ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಗೆಲುವು ದಾಖಲಿಸಲಿದೆ: ದ್ರಾವಿಡ್ ಭವಿಷ್ಯ

news18
Updated:July 31, 2018, 8:58 PM IST
ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಗೆಲುವು ದಾಖಲಿಸಲಿದೆ: ದ್ರಾವಿಡ್ ಭವಿಷ್ಯ
news18
Updated: July 31, 2018, 8:58 PM IST
ನ್ಯೂಸ್ 18 ಕನ್ನಡ

2007ರಲ್ಲಿ ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದ ಟೀಂ ಇಂಡಿಯಾ 1-0 ಅಂತರದಲ್ಲಿ ಭರ್ಜರಿ ಗೆಲುವು ಕಂಡಿತ್ತು. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯ ಡ್ರಾದಲ್ಲಿ ಅಂತ್ಯ ಕಂಡರೆ, ಒಂದು ಪಂದ್ಯದಲ್ಲಿ ಭಾರತ ಗೆದ್ದು 21 ವರ್ಷಗಳ ಬಳಿಕ ಜಯ ಸಾಧಿಸಿದ ದಾಖಲೆ ಬರೆದಿತ್ತು. ಅದು ರಾಹುಲ್ ದ್ರಾವಿಡ್ ಅವರು ಭಾರತ ತಂಡದ ನಾಯಕನಾಗಿದ್ದ ಸಂದರ್ಭ ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾ ಗೆಲುವು ಕಂಡ ಕೊನೆಯ ನಾಯಕನ ಪಂದ್ಯವಾಗಿತ್ತು. ಈ ಬಗ್ಗೆ ಸದ್ಯ ದ್ರಾವಿಡ್ ಅವರು ಮನಬಿಚ್ಚಿ ಮಾತನಾಡಿದ್ದು, ಇಂಗ್ಲೆಂಡ್​​ನಲ್ಲಿರುವ ಟೀಂ ಇಂಡಿಯಾಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ.

"ಈ ಬಾರಿ ಕೂಡ ಭಾರತ ಆಂಗ್ಲರ ನಾಡಲ್ಲಿ ಸರಣಿ ಗೆದ್ದು ತನ್ನ ಯಶಸ್ಸನ್ನು ಮುಂದುವರೆಸಲಿದೆ. ಟೀಂ ಇಂಡಿಯಾ 2-1 ಅಂತರದಿಂದ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಲಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಈಗಾಗಲೇ ಭಾರತ ತಂಡದ ಆಟಗಾರರು ಇಂಗ್ಲೆಂಡ್ ನೆಲಕ್ಕೆ ಹೊಂದಿಕೊಂಡಿದ್ದಾರೆ. ನಾವು ಇಂಗ್ಲೆಂಡ್​ನಲ್ಲಿ 2007ರ ಟೆಸ್ಟ್​ ಸರಣಿ ಗೆದ್ದ ವೇಳೆ ಅದು ಮೂರು ಪಂದ್ಯಗಳ ಸರಣಿಯಾಗಿತ್ತು. ಹೀಗಾಗಿ, ನಮಗೆ ಒಂದು ಪಂದ್ಯ ಸೋತರೂ ಕಷ್ಟವಾಗುವ ಪರಿಸ್ಥಿತಿ ಇತ್ತು. ಮೊದಲ ಪಂದ್ಯದಿಂದಲೇ ನಾವು ಗೆಲುವಿಗಾಗಿ ಶ್ರಮ ವಹಿಸಬೇಕಿತ್ತು. ಆದರೆ ಈ ಬಾರಿ ಟೀಮ್ ಇಂಡಿಯಾ ಐದು ಟೆಸ್ಟ್​ ಪಂದ್ಯಗಳ ಸರಣಿ ಆಡುತ್ತಿರುವುದರಿಂದ ಆಟಕ್ಕೆ ಕುದುರಿಕೊಳ್ಳಲು ಸ್ವಲ್ಪ ಹೆಚ್ಚು ಸಮಯಾವಕಾಶ ಸಿಕ್ಕಿದೆ" ಎಂದು ದ್ರಾವಿಡ್ ಹೇಳಿದ್ದಾರೆ.

"ಉತ್ತಮ ರನ್​ ಕಲೆಹಾಕಲು ಅಲ್ಲಿನ ಪಿಚ್​​ನಲ್ಲಿ ಸಾಧ್ಯವಿದೆ. ಅದರಂತೆ ಫಾಸ್ಟ್​ ಬೌಲರ್​ಗಳ ಪಾತ್ರ ಕೂಡ ಮುಖ್ಯವಾಗಲಿದ್ದು, ನಮ್ಮಲ್ಲಿ ಅನುಭವದ ಜೊತೆಗೆ ಯುವ ಆಟಗಾರರಿದ್ದಾರೆ. ಭಾರತಕ್ಕೆ ಈಗ ಗೆಲ್ಲಲು ಒಳ್ಳೆಯ ಅವಕಾಶವಿದೆ. ಪಂದ್ಯದಲ್ಲಿ 20 ವಿಕೆಟ್ ಪಡೆಯುವುದು ಬಹಳ ಮುಖ್ಯ. ಪಂದ್ಯದ ಒಂದಲ್ಲಾ ಒಂದು ಹಂತದಲ್ಲಿ ನಮ್ಮ ಬ್ಯಾಟ್ಸ್​ಮೆನ್​ಗಳು ರನ್​ಗಳನ್ನ ಕಲೆ ಹಾಕುವುದರಲ್ಲಿ ಅನುಮಾನವಿಲ್ಲ. ಆದರೆ, ವೇಗದ ಬೌಲರ್​ಗಳ ಫಿಟ್ನೆಸ್ ಬಗ್ಗೆ ಮುತುವರ್ಜಿ ವಹಿಸಬೇಕು. ನಮ್ಮಲ್ಲಿ ಒಳ್ಳೆಯ ಯುವ ವೇಗದ ಬೌಲರ್ಸ್ ಇದ್ದಾರಾದರೂ ಐದು ಟೆಸ್ಟ್ ಪಂದ್ಯಗಳನ್ನ ಆಡಲು ಸಾಕಷ್ಟು ದೈಹಿಕ ಕ್ಷಮತೆ ಬೇಕಾಗುತ್ತದೆ" ಎಂದು ರಾಹುಲ್ ದ್ರಾವಿಡ್ ಅಬಿಪ್ರಾಯಪಟ್ಟಿದ್ದಾರೆ.

"ನಾವು 2007ರ ಇಂಗ್ಲೆಂಡ್ ಸರಣಿ ಗೆದ್ದಾಗ ನಮ್ಮ ಬೌಲಿಂಗ್ ಲೈನ್​ಅಪ್​ ಅದ್ಭುತವಾಗಿತ್ತು. ಪ್ರಮುಖವಾಗಿ ಯಾರು ಕೂಡ ಇಂಜುರಿಗೆ ತುತ್ತಾಗಿರಲಿಲ್ಲ. ಈ ಬಾರಿ ಕೂಡ ಭಾರತ ಉತ್ತಮ ಬೌಲರ್​​ಗಳನ್ನು ಹೊಂದಿದ್ದು, ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ತೋರುವ ಭರವಸೆಯಲ್ಲಿದ್ದಾರೆ" ಎಂದು ದ್ರಾವಿಡ್ ಹೇಳಿದ್ದಾರೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ