ಕಿರಿಯರ ಫುಟ್ಬಾಲ್: ಅರ್ಜೆಂಟೀನಾ, ಇರಾಕ್ ವಿರುದ್ಧ ಭಾರತೀಯರಿಗೆ ಐತಿಹಾಸಿಕ ಗೆಲುವು


Updated:August 6, 2018, 1:27 PM IST
ಕಿರಿಯರ ಫುಟ್ಬಾಲ್: ಅರ್ಜೆಂಟೀನಾ, ಇರಾಕ್ ವಿರುದ್ಧ ಭಾರತೀಯರಿಗೆ ಐತಿಹಾಸಿಕ ಗೆಲುವು
ಭಾರತ-ಅರ್ಜೆಂಟೀನಾ ಅಂಡರ್-20 ಫುಟ್ಬಾಲ್ ತಂಡಗಳ ಹಣಾಹಣಿ

Updated: August 6, 2018, 1:27 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 06): ನಿನ್ನೆ ಭಾನುವಾರ ಭಾರತೀಯ ಫುಟ್ಬಾಲ್ ಪಾಲಿಗೆ ಅವಿಸ್ಮರಣೀಯ ದಿನವಾಗಿತ್ತು. ವಿಶ್ವ ಫುಟ್ಬಾಲ್ ರಂಗದಲ್ಲಿ ಮಲಗಿರುವ ದೈತ್ಯ ಎಂದೇ ಕರೆಯಲ್ಪಡುವ ಭಾರತ ಈಗ ಒಮ್ಮಿಂದೊಮ್ಮೆಗೇ ಎದ್ದು ಮೈಕೊಡವಿಕೊಳ್ಳುತ್ತಿರುವಂಥ ಅನುಭವವಾಗಿದೆ. ಭಾರತದ ಕಿರಿಯರ ತಂಡಗಳು ನಿನ್ನೆ ಎರಡು ಅಮೋಘ ಗೆಲುವು ದಾಖಲಿಸಿ ಎಲ್ಲರನ್ನೂ ಅಚ್ಚರಿಗೊಳಿಸಿವೆ.

ಅಂಡರ್-20 ಹುಡುಗರ ಶಾಕ್:
ಸ್ಪೇನ್ ದೇಶದಲ್ಲಿ ನಡೆಯುತ್ತಿರುವ ಅಂಡರ್-20 ಕೋಟಿಫ್ ಕಪ್ ಟೂರ್ನಿಯಲ್ಲಿ ವಿಶ್ವ ದಿಗ್ಗಜ ಅರ್ಜೆಂಟೀನಾ ವಿರುದ್ಧ ಭಾರತೀಯರು 2-1 ಗೋಲುಗಳಿಂದ ಸೋಲಿಸಿ ದಿಗ್ಭ್ರಮೆ ಮೂಡಿಸಿದ್ದಾರೆ. ಈ ಟೂರ್ನಿಯ ಕೊನೆಯ ಪಂದ್ಯದಲ್ಲಿ ಭಾರತಿಯರಿಗೆ ಸಿಕ್ಕ ಚೊಚ್ಚಲ ಜಯ ಇದಾಗಿದೆ. ಮೊದಲೆರಡು ಪಂದ್ಯದಲ್ಲಿ ರಿಯಲ್ ಮುರ್ಷಿಯಾ ಮತ್ತು ಮಾರಿಟುವಾನಾ ತಂಡಗಳ ವಿರುದ್ಧ ಹೀನಾಯ ಸೋಲುಂಡ ಭಾರತೀಯರು ಮೂರನೇ ಪಂದ್ಯದಲ್ಲಿ ತಮ್ಮ ಆಟದ ಪ್ರದರ್ಶನ ಉತ್ತಮಪಡಿಸಿಕೊಂಡು ವೆನಿಜುವೆಲಾ ಎದುರು ಡ್ರಾ ಸಾಧಿಸಿತು. ಅದಾದ ನಂತರ ಅರ್ಜೆಂಟೀನಾಗೆ ಬಿಗ್ ಶಾಕ್ ಕೊಟ್ಟು ತನ್ನ ಅಭಿಯಾನ ಅಂತ್ಯಗೊಳಿಸಿದೆ.

ಅರ್ಜೆಂಟೀನಾ ವಿರುದ್ಧದ ಪಂದ್ಯ ಪ್ರಾರಂಭಗೊಂಡ ಐದೇ ನಿಮಿಷದಲ್ಲಿ ದೀಪಕ್ ಟಾಂಗ್ರಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಭಾರತವನ್ನು ತೀರಾ ಲಘುವಾಗಿ ಪರಿಗಣಿಸಿದ ಬಲಿಷ್ಠ ಅರ್ಜೆಂಟೀನಾ ತಂಡ ಈ ಪಂದ್ಯದಲ್ಲಿ ಕಂಬ್ಯಾಕ್ ಮಾಡಲು ಹರಸಾಹಸ ಮಾಡಿತು. ಆದರೆ, ಭಾರತೀಯರ ಕೆಚ್ಚೆದೆಯ ಡಿಫೆನ್ಸ್ ಬಹಳ ಸ್ಟ್ರಾಂಗ್ ಆಗಿತ್ತು. 54ನೇ ನಿಮಿಷದಲ್ಲಿ ಜಾಧವ್ ಅವರು ರೆಡ್ ಕಾರ್ಡ್ ಪಡೆದು ಹೊರಹೋದ ಬಳಿಕ ಭಾರತೀಯ ಪಾಳೆಯದಲ್ಲಿ ಆತಂಕ ಶುರುವಾಗಿತ್ತು. ಆದರೆ, ಈ ಆತಂಕ ಹೆಚ್ಚು ಹೊತ್ತು ಉಳಿಯಲಿಲ್ಲ. 68ನೇ ನಿಮಿಷದಲ್ಲಿ ಅನ್ವರ್ ಅಲಿ ಗೋಲು ಗಳಿಸಿ ಭಾರತಕ್ಕೆ ಡಬಲ್ ಮುನ್ನಡೆ ಒದಗಿಸಿದರು. ಅದಾದ ನಂತರ ಅರ್ಜೆಂಟೀನಾ ಇನ್ನಿಲ್ಲದ ಪ್ರಯತ್ನಗಳನ್ನ ಮಾಡಿತು. ಭವಿಷ್ಯದ ತಾರೆಗಳನ್ನ ಒಳಗೊಂಡಿರುವ ಅರ್ಜೆಂಟೀನಾ ತಂಡಕ್ಕೆ 72ನೇ ನಿಮಿಷದಲ್ಲಿ ಮೊದಲ ಸಾಫಲ್ಯ ಸಿಕ್ಕಿತು. ಅದಾದ ನಂತರವೂ ದಕ್ಷಿಣ ಅಮೆರಿಕದ ಈ ತಂಡ ಅವಿರತ ದಾಳಿಗಳನ್ನ ಸಂಯೋಜಿಸಿತು. ಭಾರತೀಯರ ಪ್ರಬಲ ಡಿಫೆನ್ಸ ಮತ್ತು ಗೋಲ್​ಕೀಪರ್ ಅವರು ಎದುರಾಳಿ ಎದುರು ತಡೆಗೋಡೆಯಾಗಿ ನಿಂತರು. ಬೋರಿಸ್ ಸಿಂಗ್, ಸುರೇಶ್ ಸಿಂಗ್, ಅನ್ವರ್ ಅಲಿ, ನಿಂಥೋಯಿಗಾನ್ಬ ಮೀಟೇಯ್, ಅಮರ್​ಜೀತ್ ಸಿಂಗ್ ಉತ್ತಮ ಪ್ರದರ್ಶನ ನೀಡಿದರು.

ಅಂಡರ್-16 ತಂಡದ ಚಮತ್ಕಾರ:
ಇದೇ ವೇಳೆ, ಜೋರ್ಡಾನ್​ನಲ್ಲಿ ನಡೆಯುತ್ತಿರುವ ಡಬ್ಲ್ಯೂಎಎಫ್​​ಎಫ್ ಅಂಡರ್-16 ಚಾಂಪಿಯನ್​ಶಿಪ್​ನಲ್ಲಿ ಡಿಫೆಂಡಿಂಗ್ ಚಾಂಪಿಯನ್ ಇರಾಕ್ ವಿರುದ್ಧ ಭಾರತೀಯರು 1-0 ಗೋಲಿನಿಂದ ಗೆಲುವು ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಆತಿಥೇಯ ಜೋರ್ಡಾನ್ ತಂಡವನ್ನು 4-0 ಗೋಲಿನಿಂದ ಮಣಿಸಿದ್ದ ಭಾರತೀಯರು ಎರಡನೇ ಪಂದ್ಯದಲ್ಲಿ ಬಲಿಷ್ಠ ಜಪಾನ್ ವಿರುದ್ಧ ವೀರೋಚಿತ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಇರಾಕ್ ವಿರುದ್ಧದ ಪಂದ್ಯದ ಗೆಲುವು ಭಾರತೀಯರ ಪಾಲಿಗೆ ಅನಿರೀಕ್ಷಿತವೇನೂ ಅಲ್ಲವಾದರೂ ಅಚ್ಚರಿಯ ಫಲಿತಾಂಶವಂತೂ ಹೌದು.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ