ಇಂದು ಭಾರತ-ಇಂಗ್ಲೆಂಡ್ 2ನೇ ಟಿ-20 ಕದನ: ಸರಣಿ ಕೈವಶದತ್ತ ಕೊಹ್ಲಿ ಪಡೆ ಚಿತ್ತ

news18
Updated:July 6, 2018, 11:44 AM IST
ಇಂದು ಭಾರತ-ಇಂಗ್ಲೆಂಡ್ 2ನೇ ಟಿ-20 ಕದನ: ಸರಣಿ ಕೈವಶದತ್ತ ಕೊಹ್ಲಿ ಪಡೆ ಚಿತ್ತ
news18
Updated: July 6, 2018, 11:44 AM IST
ನ್ಯೂಸ್ 18 ಕನ್ನಡ

ಕಾರ್ಡಿಫ್ (ಜುಲೈ. 06): ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟಿ-20 ಪಂದ್ಯವನ್ನು 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಸದ್ಯ ಸರಣಿ ವಶದತ್ತ ಕೊಹ್ಲಿ ಪಡೆ ಚಿತ್ತ ನೆಟ್ಟಿದೆ. ಇತ್ತ ತವರಿನಲ್ಲೇ ಸೋತಿರುವ ಇಂಗ್ಲೆಂಡ್​ ಮುಖಭಂಗ ಅನುಭವಿಸಿದ್ದು, ಪುಟಿದೇಳುವ ವಿಶ್ವಾಸದಲ್ಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ಗೆಲುವು ಯಾರ ಕೈ ಹಿಡಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಮ್ಯಾಂಚೆಸ್ಟರ್​ ಅಂಗಳದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಗೆಲುವಿನ ಮಾಲೆ ತೊಟ್ಟಿತ್ತು. ಆದರೆ, ಆರಂಭಿಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಬಾಯಿಸಿರಲಿಲ್ಲ. ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ಹೀಗಾಗಿ ಈ ಇಬ್ಬರು  ಆಟಗಾರರ ಮೇಲೆ ಹೆಚ್ಚಿನ ಒತ್ತಡವಿದೆ. ಇನ್ನು ಸಿಕ್ಕ ಅವಕಾಶದಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿರುವ ಕನ್ನಡಿಗ ಕೆ. ಎಲ್​ ರಾಹುಲ್​ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್​ ಕೊಹ್ಲಿ, ಸುರೇಶ್ ರೈನಾ, ಧೋನಿ ಜೊತೆಗೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅಬ್ಬರಿಸಬಲ್ಲರು. ಇನ್ನು ಕಳೆದ ಪಂದ್ಯದಲ್ಲಿ ದುಬಾರಿ ಆಗಿದ್ದ ವೇಗಿ ಭುವನೇಶ್ವರ್​ ಕುಮಾರ್, ಇಂದಿನ ಪಂದ್ಯದಲ್ಲಿ ರನ್​​ಗಳಿಗೆ ಕಡಿವಾಣ ಹಾಕಬೇಕಿದೆ. ಉಮೇಶ್​ ಯಾದವ್​ ಲಯ ಬದ್ಧ ದಾಳಿ ಸಂಘಟಿಸುತ್ತಿದ್ದು, ವ್ರಿಸ್ಟ್​ ಸ್ಪಿನ್ನರ್​ಗಳಾದ  ಯಜುವೇಂದ್ರ ಚಹಾಲ್​ ಹಾಗೂ ಕುಲ್ದೀಪ್​ ಯಾದವ್​ ವಿಕೆಟ್​ ಬೇಟೆಯಾಡಿ ನಾಯಕನ ಚಿಂತೆಯನ್ನು ಕಡಿಮೆ ಮಾಡಿದ್ದಾರೆ.

ಇತ್ತ ಮೊದಲ ಪಂದ್ಯದಲ್ಲಿ ಸೋಲುಂಡಿರುವ ಇಂಗ್ಲೆಂಡ್ ತಂಡ ಇಂದಿನ ಪಂದ್ಯದಲ್ಲಿ ಪುಟಿದೇಳುವ ಲೆಕ್ಕಾಚಾರದೊಂದಿಗೆ ಅಖಾಡ ಪ್ರವೇಶಿಸಲಿದೆ. ಕಳೆದ ಪಂದ್ಯದಲ್ಲಿ ಭರ್ಜರಿ ಆರಂಭ ನೀಡಿದ ಆರಂಭಿಕರ ಮೇಲೆ ಭರವಸೆ ಹೆಚ್ಚಿದೆ. ಇನ್ನು ಸ್ಟಾರ್​ ಬ್ಯಾಟ್ಸ್​ಮನ್ಸ್​ ಜೋ ರೂಟ್​, ಅಲೆಕ್ಸ್​ ಹೇಲ್ಸ್​​, ಇಯಾನ್​ ಮಾರ್ಗನ್​ ರನ್​ ಕಲೆ ಹಾಕದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆದರೆ ಜೋಸ್​ ಬಟ್ಲರ್ ಅಬ್ಬರಿಸುತ್ತಿರೋದು ತಂಡಕ್ಕೆ ಸಮಾಧಾನ ತಂದಿದೆ. ಇಂಗ್ಲೆಂಡ್ ಬೌಲರ್​​ಗಳು ನಾಯಕ ಇಟ್ಟಿರುವ ನಂಬಿಕೆಗೆ ಪೂರಕವಾಗಿ ಬೌಲ್​ ಮಾಡಬೇಕಿದೆ. ಪವರ್ ಪ್ಲೇ ಹಾಗೂ ಡೆತ್​ ಓವರ್​​ಗಳಲ್ಲಿ ಬಿಗುವಿನ ದಾಳಿ ನಡೆಸಿದರೆ ಮಾತ್ರ ಆತಿಥೇಯರು ಗೆಲುವಿನ ಹಳಿಗೆ ಮರಳಬಹುದು. ಇಲ್ಲದೆ ಹೋದಲ್ಲಿ ತವರಿನ ಅಂಗಳದಲ್ಲೇ ಆಂಗ್ಲರು,  ಮತ್ತೊಮ್ಮೆ ಭಾರೀ ಮುಖಭಂಗ ಎದುರಿಸಲಿದ್ದಾರೆ. ಒಟ್ಟಾರೆ ಎರಡೂ ತಂಡಕ್ಕೆ ಇಂದಿನ ಪಂದ್ಯ ಮುಖ್ಯವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಪಂದ್ಯ ಆರಂಭ: ರಾತ್ರಿ 10 ಗಂಟೆಗೆ (ಸೋಫಿಯಾ ಗಾರ್ಡನ್, ಕಾರ್ಡಿಫ್)
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ