ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಟೆಸ್ಟ್ ಸರಣಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಕಾಂಗರೂಗಳು ಭಾರತವನ್ನು ತಲುಪಿದ್ದು, ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಫೆಬ್ರವರಿ 9 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಹೀಗಿರುವಾಗ ಇನ್ನು ಕೇವಲ ಒಂದು ವಾರದಲ್ಲಿ ಆರಂಭವಾಗಲಿರುವ ಈ ಟೆಸ್ಟ್ ಸರಣಿಗೆ ಟೀಂ ಇಂಡಿಯಾ (Team India) ಕೂಡ ಸಜ್ಜಾಗಿದೆ. ಇವುಗಳ ನಡುವೆ ಬಿಸಿಸಿಐ (BCCI) ಕೂಡ ಮಹತ್ವದ ನಿರ್ಧಾರ ಕೈಗೊಂಡಿದೆ. BCCI ಈ ಪಂದ್ಯವನ್ನು ಭಾರತದಲ್ಲಿ ಉಚಿತವಾಗಿ ಪ್ರಸಾರ ಮಾಡಲು ವ್ಯವಸ್ಥೆ ಮಾಡಿದೆ.
ಉಚಿತವಾಗಿ ನೋಡಿ ಭಾರತ - ಆಸೀಸ್ ಸರಣಿ:
ಹೌದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಡಿಯಲ್ಲಿ ನಡೆಯಲಿರುವ ಈ ಸರಣಿಯನ್ನು ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಹಾಗೂ ಡಿಡಿ ಸ್ಪೋರ್ಟ್ಸ್ ಫ್ರೀ ಟು ಏರ್ ಚಾನೆಲ್‌ನಲ್ಲಿ ಲೈವ್ ಪ್ರಸಾರ ಮಾಡಲಾಗುವುದು ಎಂದು ಗುರುವಾರ ತಿಳಿಸಲಾಗಿದೆ. ಇದಲ್ಲದೆಯೇ ಡಿಡಿ ಸ್ಪೋರ್ಟ್ಸ್‌ನ ಆ್ಯಪ್ ಮೂಲಕ ಅಭಿಮಾನಿಗಳು ಮೊಬೈಲ್‌ನಲ್ಲಿ ಉಚಿತವಾಗಿ ಪಂದ್ಯವನ್ನು ಆನಂದಿಸಬಹುದು. ಇದಕ್ಕೂ ಮುನ್ನ ಡಿಡಿ ಸ್ಪೋರ್ಟ್ಸ್ ಭಾರತ-ಶ್ರೀಲಂಕಾ ಮತ್ತು ಭಾರತ-ನ್ಯೂಜಿಲೆಂಡ್ ಸರಣಿಗಳನ್ನು ಪ್ರಸಾರ ಮಾಡಿತ್ತು.
ಭಾರತಕ್ಕೆ ಮಹತ್ವದ ಸರಣಿ:
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯು ರೋಹಿತ್ ಶರ್ಮಾ ಪಡೆಗೆ ಮಾಡು ಇಲ್ಲವೇ ಮಡಿ ಸರಣಿಯಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಗೆಲ್ಲಬೇಕು. ಇಲ್ಲದಿದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಭಾರತದ ಕನಸು ಅಪೂರ್ಣವಾಗಿ ಉಳಿಯುತ್ತದೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಂತಕ್ಕೆ ತಲುಪಲು ಭಾರತ ತಂಡ ಕನಿಷ್ಠ 3-1 ರಿಂದ ಆಸ್ಟ್ರೇಲಿಯಾವನ್ನು ಸೋಲಿಸುವುದು ಅವಶ್ಯಕವಾಗಿದೆ. ಭಾರತದಲ್ಲಿ ಪಂದ್ಯ ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಸ್ಪಿನ್ ಟ್ರ್ಯಾಕ್‌ನಲ್ಲಿ ಕಾಂಗರೂಗಳನ್ನು ಸೋಲಿಸುವ ಸಾಮರ್ಥ್ಯ ಟೀಂ ಇಂಡಿಯಾಕ್ಕಿದೆ.
ಇದನ್ನೂ ಓದಿ: India vs Australia: ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ, ಭಾರತ-ಆಸೀಸ್ ತಂಡಗಳು ಹೀಗಿವೆ
ಭಾರತದ ವಿರುದ್ಧ ಕಾಂಗರೂಗಳ ತಯಾರಿ:
ಕಾಂಗರೂ ತಂಡ ಭಾರತದ ವಿರುದ್ಧ ಕಣಕ್ಕಿಳಿಯಲು ಭರ್ಜರಿ ಸಿದ್ಧತೆ ನಡೆಸಿದೆ. ಭಾರತದ ಸ್ಥಿತಿಯು ಸ್ಪಿನ್‌ಗೆ ಬೆಂಬಲ ನೀಡುತ್ತದೆ ಎಂಬುದು ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಹೆಚ್ಚುವರಿ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದ್ದಾರೆ. ಸ್ಪಿನ್ ಬೌಲಿಂಗ್ ಅಭ್ಯಾಸಕ್ಕಾಗಿ, ಆಸ್ಟ್ರೇಲಿಯಾ ತಂಡಕ್ಕಾಗಿ ವಿಶೇಷ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಆರು ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸದಲ್ಲಿ ಟೆಸ್ಟ್ ಸರಣಿ ಆಡಲು ಬಂದಿದೆ. ಇದೇ ವೇಳೆ ಭಾರತ ಎರಡು ಬಾರಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿತ್ತು. ಟೀಂ ಇಂಡಿಯಾ ಎರಡೂ ಬಾರಿ ಆತಿಥೇಯ ದೇಶವನ್ನು ಸೋಲಿಸಿದೆ.
ಜಡೇಜಾ ಇನ್ ಅಯ್ಯರ್ ಔಟ್:
ಇನ್ನು, ಕಳೆದ ಕೆಲ ತಿಂಗಳಿಂದ ತಂಡದಿಂದ ದೂರವಿದ್ದ ರವೀಂದ್ರ ಜಡೇಜಾ ಈ ಟೆಸ್ಟ್ ಸರಣಿ ಮೂಲಕ ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಆದರೆ ಗಾಯದ ಸಮಸ್ಯೆಯಿಂದ ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಸರಣಿಯಿಂದ ಹೊರನಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 2 ಟೆಸ್ಟ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ