ಮೊದಲೆಲ್ಲಾ ಈ ಕ್ರಿಕೆಟ್ ಆಟದಲ್ಲಿ ಐದು ದಿನಗಳ ಟೆಸ್ಟ್ ಪಂದ್ಯಗಳು ತುಂಬಾನೇ ರೋಚಕವಾಗಿರುತ್ತಿದ್ದವು ಮತ್ತು ಪ್ರೇಕ್ಷಕರು ಸಹ ಅಷ್ಟೇ ಕಿಕ್ಕಿರಿದು ಪಂದ್ಯಗಳನ್ನು ನೋಡುತ್ತಿದ್ದರು. ಆಗ ಇದ್ದದ್ದು ಬರೀ ಟೆಸ್ಟ್ ಪಂದ್ಯಗಳು (Test Match) ಮತ್ತು 50 ಓವರ್ ಗಳ ಏಕದಿನ ಪಂದ್ಯಗಳು (ODI Match) ಮಾತ್ರ. ಆನಂತರ ಕ್ರಿಕೆಟ್ ನಲ್ಲಿ (Cricket) ಈ ಟಿ20 ಮಾದರಿಯ ಕ್ರಿಕೆಟ್ ಶುರುವಾಯಿತು. ಸುಮಾರು 8 ರಿಂದ 9 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ ಒಂದು ಏಕದಿನ ಪಂದ್ಯವು ಪೂರ್ಣಗೊಳ್ಳಲು. ಆದರೆ ಅದೇ ಒಂದು ಟಿ20 ಪಂದ್ಯ (T20 Match) ಮುಗಿಯಲು ಕೇವಲ 4 ಗಂಟೆಗಳು ಬೇಕಾಗಬಹುದು. ಹೀಗಾಗಿ ಟಿ20 ಕ್ರೇಜ್ ಸಹಜವಾಗಿಯೇ ಹೆಚ್ಚಾಯಿತು.
ಟಿ20 ಕ್ರಿಕೆಟ್ ನೋಡಲು ಕಿಕ್ಕಿರಿದು ಸೇರುವ ಪ್ರೇಕ್ಷಕರು:
ಟಿ20 ಪಂದ್ಯಗಳು ಶುರುವಾದ ನಂತರದಲ್ಲಿ ಪ್ರೇಕ್ಷಕರು ಸಹ ಈ ಹೊಡಿ ಬಡಿ ಆಟಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಟೆಸ್ಟ್ ಪಂದ್ಯಗಳನ್ನು ಮತ್ತು ಏಕದಿನ ಪಂದ್ಯಗಳನ್ನು ನೋಡಲು ಹೋಗುವ ಪ್ರೇಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬರುತ್ತಿದೆ. ಈಗಾಗಲೇ ಇದರ ಬಗ್ಗೆ ಅನೇಕ ಕ್ರಿಕೆಟ್ ನ ಮಾಜಿ ಆಟಗಾರರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
Well played @ShubmanGill hopefully goes on to make a 💯 @imVkohli batting at the other end looking Solid ! But concern for me half empty stadium ? Is one day cricket dying ? #IndiavsSrilanka
— Yuvraj Singh (@YUVSTRONG12) January 15, 2023
ಏಕದಿನ ಪಂದ್ಯಗಳ ಬಗ್ಗೆ ಯುವಿ ಕಳವಳ:
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬ್ಯಾಟರ್ ಶುಬ್ಮನ್ ಗಿಲ್ ಅವರನ್ನು 41 ವರ್ಷ ವಯಸ್ಸಿನ ಯುವರಾಜ್ ಸಿಂಗ್ ಅವರು ಅಭಿನಂದಿಸಿದರು. ಉತ್ತಮವಾಗಿ ಆಟ ಆಡಿದ ಶುಬ್ಮನ್ ಗಿಲ್ ಮತ್ತು ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಆಟ ಉತ್ತಮವಾಗಿತ್ತು. ಆದರೆ ಕ್ರೀಡಾಂಗಣ ಅರ್ಧ ಖಾಲಿ ಇರುವುದರ ಬಗ್ಗೆ ನನಗೆ ಆತಂಕ ಇದೆ. ಏಕದಿನ ಕ್ರಿಕೆಟ್ ತನ್ನ ಜನಪ್ರಿಯತೆಯನ್ನ ದಿನೇ ದಿನೇ ಕಳೆದುಕೊಳ್ಳುತ್ತಿದೆಯೇ? ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Virat Kohli: ಒಂದೇ ಶತಕಕ್ಕೆ 5 ದಾಖಲೆಗಳು ಉಡೀಸ್! ಕಿಂಗ್ ಈಸ್ ಆಲ್ವೇಸ್ ಕಿಂಗ್ ಎಂದ ಫ್ಯಾನ್ಸ್
ಭಾನುವಾರ ನಡೆದ ಈ ಪಂದ್ಯದಲ್ಲಿ 38,000 ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಸುಮಾರು 20,000 ಪ್ರೇಕ್ಷಕರು ಮಾತ್ರ ಹಾಜರಿದ್ದರು ಎಂದು ಪಿಟಿಐ ವರದಿ ತಿಳಿಸಿದೆ. 55,000 ಕ್ಕೂ ಹೆಚ್ಚು ಜನರು ಆಗಮಿಸಿದ್ದ ಈಡನ್ ಗಾರ್ಡನ್ಸ್ ಹೊರತುಪಡಿಸಿ, ಸರಣಿಯಲ್ಲಿ ಕಡಿಮೆ ಹಾಜರಾತಿ ಕಂಡುಬಂದಿದೆ. ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸಲು ಹೆಸರುವಾಸಿಯಾದ ಗುವಾಹಟಿಯಲ್ಲೂ ಸಹ 38,000 ಸಾಮರ್ಥ್ಯದ ಮೈದಾನದಲ್ಲಿ ಸುಮಾರು 25,000 ಪ್ರೇಕ್ಷಕರನ್ನು ಹೊಂದಿತ್ತು.
ವಿರಾಟ್ ಕೊಹ್ಲಿ -ಶುಬ್ಮನ್ ಗಿಲ್ ಆಕರ್ಷಕ ಶತಕ:
ವಿರಾಟ್ ಕೊಹ್ಲಿ ಮತ್ತು ಶುಬ್ಮನ್ ಗಿಲ್ ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 390 ರನ್ ಕಲೆ ಹಾಕಿತು. ಕೊಹ್ಲಿ 110 ಎಸೆತಗಳಲ್ಲಿ 166 ರನ್ ಗಳಿಸಿದರೆ, ಗಿಲ್ 97 ಎಸೆತಗಳಲ್ಲಿ 116 ರನ್ ಗಳಿಸಿದರು.
ಟಾಸ್ ಗೆದ್ದ ನಂತರ ಬ್ಯಾಟಿಂಗ್ ಆಯ್ದುಕೊಂಡ ಆರಂಭಿಕ ಆಟಗಾರ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ (42) 15.2 ಓವರ್ ಗಳಲ್ಲಿ 95 ರನ್ ಗಳಿಸಿದರು, ಕೊಹ್ಲಿ ತಮ್ಮ 46ನೇ ಏಕದಿನ ಶತಕ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟಾರೆ 74ನೇ ಶತಕವನ್ನು ಗಳಿಸಿದರು. ಕೊಹ್ಲಿ ಮತ್ತು ಗಿಲ್ ಎರಡನೇ ವಿಕೆಟ್ ಗೆ 131 ರನ್ ಗಳ ಜೊತೆಯಾಟ ಆಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ