5ನೇ ಏಕದಿನದಲ್ಲೂ ಭಾರತಕ್ಕೆ ಜಯ: 10 ವರ್ಷಗಳ ಬಳಿಕ ಕಿವೀಸ್ ನಾಡಲ್ಲಿ ಏಕದಿನ ಸರಣಿ ವಶ

ಈಬಾರಿಯು ತಂಡದ ಮೊತ್ತ ಮೂರಂಕಿ ಗಡಿ ದಾಟುವುದು ಅನುಮಾನ ಎಂಬ ಭಯ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ, 5ನೇ ವಿಕೆಟ್​ಗೆ ಜೊತೆಯಾದ ಅಂಬಟಿ ರಾಯುಡು ಹಾಗೂ ವಿಜಯ್ ಶಂಕರ್ ಭರ್ಜರಿ ಆಟ ಪ್ರದರ್ಶಿಸಿದರು.

Vinay Bhat | news18
Updated:February 3, 2019, 3:50 PM IST
5ನೇ ಏಕದಿನದಲ್ಲೂ ಭಾರತಕ್ಕೆ ಜಯ: 10 ವರ್ಷಗಳ ಬಳಿಕ ಕಿವೀಸ್ ನಾಡಲ್ಲಿ ಏಕದಿನ ಸರಣಿ ವಶ
ಸಂಭ್ರಮಿಸುತ್ತಿರುವ ಟೀಂ ಇಂಡಿಯಾ ಆಟಗಾರರು
Vinay Bhat | news18
Updated: February 3, 2019, 3:50 PM IST


ವೆಲ್ಲಿಂಗ್ಟನ್ (ಫೆ. 03): ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ 35 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 4-1ರ ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಕಳೆದ ಪಂದ್ಯದಂತೆ ಆರಂಭದಲ್ಲೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಕೇವಲ 18 ರನ್ ಆಗುವ ಹೊತ್ತಿಗೆ 4 ವಿಕೆಟ್ ಪತನವಾಯಿತು. ನಾಯಕ ರೋಹಿತ್ ಶರ್ಮಾ 2, ಧವನ್ 6, ಶುಭ್ಮನ್ ಗಿಲ್ 6, ಧೋನಿ 1 ರನ್​ ಗಳಿಸಿ ಬ್ಯಾಟ್ ಕೆಳಗಿಟ್ಟರು. ಈಬಾರಿಯು ತಂಡದ ಮೊತ್ತ ಮೂರಂಕಿ ಗಡಿ ದಾಟುವುದು ಅನುಮಾನ ಎಂಬ ಭಯ ಅಭಿಮಾನಿಗಳಲ್ಲಿ ಮೂಡಿತ್ತು.

ಆದರೆ, 5ನೇ ವಿಕೆಟ್​ಗೆ ಜೊತೆಯಾದ ಅಂಬಟಿ ರಾಯುಡು ಹಾಗೂ ವಿಜಯ್ ಶಂಕರ್ ಭರ್ಜರಿ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 98 ರನ್​ಗಳ ಕಾಣಿಕೆಯೊಂದಿಗೆ ಈ ಜೋಡಿಯ ಅಮೋಘ ಜೊತೆಯಾಟ ಅಂತ್ಯಗೊಂಡಿತು. ಅನಗತ್ಯ ರನ್ ಕಲೆಹಾಕಲೋಗಿ ಶಂಕರ್ ಅವರು 45 ರನ್​ಗೆ ನಿರ್ಗಮಿಸಿದರು.

ಬಳಿಕ ಕೇದರ್ ಜಾಧವ್ ಜೊತೆಯಾದ ರಾಯುಡು ಉತ್ತಮ ಇನ್ನಿಂಗ್ಸ್​ ಕಟ್ಟಿ ಅರ್ಧಶತಕ ಗಳಿಸಿ ಅಬ್ಬರಿಸಿದರು. 113 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 90 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಅಂಚಿಗೆ ತಂದಿಟ್ಟು ರಾಯುಡು ಔಟ್ ಆದರು.

ಇದಾದ ಬೆನ್ನಲ್ಲೆ 34 ರನ್ ಗಳಿಸಿದ್ದ ಜಾಧವ್ ಕೂಡ ಸುಸ್ತಾದರು. ಈ ಹೊತ್ತಿಗೆ ಕ್ರೀಸ್​ಗೆ ಬಂದ ಹಾರ್ದಿಕ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​ನೊಂದಿಗೆ 45 ರನ್ ಸಿಡಿಸಿದ ಪಾಂಡ್ಯ ತಂಡದ ಮೊತ್ತವನ್ನು 250ಕ್ಕೆ ತಂದಿಟ್ಟರು. ಈ ಮೂಲಕ ಭಾರತ 49.5 ಓವರ್​ನಲ್ಲಿ 252 ರನ್​ಗೆ ಆಲೌಟ್ ಆಯಿತು. ಆಸೀಸ್ ಪರ ಮ್ಯಾಟ್ ಹೆನ್ರಿ 4 ವಿಕೆಟ್ ಕಿತ್ತರೆ, ಟ್ರೆಂಟ್ ಬೌಲ್ಟ್​ 3 ವಿಕೆಟ್ ಪಡೆದರು.

253 ರನ್​ಗಳ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಮತ್ತದೆ ಕಳಪೆ ಬ್ಯಾಟಿಂಗ್ ಮುಂದುವರಿಸಿತು. ನಾಯಕ ಕೇನ್ ವಿಲಿಯಮ್ಸನ್ 39 ಹಾಗೂ ಜೇಮ್ಸ್​​ ನೀಶಮ್ 44 ರನ್ ಬಾರಿಸಿದರಾದರು ಇವರಿಗೆ ಉಳಿದ ಬ್ಯಾಟ್ಸ್​ಮನ್​​ಗಳು ಸರಿಯಾದ ರೀತಿ ಸಾತ್ ನೀಡಲಿಲ್ಲ. ಚಹಾಲ್ ಸ್ಪಿನ್ ಬಲೆಗೆ ಸಿಲುಕಿ ಪ್ರಮುಖ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಹಾದಿ ಹಿಡಿದರು.
Loading...

ಪರಿಣಾಮ ಕಿವೀಸ್ 44.1 ಓವರ್​​ ಆಗುವ ಹೊತ್ತಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 217 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಭಾರತ ಪರ ಚಹಾಲ್ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.

ಇದರೊಂದಿಗೆ 35 ರನ್​ಗಳ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಕಿವೀಸ್ ನಾಡಿನಲ್ಲಿ 10 ವರ್ಷಗಳ ಬಳಿಕ ಏಕದಿನ ಸರಣಿ ತನ್ನ ಕೈವಶ ಮಾಡಿಕೊಂಡಿದೆ. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಂಬಟಿ ರಾಯುಡು ತಮ್ಮದಾಗಿಸಿದರೆ, ಸರಣಿ ಶ್ರೇಷ್ಠವನ್ನು ಮೊಹಮ್ಮದ್ ಶಮಿ ವಶಪಡಿಸಿಕೊಂಡರು.

ಭಾರತ ಇನ್ನು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲಿದ್ದು, ಫೆ. 6 ರಂದು ಮೊದಲ ಪಂದ್ಯ ನಡೆಯಲಿದೆ.

First published:February 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...