ಫೀಫಾ ವಿಶ್ವಕಪ್ ಕ್ವಾಲಿಫಯರ್ಸ್: ಭಾರತಕ್ಕೆ ಆರಂಭಿಕ ನಿರಾಸೆ; ಕೈಗೆ ಬಂದ ತುತ್ತು ಬಾಯಿಗೆ ದಕ್ಕದ್ದಕ್ಕೆ ಸುನೀಲ್ ಛೇಟ್ರಿ ಮತ್ತು ಕೋಚ್ ಬೇಸರ

ಭಾರತ ಸೋಲನುಭವಿಸುವ ಮುನ್ನ ಪ್ರಬಲ ಓಮನ್​ ಎದುರು ವೀರೋಚಿತ ಹೋರಾಟ ತೋರಿತು. ಕತಾರ್ ವಿರುದ್ಧ ಭಾರತ ಮುಂದಿನ ಪಂದ್ಯವಾಡಲಿದೆ.


Updated:September 6, 2019, 3:08 PM IST
ಫೀಫಾ ವಿಶ್ವಕಪ್ ಕ್ವಾಲಿಫಯರ್ಸ್: ಭಾರತಕ್ಕೆ ಆರಂಭಿಕ ನಿರಾಸೆ; ಕೈಗೆ ಬಂದ ತುತ್ತು ಬಾಯಿಗೆ ದಕ್ಕದ್ದಕ್ಕೆ ಸುನೀಲ್ ಛೇಟ್ರಿ ಮತ್ತು ಕೋಚ್ ಬೇಸರ
ಭಾರತ ಮತ್ತು ಓಮನ್ ಫುಟ್ಬಾಲ್ ಪಂದ್ಯದ ದೃಶ್ಯ
  • Share this:
ಗುವಾಹಟಿ: 2020ರ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಲು ನಡೆಯುತ್ತಿರುವ ಎರಡನೇ ಸುತ್ತಿನ ಕ್ವಾಲಿಫೈಯರ್ ಟೂರ್ನಿಯಲ್ಲಿ ಭಾರತ ತಂಡ ನಿರಾಸೆಯ ಆರಂಭ ಕಂಡಿದೆ. ನಿನ್ನೆ ನಡೆದ ಇ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪ್ರಬಲ ಓಮನ್ ಎದುರು ಭಾರತ 1-2 ಗೋಲುಗಳಿಂದ ಸೋತಿತು.

24ನೇ ನಿಮಿಷದಲ್ಲಿ ಗೋಲು ಭಾರಿಸಿ 80ನೇ ನಿಮಿಷದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಭಾರತ ತಂಡ ಕೊನೆಯ 10 ನಿಮಿಷದಲ್ಲಿ ಎಡವಿ ಸೋಲಪ್ಪಿತು. ಓಮನ್​ನ ಅಲ್-ಅಲಾವಿ ಅಲ್-ಮಂದಾರ್ ಅವರು 82 ಮತ್ತು 90ನೇ ನಿಮಿಷದಲ್ಲಿ ಎರಡು ಗೋಲು ಭಾರಿಸಿ ತಮ್ಮ ತಂಡಕ್ಕೆ ಅಮೂಲ್ಯ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: (Video): 2025ರಲ್ಲಿ ಪಾಕಿಸ್ತಾನ ಪರ ವಿರಾಟ್ ಕೊಹ್ಲಿ ಕಣಕ್ಕೆ; ನಾಚಿಕೆಗೇಡಿನ ವಿಡಿಯೋ ಮಾಡಿದ ಪಾಕಿಸ್ತಾನ

ಮೊದಲ ಅರ್ಧ ಭಾಗದಲ್ಲಿ ಭಾರತ ಸಂಪೂರ್ಣವಾಗಿ ಪ್ರಾಬಲ್ಯ ಮೆರೆದಿದರೂ ಅನೇಕ ಗೋಲು ಗಳಿಸುವ ಅವಕಾಶಗಳನ್ನ ಕೈಚೆಲ್ಲಿತ್ತು. ಸುನೀಲ್ ಛೇಟ್ರಿ ಅವರೊಬ್ಬರು ಮಾತ್ರ ಗೋಲು ಗಳಿಸಲು ಶಕ್ಯರಾದರು. ಉದಾಂತ ಸಿಂಗ್ ಮತ್ತು ಸಂದೇಶ ಝಿಂಗನ್ ಅವರು ಗೋಲು ಗಳಿಸಲು ಮಾಡಿದ ಪ್ರಯತ್ನ ಸ್ವಲ್ಪದರಲ್ಲಿ ತಪ್ಪಿದ್ದವು. ಭಾರತಕ್ಕೆ ಫಸ್ಟ್ ಹಾಫ್​ನಲ್ಲಿ 3-4 ಗೋಲು ಗಳಿಸುವ ಅವಕಾಶಗಳಿದ್ದವು.

ದ್ವಿತೀಯಾರ್ಧದಲ್ಲಿ ಓಮನ್ ತಂಡದ ಸ್ವರೂಪ ಬದಲಾಯಿತು. ಭಾರತದ ಆಟಗಾರರು ಬಳಲುತ್ತಾ ಏಕಾಗ್ರತೆ ಕಳೆದುಕೊಳ್ಳುತ್ತಿರುವಂತೆಯೇ ಓಮನ್ ತಂಡದವರು ಇದರ ಲಾಭ ಪಡೆಯಲು ನಿರಂತರ ಪ್ರಯತ್ನ ಮಾಡಿದರು. ಭಾರತದ ಆಟಗಾರರು ತಮ್ಮ ಏಕೈಕ ಗೋಲಿನ ಮುನ್ನಡೆಯನ್ನೇ ಕಾಯ್ದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಂತಿತ್ತು. ತತ್​ಪರಿಣಾಮವಾಗಿ ಓಮನ್ ತಂಡ ಮಿಂಚಿನ ವೇಗದಲ್ಲಿ 2 ಗೋಲು ಗಳಿಸಿ ಭಾರತಕ್ಕೆ ಶಾಕ್ ಕೊಟ್ಟಿತು.

ಇದನ್ನೂ ಓದಿ: ಎದುರಾಳಿಗಿಂತ 51 ರನ್ ಅಧಿಕ ಬಾರಿಸಿದರೂ ಸೋತ ಭಾರತ ಎ; ಹರಿಣಗಳಿಗೆ 4 ರನ್​ಗಳ ರೋಚಕ ಜಯ!

ತಮ್ಮ ತಂಡದ ವೀರೋಚಿತ ಸೋಲಿನ ಬಗ್ಗೆ ನಾಯಕ ಸುನೀಲ್ ಛೇಟ್ರಿ ಅತೀವ ನಿರಾಸೆ ವ್ಯಕ್ತಪಡಿಸಿದ್ದಾರೆ. “ಈ ಸೋಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದ್ವಿತೀಯಾರ್ಧದಲ್ಲಿ ನಾವು ಚೆಂಡಿನ ಮೇಲೆ ಸರಿಯಾಗಿ ನಿಯಂತ್ರಣ ಸಾಧಿಸಲಿಲ್ಲ. ಓಮನ್ ತಂಡದಂತಹ ಎದುರಾಳಿಗಳಿಗೆ ನಾವು ಚೆಂಡು ಬಿಟ್ಟುಕೊಟ್ಟರೆ ಪಂದ್ಯ ಗೆಲ್ಲುವುದು ಸಾಧ್ಯವಿಲ್ಲ. ಈ ವಿಚಾರದ ಬಗ್ಗೆ ನಾವು ಗಮನ ಹರಿಸಬೇಕಿದೆ. ಆದರೆ, ನಮ್ಮ ಆಟಗಾರರು ವೀರೋಚಿತ ಹೋರಾಟ ತೋರಿದ್ದು ಮಾತ್ರ ನಿಜ” ಎಂದು ಸುನೀಲ್ ಛೇಟ್ರಿ ಅಭಿಪ್ರಾಯಪಟ್ಟಿದ್ದಾರೆ.ಇನ್ನು, ನೂತನ ಕೋಚ್ ಇಗೋರ್ ಸ್ಟಿಮಾಚ್ ಅವರು ಸೋಲಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿದರೂ ಮೊದಲ 70 ನಿಮಿಷ ಭಾರತೀಯ ಆಟಗಾರರು ಆಡಿದ ರೀತಿಯನ್ನು ಪ್ರಶಂಸಿಸಿದ್ದಾರೆ. ಮೊದಲಾರ್ಧದಲ್ಲೇ ನಾವು ಹೆಚ್ಚು ಗೋಲು ಗಳಿಸಿ ಎದುರಾಳಿಗಳನ್ನು ಮಣಿಸಬಹುದಿತ್ತು. ಆದರೆ, ದುರದೃಷ್ಟಕ್ಕೆ ಅದು ಸಾಧ್ಯವಾಗಲಿಲ್ಲ. ಆದರೆ, ಅಂತಿಮ ಕ್ಷಣಗಳಲ್ಲಿ ನಮ್ಮ ಆಟಗಾರರು ಅನೇಕ ತಪ್ಪುಗಳನ್ನು ಮಾಡಿದ್ದು ಬಹಳ ದುಬಾರಿಯಾಗಿ ಪರಿಣಮಿಸಿತು. ನಾವು ಮುನ್ನಡೆಯಲ್ಲಿದ್ದಾಗ ಚೆಂಡನ್ನು ಆದಷ್ಟೂ ನಮ್ಮ ಬಳಿಯಲ್ಲೇ ಇಟ್ಟುಕೊಳ್ಳಬೇಕು, ಪಾಸ್ ಮಾಡುತ್ತಿರಬೇಕು. ಆದರೆ, ಕೊನೆಯ 10 ನಿಮಿಷದಲ್ಲಿ ಇದು ಸಾಧ್ಯವಾಗಲಿಲ್ಲ. ಭಾರತೀಯ ಆಟಗಾರರ ಅನುಭವದ ಕೊರತೆಯೇ ಇದಕ್ಕೆ ಕಾರಣ ಎಂದು ಇಗೋರ್ ಸ್ಟಿಮಾಚ್ ತಿಳಿಸಿದ್ಧಾರೆ.

ಇದನ್ನೂ ಓದಿ: ಅರ್ಧಶತಕ ಸಿಡಿಸಿದ ಕಿವೀಸ್ ಆಟಗಾರನನ್ನು ಟ್ರೋಲ್ ಮಾಡಿದ ‘ಆರ್​ಸಿಬಿ’ ಅಭಿಮಾನಿಗಳು; ಯಾಕೆ ಗೊತ್ತಾ?

ಹಾಗೆಯೇ, ಭಾರತ ತಂಡ ಗೋಲು ಗಳಿಸಲು ಸುನೀಲ್ ಛೇಟ್ರಿ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಗೋಲು ಗಳಿಸಬಲ್ಲ ಇನ್ನಷ್ಟು ಸ್ಟ್ರೈಕರ್​ಗಳ ಅಗತ್ಯ ಭಾರತಕ್ಕಿದೆ ಎಂದೂ ಕೋಚ್ ಹೇಳಿದ್ದಾರೆ.

ಮುಂದಿನ ಪಂದ್ಯಗಳ ವೇಳಾಪಟ್ಟಿ:

ಇ ಗುಂಪಿನಲ್ಲಿ ಭಾರತ, ಓಮನ್, ಕತಾರ್, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ತಂಡಗಳಿವೆ. ನಿನ್ನೆ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪ್ರಬಲ ಕತಾರ್ ತಂಡ 6-0 ಗೋಲುಗಳಿಂದ ಆಫ್ಘಾನಿಸ್ತಾವನ್ನು ಮಣಿಸಿದೆ. ಭರ್ಜರಿ ಫಾರ್ಮ್​ನಲ್ಲಿರುವ ಕತಾರ್ ತಂಡವೂ ಈಗ ಭಾರತದ ಮುಂದಿನ ಎದುರಾಳಿಯಾಗಿದೆ. ಸೆ. 10ರಂದು ಈ ಪಂದ್ಯಕ್ಕಾಗಿ ಭಾರತ ತಂಡ ಕತಾರ್​ಗೆ ಪ್ರಯಾಣ ಬೆಳಸಲಿದೆ. ಈ ಗುಂಪಿನಲ್ಲಿರುವ ಪ್ರತಿಯೊಂದು ತಂಡವೂ ಒಟ್ಟು 8 ಪಂದ್ಯಗಳನ್ನ ಆಡುತ್ತವೆ. ಪ್ರತೀ ಎದುರಾಳಿಯ ಮೇಲೂ ತಲಾ 2 ಪಂದ್ಯಗಳನ್ನ ಆಡುತ್ತದೆ.

ಭಾರತ ಆಡುವ ಪಂದ್ಯಗಳು:
2019, ಸೆ. 5: ಭಾರತ ವರ್ಸಸ್ ಓಮನ್
ಸೆ. 10: ಕತಾರ್ ವರ್ಸಸ್ ಭಾರತ
ಅ. 15: ಭಾರತ ವರ್ಸಸ್ ಬಾಂಗ್ಲಾದೇಶ
ನ. 14: ಆಫ್ಘಾನಿಸ್ತಾನ್ ವರ್ಸಸ್ ಭಾರತ
ನ. 19: ಓಮನ್ ವರ್ಸಸ್ ಭಾರತ
2020, ಮಾ. 26: ಭಾರತ ವರ್ಸಸ್ ಕತಾರ್
ಜೂ. 4: ಬಾಂಗ್ಲಾದೇಶ ವರ್ಸಸ್ ಭಾರತ
ಜೂ. 9: ಭಾರತ ವರ್ಸಸ್ ಆಫ್ಘಾನಿಸ್ತಾನ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ