COTIF ಕಪ್: ಭಾರತೀಯ ಕಿರಿಯರಿಗೆ ಸತತ ಎರಡು ಸೋಲು


Updated:August 2, 2018, 3:33 PM IST
COTIF ಕಪ್: ಭಾರತೀಯ ಕಿರಿಯರಿಗೆ ಸತತ ಎರಡು ಸೋಲು

Updated: August 2, 2018, 3:33 PM IST
- ನ್ಯೂಸ್18 ಕನ್ನಡ

ಬೆಂಗಳೂರು: ಸ್ಪೇನ್ ದೇಶದಲ್ಲಿ ನಡೆಯುತ್ತಿರುವ ಕೋಟಿಫ್ ಕಪ್ ಟೂರ್ನಿಯಲ್ಲಿ ಭಾರತ ಅಂಡರ್-20 ಫುಟ್ಬಾಲ್ ತಂಡ ಸತತ ಎರಡು ಸೋಲುಂಡಿದೆ. ಮಂಗಳವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ಮಾರಿಟಾನಿಯಾದ ಅಂಡರ್-20 ತಂಡದ ವಿರುದ್ಧ ಭಾರತೀಯರು 0-3 ಗೋಲುಗಳಿಂದ ಸೋಲನುಭವಿಸಿದರು. ಮೊದಲ ಪಂದ್ಯದಲ್ಲಿ ಸ್ಪೇನ್​ನ ಬಿ ಡಿವಿಷನ್ ಲೀಗ್​ನಲ್ಲಿ ಆಡುವ ಮುರ್ಷಿಯಾದ ಅಂಡರ್-20 ತಂಡವು ಭಾರತೀಯರನ್ನ ಮಣಿಸಿತ್ತು.

ಆಫ್ರಿಕಾದ ಮಾರಿಟಾನಿಯಾ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡ 4 ಬದಲಾವಣೆ ಮಾಡಿತು. ಜೀಕಾನ್ ಸಿಂಗ್, ಸಂಜೀವ್ ಸ್ಟಾಲಿನ್, ಜಿತೇಂದ್ರ ಸಿಂಗ್ ಮತ್ತು ಅನ್ವರ್ ಅಲಿ ಬದಲಿಗೆ ನರೇಂದ್ರ, ದೀಪಕ್ ಟಾಂಗ್ರಿ, ಅನಿಕೇತ್ ಜಾಧವ್ ಮತ್ತು ನಿಂಥಾಯಿನ್ಗಾಂಬಾ ಮೀಟೇ ಅವರನ್ನು ಕಣಕ್ಕಿಳಿಸಲಾಯಿತು. ಆರಂಭದಲ್ಲಿ ಒಂದಷ್ಟು ಆಕ್ರಮಕಾರಿ ಆಟವಾಡಿದ ಭಾರತೀಯರು 20ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿತು. 25ನೇ ನಿಮಿಷದಲ್ಲಿ ಆಫ್ರಿಕನ್ ದೇಶದ ತಂಡ ಮೊದಲ ಗೋಲು ಗಳಿಸಿ ಮುನ್ನಡೆ ಪಡೆಯಿತು. ಅದಾದ ನಂತರ ದ್ವಿತೀಯಾರ್ಧದಲ್ಲಿ ಭಾರತ ಗೋಲು ಗಳಿಸುವ ಇನ್ನೂ ಕೆಲ ಅವಕಾಶಗಳನ್ನು ಕೈಚೆಲ್ಲಿ ನಿರಾಶೆ ಅನುಭವಿಸಿತು. 71 ಮತ್ತು 78ನೇ ನಿಮಿಷದಲ್ಲಿ ಎದುರಾಳಿಗಳು ಇನ್ನೆರಡು ಗೋಲು ಗಳಿಸಿ ಗೆಲುವನ್ನು ಖಚಿತಪಡಿಸಿಕೊಂಡರು.

ಕಳೆದ ಭಾನುವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಮುರ್ಷಿಯಾ ವಿರುದ್ಧ ಭಾರತೀಯರು 0-2 ಗೋಲುಗಳಿಂದ ಸೋಲನುಭವಿಸಿದ್ದರು. ಜಿತೇಂದ್ರ ಸಿಂಗ್ ಮತ್ತು ಅನ್ವರ್ ಅಲಿ ಇಬ್ಬರೂ ರೆಡ್ ಕಾರ್ಡ್ ಪಡೆದದ್ದು ಭಾರತದ ಪ್ರತಿಹೋರಾಟವನ್ನು ಮೆತ್ತಗಾಗಿಸಿತು. ಈ ಪಂದ್ಯದಲ್ಲೂ ಭಾರತಕ್ಕೆ ಒಂದೆರಡು ಗೋಲುಗಳಿಸುವ ಅವಕಾಶಗಳಿದ್ದವು.

ಕಳೆದ ವರ್ಷದ ಅಂಡರ್-17 ವಿಶ್ವಕಪ್ ಮತ್ತು ಅಂಡರ್-19 ಎಎಫ್​ಸಿ ಕ್ವಾಲಿಫಯರ್ಸ್​ ಟೂರ್ನಿಗಳಲ್ಲಿ ಆಡಿದ ಪ್ರತಿಭಾನ್ವಿತರನ್ನು ಒಳಗೊಂಡಿರುವ ಈಗಿನ ಭಾರತ ಅಂಡರ್-20 ಫುಟ್ಬಾಲ್ ತಂಡಕ್ಕೆ ಈಗ ಇನ್ನೂ ಹೆಚ್ಚು ಕಠಿಣವಾಗಿರುವ 2 ಪಂದ್ಯಗಳು ಮುಂದಿವೆ. ನಾಳೆ, ಆ. 03ರಂದು ವೆನಿಜುವೆಲಾ ತಂಡವನ್ನು ಎದುರಿಸಲಿರುವ ಭಾರತೀಯರು 5ನೇ ತಾರೀಖಿನಂದು ಬಲಿಷ್ಠ ಅರ್ಜೆಂಟೀನಾ ಜೊತೆ ಸೆಣಸಾಡಲಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ