಲಿ ಆಘಾತ ನೀಡಿದರು. ಬಳಿಕ ಶೇನ್ ವಾಟ್ಸನ್ ಹಾಗೂ ಸುರೇಶ್ ರೈನಾ ಸ್ಪೋಟಕ ಆಟಕ್ಕೆ ಮುಂದಾದರು. ಹೈದರಾಬಾದ್ ಬೌಲರ್​ಗಳ ಬೆಂಡೆತ್ತಿದ ವಾಟ್ಸನ್ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. 2ನೇ ವಿಕೆಟ್​ಗೆ ಈ ಜೋಡಿ 117 ರನ್​ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಖಚಿತ ಪಡಿಸಿದರು. ವಾಟ್ಸನ್​ಗೆ ಉತ್ತಮ ಸಾಥ್ ನೀಡಿದ ಸುರೇಶ್ ರೈನಾ 32 ರನ್​ಗೆ ಪೆವಿಲಿಯನ್ ಹಾದಿ ಹಿಡಿದರು. ನಂತರ ಕೊನೆ ಹಂತದಲ್ಲಿ ರಾಯುಡು ಜೊತೆ ಒಂದಾದ ವಾಟ್ಸನ್ ಸಿಡಿಲಬ್ಬರದ ಬ್ಯಾಟಿಂಗ್​​ನೊಂದಿಗೆ ಶತಕ ಸಿಡಿಸಿ ಇನ್ನು 9 ಬೌಲ್ ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದು ಕೊಟ್ಟರು. ವಾಟ್ಸನ್ 57 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸ್​ನೊಂದಿಗೆ ಅಜೇಯ 117 ರನ್ ಸಿಡಿಸಿದರೆ, ರಾಯುಡು 16 ರನ್ ಗಳಿಸಿ ಅಜೇಯರಾಗಿ ಉಳಿದರು. ಹೈದರಾಬಾದ್ ಪರ ಸಂದೀಪ್ ಶರ್ಮಾ ಹಾಗೂ ಬ್ರಾಥ್​​ವೈಟ್ ತಲಾ 1 ವಿಕೆಟ್ ಪಡೆದರು. ಈ ಮೂಲಕ ಚೆನ್ನೈ 8 ವಿಕೆಟ್ಸ್​ಗಳ ಭರ್ಜರಿ ಜಯದೊಂದಿಗೆ 3ನೇ ಬಾರಿ ಐಪಿಎಲ್ ಕಿರೀಟ ತೊಟ್ಟಿತು.

ಸಂಕ್ಷಿಪ್ತ ಸ್ಕೋರ್:

ಸನ್​ರೈಸರ್ಸ್​​ ಹೈದರಾಬಾದ್: 178/6

(ಕೇನ್ ವಿಲಿಯಮ್ಸನ್ 47, ಯುಸುಫ್ ಪಠಾಣ್ 45*, ಲುಂಗಿ ಎನ್​ಗಿಡಿ 26/1)
Loading...

ಚೆನ್ನೈ ಸೂಪರ್ ಕಿಂಗ್ಸ್​: 181/2 (18.3 ಓವರ್​)

(ಶೇನ್ ವಾಟ್ಸನ್ 117*, ಸುರೇಶ್ ರೈನಾ 32, ಬ್ರಾಥ್​​ವೈಟ್ 27/1)

ಪಂದ್ಯ ಶ್ರೇಷ್ಠ: ಶೇನ್ ವಾಟ್ಸನ್

LIVE BLOG: 3ನೇ ಬಾರಿ ಐಪಿಎಲ್ ಕಿರೀಟ ತೊಟ್ಟ ಧೋನಿ ಪಡೆ
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...