SAFF Cup- ಸ್ಯಾಫ್ ಕಪ್ ಫುಟ್ಬಾಲ್: ಬಾಂಗ್ಲಾದೇಶ-ಭಾರತ ಪಂದ್ಯ ಡ್ರಾ; ಏಳು ಬಾರಿ ಚಾಂಪಿಯನ್​ಗೆ ನಿರಾಶೆ

India vs Bangladesh- ಐದು ತಂಡಗಳು ಪಾಲ್ಗೊಂಡಿರುವ ಈ ಬಾರಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿದೆ. ಸುನೀಲ್ ಛೇಟ್ರಿ ಭಾರತದ ಪರ ಗೋಲು ಗಳಿಸಿದರು.

ಭಾರತ ಮತ್ತು ಬಾಂಗ್ಲಾದೇಶ ಫುಟ್ಬಾಲ್ ಪಂದ್ಯ

ಭಾರತ ಮತ್ತು ಬಾಂಗ್ಲಾದೇಶ ಫುಟ್ಬಾಲ್ ಪಂದ್ಯ

  • News18
  • Last Updated :
  • Share this:
    ಮಾಲೆ, ಮಾಲ್ಡೀವ್ಸ್, ಅ. 04: ಇಲ್ಲಿ ನಡೆಯುತ್ತಿರುವ 13ನೇ ಸ್ಯಾಫ್ ಚಾಂಪಿಯನ್​ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಬಾಂಗ್ಲಾದೇಶದ ಮತ್ತು ಭಾರತ ನಡುವಿನ ಪಂದ್ಯ 1-1ರಿಂದ ಡ್ರಾ ಆಗಿದೆ. ಸುನೀಲ್ ಛೇಟ್ರಿ ಮೊದಲಾರ್ಧದಲ್ಲಿ ಭಾರತದ ಪರ ಗೋಲು ಗಳಿಸಿದರೆ, ದ್ವಿತೀಯಾರ್ಧದಲ್ಲಿ ಬಾಂಗ್ಲಾದೇಶದ ಯಾಸರ್ ಅರಾಫತ್ ಅವರು ಗೋಲು ಗಳಿಸಿ ಸ್ಕೋರ್ ಸಮ ಮಾಡಿದರು. ಭಾರತ ಈ ಪಂದ್ಯ ಗೆದ್ದಿದ್ದರೆ 3 ಅಂಕ ಸಿಗುತ್ತಿತ್ತು. ಈಗ ಒಂದಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತಾಯಿತು.

    ಪಂದ್ಯದ 27ನೇ ನಿಮಿಷದಲ್ಲಿ ಸುನೀಲ್ ಛೇಟ್ರಿ ಗೋಲು ಬಳಿಸಿ ಭಾರತದ ಪಾಳಯದಲ್ಲಿ ಸಂಚಲನ ಸೃಷ್ಟಿಸಿದರು. ಉದಾಂತ ಸಿಂಗ್ ಅವರು ನೀಡಿದ ಪಾಸ್ ಅನ್ನು ಛೇಟ್ರಿ ಗೋಲಾಗಿಸಿದರು. ಅದಾದ ಬಳಿಕ ಬಾಂಗ್ಲಾದೇಶ ಪ್ರತಿಹೋರಾಟ ತೋರಿ ಅನೇಕ ಬಾರಿ ಗೋಲು ಗಳಿಸುವ ಸಮೀಪಕ್ಕೆ ಬಂದಿತ್ತು. ಆದರೆ, ಗೋಲ್ ಕೀಪರ್ ಗುರಪ್ರೀತ್ ಸಿಂಗ್ ಸಂಧು ಕೆಲ ಅದ್ಭುತ ರಕ್ಷಣೆ ಮೂಲಕ ಗೋಲುಗಳನ್ನ ತಡೆದರು.

    ಎರಡನೇ ಅವಧಿಯಲ್ಲಿ ಬಾಂಗ್ಲಾದೇಶದ ಬಿಶ್ವನಾಥ್ ಘೋಷ್ ಅವರು ಎರಡು ಫೌಲ್ ಮಾಡಿದ ಕಾರಣ ರೆಡ್ ಕಾರ್ಡ್ ಪಡೆದು ಪಂದ್ಯದಿಂದ ಹೊರನಡೆಯಬೇಕಾಯಿತು. 10 ಮಂದಿಯ ತಂಡವಾದರೂ ಬಾಂಗ್ಲಾದೇಶದ ಹೋರಾಟದ ತೀವ್ರತೆ ಕಡಿಮೆ ಆಗಲಿಲ್ಲ. ಬಾಂಗ್ಲಾದೇಶದ ಸತತ ಪ್ರಯತ್ನಕ್ಕೆ 74ನೇ ನಿಮಿಷದಲ್ಲಿ ಫಲ ಸಿಕ್ಕಿತು. ಜಮಲ್ ಭುಯಾನ್ ಅವರ ಕಾರ್ನರ್ ಕಿಕ್​ನಿಂದ ಬಂದ ಬಾಲ್ ಅನ್ನು ಬಾಂಗ್ಲಾ ಯುವ ಆಟಗಾರ ಯಾಸಿನ್ ಅರಾಫತ್ ಗೋಲಾಗಿಸಿದರು. ಬಾಂಗ್ಲಾದ ಗೋಲು ಬಂದ ಬಳಿಕ ಭಾರತೀಯರು ಚುರುಕುಗೊಂಡರು. ಕೊನೆಯ ಹತ್ತು ನಿಮಿಷದಲ್ಲಿ ಭಾರತ ಸತತ ದಾಳಿ ಸಂಯೋಜಿಸಿತಾದರೂ ಬಾಂಗ್ಲಾದೇಶದ ರಕ್ಷಣೆ ಪ್ರಬಲವಾಗಿತ್ತು. ಅದನ್ನ ಭೇದಿಸಿ ಭಾರತೀಯರಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

    ಮಾಲ್ಡೀವ್ಸ್​ನಲ್ಲಿ ನಡೆಯುತ್ತಿರುವ ಈ ಸ್ಯಾಫ್ ಚಾಂಪಿಯನ್​ಶಿಪ್​ನಲ್ಲಿ ಒಟ್ಟು ಐದು ದೇಶಗಳು ಪಾಲ್ಗೊಳ್ಳುತ್ತಿವೆ. ಆತಿಥೇಯ ಮಾಲ್ಡೀವ್ಸ್ ಜೊತೆಗೆ ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ತಂಡಗಳು ಆಡುತ್ತಿವೆ. ಕಳೆದ ವರ್ಷವೇ ಈ ಟೂರ್ನಿ ನಡೆಯಬೇಕಿತ್ತು. ಪಾಕಿಸ್ತಾನ ಆತಿಥೇಯ ರಾಷ್ಟ್ರವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಟೂರ್ನಿ ಮುಂದೋಗಿತ್ತು. ಅತ್ತ, ಪಾಕಿಸ್ತಾನದ ಫುಟ್ಬಾಲ್ ಮಂಡಳಿಯನ್ನ ಫೀಫಾ ಅಮಾನ್ಯ ಮಾಡಿದ್ದರಿಂದ ಪಾಕಿಸ್ತಾನ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಭೂತಾನ್ ದೇಶ ಕೋವಿಡ್ ಕಾರಣಕ್ಕೆ ತಂಡವನ್ನು ಹಿಂತೆಗೆದುಕೊಂಡಿತು. ಕೊನೆಗೆ ಐದು ತಂಡಗಳು ಮಾತ್ರ ಉಳಿದುಕೊಂಡ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಬದಲು ಒಂದೇ ಗುಂಪಿನಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳನ್ನ ಆಡಿಸಲಾಗುತ್ತಿದೆ.

    ಇದನ್ನೂ ಓದಿ: Lakhimpur Violence- ಅಣ್ಣ ಬಿಟ್ಟುಬಿಡಿ, ತಮ್ಮಂದಿರಾ ಹೊಡೀಬೇಡಿ… ಕರಗದ ಪ್ರತಿಭಟನಾಕಾರರ ಹೃದಯ

    ಅಕ್ಟೋಬರ್ 1ರಂದು ಟೂರ್ನಿಯ ಉದ್ಘಾಟನೆ ಆಗಿದೆ. ಅಂದು ಎರಡು ಪಂದ್ಯಗಳು ನಡೆದವು. ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಗೆದ್ದಿತು. ಮಾಲ್ಡೀವ್ಸ್ ಎದರು ನೇಪಾಳ ಜಯ ಸಾಧಿಸಿತು. ಈಗ ಭಾರತ ವಿರುದ್ಧ ಡ್ರಾ ಮಾಡಿಕೊಂಡಿರುವ ಬಾಂಗ್ಲಾದೇಶ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಾಲ್ಡೀವ್ಸ್ ವಿರುದ್ಧ ಗೆದ್ದ ನೇಪಾಳ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಡ್ರಾ ಫಲಿತಾಂಶದಿಂದ 1 ಅಂಕ ಪಡೆದಿರುವ ಭಾರತ ಮೂರನೇ ಸ್ಥಾನದಲ್ಲಿದೆ.

    ಭಾರತ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 7ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಅಕ್ಟೋಬರ್ 10ರಂದು ನೇಪಾಳ, ಅಕ್ಟೋಬರ್ 13ರಂದು ಮಾಲ್ಡೀವ್ಸ್ ವಿರುದ್ಧ ಭಾರತದ ಪಂದ್ಯಗಳಿವೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದವರು ಫೈನಲ್ ಪ್ರವೇಶಿಸುತ್ತಾರೆ.

    ಇದು 13ನೇ ಸ್ಯಾಫ್ ಚಾಂಪಿಯನ್​ಶಿಪ್ ಆಗಿದೆ. 1993ರಿಂದ ಇಲ್ಲಿಯವರೆಗೆ 12 ಚಾಂಪಿಯನ್​ಶಿಪ್ ಆಗಿದೆ. ಭಾರತ ತಂಡ 7 ಬಾರಿ ಚಾಂಪಿಯನ್ ಆಗಿದೆ. ಶ್ರೀಲಂಕಾ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳು ಒಮ್ಮೊಮ್ಮೆ ಗೆದ್ದಿವೆ. ಮಾಲ್ಡೀವ್ಸ್ ತಂಡ ಎರಡು ಬಾರಿ ಚಾಂಪಿಯನ್ ಅಷ್ಟೇ ಅಲ್ಲ, ಹಾಲಿ ಚಾಂಪಿಯನ್ ಕೂಡ ಹೌದು. ಪಾಕಿಸ್ತಾನ 1997ರಲ್ಲಿ ಮೂರನೇ ಸ್ಥಾನ ಗಳಿಸಿದ್ದೇ ಗರಿಷ್ಠ ಸಾಧನೆ ಎನಿಸಿದೆ.
    Published by:Vijayasarthy SN
    First published: