ಏಷ್ಯನ್ ಗೇಮ್ಸ್​​ನ ಕಬಡ್ಡಿಯಲ್ಲಿ ಭಾರತಕ್ಕೆ ಬಂಗಾರದ ಪದಕ ಸಿಗದಿರಬಹುದು, ಆದರೆ ಗೆದ್ದಿದ್ದು ಮಾತ್ರ ಭಾರತದ ಅಪ್ಪಟ 'ಚಿನ್ನ'

news18
Updated:August 25, 2018, 3:13 PM IST
ಏಷ್ಯನ್ ಗೇಮ್ಸ್​​ನ ಕಬಡ್ಡಿಯಲ್ಲಿ ಭಾರತಕ್ಕೆ ಬಂಗಾರದ ಪದಕ ಸಿಗದಿರಬಹುದು, ಆದರೆ ಗೆದ್ದಿದ್ದು ಮಾತ್ರ ಭಾರತದ ಅಪ್ಪಟ 'ಚಿನ್ನ'
news18
Updated: August 25, 2018, 3:13 PM IST
ನ್ಯೂಸ್ 18 ಕನ್ನಡ

ಏಷ್ಯನ್ ಗೇಮ್ಸ್​ನ ಮಹಿಳೆಯರ ಕಬಡ್ಡಿ ವಿಭಾಗದಲ್ಲಿ ಕಳೆದೆರಡು ಬಾರಿಯ ಚಾಂಪಿಯನ್​ ಭಾರತ ಈ ಬಾರಿ ಚಿನ್ನ ಗೆಲ್ಲದೆ ನಿರಾಸೆ ಮೂಡಿಸಿದೆ. ಬಂಗಾರದ ನಿರೀಕ್ಷೆಯಲ್ಲಿ ಭಾರತೀಯರಿಗೆ ಈ ಸೋಲು ಶಾಕ್ ನೀಡಿದೆ. ಆದರೆ ಇದಕ್ಕಿಂತ ಶಾಕಿಂಗ್ ನ್ಯೂಸ್ ಒಂದು ಇಲ್ಲಿದೆ. ಅದೇನೆಂದರೆ ಓರ್ವ ಭಾರತೀಯ ಮಹಿಳೆಯೇ ಭಾರತದ ಸೋಲಿಗೆ ಕಾರಣವಾಗಿದ್ದಾರೆ.

ಹೌದು, ಚಿನ್ನ ಗೆದ್ದೇ ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಕೊನೇ ಕ್ಷಣದಲ್ಲಿ ಅಚ್ಚರಿಯ ಸೋಲು ನೀಡಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದು ಕೋಚ್ ಶೈಲಜಾ ಜೈನ್. ಈಕೆ ಭಾರತೀಯಳು ಎನ್ನುವುದು ಹಲವರಿಗೆ ತಿಳಿಯದ ಸಂಗತಿ. ಆದರೆ ಇವರು ಸದ್ಯ ಭಾರತಕ್ಕೆ ಬಂಗಾರ ದೊರೆಯದಂತೆ ಮಾಡಿದ್ದಾರೆ. ಇವರ ಹಿನ್ನೆಲೆ ನೋಡಿದರೆ ಹಲವು ಅಚ್ಚರಿ, ನೋವಿನ ಸಂಗತಿಗಳು ದೊರೆಯುತ್ತವೆ.

ಶೈಲಜಾ ಜೈನ್, ನಾಸಿಕ್ ಮೂಲದವರು. ಮೂರು ದಶಕಕ್ಕೂ ಹೆಚ್ಚು ಕಾಲ ನೂರಾರು ಮಕ್ಕಳಿಗೆ ಕಬಡ್ಡಿ ಕೋಚಿಂಗ್ ನೀಡಿ ಸಾಕಷ್ಟು ಅನುಭವ ಪಡೆದಿದ್ದವರು. ರಾಷ್ಟ್ರೀಯ ತಂಡಕ್ಕೆ ಕೋಚಿಂಗ್ ನೀಡಬೇಕು ಎನ್ನುವುದೇ ಇವರ ಮಹದಾಸೆಯಾಗಿತ್ತು. ಆದರೆ ಇವರ ಅನುಭವ, ಸಾಮರ್ಥ್ಯಕ್ಕೆ ಸೂಕ್ತ ಮನ್ನಣೆ ದೊರೆಯಲಿಲ್ಲ.

ಕಳೆದ ವರ್ಷ ಇರಾನ್​ ಮಹಿಳಾ ಕಬಡ್ಡಿ ತಂಡಕ್ಕೆ ಕೋಚಿಂಗ್ ನೀಡಲು ಆಫರ್ ಬಂದಿತ್ತು. ಇದನ್ನು ಸ್ವೀಕರಿಸಿದ ಶೈಲಜಾ ಅವರು ತನ್ನ ಸಾಮರ್ಥ್ಯ ಸಾಬೀತುಪಡಿಸಲೇಬೇಕು ಎನ್ನುವ ಹಟಕ್ಕೆ ಬಿದ್ದು ದೂರದ ಇರಾನ್ ತಂಡಕ್ಕೆ ತರಬೇತಿ ನೀಡಲು ಸಜ್ಜಾಗುತ್ತಾರೆ. ಇಲ್ಲಿಂದ ಶುರುವಾಗಿದ್ದೇ ಚಿನ್ನದ ಬೇಟೆ.

ಇರಾನ್ ತಂಡಕ್ಕೆ ತರಬೇತಿ ನೀಡಲು ಶೈಲಜಾ ಪರ್ಷಿಯನ್ ಭಾಷೆಯನ್ನು ಕಲಿಯುತ್ತಾರೆ. ನಂತರ ಆಟದಲ್ಲಿ ಏಕಾಗ್ರತೆ ಹೆಚ್ಚಿಸಲು ಆಟಗಾರ್ತಿಯರಿಗೆ ಯೋಗ, ಪ್ರಾಣಾಯಾಮ ವನ್ನು ಹೇಳಿಕೊಡುತ್ತಾರೆ. ಇರಾನ್​​ಗೆ ಬಂದಿಳಿದ ಶೈಲಜಾ ಅವರು ಮೊದಲು ಮಾಡಿದ್ದೇ ವ್ಯಾಟ್ಸ್ ಆ್ಯಪ್ ಗ್ರೂಪ್. ಈ ಗ್ರೂಪ್ ನಲ್ಲಿ ಎಲ್ಲಾ ಆಟಗಾರ್ತಿಯರನ್ನು ಸೇರಿಸಲಾಯಿತು. ಪ್ರತಿದಿನ ಮುಂಜಾನೆ ಸ್ಫೂರ್ತಿದಾಯಕ ಮೆಸೇಜ್​​ಗಳನ್ನು ಶೈಲಜಾ ಕಳುಹಿಸುತ್ತಿದ್ದರು. ಗ್ರೂಪಿನಲ್ಲಿ ಒಬ್ಬಾಕೆ ಇದನ್ನು ಭಾಷಾಂತರ ಮಾಡುವ ಹೊಣೆ ಹೊತ್ತಿದ್ದರು.

ಜೊತೆಗೆ ಸತತ ತರಬೇತಿ ನೀಡಿ ಏಷ್ಯನ್ ಗೇಮ್ಸ್​ಗೆ ಬೇಕಾದಂತಹ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಅದರಂತೆ ಇರಾನ್ ತಂಡ ಫೈನಲ್​ ತಲುಪುತ್ತದೆ. ಆದರೆ ಇಲ್ಲಿ ಎದುರಾಳಿಯಾಗಿ ದೊರೆತಿದ್ದು ಶೈಲಜಾ ಅವರ ತಾಯ್ನಾಡು ಭಾರತ. ಅಂತಿಮ ಹಣಾಹಣಿಗೂ ಮುನ್ನ ತಂಡದ ಸದಸ್ಯರನ್ನು ಕರೆದು ಶೈಲಜಾ, ಚಿನ್ನವಿಲ್ಲದೆ ನನ್ನನ್ನು ಭಾರತಕ್ಕೆ ಕಳುಹಿಸಿಕೊಡಬೇಡಿ ಎಂದು ಹೇಳುತ್ತಾರೆ. ಪಂದ್ಯ ಮುಗಿದಾಗ ಇರಾನ್ ತಂಡದ ಕೆಲ ಆಟಗಾರ್ತಿಯರು ಶೈಲಜಾ ಅವರ ಬಳಿ ಓಡೋಡಿ ಬಂದು, ಮೇಡಂ ನೀವು ಕೇಳಿದ್ದು ನಾವು ನೀಡಿದ್ದೇವೆ ಎಂದು ಹೇಳುತ್ತಾರೆ. ಅಲ್ಲಿಗೆ ಎರಡು ಬಾರಿಯ ಚಾಂಪಿಯನ್ ಭಾರತಕ್ಕೆ ಶಾಕ್ ನೀಡಿ ಇರಾನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
Loading...

ಶೈಲಜಾ ಜೈನ್ ನೋವು, ಹತಾಶೆ ಎಲ್ಲದಕ್ಕೂ ಬಂಗಾರದ ಪದಕದ ಗೆಲುವಿನೊಂದಿಗೆ ಸಾರ್ಥಕತೆ ದೊರೆತಿತ್ತು. ಈ ಮೂಲಕ ಓರ್ವ ಭಾರತೀಯಳೇ ಭಾರತದ ಸೋಲಿಗೆ ಮುನ್ನುಡಿ ಬರೆದಿದ್ದರು. ಗೆದ್ದ ಖುಷಿಯಲ್ಲಿ ಶೈಲಜಾ ಆಟಗಾರರನ್ನು ತನ್ನ ಹೆಗಲ‌ ಮೇಲೆ ಹೊತ್ತು ಅಂಕಣದ ತುಂಬಾ ಓಡಾಡಿದ್ದಾರೆ. ಅವರ ಬಹುದಿನ ಕನಸು ನನಸಾದ ಸಾರ್ಥಕ ಕ್ಷಣ ಅದು. ಆದರೆ ಅದೇ ವೇಳೆಗೆ ಶೈಲಜಾ ಅವರಲ್ಲಿ ಬೇಸರದ ಭಾವ ಮೂಡಿದೆ ಕಾರಣ ಅಲ್ಲಿ ಸೋತಿದ್ದು ತನ್ನ ತಾಯ್ನಾಡು. ಎಷ್ಟಾದರೂ ಮನ ಮಿಡಿಯುವುದು ಭಾರತಕ್ಕಲ್ಲವೇ..!!
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ