ಫುಟ್ಬಾಲ್: ಭಾರತ ಈಗ ವಿಶ್ವ ನಂ. 96; ಹೊಸ ಇತಿಹಾಸಕ್ಕೆ ಇನ್ನೆರಡೇ ಸ್ಥಾನ ಬಾಕಿ


Updated:August 17, 2018, 8:03 PM IST
ಫುಟ್ಬಾಲ್: ಭಾರತ ಈಗ ವಿಶ್ವ ನಂ. 96; ಹೊಸ ಇತಿಹಾಸಕ್ಕೆ ಇನ್ನೆರಡೇ ಸ್ಥಾನ ಬಾಕಿ
ಭಾರತೀಯ ಫುಟ್ಬಾಲ್ ತಂಡ

Updated: August 17, 2018, 8:03 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 17): ಭಾರತ ಫುಟ್ಬಾಲ್ ತಂಡ ಈಗ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಇನ್ನೊಂದು ಸ್ಥಾನ ಮೇಲೇರಿದೆ. 97ನೇ ಸ್ಥಾನದಲ್ಲಿದ್ದ ಭಾರತ ನಿನ್ನೆ ಬಿಡುಗಡೆಯಾದ ಪಟ್ಟಿಯಲ್ಲಿ 96ಕ್ಕೆ ಜಿಗಿದಿದೆ. 1996ರಲ್ಲಿ ಇದೇ ಕೋಚ್ ಸ್ಟೀಫನ್ ಕಾನ್​ಸ್ಟಂಟೇನ್ ನೇತೃತ್ವದಲ್ಲೇ ಭಾರತ ತಂಡ 94ನೇ ಸ್ಥಾನಕ್ಕೆ ಏರಿತ್ತು. ಅದೇ ಭಾರತದ ಬೆಸ್ಟ್ ರ್ಯಾಂಕಿಂಗ್ ಎನಿಸಿದೆ. ಈ ಸಾಧನೆಯನ್ನು ಮುರಿದು ಹೊಸ ಮೈಲಿಗಲ್ಲು ನಿರ್ಮಿಸಲು ಭಾರತ ಇನ್ನೂ 3 ಸ್ಥಾನ ಮೇಲೇರಬೇಕಾಗುತ್ತದೆ.

ಇದೇ ವೇಳೆ, ಜರ್ಮನಿ ಕೈಲಿದ್ದ ನಂಬರ್ ಒನ್ ಪಟ್ಟವನ್ನು ವಿಶ್ವಕಪ್ ವಿಜೇತ ಪ್ರಾನ್ಸ್ ತಂಡ ಕಸಿದುಕೊಂಡಿದೆ. ಜರ್ಮನಿ 15ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಕಪ್ ಫೈನಲ್ ತಲುಪಿ ಅಚ್ಚರಿ ಹುಟ್ಟಿಸಿದ್ದ ಕ್ರೊವೇಶಿಯಾ ತಂಡ 16 ಸ್ಥಾನ ಮೇಲೆ ಜಿಗಿದು ವಿಶ್ವ ನಂ. 4ಕ್ಕೆ ಏರಿದೆ. ಇನ್ನು ಏಷ್ಯಾ ಮಟ್ಟದಲ್ಲಿ ಭಾರತ 14ನೇ ಸ್ಥಾನದಲ್ಲಿದೆ. ಇರಾನ್ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವದ ಟಾಪ್-50 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಾರತ ತಂಡವು ಕತಾರ್, ಉತ್ತರ ಕೊರಿಯಾ, ಬಹ್ರೇನ್, ಥಾಯ್ಲೆಂಡ್​ನಂತಹ ಪ್ರಬಲ ತಂಡಗಳನ್ನ ರ್ಯಾಂಕಿಂಗ್​ನಲ್ಲಿ ಹಿಂದಿಕ್ಕಿರುವುದು ವಿಶೇಷ.

ಸ್ಯಾಫ್ ಕಪ್​ಗೆ ತಯಾರಿ:
ಇನ್ನು, ಮುಂಬರುವ ಸ್ಯಾಫ್ ಕಪ್ ಮತ್ತು ಎಎಫ್​ಸಿ ಏಷ್ಯನ್ ಕಪ್ ಟೂರ್ನಿಗಾಗಿ ಭಾರತೀಯ ತಂಡಗಳನ್ನ ಅಣಿಗೊಳಿಸುವ ಕೆಲಸ ಮುಂದುವರಿದಿದೆ. ಅದಕ್ಕಾಗಿ 23 ವಯೋಮಾನದೊಳಗಿನವರ ತಂಡವನ್ನು ಸಿದ್ಧಗೊಳಿಸಿದ್ದು, ಆಸ್ಟ್ರೇಲಿಯಾಕ್ಕೆ ಪ್ರವಾಸ ಕಳುಹಿಸಲಾಗಿದೆ. ದೆಹಲಿಯಲ್ಲಿ ಕ್ಯಾಂಪ್​ನಲ್ಲಿ ಒಂದು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದ ಈ ಅಂಡರ್-23 ತಂಡವು ಆಸ್ಟ್ರೇಲಿಯಾದಲ್ಲಿ ವಿವಿಧ ಕ್ಲಬ್​ಗಳು ಹಾಗೂ ತಂಡಗಳೊಂದಿಗೆ ಅಭ್ಯಾಸ ನಡೆಸಲಿದೆ. ಕರ್ನಾಟಕದ ನಿಖಿಲ್ ಪೂಜಾರಿ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಾಂಗರೂಗಳ ನಾಡಿನ ಪ್ರವಾಸದ ಬಳಿಕ ಭಾರತೀಯ ತಂಡವು SAFF ಕಪ್ ಟೂರ್ನಿಯಲ್ಲಿ ಆಡಲಿದೆ. 2019ರ ಮಹತ್ವದ ಏಷ್ಯನ್ ಕಪ್ ಟೂರ್ನಿಗೆ ಪೂರಕವಾಗಿ ಈ ಎಲ್ಲಾ ಟೂರ್ನಿಗಳಲ್ಲಿ ಪಾಲ್ಗೊಳ್ಳಲಾಗುತ್ತಿದೆ.

ಭಾರತದ ವಿವಿಧ ಕಿರಿಯ ತಂಡಗಳು ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿವೆ. ಅಂಡರ್-16, ಅಂಡರ್-20 ತಂಡಗಳ ಆಟ ಭಾರತೀಯ ಫುಟ್ಬಾಲ್ ಪ್ರೇಮಿಗಳಿಗೆ ಹೊಸ ಆಸೆ ಹುಟ್ಟಿಸಿದೆ. ಅಂಡರ್-23 ತಂಡವು ಎಎಫ್​ಸಿ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾದರೂ ತಂಡದ ಪ್ರದರ್ಶನವು ಕೋಚ್ ಸ್ಟೀಫನ್​ಗೆ ತೃಪ್ತಿ ತಂದಿತ್ತು.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...