ಅಲನ್ ಡೊನಾಲ್ಡ್ ಅಂತ ಹೆಸರು ಕೇಳಿದ್ರೆ ಸಾಕು ಕ್ರಿಕೆಟ್ ಅಭಿಮಾನಿಗಳಿಗೆ ನೆನಪಾಗುವುದು ಅವರ ವೇಗದ ಬೌಲಿಂಗ್ ಮತ್ತು ಬ್ಯಾಟರ್ ಗಳಿಗೆ ನೀಡುತ್ತಿದ್ದ ಆ ಭಯಾನಕ ನೋಟ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಅವರು ಎದುರಾಳಿ ತಂಡದ ಬ್ಯಾಟರ್ ಗಳಿಗೆ ಆಡುವಾಗ ಏನಾದರೊಂದು ಹೇಳುವುದರ ಮೂಲಕ ಅವರನ್ನು ವಿಚಲಿತಗೊಳಿಸುತ್ತಿದ್ದರು. ಅನೇಕ ಮಂದಿ ಬ್ಯಾಟರ್ ಗಳು ಡೊನಾಲ್ಡ್ ಅವರ ಬೌಲಿಂಗ್ ಎಂದರೆ ಸಾಕು ಭಯಭೀತರಾಗುತ್ತಿದ್ದರು ಮತ್ತು ಅವರ ಬೌಲಿಂಗ್ ನಲ್ಲಿ ವಿಕೆಟ್ ಅನ್ನು ಒಪ್ಪಿಸದೆ ಇರಲು ತುಂಬಾನೇ ಜಾಗರೂಕತೆಯಿಂದ ಆಟವಾಡುತ್ತಿದ್ದರು ಎಂದು ಹೇಳಿದರೆ ಸುಳ್ಳಲ್ಲ.
ಹೀಗೆ ಡೊನಾಲ್ಡ್ ಅವರನ್ನ ತಮ್ಮ ಡಿಫೆನ್ಸಿವ್ ಆಟದಿಂದ ತುಂಬಾನೇ ಕಿರಿಕಿರಿ ಮಾಡಿದ್ದು ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಿಮಗೆ 1997ರಲ್ಲಿ ಡರ್ಬನ್ ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ನೆನಪಿದ್ದರೆ, ಡೊನಾಲ್ಡ್ ಮತ್ತು ದ್ರಾವಿಡ್ ಅವರ ಆ ಜಟಾಪಟಿ ಸಹ ನೆನಪಿನಲ್ಲಿರುತ್ತದೆ.
ದ್ರಾವಿಡ್ ಮತ್ತು ಡೊನಾಲ್ಡ್ ನಡುವೆ ನಡೆದ ಆ ಘಟನೆ ಏನು?
25 ವರ್ಷಗಳ ನಂತರ, ಪ್ರಸ್ತುತ ಬಾಂಗ್ಲಾದೇಶದ ಕ್ರಿಕೆಟ್ ತಂಡದ ಬೌಲಿಂಗ್ ತರಬೇತುದಾರರಾಗಿರುವ ಡೊನಾಲ್ಡ್, ದ್ರಾವಿಡ್ ಅವರಿಗೆ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು ಮತ್ತು ಅವರನ್ನು ಭೋಜನಕ್ಕೂ ಸಹ ಆಹ್ವಾನಿಸಿದರು. ಡೊನಾಲ್ಡ್ ಮತ್ತು ದ್ರಾವಿಡ್ ಇಬ್ಬರೂ ಕ್ರಮವಾಗಿ ಬಾಂಗ್ಲಾದೇಶ ಮತ್ತು ಭಾರತದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿ ಚಟ್ಟೋಗ್ರಾಮ್ ನಲ್ಲಿದ್ದಾರೆ. ಈ ಎರಡೂ ದೇಶಗಳು ಪ್ರಸ್ತುತವಾಗಿ ಟೆಸ್ಟ್ ಸರಣಿಯೊಂದನ್ನು ಆಡುತ್ತಿವೆ.
𝐒𝐩𝐨𝐫𝐭𝐬𝐦𝐚𝐧𝐬𝐡𝐢𝐩 𝐚𝐭 𝐢𝐭𝐬 𝐛𝐞𝐬𝐭! 🤝
📹 | Bangladesh's bowling coach Allan Donald sends out a special message to India's head coach Rahul Dravid 💙
P.S. The end will certainly bring a smile to your face 😄#AllanDonald #RahulDravid #SonySportsNetwork pic.twitter.com/UgYy5QGf5e
— Sony Sports Network (@SonySportsNetwk) December 14, 2022
ಡರ್ಬನ್ ನಲ್ಲಿ ನಡೆದ ಘಟನೆಯ ಬಗ್ಗೆ ಏನ್ ಹೇಳಿದ್ರು ಡೊನಾಲ್ಡ್?
ಡರ್ಬನ್ ನಲ್ಲಿ ಒಂದು ಕೆಟ್ಟ ಘಟನೆ ನಡೆಯಿತು, ಅದರ ಬಗ್ಗೆ ನಾನು ಈಗ ಮಾತನಾಡಲು ಬಯಸುವುದಿಲ್ಲ. ರಾಹುಲ್ ಮತ್ತು ಸಚಿನ್ ನಮ್ಮ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ನಾನು ಆಗ ಸ್ವಲ್ಪ ಇತಿಮಿತಿಯನ್ನು ಮೀರಿದೆ. ರಾಹುಲ್ ಬಗ್ಗೆ ನನಗೆ ಅಪಾರ ಗೌರವವಿದೆಯಲ್ಲದೆ ಬೇರೇನೂ ಇಲ್ಲ. ನಾನು ಹೊರಗೆ ಹೋಗಿ ರಾಹುಲ್ ಅವರೊಂದಿಗೆ ಕುಳಿತುಕೊಳ್ಳಲು ಬಯಸುತ್ತೇನೆ ಮತ್ತು ಆ ದಿನ ಏನಾಯಿತು ಎಂಬುದರ ಬಗ್ಗೆ ಮತ್ತೆ ಕ್ಷಮೆಯಾಚಿಸುತ್ತೇನೆ.
ನಾನು ಅವರ ವಿಕೆಟ್ ಅನ್ನು ಪಡೆಯಲು ಎಂತಹ ಮೂರ್ಖತನದ ಕೆಲಸ ಮಾಡಬೇಕಾಗಿತ್ತು ಅಂತ ನೆನಪಿಸಿಕೊಂಡರೆ ಮುಜುಗರವಾಗುತ್ತದೆ. ಆದರೆ ಆ ದಿನ ನಾನು ಹೇಳಿದ್ದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಎಂತಹ ವ್ಯಕ್ತಿ ರಾಹುಲ್ ದ್ರಾವಿಡ್, ಆದ್ದರಿಂದ ರಾಹುಲ್ ನೀವು ಕೇಳುತ್ತಿದ್ದರೆ ನಿಮ್ಮೊಂದಿಗೆ ಒಂದು ರಾತ್ರಿ ಊಟಕ್ಕೆ ಹೋಗಲು ನಾನು ಇಷ್ಟಪಡುತ್ತೇನೆ" ಎಂದು ಡೋನಾಲ್ಡ್ ಹೇಳಿದರು.
ಪ್ರತ್ಯೇಕ ಸಂದರ್ಶನದಲ್ಲಿ ದ್ರಾವಿಡ್ ಅವರಿಗೆ ಡೊನಾಲ್ಡ್ ಅವರ ಸಂದೇಶವನ್ನು ತೋರಿಸಲಾಯಿತು. ಡೊನಾಲ್ಡ್ ಅವರ ಆಹ್ವಾನಕ್ಕೆ ಪ್ರತಿಕ್ರಿಯಿಸಲು ಅವರನ್ನು ಕೇಳಲಾಯಿತು. ಅದಕ್ಕೆ ದ್ರಾವಿಡ್ ಕ್ಲಾಸಿಕ್ ಪ್ರತಿಕ್ರಿಯೆಯನ್ನು ನೀಡಿದರು. "ಖಂಡಿತವಾಗಿಯೂ, ನಾನು ಅದನ್ನು ಎದುರು ನೋಡುತ್ತಿದ್ದೇನೆ, ವಿಶೇಷವಾಗಿ ಅವರು ಬಿಲ್ ಪಾವತಿಸುವುದಾದರೆ" ಎಂದು ದ್ರಾವಿಡ್ ನಗುತ್ತಾ ಹೇಳಿದರು.
1997 ರಲ್ಲಿ ನಡೆದ ಆ ಫೈನಲ್ ಪಂದ್ಯ ಹೇಗಿತ್ತು ಗೊತ್ತೇ?
1997ರಲ್ಲಿ ಡರ್ಬನ್ ನಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಗ್ಯಾರಿ ಕರ್ಸ್ಟನ್ (51), ಡೇರಿಲ್ ಕುಲ್ಲಿನಾನ್ (60) ಅವರ ಅರ್ಧಶತಕಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು. ಪಂದ್ಯದ ಮಧ್ಯೆ ಮಳೆ ಬಂದಿದ್ದರಿಂದ, ಭಾರತಕ್ಕೆ 40 ಓವರ್ ಗಳಲ್ಲಿ 252 ರನ್ ಗಳ ಪರಿಷ್ಕೃತ ಗುರಿ ಸಿಕ್ಕಿತು. ಓಪನಿಂಗ್ ಬ್ಯಾಟರ್ ಸೌರವ್ ಗಂಗೂಲಿ ಅವರ ವಿಕೆಟ್ ಅನ್ನು ಡೊನಾಲ್ಡ್ ಅವರು ಬೇಗನೆ ಪಡೆದುಕೊಂಡರು.
ಆದರೆ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾದ ಪ್ರಸಿದ್ಧ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ದ್ರಾವಿಡ್ ಅವರಂತೂ ಶಾನ್ ಪೊಲಾಕ್, ಡೊನಾಲ್ಡ್ ಮತ್ತು ರೂಡಿ ಬ್ರೈಸನ್ ಅವರು ಎಸೆದ ಚೆಂಡುಗಳನ್ನು ಮೈದಾನದ ಎಲ್ಲಾ ಭಾಗಗಳಿಗೂ ಹೊಡೆದರು. ಆಗ ಡೊನಾಲ್ಡ್ ಅವರು ದ್ರಾವಿಡ್ ಗೆ ಸ್ಲೆಡ್ಜ್ ಮಾಡಿದ್ದಕ್ಕೆ, ಕೋಪಗೊಂಡ ದ್ರಾವಿಡ್ ಅವರು ಲಾಂಗ್-ಆನ್ ನಲ್ಲಿ ಸಿಕ್ಸ ಬಾರಿಸಿ ಉತ್ತರಿಸಿದರು. ಕೊನೆಗೆ ಭಾರತ ತಂಡವು 12 ರನ್ ಗಳಿಂದ ಪಂದ್ಯವನ್ನು ಕೈಚೆಲ್ಲಿತ್ತು.
ದ್ರಾವಿಡ್ 94 ಎಸೆತಗಳಲ್ಲಿ 84 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡೊನಾಲ್ಡ್ ಆ ರಾತ್ರಿ ತನ್ನ ವರ್ತನೆಗಾಗಿ ವಿಷಾದ ವ್ಯಕ್ತಪಡಿಸಿರುವುದು ಇದೇನು ಮೊದಲನೇ ಬಾರಿ ಅಲ್ಲ. ಕೆಲವು ವರ್ಷಗಳ ಹಿಂದೆ ಸಹ ಒಂದು ಸಂದರ್ಶನವೊಂದರಲ್ಲಿ, ದ್ರಾವಿಡ್ ಅವರೊಂದಿಗೆ ಮಾತನಾಡಲು ಮತ್ತು ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ