ಚತುಷ್ಕೋನ ಸರಣಿ: ಭಾರತ ಎ ಮತ್ತು ಬಿ ತಂಡಗಳೆರಡಕ್ಕೂ ಸೋಲು; ಫೈನಲ್​ಗೆ ಭಾರತ ಬಿ


Updated:August 27, 2018, 6:08 PM IST
ಚತುಷ್ಕೋನ ಸರಣಿ: ಭಾರತ ಎ ಮತ್ತು ಬಿ ತಂಡಗಳೆರಡಕ್ಕೂ ಸೋಲು; ಫೈನಲ್​ಗೆ ಭಾರತ ಬಿ
ಆಸ್ಟ್ರೇಲಿಯಾ ಎ ತಂಡದ ಉಸ್ಮಾನ್ ಖವಾಜ

Updated: August 27, 2018, 6:08 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 27): ಆಸ್ಟ್ರೇಲಿಯಾ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳನ್ನೊಳಗೊಂಡಿರುವ ಚತುಷ್ಕೋನ ಕ್ರಿಕೆಟ್ ಸರಣಿಯಲ್ಲಿ ಭಾರತದ ಎರಡೂ ತಂಡಗಳು ಸೋಲನುಭವಿಸಿವೆ. ಮನೀಶ್ ಪಾಂಡೆ ಅವರ ಶತಕದ ಹೊರತಾಗಿಯೂ ಭಾರತ ಬಿ ತಂಡದ ಹ್ಯಾಟ್ರಿಕ್ ಗೆಲುವಿನ ಕನಸು ಕೈಗೂಡಲಿಲ್ಲ. ಆಸ್ಟ್ರೇಲಿಯಾ ಎ ತಂಡದ ಎದುರು ಭಾರತ ಬಿ ತಂಡ 5 ವಿಕೆಟ್​ಗಳಿಂದ ಸೋಲಪ್ಪಿತು. ಉಸ್ಮಾನ್ ಖವಾಜ ಅವರ ಶತಕವು ಕಾಂಗರೂಗಳ ಪಡೆಗೆ ರೋಚಕ ಗೆಲುವು ದಕ್ಕಿಸಿಕೊಟ್ಟಿತು. ಭಾರತ ಬಿ ತಂಡವು ಈ ಸೋಲಿನ ನಡುವೆಯೂ ಫೈನಲ್ ತಲುಪಲು ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಎ ಕೂಡ ಫೈನಲ್ ಪ್ರವೇಶಿಸಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಎ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿಯಿತು. ಡೇನ್ ಪ್ಯಾಟರ್ಸನ್ ದಾಳಿಗೆ ಬೆಚ್ಚಿದ ಭಾರತ ಎ ತಂಡದವರು ದಕ್ಷಿಣ ಆಫ್ರಿಕಾ ಎ ಎದುರು 4 ವಿಕೆಟ್​ಗಳಿಂದ ಸೋಲಪ್ಪಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ 157 ರನ್ನಿಗೆ ಆಲೌಟ್ ಆಯಿತು. ಕೆಳ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಚಹಾರ್ ಅವರು 7ನೇ ವಿಕೆಟ್​ಗೆ 64 ರನ್ ಜೊತೆಯಾಟ ನೀಡದೇ ಹೋಗಿದ್ದರೆ ಭಾರತೀಯರು ಮೂರಂಕಿ ಮೊತ್ತದ ಗಡಿ ಕೂಡ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಗೆಲ್ಲಲು ಸುಲಭ ಗುರಿ ಪಡೆದ ಹರಿಣಗಳ ಪಡೆ 6 ವಿಕೆಟ್ ಕಳೆದುಕೊಂಡಿತು. ಆದರೆ, ದಕ್ಷಿಣ ಆಫ್ರಿಕಾ ಎ ತಂಡವು ಫೈನಲ್ ತಲುಪಲು ಈ ಗೆಲುವು ಸಾಕಾಗಲಿಲ್ಲ. ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಬಿ ತಂಡ ಗೆಲುವು ಸಾಧಿಸಿದರೆ ಹರಿಣಗಳ ಪಡೆಗೆ ಅಂತಿಮ ಘಟ್ಟ ತಲುಪುತ್ತಿತ್ತು. ಆದರೆ, ಆ ಪಂದ್ಯವು ಹಲವು ನಿರೀಕ್ಷೆಗಳನ್ನ ತಲೆಕೆಳಗು ಮಾಡಿತು. ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಭಾರತ ಬಿ ತಂಡಕ್ಕೆ ಚೊಚ್ಚಲ ಸೋಲು ಎದುರಾಗಿ ದಕ್ಷಿಣ ಆಫ್ರಿಕನ್ನರನ್ನ ನಿರಾಸೆಗೆ ಕೆಡವಿತು.

ಆಲೂರಿನಲ್ಲಿ ನಡೆದ ಭಾರತ ಬಿ ಮತ್ತು ಆಸ್ಟ್ರೇಲಿಯಾ ಎ ನಡುವಿನ ಈ ಪಂದ್ಯವು ರೋಚಕವಾಗಿತ್ತು. ಭಾರತೀಯರು ನಿಗದಿತ 50 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 276 ರನ್ ಪೇರಿಸಿದರು. ಮನೀಶ್ ಪಾಂಡೆ ಅಜೇಯ 117 ರನ್ ಚಚ್ಚಿದರು. ಮಯಂಕ್ ಅಗರ್ವಾಲ್, ಇಶಾನ್ ಕಿಶನ್, ದೀಪಕ್ ಹೂಡಾ ಅವರೂ ಉತ್ತಮ ಬ್ಯಾಟಿಂಗ್ ನಡೆಸಿದರು. ಮಳೆಯಿಂದಾಗಿ ಆಸ್ಟ್ರೇಲಿಯನ್ನರಿಗೆ ಪರಿಸ್ಕೃತ ಟಾರ್ಗೆಟ್ ಕೊಡಲಾಯಿತು. ಅದರಂತೆ ಕಾಂಗರೂಗಳ ಪಡೆಯು 40 ಓವರ್​ನಲ್ಲಿ 247 ರನ್ ಗಳಿಸುವ ಅಗತ್ಯ ಬಿತ್ತು. ಆಸ್ಟ್ರೇಲಿಯನ್ನರು ಉತ್ತಮ ಆರಂಭ ಪಡೆದರೂ 155 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಆರಂಭಿಕ ಬ್ಯಾಟ್ಸ್​ಮ್ಯಾನ್ ಉಸ್ಮಾನ್ ಖವಾಜ ಅವರು ಏಕಾಂಗಿಯಾಗಿ ಹೋರಾಟ ತೋರಿದರು. 7ನೇ ವಿಕೆಟ್​ಗೆ ಜ್ಯಾಕ್ ವಿಲ್ಡರ್​ಮುತ್ ಮತ್ತು ಉಸ್ಮಾನ್ ಖವಾಜ ನಡುವೆ 93 ರನ್ ಮುರಿಯದ ಜೊತೆಯಾಟ ಬಂದಿತು. ಈ ಜೊತೆಯಾಟವನ್ನು ಭೇದಿಸಲು ಭಾರತೀಯ ಬೌಲರ್ಸ್​ಗೆ ಸಾಧ್ಯವಾಗಲಿಲ್ಲ. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ 7 ಓವರ್ ಬೌಲ್ ಮಾಡಿ 50 ರನ್ ಚಚ್ಚಿಸಿಕೊಂಡು ಒಂದೂ ವಿಕೆಟ್ ಪಡೆಯಲಿಲ್ಲ.

ಈ ಚತುಷ್ಕೋನ ಕ್ರಿಕೆಟ್ ಸರಣಿಯಲ್ಲಿ ಭಾರತ ಬಿ ತಂಡವು ಕೊನೆಯ ಪಂದ್ಯವನ್ನ ಸೋತರೂ 12 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಆಸ್ಟ್ರೆಲಿಯಾ ಎ ತಂಡವೂ 12 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಎ ತಂಡಗಳು ತಲಾ 9 ಅಂಕಗಳೊಂದಿಗೆ ಕೊನೆಯ ಸ್ಥಾನ ಪಡೆದವು.

ಆ. 29ರಂದು 3ನೇ ಸ್ಥಾನ ಮತ್ತು ಚಾಂಪಿಯನ್ ಪಟ್ಟಕ್ಕಾಗಿ ಹಣಾಹಣಿ ನಡೆಯಲಿದೆ. ಮೂರನೇ ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಎ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್​ನಲ್ಲಿ ಭಾರತ ಬಿ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರುಬದುರಾಗಲಿವೆ.

ಸ್ಕೋರು ವಿವರ:

ಭಾರತ ಎ ತಂಡ 37.3 ಓವರ್ 157/10
(ದೀಪಕ್ ಚಾಹರ್ 38, ಸಂಜು ಸ್ಯಾಮ್ಸನ್ 36, ನಿತಿನ್ ರಾಣಾ 19, ಅಂಬಾಟಿ ರಾಯುಡು 11 ರನ್ – ಡೇನ್ ಪೀಟರ್ಸನ್ 19/5, ಆರ್. ಫ್ರೈಲಿಂಕ್ 36/2, ಸಿಸಾಂಡ ಮಾಗಳ 46/2)

ದಕ್ಷಿಣ ಆಪ್ರಿಕಾ ಎ ತಂಡ 37.4 ಓವರ್ 159/6
(ಪೀಟರ್ ಮಲನ್ 47, ಗಿಹಾಹನ್ ಕ್ಲೋಟೆ 24, ಸರೆಲ್ ಎರ್ವೀ 20, ಫರ್ಹಾನ್ ಬೆಹಾರ್ಡೀನ್ ಅಜೇಯ 18, ಆರ್. ಫ್ರೈಲಿಂಕ್ ಅಜೇಯ 15 ರನ್ – ಖಲೀಲ್ ಅಹ್ಮದ್ 45/3, ಕೃಣಾಲ್ ಪಾಂಡ್ಯ 37/2)
ಭಾರತ ಬಿ ತಂಡ 50 ಓವರ್ 276/6
(ಮನೀಶ್ ಪಾಂಡೆ ಅಜೇಯ 117, ಮಯಂಕ್ ಅಗರ್ವಾಲ್ 36, ಇಶಾನ್ ಕಿಶನ್ 31, ದೀಪಕ್ ಹೂಡಾ 30, ಜಲಜ್ ಸಕ್ಸೇನಾ 18 ರನ್ – ಮಿಕೇಲ್ ನೆಸೆರ್ 47/3)

ಆಸ್ಟ್ರೇಲಿಯಾ ಎ ತಂಡ 40 ಓವರ್ 248/5
(ಉಸ್ಮಾನ್ ಖವಾಜ ಅಜೇಯ 101, ಜ್ಯಾಕ್ ವಿಲ್ಡೆರ್​ಮುತ್ ಅಜೇಯ 62, ಅಲೆಕ್ಸ್ ಕ್ಯಾರೀ 23, ಆಸ್ಟಾನ್ ಅಗರ್ 15 ರನ್ – ಜಲಜ್ ಸಕ್ಸೇನಾ 48/2)
First published:August 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ