Olympics Boxing: ಬಾಕ್ಸಿಂಗ್ ಸೆಮಿಫೈನಲ್​ನಲ್ಲಿ ಲವ್ಲಿನಾಗೆ ಸೋಲು; ಭಾರತಕ್ಕೆ ಕಂಚು ಪ್ರಾಪ್ತಿ

ಅಸ್ಸಾಮ್ ರಾಜ್ಯದ ಲವ್ಲಿನಾ ಬೊರ್ಗೋಹೇನ್ (Lovlina Borgohain) ಅವರು ಒಲಿಂಪಿಕ್ಸ್ ಬಾಕ್ಸಿಂಗ್​ನಲ್ಲಿ ಫೈನಲ್ ತಲುಪಲು ವಿಫಲರಾದರೂ ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾರೆ. ಇಂದು ನಡೆದ ಸೆಮಿಫೈನಲ್​ನಲ್ಲಿ ಟರ್ಕಿ ದೇಶದ ಬಾಕ್ಸರ್ ಎದುರು ಸೋಲನುಭವಿಸಿದರು.

ಲವ್ಲಿನಾ ಬೋರ್ಗೊಹೇನ್

ಲವ್ಲಿನಾ ಬೋರ್ಗೊಹೇನ್

  • News18
  • Last Updated :
  • Share this:
ಬೆಂಗಳೂರು, ಆ. 04): ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ (Lovlina Borgohain) ಅವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಮಹಿಳೆಯರ ವೆಲ್ಟರ್ ವೇಟ್ ವಿಭಾಗದಲ್ಲಿ ಲವ್ಲಿನಾ ಅವರು ಫೈನಲ್ ತಲುಪಲು ವಿಫಲರಾಗಿದ್ದಾರೆ. ಇಂದು ನಡೆದ ಸೆಮಿಫೈನಲ್​ನಲ್ಲಿ ಟರ್ಕಿ ದೇಶದ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಲವ್ಲಿನಾ ಮೂರೂ ಸುತ್ತುಗಳಲ್ಲಿ ಪರಾಭವಗೊಂಡು 5-0 ಅಂತರದಿಂದ ಸೋಲನುಭವಿಸಿದ್ದಾರೆ. ಈ ಮೂಲಕ ಚಿನ್ನ ಅಥವಾ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಆದರೆ, ಸೆಮಿಫೈನಲ್ ತಲುಪಿದ ಕಾರಣಕ್ಕೆ ಅವರಿಗೆ ಕಂಚಿನ ಪದಕ ಪ್ರಾಪ್ತಿಯಾಗಿದೆ. ಮೇರಿ ಕೋಮ್ ನಂತರ ಒಲಿಂಪಿಕ್ ಪದಕ ಗಳಿಸಿದ ಎರಡನೇ ಭಾರತೀಯ ಮಹಿಳೆ ಅವರೆನಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಏಕೈಕ ಬಾಕ್ಸರ್ ಅವರೆನಿಸಿದ್ದಾರೆ. ವಿಕಾಸ್ ಕೃಷ್ಣನ್ ಅವರಂಥ ಟಾಪ್ ರ್ಯಾಂಕಿಂಗ್ ಹಾಗೂ ಘಟಾನುಘಟಿ ಬಾಕ್ಸರ್​ಗಳು ಆರಂಭಿಕ ಸುತ್ತಲ್ಲೇ ಸೋತು ನಿರ್ಗಮಿಸಿದ್ದರು. ಮೇರಿ ಕೋಮ್ ಅವರು ಕ್ವಾರ್ಟರ್ ಫೈನಲ್​ನಲ್ಲಿ ಸೋತಿದ್ದರು.

ಬಾಕ್ಸರ್ ಲವ್ಲಿನಾ ಅವರಿಗೆ ಸಿಕ್ಕಿರುವ ಈ ಕಂಚಿನ ಪದಕ ಭಾರತದ ಪಾಲಿಗೆ ಈ ಒಲಿಂಪಿಕ್ಸ್​ನಲ್ಲಿ ದೊರೆತ 3ನೇ ಪದಕವಾಗಿದೆ. ಈ ಮೂರೂ ಪದಕ ಗೆದ್ದಿರುವುದು ಮಹಿಳೆಯರೇ ಎಂಬುದು ಗಮನಾರ್ಹ. ವೇಟ್ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್​ನಲ್ಲಿ ಪಿ ವಿ ಸಿಂಧು ಕಂಚಿನ ಪದಕ ಜಯಿಸಿದ್ದರು. ಈಗ ಲವ್ಲಿನಾ ಬಾಕ್ಸಿಂಗ್​ನಲ್ಲಿ ಕಂಚು ಪಡೆದಿದ್ದಾರೆ.

ಈ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇನ್ನಷ್ಟು ಪದಕ ಗೆಲ್ಲುವ ಅವಕಾಶ ಇದೆ. ಕುಸ್ತಿ ಕ್ರೀಡೆಯಲ್ಲಿ ಭಾರತದ ಏಳು ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಈ ಪೈಕಿ ಸೋನಮ್ ಮಲಿಕ್ ಮತ್ತು ಅಂಶು ಮಲಿಕ್ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಚಿನ್ನದ ಪದಕ ಗೆಲ್ಲುವ ಫೇವರಿಟ್ ಎನಿಸಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಹಾಗೂ ಸೀಮಾ ಬಿಸ್ಲಾ ಅವರು ಇನ್ನೂ ಕಣಕ್ಕಿಳಿಯಬೇಕಿದೆ. ಪುರುಷ ಕುಸ್ತಿಪಟುಗಳಾದ ರವಿಕುಮಾರ್ ದಾಹಿಯಾ ಮತ್ತು ದೀಪಕ್ ಪೂನಿಯಾ ಇಬ್ಬರೂ ಸೆಮಿಫೈನಲ್ ತಲುಪಿದ್ದಾರೆ. ಚಿನ್ನ ಗೆಲ್ಲುವ ನೆಚ್ಚಿನ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಆಗಸ್ಟ್ 6ರಂದು ಕುಸ್ತಿ ಕಣಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ: Olympics: ಫೈನಲ್​ಗೆ ಜಾವೆಲಿನ್ ಪಟು ನೀರಜ್; ಸೆಮಿಫೈನಲ್​ಗೆ ಕುಸಿಪಟುಗಳಾದ ರವಿ, ದೀಪಕ್

ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಭಾರತದ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿ ಅಗ್ರಸ್ಥಾನಿಗರಾಗಿ ಫೈನಲ್ ಹಂತ ಪ್ರವೇಶಿಸಿದ್ಧಾರೆ. ಭಾರತದ ಮಹಿಳಾ ಹಾಕಿ ತಂಡ ಇಂದು ಸೆಮಿಫೈನಲ್​ನಲ್ಲಿ ಅರ್ಜೆಂಟೀನಾವನ್ನು ಎದುರುಗೊಳ್ಳಲಿದೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ಕನಿಷ್ಠ ಒಂದು ಪದಕ ನಿಶ್ಚಿತ. ನಿನ್ನೆ ಭಾರತದ ಪುರುಷರ ತಂಡ ಸೆಮಿಫೈನಲ್​ನಲ್ಲಿ ಸೋತಿತ್ತು. ಈ ತಂಡ ಕಂಚಿನ ಪದಕಕ್ಕಾಗಿ ಜರ್ಮನಿಯ ಸವಾಲು ಎದುರಿಸಲಿದೆ. ನಾಳೆ ಈ ಪಂದ್ಯ ನಡೆಯಲಿದೆ.

ಇನ್ನು, ಗಾಲ್ಫ್ ಕ್ರೀಡೆಯಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರಿಂದಲೂ ಪದಕದ ನಿರೀಕ್ಷೆ ಇದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: