ಅಂಡರ್-19 ಏಷ್ಯಾ ಕಪ್: ಅಫ್ಘನ್ನರಿಗೆ ಸೋಲುಣಿಸಿ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟ ಭಾರತ

news18
Updated:October 2, 2018, 7:44 PM IST
ಅಂಡರ್-19 ಏಷ್ಯಾ ಕಪ್: ಅಫ್ಘನ್ನರಿಗೆ ಸೋಲುಣಿಸಿ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟ ಭಾರತ
(ಪ್ರಾತಿನಿಧಿಕ ಚಿತ್ರ)
  • Advertorial
  • Last Updated: October 2, 2018, 7:44 PM IST
  • Share this:
ನ್ಯೂಸ್ 18 ಕನ್ನಡ

ಅಂಡರ್-19 ಏಷ್ಯಾ ಕಪ್​​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಭಾರತ ಅಂಡರ್-19 ತಂಡ ಇಂದು ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 51 ರನ್​ಗಳ ಭರ್ಜರಿ ಜಯದೊಂದಿಗೆ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರಾರಂಭದಿಂದಲೇ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಯಶಸ್ವಿ ಜೈಸ್ವಾಲ್ ಮಾತ್ರ ಕ್ರೀಸ್ ಕಚ್ಚಿ ಆಡಿ ತಂಡಕ್ಕೆ ನೆರವಾದರು. 5ನೇ ವಿಕೆಟ್​ಗೆ ಜೈಸ್ವಾಲ್ ಜೊತೆಯಾದ ಆಯುಶ್ ಬದೊನಿ 80 ರನ್​ಗಳ ಕಾಣಿಕೆ ನೀಡಿದರು. ಜೈಸ್ವಾಲ್ 93 ಎಸೆತಗಳಲ್ಲಿ 92 ರನ್ ಸಿಡಿಸಿ ಶತಕ ವಂಚಿತರಾಗಿ ಪೆವಿಲಿಯನ್ ಸೇರಿಕೊಂಡರೆ, ಆಯುಶ್ 65 ರನ್​ಗೆ ಔಟ್ ಆದರು. ಅಂತಿಮವಾಗಿ ಭಾರತ 45.3 ಓವರ್​ಗೆ 221 ರನ್​ ಗಳಿಸಿರುವಾಗ ಆಲೌಟ್ ಆಯಿತು. ಅಫ್ಘನ್ ಪರ ಅಜ್ಮತುಲ್ಲ ಹಾಗೂ ಅಹ್ಮದ್ ತಲಾ 3 ವಿಕೆಟ್ ಕಿತ್ತರು.

222 ರನ್​​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ದೊರಕಿತು. ಮೊದಲನೇ ವಿಕೆಟ್​ಗೆ ಹುಸನ್ ಹಾಗೂ ನಾಯಕ ರಹ್ಮದುಲ್ಲ 56 ರನ್​ಗಳ ಜೊತೆಯಾಟ ನೀಡಿದರು. ಆದರೆ 47 ರನ್​ ಗಳಿಸಿರುವಾಗ ಹುಸನ್ ಹಾಗೂ 37 ರನ್ ಕಲೆಹಾಕಿರುವಾಗ ರಹ್ಮದುಲ್ಲ ಔಟ್ ಆದರು. ಆರಂಭಿಕರು ಔಟ್ ಆಗಿದ್ದೇ ತಡ ಉಳಿದ ಬ್ಯಾಟ್ಸ್​ಮನ್​​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು. ಪರಿಣಾಮ ಅಫ್ಘನ್ 45.4 ಓವರ್​​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ಸಿದ್ಧಾರ್ಥ್​​ ದೇಸಾಯ್ 4 ವಿಕೆಟ್ ಕಿತ್ತು ಮಿಂಚಿದರೆ, ಹರ್ಷ ತ್ಯಾಗಿ 3 ವಿಕೆಟ್ ಪಡೆದರು. ಈ ಮೂಲಕ ಭಾರತ 51 ರನ್​ಗಳ ಗೆಲುವಿನೊಂದಿಗೆ ಅಂಡರ್-19 ಏಷ್ಯಾ ಕಪ್​​ನಲ್ಲಿ ಸೆಮಿ ಫೈನಲ್ ಹಂತಕ್ಕೆ ತಲುಪಿದ್ದು, ಗುರುವಾರ (ಅ. 04) ಬಾಂಗ್ಲಾದೇಶ ವಿರುದ್ಧ ಸೆಣೆಸಾಟ ನಡೆಸಲಿದೆ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ