ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಅನಗತ್ಯ ದಾಖಲೆ ಬರೆದ ರಾಹುಲ್: ಟೆಸ್ಟ್, ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಹೆಸರಲ್ಲಿದೆ ಇದೇ ದಾಖಲೆ..!


Updated:March 13, 2018, 4:35 PM IST
ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಅನಗತ್ಯ ದಾಖಲೆ ಬರೆದ ರಾಹುಲ್: ಟೆಸ್ಟ್, ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಹೆಸರಲ್ಲಿದೆ ಇದೇ ದಾಖಲೆ..!

Updated: March 13, 2018, 4:35 PM IST
-ನ್ಯೂಸ್ 18 ಕನ್ನಡ

ಕೊಲಂಬೋ(ಮಾ.13): ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ-20 ಸರಣಿಯ ಎರಡು ಪಂದ್ಯಗಳಲ್ಲಿ ಬೆಂಚ್ ಕಾದು ಮೂರನೇ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ಕನ್ನಡಿಗ ಕೆ.ಎಲ್. ರಾಹುಲ್ ವಿಚಿತ್ರ ರೀತಿಯಲ್ಲಿ ಔಟಾಗುವ ಮೂಲಕ ದಾಖಲೆ ಬರೆದಿದ್ದಾರೆ.
ಜೀವನ್ ಮೆಂಡಿಸ್ ಎಸೆತವನ್ನ ಹೊಡೆಯಲು ಕ್ರೀಸ್​ನಿಂದ ಸ್ವಲ್ಪ ಜಾಸ್ತಿಯೇ ಹಿಂದಕ್ಕೆ ಸರಿದ ರಾಹುಲ್ ಕಾಲು ವಿಕೆಟ್​ಗೆ ಬಡಿದಿತ್ತು. ಮೆಂಡಿಸ್ ಎಸೆತವನ್ನ ಯಶಸ್ವಿಯಾಗಿ ರಾಹುಲ್ ಡ್ರೈವ್ ಮಾಡಿದರೂ ವಿಕೆಟ್​ಗೆ ಕಾಲು ತಾಗಿದ್ದರಿಂದ ಹಿಟ್ ವಿಕೆಟ್ ಆಗಿ ಔಟಾದರು. ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಿಟ್ ವಿಕೆಟ್ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹಣೆಪಟ್ಟಿ ರಾಹುಲ್​ಗೆ ಅಂಟಿಕೊಂಡಿತು. ಟಿ-20 ಕ್ರಿಕೆಟ್​ನಲ್ಲಿ ವಿಶ್ವದಲ್ಲೇ ಹಿಟ್ ವಿಕೆಟ್ ಮಾಡಿದ 10ನೇ ಆಟಗಾರ ಕೆ.ಎಲ್. ರಾಹುಲ್.

ಏಕದಿನ ಕ್ರಿಕೆಟ್​ನಲ್ಲಿ 4 ಮಂದಿ ಭಾರತೀಯ ಬ್ಯಾಟ್ಸ್​ಮನ್​ಗಳು ಹಿಟ್ ವಿಕೆಟ್ ಆಗಿ ಔಟಾಗಿದ್ದರೆ, ವಿಶ್ವಾದ್ಯಂತ 65 ಮಂದಿ ಹಿಟ್ ವಿಕೆಟ್ ಮಾಡಿದ್ದಾರೆ. 1995ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಯನ್ ಮೋಗಿಯಾ ಇದೇ ರೀತಿ ಔಟಾಗಿದ್ದರು. 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಹಿಟ್ ವಿಕೆಟ್ ಮಾಡಿದ್ದರು. 2008ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು 2011ರಲ್ಲಿ ವಿರಾಟ್ ಕೊಹ್ಲಿ ಸಹ ಹಿಟ್ ವಿಕೆಟ್ ಆಗಿದ್ದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಒಟ್ಟು 158 ಹಿಟ್ ವಿಕೆಟ್ ಉದಾಹರಣೆಗಳಿವೆ. ಭಾರತದಮಟ್ಟಿಗೆ 1949ರಲ್ಲಿ ಲಾಲ ಅಮರ್​ನಾಥ್ ಹಿಟ್ ವಿಕೆಟ್ ಖಾತೆ ತೆರೆದಿದ್ದರು. ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಅಮರನಾಥ್ ಈ ತಪ್ಪು ಮಾಡಿದ್ದರು. ಭಾರತದ ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರ್ ನಾಥ್ 3 ಬಾರಿ ಈ ರೀತಿ ಔಟಾಗುವ ಮೂಲಕ ಬೌಲರ್​ಗಳ ಕೆಲಸ ಸುಲಭಗೊಳಿಸಿದ್ದರು.

ಅಂದಹಾಗೆ, ಸದ್ಯ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ ಹಿಟ್ ವಿಕೆಟ್ ಆದ ಏಕೈಕ ಭಾರತೀಯ ಕ್ರಿಕೆಟಿಗ ಎನಿಸಿದ್ದಾರೆ.

 
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ