ಆಕ್ರಮಣಕಾರಿ ಆಟಗಾರ ಮನ್ದೀಪ್ ಸಿಂಗ್ ಅವರ ಹ್ಯಾಟ್ರಿಕ್ ನೆರವಿನಿಂದ ಟೀಂ ಇಂಡಿಯಾ ಒಲಿಂಪಿಕ್ ಪರೀಕ್ಷಾ ಅರ್ಹತೆಯ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅತಿಥೇಯ ಜಪಾನ್ ತಂಡವನ್ನು 6-3 ಅಂತರದಿಂದ ಮಣಿಸುವ ಮೂಲಕ ಭಾರತ ಅಂತಿಮ ಘಟ್ಟಕ್ಕೆ ಪ್ರವೇಶಿಸಿತು.
ಪಂದ್ಯಾರಂಭದಿಂದಲೂ ಜಪಾನ್ ಗೋಲಿನತ್ತ ಮುನ್ನುಗ್ಗಿದ ಭಾರತ ಮುನ್ಪಡೆ ಆಟಗಾರರು ಆರಂಭದಲ್ಲೇ ಮೊದಲ ಯಶಸ್ಸು ದಕ್ಕಿಸಿಕೊಂಡರು. ಪಂದ್ಯದ 3ನೇ ನಿಮಿಷದಲ್ಲಿ ಅದ್ಭುತ ಪಾಸ್ವೊಂದನ್ನು ನೀಲಕಾಂತ್ ಶರ್ಮಾ ಗೋಲಾಗಿಸಿ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸಿಕ್ಕಿದ ಪೆನಾಲ್ಟಿ ಕಾರ್ನರ್ರನ್ನು ಗೋಲಾಗಿ ಪರಿವರ್ತಿಸಿದ ನೀಲಂ ಸಂಜೀಪ್ ಗೋಲಿನ ಅಂತರವನ್ನು 2-0 ಗೆ ಹೆಚ್ಚಿಸಿದರು.
ಇದೇ ಹಂತದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಮನ್ದೀಪ್ ಸಿಂಗ್ ತಮ್ಮ ಅದ್ಭುತ ಆಟದಿಂದ ಗಮನ ಸೆಳೆದರು. ಪರಿಣಾಮ 9ನೇ ನಿಮಿಷದಲ್ಲಿ ಜಪಾನ್ ಗೋಲಿ ಕೀಪರ್ನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಈ ವೇಳೆ ಎದುರಾಳಿ ತಂಡ ತಿರುಗಿ ಬೀಳುವ ಸೂಚನೆ ನೀಡಿತ್ತು.
25ನೇ ನಿಮಿಷದಲ್ಲಿ ಭಾರತದ ಗೋಲಿಯನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದ ಜಪಾನ್ ಆಟಗಾರ ಕೆಂಟಾರೊ ಫೆಕುದ ಮೊದಲ ಗೋಲು ದಾಖಲಿಸಿದರು. 1-3 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಪರ ಮನ್ದೀಪ್ ಸಿಂಗ್ 29ನೇ ನಿಮಿಷದಲ್ಲಿ ಮತ್ತೊಂದು ಗೋಲು ಯಶಸ್ಸು ತಂದುಕೊಟ್ಟರು.
ಈ ಗೋಲಿನೊಂದಿಗೆ ಸಂಪೂರ್ಣವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬ್ಲೂ ಬಾಯ್ಸ್, ನಿರಂತರ ಜಪಾನ್ ಗೋಲ್ನತ್ತ ಲಾಂಗ್ ಪಾಸ್ಗಳೊಂದಿಗೆ ಮುನ್ನುಗಿದರು. ಇದರ ಪ್ರತಿಫಲವಾಗಿ 40ನೇ ನಿಮಿಷದಲ್ಲಿ ಮನ್ದೀಪ್ ಸ್ಟಿಕ್ನಿಂದ ಹ್ಯಾಟ್ರಿಕ್ ಗೋಲು ಮೂಡಿಬಂತು. ಇದರ ಬೆನ್ನಲ್ಲೇ ಗುರ್ಜಂತ್ ಸಿಂಗ್(41ನೇ ನಿಮಿಷ) ಒಂದು ಗೋಲು ಬಾರಿಸಿ ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಇನ್ನು ಜಪಾನ್ ಪರ ಕೆಂತ ತನಕ (36ನೇ ನಿಮಿಷ) ಮತ್ತು ಕಜ್ಮು ಮುರಟ (52ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು.
ಸೋಮವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 1-2 ಗೋಲುಗಳಿಂದ ಭಾರತ ಪರಾಭವಗೊಂಡಿತ್ತು. ಆದರೆ ಜಪಾನ್ ವಿರುದ್ಧದ ನಿರ್ಣಾಯಕ ಪುಟಿದೆದ್ದ ಟೀಂ ಇಂಡಿಯಾ ಆತಿಥೇಯ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಇನ್ನು ಜಪಾನ್ ರಾಜಧಾನಿ ಟೋಕಿಯೋದ ಓಯಿ ಹಾಕಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಫೈನಲ್‍ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
-----------------
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ