ಶೈಲಿ ಸಿಂಗ್ಗೆ ಬೆಳ್ಳಿ; ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಹೊಸ ದಾಖಲೆ
World Junior Athletics Championships: ಬಾಲಕಿಯರ ಲಾಂಗ್ ಜಂಪ್ನಲ್ಲಿ ಶೈಲಿ ಸಿಂಗ್ ಬೆಳ್ಳಿ ಗೆದ್ದಿದ್ದಾರೆ. 10,000 ಮೀಟರ್ ರೇಸ್ ವಾಕ್ನಲ್ಲಿ ಅಮಿತ್ ಖತ್ತಿ ಕೂಡ ಬೆಳ್ಳಿ ಗೆದ್ದಿದ್ದಾರೆ. 4x400 ಮೀಟರ್ ಮಿಕ್ಸೆಡ್ ರಿಲೇ ಓಟದಲ್ಲಿ ಭಾರತೀಯ ತಂಡ ಕಂಚಿನ ಪದಕ ಪಡೆದಿದೆ. ಹೀಗೆ ಮೊದಲ ಬಾರಿಗೆ 3 ಪದಕ ಗೆದ್ದ ತೃಪ್ತಿ ಭಾರತಕ್ಕೆ ಸಿಕ್ಕಿದೆ.
ಬೆಂಗಳೂರು: ಕೀನ್ಯಾದ ನೈರೋಬಿಯಲ್ಲಿ ನಿನ್ನೆ ಮುಕ್ತಾಯಗೊಂಡ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ (World Athletics U20 Championships 2021) ಭಾರತ ಉತ್ತಮ ಸಾಧನೆ ಮಾಡಿದೆ. ಆಗಸ್ಟ್ 17ರಂದು ಪ್ರಾರಂಭಗೊಂಡ ಈ ಕಿರಿಯರ ಕೂಟದಲ್ಲಿ ಭಾರತ 3 ಪದಕಗಳನ್ನ ಗೆದ್ದು ಹೊಸ ದಾಖಲೆ ಬರೆದಿದೆ. 1986ರಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಈ ಅಥ್ಲೆಟಿಕ್ಸ್ ಕೂಟದ ಇತಿಹಾಸದಲ್ಲಿ ಭಾರತ ಎಂದೂ ಒಂದಕ್ಕಿಂತ ಹೆಚ್ಚು ಪದಕ ಗೆದ್ದದ್ದಿಲ್ಲ. ಈ ಬಾರಿ ಮೂರು ಪದಕಗಳನ್ನ ಜಯಿಸಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲೂ ಅತಿ ಹೆಚ್ಚು ಪದಕಗಳನ್ನ ಗೆದ್ದಿದ್ದ ಭಾರತ ಈಗ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದೆ. ಎರಡು ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನ ಭಾರತದ ಕಿರಿಯ ಅಥ್ಲೀಟ್ಗಳು ಗೆದ್ದಿದ್ದಾರೆ.
ನಿನ್ನೆ ಮಹಿಳೆಯರ ಲಾಂಗ್ ಜಂಪ್ನಲ್ಲಿ ಶೈಲಿ ಸಿಂಗ್ ಬೆಳ್ಳಿ ಪದಕ ಗೆದ್ದರು. 6.59 ಮೀಟರ್ ದೂರಕ್ಕೆ ಶೈಲಿ ಸಿಂಗ್ ಜಿಗಿದು ಎರಡನೇ ಸ್ಥಾನ ಪಡೆದರು. ಯೂರೋಪ್ನ ಚಾಂಪಿಯನ್ ಅಥ್ಲೀಟ್ ಹಾಗೂ ಸ್ವೀಡನ್ ದೇಶದ ಸ್ಪರ್ಧಿ ಮಾಜಾ ಅಸ್ಕಾಗ್ ಅವರು 6.60 ಮೀಟರ್ ದೂರ ಜಿಗಿದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಬೆಂಗಳೂರಿನಲ್ಲಿರುವ ಬಾಬಿ ಜಾರ್ಜ್ ಅಕಾಡೆಮಿಯ ವಿದ್ಯಾರ್ಥಿನಿಯಾಗಿರುವ 17 ವರ್ಷದ ಶೈಲಿ ಸಿಂಗ್ ಕೇವಲ 1 ಸೆಂ. ಮೀ. ಅಂತರದಿಂದ ಚಿನ್ನದ ಪದಕದಿಂದ ವಂಚಿತರಾದರು. ಮೂರನೇ ಯತ್ನದಲ್ಲಿ ಅವರು 6.59 ದೂರ ಜಿಗಿದರಾದರೂ ಮುಂದಿನ ಮೂರು ಪ್ರಯತ್ನ ಅವರ ಪಾಲಿಗೆ ದುರದೃಷ್ಟಕರವಾಗಿತ್ತು. ಎರಡು ಬಾರಿ ಫೌಲ್ ಮಾಡಿದರು. ಕೊನೆಯ ಪ್ರಯತ್ನದಲ್ಲಿ ತೀರಾ ಹಿಂದುಳಿದರು. ಹೀಗಾಗಿ, ಚಿನ್ನದ ಪದಕ ಕನಸು ಈಡೇರದೇ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತ ಗಳಿಸಿದ ಮೊತ್ತಮೊದಲ ಪದಕ ಇದಾಗಿದೆ. ಈ ಬಾರಿಯ ಕೂಟದಲ್ಲಿ ಪದಕ ಗೆದ್ದ ಇನ್ನಿಬ್ಬರು ಅಥ್ಲೀಟ್ಗಳೆಂದರೆ ಅಮಿತ್ ಖತ್ತಿ ಮತ್ತು ಮಿಶ್ರ ರಿಲೇ ಟೀಮ್. ಅಮಿತ್ ಖತ್ರಿ ಅವರು 10 ಕಿಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಅಚ್ಚರಿ ಮೂಡಿಸಿದರು. 4x400 ಮೀಟರ್ ಮಿಕ್ಸೆಡ್ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿತ್ತು. ಇದರೊಂದಿಗೆ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ 3 ಪದಕ ಗೆದ್ದು ಬೀಗಿದೆ.
ಈ ಬಾರಿಯ ಕೂಟದಲ್ಲಿ ಭಾರತದ ಸಾಧನೆ ಇಷ್ಟೇ ಅಲ್ಲ, ಇನ್ನೂ ಒಂದೆರಡು ಪದಕಗಳು ಸ್ವಲ್ಪದರಲ್ಲೇ ಕೈತಪ್ಪಿವೆ. ಬಾಲಕಿಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಿಯಾ ಮೋಹನ್ 52.77 ಸೆಕೆಂಡ್ಗಳಲ್ಲಿ ಓಡಿ ತಮ್ಮ ವೈಯಕ್ತಿಕ ದಾಖಲೆ ಸ್ಥಾಪಿಸಿ ನಾಲ್ಕನೇ ಸ್ಥಾನ ಪಡೆದರು. ಹಾಗೆಯೇ, ಬಾಲಕಿಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಡೊನಾಲ್ಡ್ ಮಕಿಮೈರಾಜ್ ಅವರು ಕೂಡ 15.82 ಮೀಟರ್ ಜಿಗಿದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅವರ ಈ ಜಿಗಿತ ಅವರ ವೈಯಕ್ತಿಕ ದಾಖಲೆಯಾಗಿದೆ.
ಈ ಹಿಂದಿನ 18 ಕೂಟಗಳಲ್ಲಿ ಭಾರತ ಗಳಿಸಿದ ಪದಕಗಳು ಕೇವಲ 4 ಎಂಬುದು ಇಲ್ಲಿ ಗಮನಾರ್ಹ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಜಾವೆಲಿನ್ ಪಟು ನೀರಜ್ ಚೋಪ್ರಾ ವರು 2016ರ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 2018ರಲ್ಲಿ ಹಿಮಾ ದಾಸ್ ಅವರು ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು. ಇನ್ನೆರಡು ಪದಕಗಳು ಡಿಸ್ಕಸ್ ಥ್ರೋನದಲ್ಲಿ ಬಂದಿದ್ದವು. 2002ರಲ್ಲಿ ಸೀಮಾ ಆಂಟಿಲ್ ಹಾಗೂ 2014ರಲ್ಲಿ ನವಜೀತ್ ಕೌರ್ ಧಿಲ್ಲೋನ್ ಅವರು ಡಿಸ್ಕಸ್ ಥ್ರೋನಲ್ಲಿ ಕಂಚಿನ ಪದಕಗಳನ್ನ ಪಡೆದಿದ್ದರು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ