ಸ್ಪೇನ್ ದೇಶದ ಕ್ಲಬ್ ತಂಡದ ಎದುರು ಡ್ರಾ ಸಾಧಿಸಿದ ಭಾರತ ಅಂಡರ್-20 ಫುಟ್ಬಾಲ್ ತಂಡ


Updated:July 26, 2018, 8:14 PM IST
ಸ್ಪೇನ್ ದೇಶದ ಕ್ಲಬ್ ತಂಡದ ಎದುರು ಡ್ರಾ ಸಾಧಿಸಿದ ಭಾರತ ಅಂಡರ್-20 ಫುಟ್ಬಾಲ್ ತಂಡ

Updated: July 26, 2018, 8:14 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಜು. 26): ಸ್ಪೇನ್ ದೇಶದ ವೇಲೆನ್ಷಿಯಾದಲ್ಲಿ ನಡೆಯಲಿರುವ ಕೋಟಿಫ್(COTIF) ಕಪ್ ಫುಟ್ಬಾಲ್ ಟೂರ್ನಿಗೆ ಅಭ್ಯಾಸವಾಗಿ ನಡೆದ ಪಂದ್ಯವೊಂದರಲ್ಲಿ ಭಾರತೀಯರು ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ವೇಲೆನ್ಷಿಯಾದ ಸ್ಥಳೀಯ ಕ್ಲಬ್ ಯೂನಿಯನ್ ಡಿಪೋರ್ಟೀವಾ ಅಲ್​ಝೀರಾ ತಂಡದ ಎದುರು ಭಾರತ ಅಂಡರ್-20 ತಂಡ 1-1 ಗೋಲಿನಿಂದ ಡ್ರಾ ಮಾಡಿಕೊಂಡಿದೆ. ಅಂಡರ್-17 ವಿಶ್ವಕಪ್​ನಲ್ಲಿ ಭಾರತದ ಪಾಲಿಗೆ ಹೀರೋ ಆಗಿದ್ದ ಅಮನ್ ಛೆಟ್ರಿ ಅವರು ಈ ಪಂದ್ಯದ 71ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ, ಪಂದ್ಯದ ಅಂತಿಮ ಕ್ಷಣದಲ್ಲಿ ಸ್ಪ್ಯಾನಿಷ್ ತಂಡ ಗೋಲು ಗಳಿಸಿ ಸಮಬಲ ಸಾಧಿಸಿತು.

ಈ ಪಂದ್ಯ ಶುರುವಾಗುತ್ತಿದ್ದಂತೆಯೇ ಯೂನಿಯನ್ ಡಿಪೋರ್ಟೀವಾ ತಂಡ ಸತತ ಆಕ್ರಮಣಗಳನ್ನು ಮಾಡಿ ಭಾರತೀಯರ ಮೇಲೆ ಒತ್ತಡ ಹೇರಿತು. ಅದರ ಫಲವಾಗಿ 8 ಮತ್ತು 16ನೇ  ನಿಮಿಷದಲ್ಲಿ ಗೋಲು ಗಳಿಸುವ ಅವಕಾಶವೂ ಸಿಕ್ಕವು. ಆದರೆ, ಭಾರತೀಯ ಗೋಲ್​ಕೀಪರ್ ಪ್ರಭ್​ಸುಖನ್ ಗಿಲ್ ಉತ್ತಮ ಪ್ರದರ್ಶನ ನೀಡಿ ಎದುರಾಳಿಯ ಗೋಲಿನ ಪ್ರಯತ್ನವನ್ನು ವಿಫಲಗೊಳಿಸಿದರು. ಪಂದ್ಯ ಸಾಗುತ್ತಾ ಹೋದಂತೆ ಭಾರತೀಯರೂ ಆಟಕ್ಕೆ ಕುದುರಿಕೊಂಡು ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದರು. ಒಟ್ಟಾರೆಯಾಗಿ ಭಾರತೀಯ ಕಿರಿಯರ ತಂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತು.

ಅರ್ಜೆಂಟೀನಾ, ವೆನಿಜುವೆಲಾ ವಿರುದ್ಧ ಪಂದ್ಯಗಳು: 

ಕೋಚ್ ಫ್ಲಾಯ್ಡ್ ಪಿಂಟೋ ಗರಡಿಯಲ್ಲಿ ಪಳಗಿರುವ ಭಾರತ ಅಂಡರ್-20 ಫುಟ್ಬಾಲ್ ತಂಡದ ಆಟಗಾರರಿಗೆ ವಿಶ್ವಮಟ್ಟದಲ್ಲಿ ಆಡುವ ಸುವರ್ಣಾವಕಾಶವಿದೆ. ಅಂಡರ್-17 ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ ಆಟಗಾರರು ಹಾಗೂ ಅಂಡರ್-20 ರಾಷ್ಟ್ರೀಯ ತಂಡದ ಆಟಗಾರರು ಈ ತಂಡದಲ್ಲಿದ್ದಾರೆ. ಜುಲೈ 29ರಿಂದ ನಡೆಯಲಿರುವ ಕೋಪಾ ಕಪ್ ಟೂರ್ನಿಯಲ್ಲಿ ಭಾರತೀಯರು ಮುರ್ಷಿಯಾ, ಮಾರಿಷಾನಾ, ವೆನಿಜುವೆಲಾ ಮತ್ತು ಅರ್ಜೆಂಟೀನಾದ ಅಂಡರ್-20 ತಂಡಗಳೊಂದಿಗೆ ಸೆಣಸಲಿದೆ.

ಭಾರತೀಯ ತಂಡದ ವೇಳಾಪಟ್ಟಿ:
ಜುಲೈ 29: ಮುರ್ಷಿಯಾ
Loading...

ಜುಲೈ 31: ಮಾರಿಷಾನಾ
ಆ. 03: ವೆನಿಜುವೆಲಾ
ಆ. 05: ಅರ್ಜೆಂಟೀನಾ

ಮಹಿಳಾ ತಂಡದ್ದೂ ಆಟ:
ಇದೇ ವೇಳೆ, ಭಾರತ ಮಹಿಳಾ ಫುಟ್ಬಾಲ್ ತಂಡ ಕೂಡ ಕೋಟಿಫ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸ್ಪೇನ್ ದೇಶಕ್ಕೆ ತೆರಳಲಿದೆ. ಆಗಸ್ಟ್ 1ರಿಂದ 6ರವರೆಗೆ ಟೂರ್ನಿಯಲ್ಲಿ ಆಡಲಿರುವ ಭಾರತೀಯ ಮಹಿಳೆಯರಿಗೆ ಒಲಿಂಪಿಕ್ಸ್ ಕ್ವಾಲಿಫಯರ್ ಟೂರ್ನಿಗಳಿಗೆ ಇದು ಅಭ್ಯಾಸದ ಪಂದ್ಯವಾಗಲಿವೆ. ಸ್ಯಾಫ್ ಕಪ್ ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ಭಾರತ ಮಹಿಳಾ ತಂಡ ಯೂರೋಪ್​ನಲ್ಲಿ ಟೂರ್ನಿ ಆಡುತ್ತಿರುವುದು ಇದೇ ಮೊದಲಾಗಿದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...