ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ವಿಂಡೀಸ್ ತತ್ತರ: ಕೊಹ್ಲಿ ಪಡೆಗೆ ದೊಡ್ಡ ಮೊತ್ತದ ಗೆಲುವು

news18
Updated:October 6, 2018, 3:30 PM IST
ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ವಿಂಡೀಸ್ ತತ್ತರ: ಕೊಹ್ಲಿ ಪಡೆಗೆ ದೊಡ್ಡ ಮೊತ್ತದ ಗೆಲುವು
  • Advertorial
  • Last Updated: October 6, 2018, 3:30 PM IST
  • Share this:
ನ್ಯೂಸ್ 18 ಕನ್ನಡ

ರಾಜ್​​ಕೋಟ್ (ಅ. 06): ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್​​ ಇಂಡೀಸ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತದ ಗೆಲುವು ತನ್ನದಾಗಿಸಿ ಮೂರೇ ದಿನದಲ್ಲಿ ಪಂದ್ಯ ಮೊಕ್ತಾಯಗೊಂಡಿದೆ. 2ನೇ ಇನ್ನಿಂಗ್ಸ್​​ನಲ್ಲಿ ಕೆರಿಬಿಯನ್ನರು ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ 196 ರನ್​​ಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಸೇರಿದಂತೆ 272 ರನ್​ಗಳಿಂದ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ 1-0ಯ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪೃಥ್ವಿ ಶಾ ಅವರ ಅಮೋಘ 134 ರನ್, ನಾಯಕ ವಿರಾಟಗ ಕೊಹ್ಲಿ ಅವರ 139, ಜಡೇಜಾ ಅವರ ಚೊಚ್ಚಲ ಶತಕ, ರಿಷಭ್ ಪಂತ್ ಅವರ 92 ಹಾಗೂ ಪೂಜಾರ ಅವರ 86 ರನ್​​ಗಳ ನೆರವಿನಿಂದ 649/9 ಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ವಿಂಡೀಸ್ ಟೀಂ ಇಂಡಿಯಾ ಮಾರಕ ಬೌಲಿಂಗ್​​ಗೆ ಬಲಿಯಾಗಿ ಕೇವಲ 181 ರನ್​ಗೆ ಸರ್ವಪತನ ಕಂಡು ಫಾಲೋ ಆನ್ ಬಲೆಗೆ ಸಿಲುಕಿತು. ವೆಸ್ಟ್​ ಇಂಡೀಸ್ ಪರ ರೊಸ್ಟನ್ ಚೇಸ್ 53 ಹಾಗೂ ಕೀಮೊ ಪಾಲ್ 47 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಭಾರತ ಪರ ಅಶ್ವಿನ್ 4 ಹಾಗೂ ಶಮಿ 2 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್, ಜಡೇಜಾ ಹಾಗೂ ಕುಲ್ದೀಪ್ ತಲಾ 1 ವಿಕೆಟ್ ಪಡೆದರು.

468 ರನ್​​ಗಳ ಮೊದಲ ಇನ್ನಿಂಗ್ಸ್​ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್​ ಆರಂಭಿಸಿದ ವಿಂಡಿಸ್ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 2ನೇ ಇನ್ನಿಂಗ್ಸ್​ನಲ್ಲಿ ತಂಡದ ಪರ ಕಿರೋನ್ ಪಾವೆಲ್ 83 ರನ್​ಗಳಿಸಿದ್ದೇ ಹೆಚ್ಚು. ಉಳಿದ ಎಲ್ಲಾ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 2ನೇ ಇನ್ನಿಂಗ್ಸ್​ನಲ್ಲೂ ವೆಸ್ಟ್​ ಇಂಡೀಸ್ 196 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಕುಲ್ದೀಪ್ ಯಾದವ್ 5 ವಿಕೆಟ್ ಉರುಳಿಸಿದರೆ, ಜಡೇಜಾ 3 ಹಾಗೂ ಅಶ್ವಿನ್ 2 ವಿಕೆಟ್ ಕಿತ್ತರು.

ಈ ಮೂಲಕ ಭಾರತ ಇದೇ ಮೊದಲ ಬಾರಿ 272 ರನ್​ಗಳ ದೊಡ್ಡ ಮೊತ್ತದ ಗೆಲುವಿನ ಕೇಕೆ ಹಾರಿಸಿದೆ. ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧ ಭಾರತ 262 ರನ್​ಗಳ ಜಯ ಕಂಡಿತ್ತು. ಪದಾರ್ಪಣೆ ಪಂದ್ಯದಲ್ಲೇ ಶತಕದ ಮಿಂಚು ಹರಿಸಿದ ಪೃಥ್ವಿ ಶಾ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್:ಭಾರತ: 649/9 (ವಿರಾಟ್ ಕೊಹ್ಲಿ 139, ಪೃಥ್ವಿ ಶಾ 134, ರವೀಂದ್ರ ಜಡೇಜಾ 100*, ದೇವೇಂದ್ರ ಬಿಶೂ217/4)

ವೆಸ್ಟ್​ ಇಂಡೀಸ್ ಮೊದಲ ಇನ್ನಿಂಗ್ಸ್​: 181/10 (ರೊಸ್ಟನ್ ಚೇಸ್ 53, ಕೀಮೊ ಪಾಲ್ 47, ಆರ್. ಅಶ್ವಿನ್ 37/4, ಮೊಹಮ್ಮದ್ ಶಮಿ 22/2)

ವೆಸ್ಟ್​ ಇಂಡೀಸ್ ಎರಡನೇ ಇನ್ನಿಂಗ್ಸ್​: 196/10 (ಕೀರೊನ್ ಪಾವೆಲ್ 83, ಕುಲ್ದೀಪ್ ಯಾದವ್ 57/5, ರವೀಂದ್ರ ಜಡೇಜಾ 35/3)

ಪಂದ್ಯ ಶ್ರೇಷ್ಠ: ಪೃಥ್ವಿ ಶಾ
First published:October 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ