ಅಂಡರ್-19 ಏಷ್ಯಾಕಪ್: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತ: 227 ರನ್​ಗಳ ಭರ್ಜರಿ ಜಯ

news18
Updated:September 30, 2018, 10:17 PM IST
ಅಂಡರ್-19 ಏಷ್ಯಾಕಪ್: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತ: 227 ರನ್​ಗಳ ಭರ್ಜರಿ ಜಯ
(ಪ್ರಾತಿನಿಧಿಕ ಚಿತ್ರ)
  • Advertorial
  • Last Updated: September 30, 2018, 10:17 PM IST
  • Share this:
ನ್ಯೂಸ್ 18 ಕನ್ನಡ

ಹಿರಿಯರ 14ನೇ ಏಷ್ಯಾ ಕಪ್ ಮುಗಿದ ಬೆನ್ನಲ್ಲೆ ಅಂಡರ್-19 ಏಷ್ಯಾ ಕಪ್ ಆರಂಭಗೊಂಡಿದ್ದು, ಭಾರತ ಅಂಡರ್-19 ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ನಿನ್ನೆಯಷ್ಟೇ ನೇಪಾಳ ವಿರುದ್ಧ 171 ರನ್​ಗಳ  ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ಭಾರತ, ಇಂದು ಯುಎಇ ವಿರುದ್ಧವೂ 227 ರನ್​​ಗಳ ಭಾರೀ ಅಂತರದ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂಡರ್-19 ತಂಡಕ್ಕೆ ಆರಂಭಿಕರಾದ ಅನುಜ್ ರಾವತ್ ಹಾಗೂ ದೇವದತ್ ಪಡಿಕ್ಕಲ್ ದ್ವಿಶತಕದ ಜೊತೆಯಾಟ ನೀಡಿದರು. ಯುಎಇ ಬೌಲರ್​​ಗಳ ಬೆವರಿಳಿಸಿದ ಈ ಜೋಡಿ ಚೆಂಡನ್ನು ಮೂಲೆ ಮೂಲೆಗೆ ಅಟ್ಟಿ ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು. ಮೊದಲನೇ ವಿಕೆಟ್​ಗೆ 205 ರನ್​ಗಳ ಕಾಣಿಕೆಯೊಂದಿಗೆ ರಾವತ್ 102 ರನ್​ಗಳಿಸಿ ಔಟ್ ಆದರೆ, ದೇವದತ್ 121 ರನ್​​​ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ನಾಯಕ ಪವನ್ ಶಾ(45) ಹಾಗೂ ಅಮೀರ್ ಚೌಧರಿ(42) ಬ್ಯಾಟ್ ಬೀಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ 50 ಓವರ್​ಗೆ 6 ವಿಕೆಟ್ ಕಳೆದುಕೊಂಡು 354 ರನ್ ಕಲೆಹಾಕಿತು.

ಈ ಬೃಹತ್ ಮೊತ್ತ ಬೆನ್ನತ್ತಿದ ಯುಎಇ ತಂಡ ಸಿದ್ಧಾರ್ಥ್​​ ದೇಸಾಯ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗಿತು. ಯುಎಇ ಪರ ಅಲಿ ಮಿರ್ಜಾ 41 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 25ರ ಗಡಿ ದಾಟಲಿಲ್ಲ. ಪರಿಣಾಮ 33.4 ಓವರ್​ಗೆ ಕೇವಲ 127  ರನ್​ ಗಳಿಸಿ ಆಲೌಟ್ ಆಯಿತು.

ಭಾರತ ಪರ ಸಿದ್ಧಾರ್ಥ್​​ 6 ವಿಕೆಟ್ ಕಿತ್ತ ಸಾಧನೆ ಮಾಡಿದರು. ಭಾರತ ಪರ 121 ರನ್ ಸಿಡಿಸಿದ ದೇವದತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಭಾರತ ಅಂಡರ್-19 ತಂಡ ತನ್ನ ಮುಂದಿನ ಪಂದ್ಯ ಬರುವ ಮಂಗಳವಾರ ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.

 

First published:September 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ