Chess Olympiad- ವಿಶ್ವನಾಥನ್ ಆನಂದ್ ನೇತೃತ್ವದ ಭಾರತ ಚೆಸ್ ತಂಡಕ್ಕೆ ಸೋಲು

FIDE Chess- ಅನ್​ಲೈನ್​ನಲ್ಲಿ ನಡೆಯುತ್ತಿರುವ FIDE ಚೆಸ್ ಒಲಿಂಪಿಯಾಡ್​ನಲ್ಲಿ ಭಾರತ ಸೆಮಿಫೈನಲ್​ನಲ್ಲಿ ಅಮೆರಿಕ ವಿರುದ್ಧ ಸೋತಿತು. ಮೊದಲ ಸುತ್ತಿನಲ್ಲಿ ಗೆದ್ದ ಭಾರತ ಎರಡನೇ ಸುತ್ತಿನಲ್ಲಿ ಸೋತಿತು. ಟೈ ಬ್ರೇಕರ್​ನಲ್ಲಿ ಅಮೆರಿಕನ್ನರು ಮೇಲುಗೈ ಸಾಧಿಸಿ ಪ್ರಶಸ್ತಿ ಸುತ್ತು ತಲುಪಿದ್ಧಾರೆ.

ವಿಶ್ವನಾಥನ್ ಆನಂದ್

ವಿಶ್ವನಾಥನ್ ಆನಂದ್

 • News18
 • Last Updated :
 • Share this:
  ಚೆನ್ನೈ: FIDE ಆನ್​ಲೈನ್ ಚೆಸ್ ಒಲಿಂಪಿಯಾಡ್​ನಲ್ಲಿ ಭಾರತ ತಂಡ ಫೈನಲ್ ತಲುಪಲು ವಿಫಲವಾಗಿದೆ. ವಿಶ್ವನಾಥನ್ ಆನಂದ್ ನೇತೃತ್ವದ ಭಾರತ ಚೆಸ್ ತಂಡ ನಿನ್ನೆ ರಾತ್ರಿ ನಡೆದ ಸೆಮಿಫೈನಲ್​ನಲ್ಲಿ ಅಮೆರಿಕ ವಿರುದ್ಧ ವೀರೋಚಿತ ಸೋಲನುಭವಿಸಿದೆ. ಟೈ ಬ್ರೇಕರ್ ಸುತ್ತಿನವರೆಗೂ ಹೋದ ಪಂದ್ಯದಲ್ಲಿ ಅಮೆರಿಕಾ ತಂಡ ಅಂತಿಮ ಗೆಲುವಿನ ನಗೆ ಬೀರಿದೆ. ಇಂದು ನಡೆಯುವ ಫೈನಲ್​ನಲ್ಲಿ ಅಮೆರಿಕಗೆ ರಷ್ಯಾ ಸವಾಲು ಹಾಕುತ್ತಿದೆ. ಇನ್ನೊಂದೆಡೆ ರಷ್ಯಾ ಚೆಸ್ ತಂಡ ಚೀನಾ ವಿರುದ್ಧ ಎರಡೂ ಸುತ್ತುಗಳಲ್ಲಿ ಗೆದ್ದು ಸುಲಭವಾಗಿ ಫೈನಲ್ ಪ್ರವೇಶಿಸಿತು. ಆನ್​ಲೈನ್​ನಲ್ಲೇ ಈ ಪಂದ್ಯಾವಳಿ ನಡೆದಿದೆ. ವಿಶ್ವನಾಥನ್ ಆನಂದ್ ನೇತೃತ್ವದ ಭಾರತ ತಂಡದಲ್ಲಿ ಪಿ ಹರಿಕೃಷ್ಣ, ಡಿ ಹಾರಿಕಾ, ಆರ್ ವೈಶಾಲಿ, ಕೊನೇರು ಹಂಪಿ, ನಿಹಾಲ್ ಸರಿನ್, ವಿದಿತ್ ಗುಜರಾತಿ, ಆರ್ ಪ್ರಗ್ನಾನಂದ. ಬೊ ಅಧಿಬನ್ ಅವರು ಇದ್ದರು.

  ಭಾರತ ತಂಡ ಮೊದಲ ಸುತ್ತಿನಲ್ಲಿ 5-1ರಿಂದ ಗೆದ್ದರೆ, ಎರಡನೇ ಸುತ್ತಿನಲ್ಲಿ ಅಮೆರಿಕ 4-2ರಿಂದ ಜಯಿಸಿತು. ಬ್ಲಿಜ್ ಟೈ ಬ್ರೇಕರ್​ನಲ್ಲಿ ಅಮೆರಿಕ 4.5 – 1.5 ಅಂಕಗಳಿಂದ ಭಾರತವನ್ನು ಸೋಲಿಸಿ ಫೈನಲ್ ತಲುಪಿತು. ಮೊದಲ ಸುತ್ತಿನಲ್ಲಿ ವಿಶ್ವನಾಥನ್ ಆನಂದ್, ಪಿ ಹರಿಕೃಷ್ಣ, ಡಿ ಹಾರಿಕಾ, ಆರ್ ವೈಶಾಲಿ ಅವರು ಗೆಲುವು ಸಾಧಿಸಿದರೆ, ಕೊನೇರು ಹಂಪಿ ಮತ್ತು ನಿಹಾಲ್ ಸರಿನ್ ತಮ್ಮ ಪಂದ್ಯಗಳನ್ನ ಡ್ರಾ ಮಾಡಿಕೊಂಡರು. ಭಾರತದ ನಂಬರ್ ಒನ್ ಚೆಸ್ ಆಟಗಾರ ಹಾಗೂ ಅನುಭವಿ ವಿಶ್ವನಾಥನ್ ಆನಂದ್ ಅವರು ಅಮೆರಿಕದ ಜೆಫ್ರೀ ಕ್ಸಿಯೋಂಗ್ ವಿರುದ್ಧ ಗೆದ್ದು ಭಾರತಕ್ಕೆ ಶುಭಾರಂಭ ತಂದುಕೊಟ್ಟರು. ಎರಡನೇ ಬೋರ್ಡ್​ನಲ್ಲಿ ಡೇರಿಯಸ್ ಶ್ವೀಜ್ ವಿರುದ್ಧ ಪಿ ಹರಿಕೃಷ್ಣ ಭರ್ಜರಿ ಗೆಲುವು ಸಾಧಿಸಿದತು. ಡಿ ಹಾರಿಕಾ ಅವರು ಸಂಕಷ್ಟದ ಸ್ಥಿತಿಯಿಂದ ಚೇತರಿಸಿಕೊಂಡು ಆನಾ ಜಟೋನ್​ಸ್ಕಿ ಅವರನ್ನ ಮಣಿಸಿದರು. ಆರ್ ವೈಶಾಲಿ ಅವರು 38 ನಡೆಗಳಲ್ಲಿ ತಾಲಿಯಾ ಕರ್ವಾಂಟೆಸ್ ವಿರುದ್ಧ ಗೆಲುವು ಪಡೆದರು.

  ಕೊನೇರು ಹಂಪಿ ಮತ್ತು ಇರಿನಾ ಕ್ರಶ್ ಹಾಗೂ ನಿಹಾಲ್ ಸರೀನ್ ಮತ್ತು ಅವೋಂಡರ್ ಲಿಯಾಂಗ್ ನಡುವಿನ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡವು. ಅಂತಿಮವಾಗಿ ಭಾರತ ತಂಡ ನಾಲ್ಕು ಗೆಲುವು ಎರಡು ಡ್ರಾದೊಂದಿಗೆ 5-1 ಅಂಕಗಳಿಂದ ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿತು.

  ಆದರೆ, ಎರಡನೇ ಸುತ್ತಿನಲ್ಲಿ ಅಮೆರಿಕನ್ನರು ಪ್ರಾಬಲ್ಯ ಮೆರೆದರು. ಜೆಫ್ರೀ ಕ್ಸಿಯೋಂಗ್ ಅವರು ವಿಶಿ ಆನಂದ್​ಗೆ ಸೋಲುಣಿಸಿದರು. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರಿಗೆ ಈ ಟೂರ್ನಿಯಲ್ಲಿ ಬಂದ ಮೊದಲ ಸೋಲಾಯಿತು. ಪಿ ಹರಿಕೃಷ್ಣ ಮತ್ತು ನಿಹಾಲ್ ಸರೀನ್ ಬದಲು ಎರಡನೇ ಸುತ್ತಿನಲ್ಲಿ ಆಡಿದ್ದ ವಿದಿತ್ ಗುಜರಾತಿ ಮತ್ತು ಆರ್ ಪ್ರಗ್ನಾನಂದ ಅವರು ಸೋಲನುಭವಿಸಿದರು. ಇದು ಭಾರತದ ಫೈನಲ್ ಆಸೆಗೆ ತಣ್ಣೀರು ಎರಚಲು ಪ್ರಮುಖ ಕಾರಣವಾಯಿತು. ಈ ಎರಡನೇ ಸುತ್ತಿನಲ್ಲಿ ಭಾರತಕ್ಕೆ ದಕ್ಕಿದ ಒಂದೇ ಗೆಲುವನ್ನು ತಂದುಕೊಟ್ಟವರು ಆಂಧ್ರ ಮೂಲದ ಡಿ ಹಾರಿಕಾ. ಇನ್ನು, ಕೊನೇರು ಹಂಪಿ ಹಾಗೂ ಆರ್ ವೈಶಾಲಿ ಅವರು ತಂತಮ್ಮ ಪಂದ್ಯಗಳನ್ನ ಡ್ರಾ ಮಾಡಿಕೊಂಡರು. ಅಂತಿಮವಾಗಿ ಭಾರತೀಯರಿಗೆ ಈ ಎರಡನೇ ಸುತ್ತಿನಲ್ಲಿ ಸಿಕ್ಕಿದ್ದು 2 ಪಾಯಿಂಟ್ ಮಾತ್ರವೇ. ವಿಶ್ವನಾಥನ್ ಆನಂದ್, ವಿದಿತ್ ಮತ್ತು ಪ್ರಗ್ನಾನಂದ ಈ ಮೂವರಲ್ಲಿ ಒಬ್ಬರಾದರೂ ಗೆದ್ದಿದ್ದರೆ ಅಥವಾ ಇಬ್ಬರು ಡ್ರಾ ಮಾಡಿದ್ದರೂ ಭಾರತ ಫೈನಲ್ ತಲುಪುತ್ತಿತ್ತು.

  ಇದನ್ನೂ ಓದಿ: Javed Akhtar- ವಿಶ್ವದಲ್ಲೇ ಅತೀ ಸಭ್ಯ, ಸಹಿಷ್ಣು ಬಹುಸಂಖ್ಯಾತರೆಂದರೆ ಹಿಂದೂಗಳೇ: ಜಾವೇದ್ ಅಖ್ತರ್

  ಅಮೆರಿಕ ಮತ್ತು ಭಾರತ ತಂಡಗಳು ತಲಾ ಒಂದೊಂದು ಸುತ್ತು ಗೆದ್ದದ್ದರಿಂದ ವಿಜೇತರನ್ನ ನಿರ್ಧರಿಸಲು ಬ್ಲಿಜ್ ಟೈ ಬ್ರೇಕರ್ ಹಣಾಹಣಿ ನಡೆಸಲಾಯಿತು. ಈ ಸುತ್ತಿನಲ್ಲಿ ಭಾರತದ ಪರ ಪಿ ಹರಿಕೃಷ್ಣ, ಹಾರಿಕಾ, ವೈಶಾಲಿ, ಅಧಿಬನ್, ನಿಹಾಲ್ ಮತ್ತು ಕೊನೇರು ಹಂಪಿ ಅವರು ಆಡಿದರು. ನಿಹಾಲ್ ಡ್ರಾ ಮಾಡಿಕೊಂಡರೆ, ಉಳಿದ ಆಟಗಾರರು ಸೋತರು.

  ಇನ್ನೊಂದು ಸೆಮಿಫೈನಲ್​ನಲ್ಲಿ ರಷ್ಯಾ ತಂಡ ಚೀನಾ ವಿರುದ್ಧ ಮೊದಲ ಸುತ್ತಿನಲ್ಲಿ 3.5-2.5 ಅಂಕಗಳಿಂದ, ಹಾಗೂ ಎರಡನೇ ಸುತ್ತಿನಲ್ಲಿ 4-2 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಇಂದು ಸಂಜೆ ನಡೆಯುವ ಫೈನಲ್​ನಲ್ಲಿ ಅಮೆರಿಕ ಮತ್ತು ರಷ್ಯಾ ಮುಖಾಮುಖಿಯಾಗಲಿವೆ. ಭಾರತ ಮತ್ತು ರಷ್ಯಾ ತಂಡಗಳು ಕಳೆದ ಬಾರಿಯ ಒಲಿಂಪಿಯಾಡ್​ನಲ್ಲಿ ಜಂಟಿ ಚಾಂಪಿಯನ್ಸ್ ಎನಿಸಿದ್ದವು.
  Published by:Vijayasarthy SN
  First published: