News18 India World Cup 2019

ಏಷ್ಯಾಡ್​ನಲ್ಲಿ ಭಾರತದ ಸವಾಲೆಷ್ಟು? ವಾಸ್ತವದಲ್ಲಿ ಗೆಲ್ಲಬಲ್ಲ ಪದಕಗಳೆಷ್ಟು?


Updated:August 15, 2018, 5:58 PM IST
ಏಷ್ಯಾಡ್​ನಲ್ಲಿ ಭಾರತದ ಸವಾಲೆಷ್ಟು? ವಾಸ್ತವದಲ್ಲಿ ಗೆಲ್ಲಬಲ್ಲ ಪದಕಗಳೆಷ್ಟು?
ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಜೊತೆ ಭಾರತೀಯ ಕ್ರೀಡಾಪಟುಗಳು

Updated: August 15, 2018, 5:58 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 15): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಎಷ್ಟು ಚಿನ್ನ ಗೆಲ್ಲುತ್ತದೆ, ಒಟ್ಟಾರೆ ಎಷ್ಟು ಪದಕ ಗೆಲ್ಲುತ್ತದೆ ಎಂಬ ಕುತೂಹಲ ಪ್ರತಿಯೊಬ್ಬ ಕ್ರೀಡಾಪ್ರೇಮಿಯಲ್ಲೂ ಮನೆಮಾಡಿದೆ. 2014ರಲ್ಲಿ ನಡೆದ ಇಂಚೋನ್ ಏಷ್ಯಾಡ್​ನಲ್ಲಿ ಭಾರತ 11 ಚಿನ್ನ ಸೇರಿ ಒಟ್ಟು 57 ಪದಕ ಜಯಿಸಿತ್ತು. ಈ ಬಾರಿ ಆ ಸಾಧನೆಯನ್ನು ಹಿಂದಿಕ್ಕುವ ವಿಶ್ವಾಸದಲ್ಲಿ ಭಾರತವಿದೆ.

ಈ ಬಾರಿಯ ಏಷ್ಯಾಡ್​ನಲ್ಲಿ ಒಟ್ಟು 572 ಭಾರತೀಯ ಸ್ಪರ್ಧಾಳುಗಳು ಸೆಣಸುತ್ತಿದ್ದಾರೆ. 312 ಪುರುಷರು ಮತ್ತು 260 ಮಹಿಳಾ ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿರುವ 40 ಕ್ರೀಡೆಗಳ ಪೈಕಿ ಭಾರತ 36ರಲ್ಲಿ ಪಾಲ್ಗೊಳ್ಳುತ್ತಿದೆ.

ಈವರೆಗೆ ಒಟ್ಟು 17 ಏಷ್ಯನ್ ಗೇಮ್ಸ್ ನಡೆದಿವೆ. ಎಲ್ಲಾ ಏಷ್ಯಾಡ್​ಗಳಲ್ಲೂ ಪಾಲ್ಗೊಂಡಿರುವ ಏಳು ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತ, ಇಂಡೋನೇಷ್ಯಾ, ಜಪಾನ್, ಫಿಲಿಪ್ಪೈನ್ಸ್, ಶ್ರೀಲಂಕಾ, ಸಿಂಗಾಪುರ ಮತ್ತು ಥಾಯ್ಲೆಂಡ್ ದೇಶಗಳು ಪ್ರತೀ ಕ್ರೀಡಾಕೂಟದಲ್ಲೂ ಆಡಿವೆ.

ನವದೆಹಲಿಯಲ್ಲಿ 1951ರಲ್ಲಿ ನಡೆದ ಚೊಚ್ಚಲ ಏಷ್ಯನ್ ಗೇಮ್ಸ್​ನಲ್ಲಿ ಭಾರತ 15 ಚಿನ್ನ ಸೇರಿ 51 ಪದಕ ಜಯಿಸಿತ್ತು. ಅದು ನಿಸ್ಸಂಶಯವಾಗಿ ಭಾರತದ ಬೆಸ್ಟ್ ಪರ್ಫಾರ್ಮೆನ್ಸ್ ಎನಿಸಿದೆ. ಆ ಕ್ರೀಡಾಕೂಟದಲ್ಲಿ ಭಾರತ 2ನೇ ಸ್ಥಾನ ಪಡೆದಿತ್ತು. ಆ ನಂತರ ನಡೆದ 16 ಏಷ್ಯಾಡ್​ಗಳಲ್ಲಿ ಭಾರತೀಯರು 15 ಚಿನ್ನದ ಪದಕ ಜಯಿಸಲು ಸಾಧ್ಯವಾಗಲಿಲ್ಲ. 2010ರಲ್ಲಿ ಚೀನಾದ ಗುವಾಂಗ್​ಝೋದಲ್ಲಿ 14 ಚಿನ್ನ ಸೇರಿ 65 ಪದಕಗಳನ್ನ ಭಾರತ ಗೆದ್ದಿತ್ತು. ಇದೂ ಕೂಡ ಭಾರತದ ಅತ್ಯುತ್ತಮ ಸಾಧನೆಗಳಲ್ಲೊಂದೆನಿಸಿದೆ.

ಭಾರತ ಎಷ್ಟು ಪದಕ ಜಯಿಸಬಲ್ಲುದು?
Loading...

ಭಾರತ ತಾನು ಪಾಲ್ಗೊಂಡಿರುವ 36 ಕ್ರೀಡೆಗಳಲ್ಲಿ 572 ಸ್ಪರ್ಧಾಳುಗಳನ್ನ ಕಣಕ್ಕಿಳಿಸಿದೆ. ಇದರಲ್ಲಿ ವಾಸ್ತವವಾಗಿ ಭಾರತ ಎಷ್ಟು ಪದಕ ಗೆಲ್ಲಬಹುದು? ಭಾರತ ಸುಮಾರು 60 ಪದಕ ಗೆಲ್ಲಬಹುದೆಂದು ಕ್ರೀಡಾ ತಜ್ಞರು ಅಂದಾಜಿಸಿದ್ದಾರೆ. ಏಷ್ಯಾಡ್​ನಲ್ಲಿರುವ 1,500 ಪದಕಗಳ ಪೈಕಿ ಭಾರತಕ್ಕೆ 100 ಪದಕ ಜಯಿಸಲು ಸಾಧ್ಯವಾಗದಾ ಎಂದು ಆಶ್ಚರ್ಯವಾಗಬಹುದು. ಏಷ್ಯನ್ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಪದಕವಿರುವ ಅನೇಕ ಕ್ರೀಡೆಗಳಲ್ಲಿ ಭಾರತ ದುರ್ಬಲವಿದೆ. ಕರಾಟೆ, ಟೇಕ್ವಾಂಡೋ ಮೊದಲಾದ ಮಾರ್ಷಲ್ ಆರ್ಟ್ಸ್ ಕ್ರೀಡೆಗಳಲ್ಲಿ 75 ಚಿನ್ನದ ಪದಕ ಗೆಲ್ಲುವ ಅವಕಾಶವಿದೆ. ಆದರೆ ಈ ಕ್ರೀಡೆಗಳಲ್ಲಿ ಭಾರತದ ಸ್ಪರ್ಧೆ ದುರ್ಬಲವಾಗಿದೆ. ಈಜು, ಕ್ಯಾನೋಯಿಂಗ್, ದೋಣಿಗಾರಿಕೆ, ಜಿಮ್ನಾಸ್ಟಿಕ್ಸ್, ಜೂಡೋ, ಡೈವಿಂಗ್, ಫೆನ್ಸಿಂಗ್ ಮೊದಲಾದ ಕ್ರೀಡೆಗಳಲ್ಲೂ ಕನಿಷ್ಠ 10 ಚಿನ್ನಗಳಾದರೂ ಆಫರ್ ಇವೆ. ಇವ್ಯಾವುದರಲ್ಲೂ ಭಾರತ ಬಲಿಷ್ಠವಿಲ್ಲ.

ಹೆಚ್ಚು ಚಿನ್ನ ಗೆಲ್ಲುವ ಅವಕಾಶ ಇರುವ ಕ್ರೀಡೆಗಳ ಪೈಕಿ ಅಥ್ಲೆಟಿಕ್ಸ್, ಶೂಟಿಂಗ್, ಕುಸ್ತಿ, ವೇಟ್​ಲಿಫ್ಟಿಂಗ್ ಮತ್ತು ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಒಳ್ಳೆಯ ಅವಕಾಶಗಳಿವೆ. ಅದು ಬಿಟ್ಟರೆ ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಹಾಕಿ, ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಭಾರತ ಚಿನ್ನ ಗೆಲ್ಲುವ ಸಂಭವವಿದೆ. ಕಬಡ್ಡಿಯಲ್ಲಿ 2 ಚಿನ್ನ ಬಹುತೇಕ ಖಚಿತವಾಗಿದೆ. ಅಥ್ಲೆಟಿಕ್ಸ್​ನಿಂದಲೇ ಅತೀ ಹೆಚ್ಚು ಪದಕ ಬರುವ ಸಾಧ್ಯತೆ ಇದೆ. ಶೂಟಿಂಗ್ ಮತ್ತು ಆರ್ಚರಿಯಲ್ಲಿ ಭಾರತೀಯರ ಇತ್ತೀಚಿನ ಪ್ರದರ್ಶನ ಆಶಾದಾಯಕವಾಗಿದೆ. ಭಾರತೀಯ ಕುಸ್ತಿಪಟುಗಳು ಮತ್ತು ಬಾಕ್ಸರ್​ಗಳು ಅತ್ಯಂತ ಪ್ರಬಲವೆನಿಸಿದ್ದು, ಇದರಲ್ಲಿ ಕನಿಷ್ಠ ಐದಾರು ಚಿನ್ನದ ಪದಕ ಗ್ಯಾರಂಟಿ ಎಂಬಂತಿದೆ.

ಈ ಬಾರಿಯ ಏಷ್ಯಾಡ್​ನಲ್ಲಿ ಎಲ್ಲರ ಗಮನ ಇರುವುದು ಅಸ್ಸಾಮ್​ನ ನವತಾರೆ ಹಿಮಾ ದಾಸ್. ಇತ್ತೀಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಈಕೆ ಓಡಿದ ಪರಿ ನಿಜಕ್ಕೂ ಅದ್ಭುತ. 200 ಮತ್ತು 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಈ ಹುಡುಗಿಯತ್ತ ಎಲ್ಲಾ ಭಾರತೀಯ ಕ್ರೀಡಾಪ್ರೇಮಿಗಳ ಚಿತ್ತ ನೆಟ್ಟಿದೆ.

ಹಾಗೆಯೇ, ಜಾವೆಲಿಂಗ್ ಥ್ರೋ(ಈಟಿ ಎಸೆತ) ಸ್ಪರ್ಧೆಯಲ್ಲಿ 20 ವರ್ದ ನೀರಜ್ ಚೋಪ್ರಾ ಮೇಲೂ ಎಲ್ಲರ ಕಣ್ಣಿದೆ. ಕಾಮನ್​ವಲ್ತ್ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲ್ಲಿ ಇವರು ಚಿನ್ನ ಜಯಿಸಿದ್ದು ಇನ್ನೂ ಅನೇಕರ ಮನದಲ್ಲಿ ಹಸಿರಾಗಿ ಉಳಿದಿದೆ. ಹಾಗೆಯೇ, ಕಾಮನ್​ವೆಲ್ತ್ ಗೇಮ್ಸ್​ನ ಜಿಮ್ನಾಸ್ಟಿಕ್ಸ್ ಸ್ಪರ್ಧೆಯೊಂದರಲ್ಲಿ ಪದಕ ಗೆದ್ದಿದ್ದ ದೀಪಾ ಕರ್ಮಾಕರ್ ಅವರತ್ತಲೂ ಕುತೂಹಲದ ಕಣ್ಣುಗಳು ನೆಟ್ಟಿವೆ.

ಒಟ್ಟಾರೆಯಾಗಿ ಭಾರತ ಕನಿಷ್ಠ 15 ಚಿನ್ನವನ್ನಾದರೂ ಗೆಲ್ಲುವ ನಿರೀಕ್ಷೆ ಇದೆ. 2020ರ ಟೋಕಿಯೋ ಒಲಿಂಪಿಕ್ಸ್​ಗೆ ಮುನ್ನ ಭಾರತಕ್ಕೆ ಏಷ್ಯನ್ ಗೇಮ್ಸ್ ಒಂದು ರಿಯಾಲಿಟಿ ಚೆಕ್ ಎನಿಸಲಿದೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...