ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರೋಹಿತ್ ಪಡೆ: 7ನೇ ಬಾರಿ ಏಷ್ಯಾ ಕಪ್ ಕಿರೀಟ ತೊಟ್ಟ ಭಾರತ

Anitha E | news18
Updated:September 29, 2018, 2:59 AM IST
ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರೋಹಿತ್ ಪಡೆ: 7ನೇ ಬಾರಿ ಏಷ್ಯಾ ಕಪ್ ಕಿರೀಟ ತೊಟ್ಟ ಭಾರತ
  • Advertorial
  • Last Updated: September 29, 2018, 2:59 AM IST
  • Share this:
ನ್ಯೂಸ್ 18 ಕನ್ನಡ

ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್​ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದಲ್ಲಿ ನಿರ್ಧಾರವಾದ ಪಂದ್ಯ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಭಾರತ ಮತ್ತೊಮ್ಮೆ ಫೈನಲ್​​​ನಲ್ಲಿ ಬಾಂಗ್ಲಾವನ್ನ ಮಣಿಸಿ 7ನೇ ಬಾರಿ ಏಷ್ಯಾಕಪ್ ಕಿರೀಟ ತೊಟ್ಟಿದೆ.


ಟಾಸ್ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾದೇಶಕ್ಕೆ ಲಿಟನ್ ದಾಸ್ ಬಿರುಸಿನ ಆರಂಭ ಒದಗಿಸಿದರು. ಇವರಿಗೆ ಮೆಹಿದಿ ಹಸನ್ ಉತ್ತಮ ಸಾತ್ ನೀಡಿದರು. ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ ಅನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಟೂರ್ನಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾಕ್ಕೆ ಕಠಿಣ ಸ್ಪರ್ಧೆ ಒಡ್ಡಿತು. 7.4 ಓವರ್​​ಗಳಲ್ಲೇ ಬಾಂಗ್ಲಾದ ಮೊತ್ತ 50ರ ಗಡಿ ದಾಟಿತು. ಅತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಲಿಟನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ನಂತರ 17.5 ಓವರ್​​ಗಳಲ್ಲೇ ತಂಡದ ಮೊತ್ತ 100 ತಲುಪಿತ್ತು. ಈ ಹಂತದಲ್ಲಿ ಬೌಲಿಂಗ್ ಬದಲಾವಣೆಯೊಂದಿಗೆ ಬಂದ ಕೇದರ್ ಜಾಧವ್ ಓಪನರ್ ಮೆಹಿದಿ ಹಸನ್ ವಿಕೆಟ್ ಪಡೆಯುವ ಮೂಲಕ ಮೊದಲ ಬ್ರೇಕ್ ನೀಡಿದರು.

ಒಂದು ವಿಕೆಟ್ ಕಳೆದುಕೊಂಡಿದ್ದೇ ತಡ ಬಾಂಗ್ಲಾ ದಿಢೀರ್ ಪತನಕ್ಕೊಳಗಾಯಿತು. ಇದಾದ ಬೆನ್ನಲ್ಲೇ ಇಮ್ರುಲ್ ಕೇಯ್ಸ್ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಬಲೆಗೆಸಿಲುಕಿದರು. ಮತ್ತೊಮ್ಮೆ  ಜಾದೂ ಪ್ರದರ್ಶಿಸಿದ ಜಾಧವ್, ಅಪಾಯಕಾರಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಂಗೂ ಪೆವಿಲಿಯನ್ ಹಾದಿ ತೋರಿಸಿದರು. ಇನ್ಫಾರ್ಮ್ ಬ್ಯಾಟ್ಸ್‌ಮನ್ ಮೊಹಮ್ಮದ್ ಮಿಥುನ್ ಅವರು ರವೀಂದ್ರ ಜಡೇಜಾರ ಅದ್ಭುತ ಫೀಲ್ಡಿಂಗ್​​​ಗೆ ಬಲಿಯಾದರು. ಇದರೊಂದಿಗೆ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್​​ಗಳಿಸಿದ್ದ ಬಾಂಗ್ಲಾ 139 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಷ್ಟಾದರೂ ವಿಕೆಟ್​​​ನ ಮಗದೊಂದು ತುದಿಯಿಂದ ಭಾರತೀಯ ಬೌಲರ್​ಗಳನ್ನು ಲೀಲಾಜಾಲವಾಗಿ ಎದುರಿಸಿದ ಲಿಟನ್ ದಾಸ್ 87 ಎಸೆತಗಳಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಆದರೆ ನಂತರದಲ್ಲಿ ಮೊಹ್ಮದುಲ್ಲಾ ಕುಲ್ದೀಪ್​ಗೆ ವಿಕೆಟ್ ಒಪ್ಪಿಸಿದರೆ, ಧೋನಿಯ ಮಿಂಚಿನ ಸ್ಟಂಪಿಂಗ್​ಗೆ ಶತಕದಾರಿ ದಾಸ್(121) ಬಲಿಯಾದರು. ನಾಯಕ ಮುಶ್ರಫೆ ಮೊರ್ತಜಾ ಒಂದು ಸಿಕ್ಸ್​​ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಬಾಂಗ್ಲಾ 48.3 ಓವರ್​​ಗಳಲ್ಲಿ 222 ರನ್​​ಗೆ ಆಲೌಟ್ ಆಯಿತು. ಭಾರತ ಪರ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು.

ಬಾಂಗ್ಲಾದೇಶ ನೀಡಿದ 223 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ 100 ರನ್ ಗಡಿ ಮುಟ್ಟುವ ಮೊದಲೇ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಉತ್ತಮ ಫಾರ್ಮ್​​ನಲ್ಲಿದ್ದ ಶಿಖರ್ ಧವನ್ ಕೇವಲ 15 ರನ್​​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರೆ, ಅಂಬಟಿ ರಾಯುಡು 2 ರನ್​​ಗಳಿಸಿದ್ದಾಗ ಮಷ್ರಫೆ ಮೊರ್ತಾಜ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಉತ್ತಮವಾಗೇ ಆಡುತ್ತಿದ್ದ ರೋಹಿತ್ ಶರ್ಮಾ 48 ರನ್ ಗಳಿಸಿದ್ದಗ ರುಬೆಲ್ ಹುಸೆನ್​​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಭಾರತ ಒತ್ತಡಕ್ಕೆ ಸಿಲುಕಿತು.


ನಂತರದಲ್ಲಿ ಧೋನಿ–ಕಾರ್ತಿಕ್ ಜೊತೆಯಾಟ ತಂಡವನ್ನ ಗೆಲುವಿನ ದಡ ತಲುಪಿಸಬಹುದು ಎಂದೇ ನಂಬಲಾಗಿತ್ತು. ಆದರೆ ಇಬ್ಬರು ನಂಬಿಕೆಯನ್ನ ಹುಸಿಗೊಳಿಸಿದರು. ಕಾರ್ತಿಕ್ 37 ರನ್​​ಗೆ ವಿಕೆಟ್ ಒಪ್ಪಿಸಿ ಹೊರನಡೆದರೆ, ಅನುಭವಿ ಧೋನಿ(36) ಮ್ಯಾಚ್ ಫಿನಿಷ್ ಮಾಡದೆ ಬಹುಮುಖ್ಯ ಸಂದರ್ಭದಲ್ಲಿ ಔಟಾದರು. ಕೊನೆಯಲ್ಲಿ ಕೇದಾರ್ ಜಾಧವ್ ಹಾಗೂ ಭುವನೇಶ್ವರ್ ಕುಮಾರ್ ತಂಡವನ್ನ ಗೆಲುವಿನ ಸಮೀಪ ಕೊಂಡೊಯ್ಯಿದರು. ಈ ಮಧ್ಯೆ ಕೇದಾರ್ ಸ್ನಾಯು ಸೆಳೆತೆದಿಂದ ಪೆವಿಲಿಯನ್ ಸೇರಿದರು. ಆದರೆ ಜಡ್ಡು ಔಟಾದ ಬಳಿಕ ಮತ್ತೆ ಜಾಧವ್ ಹಿಂದಿರುಗಿದರು. ಕೊನೆಯ ಓವರ್​​ನಲ್ಲಿ ಭಾರತಕ್ಕೆ ಗೆಲ್ಲಲು 6 ರನ್​​ಗಳು ಬೇಕಿತ್ತು.  ಹಾಗೇ ಕೊನೆಯ ಎಸೆತದಲ್ಲಿ ಗೆಲುವಿಗೆ 1 ರನ್​​ ಬೇಕಿದ್ದಾಗ, ಕೇದಾರ್ ಜಾಧವ್ ನೋವಿನಲ್ಲೂ ತಂಡವನ್ನ ಗುರಿ ತಲುಪಿಸಿದರು. ಈ ಮೂಲಕ ಭಾರತ 7ನೇ ಬಾರಿಗೆ ಏಷ್ಯಾಕಪ್ ಗೆದ್ದು ಬೀಗಿದೆ.


ಒಟ್ಟಿನಲ್ಲಿ ಅದ್ಭುತ ಆಟವಾಡಿದ ಟೀಂ ಇಂಡಿಯಾ 3 ವಿಕೆಟ್​​ಗಳ ಗೆಲುವಿನೊಂದಿಗೆ 7ನೇ ಬಾರಿ ಏಷ್ಯಾ ಚಾಂಪಿಯನ್ ಪಟ್ಟಕ್ಕೇರಿದೆ.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ: 222/10 (48.3 ಓವರ್​)

(ಲಿಟನ್ ದಾಸ್ 121, ಸೌಮ್ಯ ಸರ್ಕಾರ್ 33, ಕುಲ್ದೀಪ್ ಯಾದವ್ 45/3, ಕೇದರ್ ಜಾಧವ್ 41/2)

ಭಾರತ: 223/7 (50 ಓವರ್​)

(ರೋಹಿತ್ ಶರ್ಮಾ 48, ದಿನೇಶ್ ಕಾರ್ತಿಕ್ 37, ಎಂಎಸ್ ಧೋನಿ 36, ಮುಸ್ತಫಿಜುರ್ ರಹ್ಮಾನ್ 38/2)

ಪಂದ್ಯ ಶ್ರೇಷ್ಠ: ಲಿಟನ್ ದಾಸ್

ಸರಣಿ ಶ್ರೇಷ್ಠ: ಶಿಖರ್ ಧವನ್

LIVE BLOG: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರೋಹಿತ್ ಪಡೆ
First published:September 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ